ಬೆಂಗಳೂರು: ರಾಜ್ಯ ಸರ್ಕಾರದ ಯೋಜನೆಯಂತೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ಆರಂಭಿಸಬೇಕೆಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿ ಅವರು ರಾಜ್ಯದ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸರ್ಕಾರದ ಯೋಜನೆ ಪ್ರಕಾರ ಪ್ರತಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಲಾ ಮೂರು ಮತ್ತು ಲೋಕ ಸಭಾ ಸದಸ್ಯರು ಐದು ಶಾಲೆಗಳನ್ನು ದತ್ತು ಪಡೆಯಬೇಕೆಂದು ಸೂಚಿಸಲಾಗಿತ್ತು. ಈ ಕಾರ್ಯಕ್ರಮವನ್ನು 2020ರ ನವೆಂಬರ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದರು.
ಯಾವ ಶಾಸಕರು ಯಾವ ಶಾಲೆಯನ್ನು ದತ್ತು ಪಡೆದು, ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕೆಂಬ ನೀಲಿನಕ್ಷೆಯನ್ನು ತಯಾರಿಸಿ ಶಿಕ್ಷಣ ಇಲಾಖೆಯು ಈಗಾಗಲೇ ಜನಪ್ರತಿನಿಧಿಗಳಿಗೆ ತಲುಪಿಸಿದೆ. ಎಲ್ಲ ಶಾಸಕರುಗಳಿಗೂ ಶಾಲಾ ದತ್ತು ಸ್ವೀಕಾರ ಪತ್ರವನ್ನು ಸಹ ನೀಡಲಾಗಿದೆ. ಆದರೆ ಕೆಲವೇ ಶಾಸಕರು ಮಾತ್ರ ಮೊದಲ ಹಂತದ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಿ, ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ ಎಂದು ಪ್ರೊ. ಎಂ.ಆರ್. ದೊರೆಸ್ವಾಮಿ ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ | ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ | ಗುಣಮಟ್ಟದ ಶಿಕ್ಷಣಕ್ಕೆ ದಿಟ್ಟ ಹೆಜ್ಜೆ, ವಿಸ್ತಾರ ನ್ಯೂಸ್ ಅಭಿಯಾನಕ್ಕೆ ಅದ್ಧೂರಿ ಚಾಲನೆ
ಇನ್ನೂ ದತ್ತು ಪಡೆದು ಅಭಿವೃದ್ಧಿ ಕೆಲಸ ಆರಂಭಿಸದ ಶಾಸಕರು ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸಬೇಕು. ಪ್ರಸಕ್ತ ವಿಧಾನಸಭೆಯ ಅವಧಿಯು ಇನ್ನು ಕೆಲವೇ ತಿಂಗಳುಗಳಿರುವುದರಿಂದ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮವನ್ನು ಆದ್ಯತೆ ಮೇಲೆ ನೆರವೇರಿಸಬೇಕು ಎಂದು ಪ್ರೊ. ಎಂ.ಆರ್. ದೊರೆಸ್ವಾಮಿ ಪತ್ರದಲ್ಲಿ ಕೋರಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಪ್ರಜಾಪ್ರಭುತ್ವದ ಸಹಜ ಸಾಮಾಜಿಕ ನಾಯಕರಾಗಿದ್ದು, ಶಾಲಾಭಿವೃದ್ಧಿಯಲ್ಲಿ ಅವರ ಸಕ್ರಿಯ ಪಾತ್ರ, ಇನ್ನುಳಿದ ವರ್ಗಗಳಿಗೆ ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಗುತ್ತದೆ. ಈ ಕಾರ್ಯಕ್ರಮದ ಮೂಲೋದ್ದೇಶ ಇದೇ ಆಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.