Site icon Vistara News

Shantaveri Gopalagowda : ಅನಂತಮೂರ್ತಿ ಕಂಡ ಗೋಪಾಲಗೌಡರು ಹೀಗಿದ್ದರು!

shantaveri gopala gowda birth century special article

#image_title

ಡಾ. ಯು. ಆರ್. ಅನಂತಮೂರ್ತಿ
ಶ್ರೀ ಗೋಪಾಲಗೌಡ ಶಾಂತವೇರಿ (Shantaveri Gopalagowda); ಈ ಹೆಸರನ್ನು ನಾನು ಮೊದಲು ಕೇಳಿದ್ದು ತೀರ್ಥಹಳ್ಳಿ ಹೈಸ್ಕೂಲಲ್ಲಿ ಓದುತ್ತಿದ್ದಾಗ, ಆಗ ನಾನು ಹೊಸ ವಿಚಾರದ ಗೊಂದಲಕ್ಕೆ ಒಳಗಾಗಿದ್ದ ಅಗ್ರಹಾರದ ಬ್ರಾಹ್ಮಣ ಹುಡುಗ, ಮಾರಿಕಲ್ಲು ಕಿತ್ತು ಬಿಸಾಕುವುದು; ಕದ್ದು ಸಿಗರೇಟು ಸೇದುವುದು; ಸುತ್ತಿನ ಜನರ ಆಚಾರಕ್ಕೂ ವಿಚಾರಕ್ಕೂ ಇರುವ ಭೇದ ಕಂಡು, ಶೂದ್ರನಿಗೆ ವೇದಾಧಿಕಾರವಿಲ್ಲವೆಂದು ವಾದಿಸುವ ದಡ್ಡರ ಮೌಡ್ಯ ಕಂಡು ರೇಗುವುದು; ಖುದ್ದಾಗಿ ಕೊಂಕಣಿ ಹೋಟೆಲಲ್ಲಿ ಕಾಫಿ ಕುಡಿಯುವ ಭಂಡ ಧೈರ್ಯ ಪ್ರದರ್ಶಿಸುವುದು, ಆದರೆ ಕದ್ದು ಕೋಳಿ ಮೊಟ್ಟೆ ತಿನ್ನುವುದು: ಜಪ್ತಿ ಹರಾಜುಗಳ ಅಮಾನುಷ ಮಾರ್ಗದಿಂದ ಬೆಳೆಯುತ್ತಿದ್ದ ಜಮೀನ್ದಾರರ ಮರ್ಜಿಯನ್ನು ಖಂಡಿಸುವುದು ಹಾಗೆ ನಮ್ಮ ಬಂಡಾಯ ಅಪಕ್ವವಾಗಿ ಆದರೆ ಜೀವಂತವಾಗಿ ಕುಡಿಯೊಡೆಯುತ್ತಿದ್ದ ಕಾಲ. ಈ ನನ್ನ ಹೊಸ ತಹತಹದ ಲೋಕಕ್ಕೆ ಗೋಪಾಲಗೌಡರ ಪ್ರವೇಶ ನನ್ನ ಮಟ್ಟಿಗೆ ಅತ್ಯಂತ ಮಹತ್ವಪೂರ್ಣ ಘಟನೆ.

ಮೈಸೂರು ರಾಜ್ಯದ ಸ್ವಾತಂತ್ರ್ಯ ಚಳುವಳಿಯ ಹೀರೋ ಆಗಿ ನಾನು ಗೌಡರ ಹೆಸರು ಕೇಳಿದ್ದು. ಕಚೇರಿಗೆ ಕೋರ್ಟಿಗೆ ಶಿವಮೊಗ್ಗೆಗೆ ಹೋಗಿ ಬರುತ್ತಿದ್ದ ಊರ ಹಿರಿಯರು ಗೌಡರ ಸಾಹಸಗಳನ್ನು ವರ್ಣಿಸುತ್ತಿದ್ದರು. ಗೌಡರ ಹುಡುಗ ನಾದರೂ ‘ಸಶಷ’ ಚೆನ್ನಾಗಿ ಉಚ್ಚರಿಸುತ್ತಾನೆಂದು; ಚೆನ್ನಾಗಿ ಮಾತಾಡುತ್ತಾನೆಂದು ಈಗ ಗಾಂಧಿ ಟೋಪಿಯಲ್ಲಿ ಪ್ರತ್ಯಕ್ಷನಾಗಿ ಪೋಲೀಸರು ಹಾಜರಾಗುವುದರೊಳಗೆ ಪೇಟದಲ್ಲಿ ಮಾಯವಾಗುತ್ತಾನೆಂದು; ಶಿವಮೊಗ್ಗೆಯ ತುಂಬ ಇವನ ಹೆಸರೆಂದು ಇತ್ಯಾದಿ, ಇತ್ಯಾದಿ.

ನಮ್ಮೂರ ಮಡಿವಂತರಿಗೆಲ್ಲ ಅತ್ಯಂತ ನೋವಿನ ಸಮಸ್ಯೆಯಾಗಿದ್ದ ಕಾಳಿಂಗಯ್ಯನ ರಾಘವೇಂದ್ರರಾಯರ ಶಿಷ್ಯ ಈ ಗೋಪಾಲಗೌಡರೆಂದು ತಿಳಿದಾಗ ಬಂಡಾಯಕ್ಕಾಗಿ ಹಾತೊರೆಯುತ್ತಿದ್ದ ನನಗೆ ಇವರು ಕುತೂಹಲದ ವ್ಯಕ್ತಿಯಾಗಿದ್ದರು. ಅಗ್ರಹಾರದ ಕಟ್ಟುನಿಟ್ಟಿನ ಆಚೆಗಿನ ಲೋಕ ನನಗೆ ದಿಗಿಲು ಹುಟ್ಟಿಸುತ್ತಿತ್ತು. ಆದರೆ ಮೋಹಕವಾಗಿ ಕರೆಯುತ್ತಿತ್ತು. ಕಟ್ಟಕಟ್ಟಳೆಗಳಲ್ಲಿ ಸಿಕ್ಕಿಬಿದ್ದ ಅಗ್ರಹಾರದವರಿಗೆ ಈ ಸ್ವಾತಂತ್ರ್ಯ ಚಳುವಳಿಯ ಮನೆ ಮಠ ಬಿಟ್ಟ ಜನ ಪೋಕರಿಗಳಾಗಿ ಕಾಣುತ್ತಿದ್ದರು. ಆದರೆ ಅವರ ಬದುಕಿನ ನಿರಂಬಳತೆ ನನ್ನನ್ನು ಆಕರ್ಷಿಸಿತು.

ಎಲ್ಲ ಮರ್ಯಾದೆಗಳನ್ನೂ ಮೀರಿ, ಎಲ್ಲೊ ಮಲಗಿ, ಎಲೆ ಉಂಡು, ಎಲ್ಲೊ ಕೂತು ಕಾಲ ಕಳೆಯುತ್ತ, ಗಾಂಧಿ ಕರೆದಾಗ ಜೈಲಿಗೆ ಹೋಗುತ್ತ, ಸರ್ವಸ್ವವನ್ನೂ ಪ್ರಶ್ನಿಸುತ್ತ ಬದುಕುತ್ತಿದ್ದ ಕಾಳಿಂಗಯ್ಯನ ರಾಘವೇಂದ್ರರಾಯರ ಸುತ್ತಲಿನ ಯುವಕರು ಹೊಸ ಲೋಕದ ಬೈರಾಗಿಗಳಂತೆ ನನಗೆ ಕಾಣುತ್ತಿದ್ದರು. ಭರ್ಜರಿ ಮೀಸೆ ಬಿಟ್ಟು ಖಾದಿ ಧರಿಸಿ ಯಾರಿಗೂ ಹೆದರದೆ ಅಡ್ಡಾಡಿಕೊಂಡಿದ್ದ ರಾಘವೇಂದ್ರರಾಯರ ಬದುಕಿನ ಕ್ರಮವೇ, ಪ್ರಾಪಂಚಿಕ ಮೋಹಗಳಿಗೆ ಸಿಕ್ಕಿ ಬೀಳದೆ ಸ್ವಾತಂತ್ರ್ಯದ ಕನಸು ಕಾಣುವ ಅವರ ನಿರ್ಲಿಪ್ತ ಜೀವನವೇ ತೀರ್ಥಹಳ್ಳಿಯ ಯುವಕರನ್ನು ಅಯಸ್ಕಾಂತದಂತೆ ಆ ಮುದುಕನ ಸುತ್ತ ಹಿಡಿದಿಟ್ಟಿತ್ತು. ಅವರ ಸುತ್ತ ಬೆಳೆದ ಯುವಕರಲ್ಲಿ ಗೌಡರು ಪ್ರಮುಖರೆನ್ನಬಹುದು.

ಗೌಡರನ್ನು ನಾನು ಮೊದಲು ನೋಡಿದ್ದು ನಮ್ಮ ಅಗ್ರಹಾರಕ್ಕೆ ಅವರು ಸದಾಶಿವರಾಯರ ಜೊತೆ ಸಮಾಜವಾದಿ ಸಮ್ಮೇಳನಕ್ಕೆ ದುಡ್ಡೆತ್ತಲು ಬಂದಾಗ ಸ್ವಾತಂತ್ರ್ಯ ಚಳುವಳಿಯಲ್ಲಿ ಆಸ್ತಿ ಪಾಸ್ತಿ ಕಳೆದುಕೊಂಡು ಜಮೀನ್ದಾರರ ತಿರಸ್ಕಾರಕ್ಕೆ ಆದರೆ ಯುವಕರ ಮೆಚ್ಚಿಗೆಗೆ ಪಾತ್ರರಾದ, ಇವರಿಗೇನು ಹುಚ್ಚು ಹಿಡಿದಿದೆಯೋ ಎಂದು ಮಧ್ಯಮವರ್ಗದವರಿಗೆ ಆಶ್ಚರ್ಯ ಹುಟ್ಟಿಸಿದ ಇನ್ನೊಬ್ಬ ವ್ಯಕ್ತಿ ಈ ಸದಾಶಿವರಾಯರು. ಇವರು ಅಗ್ರಹಾರಕ್ಕೆ ಬಂದಾಗ ಮಧ್ಯಾಹ್ನ; ಮಠದಲ್ಲಿ ಊಟದ ಹೊತ್ತು. ಇವರ ಜೊತೆ ಇನ್ನೂ ಇಬ್ಬರೊ, ಮೂವರೆ ಇದ್ದರು ಯಾರು ಯಾರು ನೆನಪಿಲ್ಲ. ಗೌಡರು ಮಠದ ಏಜೆಂಟರನ್ನು ತಮಗೆ ವಿಶಿಷ್ಟವಾದ ಐರನಿಯಲ್ಲಿ ಹಾಸ್ಯ ಮಾಡುತ್ತ ಸಮ್ಮೇಳನಕ್ಕೆ ಹಣ ಕೇಳಿದರು. ಚಂದಾ ಎತ್ತಲು ಬಂದವರೊಬ್ಬರು ಹೀಗೆ ನಿಧಾನವಾಗಿ ಮಾತಾಡುವುದು, ತೊಗರಾಗಿ ಮಾತಾಡುವುದು, ಸಂಸ್ಥಾನಿಕನನ್ನು ಚುಡಾಯಿಸುವುದು – ನನಗೆ ಹೊಸದು. ಎಷ್ಟು ಸಿಕ್ಕಿತೆ, ಸಿಗಲಿಲ್ಲವೊ ಮರೆತಿದೆ. ಆದರೆ ಮಾತ್ರ ನನ್ನನ್ನು ವೈಯಕ್ತಿಕವಾಗಿ ಅತ್ಯಂತ ಕಟುವಾದ ಮುಜುಗರಕ್ಕೆ ಒಳ ಪಡಿಸಿದ ಅವತ್ತಿನ ಒಂದು ಘಟನೆ – ಆಗ ನಾನಿನ್ನೂ ಎಳೆಯ-ಮರೆಯಲಾರೆ, ಜಾತಿ ಪದ್ಧತಿ ತಪ್ಪು ಇತ್ಯಾದಿ ನನಗೆ ಗೊತ್ತಿತ್ತು. ಆದರೆ ಅದು ನಮ್ಮನ್ನು ಎಲ್ಲಿ ಕುಬ್ಬ ವಾಗಿಸುತ್ತೆ. ಉತ್ತಮವೆನಿಸಿಕೊಂಡವರಿಗೆ ತನ್ನ ಬಗ್ಗೆಯೇ ಹೇಸಿಗೆಯಾಗುವಂತೆ ಮಾಡುತ್ತೆ ಎಂಬುದು ನನಗೆ ತೀವ್ರವಾಗಿ ತಟ್ಟಿದ್ದು ಅವತ್ತು. ಔದಾರ್ಯ, ಅತಿಥಿ ಸತ್ಕಾರಗಳ ಪರಂಪರೆ ನಮ್ಮದಲ್ಲವೆ ? ಇದು ನಿಜವೂ ಹೌದು.

ಎಲ್ಲರನ್ನೂ ಊಟಕ್ಕೇಳಿ ಎಂದು ಏಜೆಂಟರು ಉಪಚಾರ ಹೇಳಿದರು. ಆದರೆ ಎಲ್ಲರ ತಲೆಯನ್ನೂ ಕಾಡುತ್ತಿದ್ದ ಒಂದು ಅಬ್ಸರ್ಡ್ ಸಮಸ್ಯೆ ಉಪಚಾರದ ನಾಟಕ ನೋಡುತ್ತ ನಿಂತಿದ್ದ ನನಗೆ ಹೊಳೆದುಬಿಟ್ಟಿತು. ಅತಿಥಿಗಳಲ್ಲಿ ಒಬ್ಬರು ಗೌಡರು, ಉಳಿದವರು ಬ್ರಾಹ್ಮಣರು, ಎಲ್ಲಿ, ಹೇಗೆ ಇವರಿಗೆ ಊಟ ಹಾಕುವುದು? ಗೌಡರ ಜೊತೆ ಬಂದ ಸಮಾಜ ವಾದಿ ಬ್ರಾಹ್ಮಣರು ಜಾತಿ ಕೆಟ್ಟವರಿರಬಹುದು, ಆದರೆ ಕಂಡ ಕಂಡೂ ಮಠದವರೇ ಎಲ್ಲರಿಗೂ ಒಟ್ಟಿಗೆ ಊಟ ಹಾಕುವುದು, ವರ್ಣಸಂಕರವನ್ನು ಪ್ರೋತ್ಸಾಹಿಸುವುದು ಸಾಧ್ಯವೆ? ಸಾಧುವೆ? ಕಾಳಿಚ್ಚಿನಂತೆ ಈ ಸುದ್ದಿ ಬೇರೆ ಕಡೆಗಳಲ್ಲಿ ಹರಡದೆ ಇದ್ದೀತೆ? ಯಾರೂ ಈ ಬಗ್ಗೆ ಚಕಾರವೆತ್ತದಿದ್ದರೂ ಉಪಚಾರದ ಸುಳ್ಳು ಒತ್ತಾಯದಲ್ಲೆ, ಕೊನೆಗೆ ಕಾಫಿಯನ್ನಾದರೂ ಕುಡಿಯಿರಿ ಎನ್ನುವ ಒಪ್ಪಂದದಲ್ಲಿ ಈ ಧರ್ಮಯುದ್ಧ ಪರಾವಸಾನವಾಯಿತು. ಈಗ ಕಾಲ ಬದಲಾಯಿಸಿದೆ. ಜಾತಿಗೆಟ್ಟ ಲೌಕಿಕ ಬ್ರಾಹ್ಮಣರಿಗೂ ನವ ಬ್ರಾಹ್ಮಣರಾದ ಶೂದ್ರರಿಗೂ ಒಟ್ಟಿಗೇ ಊಟ ಬಡಿಸುವುದು, ಇದರಿಂದ ಕಂಗಾಲಾಗದಿರುವುದು, ಸ್ವಾಮಿಗಳು ಹರಿಜನ ಕೇರಿಗೂ ಹೋಗಿ ನಂತರ ಪಂಚಗವ್ಯ ತೆಗೆದುಕೊಳ್ಳುವುದು – ಈಗ ಎಲ್ಲರಿಗೂ ಒಗ್ಗಿದೆ.

ನಾನು ಅವತ್ತು ಗೌಡರನ್ನು ಏನು ಕೇಳಿದೆ ಮರೆತಿದೆ. ಆದರೆ ಊಟದ ಈ ಗೊಂದಲದಲ್ಲಿ ಜಾತಿ ಸಮಸ್ಯೆಯ ಎಲ್ಲ ನೋವನ್ನೂ ನಾನು ಅನುಭವಿಸಲು ಕಾರಣ ನನ್ನ ಎದುರಿಗೆ ಕೂತಿದ್ದ ಗೋಪಾಲಗೌಡರ ಮೌನ, ಬಿಳಿ ಜುಬ್ಬ, ಕಚ್ಚೆ ಪಂಚೆ ಧರಿಸಿ, ತಲೆಗೂದಲನ್ನು ನೀಟಾಗಿ ಮೇಲಕ್ಕೆ ಬಾಚಿ, ಸಪುರಾಗಿ, ಎತ್ತರವಾಗಿ, ಗಂಭೀರವಾಗಿ ನಿಜವಾದ ಅರಿಸ್ಟೋಕ್ರಾಟ್‌ನಂತೆ ನನಗೆ ಕಂಡ ಗೋಪಾಲಗೌಡರ ಅಂತರಂಗಕ್ಕೆ ಬ್ರಾಹ್ಮಣ್ಯದ ಈ ಪೆದ್ದು ತನ ಹೇಗೆ ಕಾಣಿಸಿರಬಹುದು, ಅವರಿಗೆ ಅವಮಾನವಾಗುತ್ತಿದೆಯಲ್ಲ ಎಂದು, ಹೀಗೆ ಅವಮಾನ ಮಾಡುವುದು ಸಹ್ಯವಾಗು ವಂಥ ಪರಂಪರೆ ನಮ್ಮದಲ್ಲವೆ ಎಂದು ನಾನು ತುಂಬ ಒದ್ದಾಡಿದೆ. ಆದರೆ ಗೌಡರಿಗೆ ಇದರಿಂದೆಲ್ಲ ಕಹಿಯಾಗದಂಥ ಸಮಾಜ ದೃಷ್ಟಿಯಿದೆ ಎಂಬುದು ಕ್ರಮೇಣ ನನಗೆ ಗೊತ್ತಾಯಿತು. ಎಲ್ಲವನ್ನೂ ಹಾಸ್ಯದಿಂದ ನೋಡಬಲ್ಲ, ಸಾಕ್ಷಿಯಾಗಿ ಭಾಗಿಯಾಗಿ ಒಟ್ಟಿಗೇ ಅನುಭವಿಸಬಲ್ಲ ನಿರ್ಲಿಪ್ತತೆ ಇಲ್ಲದಿದ್ದರೆ ಇವರು ಜನನಾಯಕರಾಗುತ್ತಿರ ಲಿಲ್ಲ.

ಬ್ರಾಹ್ಮಣ ಶೂದ್ರ ಎಲ್ಲ ಜಾತಿಯ ಬಡವರ ನಾಯಕ ಗೋಪಾಲಗೌಡರಾಗಲು ಕಾರಣ ಇವರಿಗಿರುವ ವ್ಯಕ್ತಿ ದೂರವಾದ ಐತಿಹಾಸಿಕ ದೃಷ್ಟಿ, ವೈಯಕ್ತಿಕವಾಗಿ ಹೇಳುವುದಾದರೆ ಈ ಪ್ರಥಮ ಭೇಟಿಯಾದಂದಿನಿಂದ – ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತಿದು – ಇವತ್ತಿನವರೆಗೂ ಗೌಡರು ನನ್ನ ಜೀವನದಲ್ಲಿ ಬೆಳೆಯುತ್ತ, ನನ್ನ ಅನುಭವಗಳನ್ನು ವಿಸ್ತರಿಸುತ್ತ ನನ್ನ ವಿಮರ್ಶಾತ್ಮಕ ಅನುಮಾನಗಳನ್ನೆಲ್ಲ ದಾಟಿ, ತನ್ನ ವ್ಯಕ್ತಿತ್ವದ ಹೊಸ ಮಗ್ಗುಲುಗಳನ್ನು ತೋರಿಸುತ್ತ ನನಗೆ ಅತ್ಯಂತ ಪ್ರಿಯವಾದವರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಸಭೆಯ ಗೊಂದಲದಲ್ಲಿ ನಾನು ಇವರನ್ನು ನೋಡಿದ್ದೇನೆ; ಚುನಾವಣೆ, ಮೆರವಣಿಗೆ, ಅಸೆಂಬ್ಲಿ ಹುಮ್ಮಸ್ಸು ಬಿಸಿಗಳಲ್ಲಿ ನಾನು ಇವರನ್ನು ಕಂಡಿದ್ದೇನೆ – ಆದರೆ ಎಂದೂ ಇವರನ್ನು ಆಕ್ರಮಿಸಿದ್ದಿಲ್ಲ. ಸದಾ ಜನರ ಮಧ್ಯೆ ಬದುಕುವ ಇವರು ಎಷ್ಟು ರಗಳೆ ಹಚ್ಚಿಕೊಂಡಿದ್ದಾಗಲೂ ಏಕಾಂಗಿಯಾದ ಆಪ್ತ ವ್ಯಕ್ತಿ ಗೋಪಾಲನಾಗಿ ನನಗೆ ಸಂತೆಯ ಮನೋಭಾವ ಸಿಗುತ್ತಲೇ ಉಳಿದಿದ್ದಾರೆ.

ರಾಮಮನೋಹರ ಲೋಹಿಯಾ ಅವರೊಂದಿಗೆ ಗೋಪಾಲಗೌಡರು.

ಶಿವಮೊಗ್ಗೆಗೆ ನಾನು ಓದಲು ಬರುವ ಹೊತ್ತಿಗೆ ಗೌಡರು ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿದ್ದರು. ತೀರ್ಥಹಳ್ಳಿ ಹೈಸ್ಕೂಲಿನಲ್ಲಿ ಗಣಪತಿ ಉತ್ಸವಕ್ಕೆ ಮಾತಾಡಲು ಕರೆದರೆ ಈ ವ್ಯಕ್ತಿ ನಿರೀಶ್ವರ ವಾದವನ್ನು ಸ್ಕೂಲಿನ ಹುಡುಗರಿಗೆ ಬೋಧಿಸಿದರೆಂದು ಬ್ರಾಹ್ಮಣ ಶೂದ್ರರೆಲ್ಲರ ಕೋಪಕ್ಕೆ ಇವರು ತುತ್ತಾದದ್ದು ನನಗಿನ್ನೂ ನೆನಪಿದೆ. ಶಿವಮೊಗ್ಗೆಯ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಮಹಡಿಯ ಮೇಲೆ ಇವರದೊಂದು ರೂಮು, ಸಿಗರೇಟು ಸೇದುತ್ತ, ಓದುತ್ತ, ಸಮಾಜವಾದದ ಬಗ್ಗೆ ಹರಟುತ್ತ, ಎಷ್ಟು ಆತ್ಮೀಯವಾಗಿ ಬೆರೆತರೂ ಸ್ವಲ್ಪ ದೂರದಲ್ಲಿ ಉಳಿಯುತಿದ್ದ ಗೌಡರು ನನಗೆ ಸಂದಿಗ್ಧರಾದರು. ಆ ಕಾಲದಲ್ಲಿ ಗೌಡರು ನನಗೆ ಪ್ರಿಯ ವಾದದ್ದು ನಮ್ಮಿಬ್ಬರಿಗೂ ಸಾಮಾನ್ಯವಾದ ಸಾಹಿತ್ಯದ ಆಸಕ್ತಿಯಿಂದಾಗಿ, ಕುಮಾರ ವ್ಯಾಸ, ಲಕ್ಷ್ಮೀಶ, ಬೇಂದ್ರೆ, ಕುವೆಂಪು – ಇವರ ಕಾವ್ಯದಲ್ಲಿ ಗೌಡರಿಗೆ ಆಗ ಅಪಾರ ವಾದ ಆಸಕ್ತಿಯಿತ್ತು. ಕಾವ್ಯವನ್ನು ಇವರು ತುಂಬ ಭಾವಪೂರ್ಣವಾಗಿ ಪಠಿಸುತ್ತಾರೆ, ಹಾಡುತ್ತಾರೆ, ವ್ಯಾಖ್ಯಾನಿಸುತ್ತಾರೆ.

ಬೇಂದ್ರೆಯವರ ʻಅನ್ನದೇವರುʼ, ʻಕುರುಡು ಕಾಂಚಾಣ’, ಕುವೆಂಪುರವರ ʻನೀನಂದು ಕನಕ ರಥವನು ತಂದು’ ಎನ್ನುವ ಪದ್ಯಥಟ್ಟನೆ ನೆನಪಿಗೆ ಬರುವ ಪದ್ಯಗಳು ಇವು-ನನ್ನ ಅನುಭವಕ್ಕೆ ಬಂದದ್ದು ಇವರ ಮೂಲಕ, ಅನೇಕ ಪದ್ಯಗಳನ್ನು ನಾನು ಮತ್ತೆ ಓದುವಾಗ್ಗೆಲ್ಲ ಹಿಂದೊಮ್ಮೆ ಅವನ್ನು ಓದಿದ ಹೊತ್ತು, ಸಂದರ್ಭ, ಅವರ ಓದುವಿಕೆಯ ಭಾವಪೂರ್ಣ ಗತ್ತು ಈಗಲ ನನಗೆ ನೆನಪಾಗುತ್ತವೆ. ಇವರ ಸಂವೇದನೆ ಸಾಹಿತ್ಯದಲ್ಲಿ ಗಾಢವಾದ್ದನ್ನು ಸಾಧಿಸು ತಿತ್ತೆಂದು ನನ್ನ ಬಲವಾದ ನಂಬಿಕೆ. ಮಲೆನಾಡಿನ ರೈತರ ಜೀವನವನ್ನು ಇವರು ಸ್ನೇಹಿತರಿಗೆ ವಿವರಿಸುವಾಗ, ಇವರ ವರ್ಣನೆಯ ಕ್ರಮ, ದುರಂತವನ್ನು ಐರನಿಯಲ್ಲಿ ದಟ್ಟಗೊಳಿಸುವ ಧಾಟಿ, ಹಳ್ಳಿಯವರ ಮಾತಿನ ರಾಗರಂಗುಗಳನ್ನು ಹಿಡಿದು ಹೇಳ ಬಲ್ಲ ಇವರ ಕಿವಿ, ವಿಶಿಷ್ಟ ಅರ್ಥಪೂರ್ಣ ವಿವರವನ್ನು ಕಾಣುವ ಕಣ್ಣು, ತಾನು ಹೇಳಬೇಕಾದ ಅಮೂರ್ತ ವಿಷಯವನ್ನು ಗಾದೆಗಳಲ್ಲಿ, ಜೀವನ ಸಂದರ್ಭದ ವಿವರ ಗಳಲ್ಲಿ ಇವರು ಕಾಣಿಸುವ ರೀತಿ, ಎಲ್ಲಕ್ಕಿಂತ ಹೆಚ್ಚಾಗಿ ಇವರ ಹಾಸ್ಯದೃಷ್ಟಿ…. ಪ್ರಥಮ ದರ್ಜೆಯ ಕಾದಂಬರಿಕಾರನದು.

ಯಾವ ವಿಷಯವನ್ನಾಗಲಿ – ರಾಜಕೀಯ ತತ್ವವಿರಲಿ ಸಾಹಿತ್ಯವಿರಲಿ-ಫ್ರೆಶ್ ಆಗಿ ಗೌಡರು ನೋಡಬಲ್ಲರು. ಗತಿಸಿದ ಸಮಾಜವಾದಿ ಮಿತ್ರ ನಾಗಭೂಷಣರ ಸ್ಮರಣೆಗಾಗಿ ಹಣ ಒಟ್ಟು ಮಾಡಬೇಕೆಂದು ಮೈಸೂರಿನಲ್ಲಿ ಒಂದು ಕವಿಸಮ್ಮೇಳನ ನಡೆಯಿತು. ಗೌಡರು ಅದರ ಅಧ್ಯಕ್ಷತೆ ವಹಿಸಿದ್ದರು. ನವ್ಯಕಾವ್ಯ, ಅಡಿಗರ ಕವನಗಳ ಬಗ್ಗೆ ಅವರು ಕೊನೆಯಲ್ಲಿ ಮಾತಾಡಿದರು. ನಾವೆಲ್ಲ ಉಪಯೋಗಿಸುವ ಒಂದೇ ಒಂದು ಸಾಹಿತ್ಯ ವಿಮರ್ಶೆಯ ಕ್ಲೀಶೆಯೂ ಅವರ ಮಾತಿನಲ್ಲಿರಲಿಲ್ಲ. ಆದರೆ ತನ್ನ ಅಂತರಂಗ ಜೀವನ, ಹೊರಗಿನ ರಾಜಕೀಯ, ಈ ಒಳ ಹೊರಗಿನ ತಿಕ್ಕಾಟದಲ್ಲಿರುವ ತನ್ನ ಮನಸ್ಸು ಈ ಹೊಸ ಕಾವ್ಯದ ತಿರುವು ಮುರುವುಗಳಲ್ಲಿ ಓಡಾಡಿ ಪಟ್ಟ ಅನುಭವ – ಎಲ್ಲವನ್ನೂ ಒಂದಕ್ಕೊಂದು ಹೆಣೆದು ಎಷ್ಟು ಚೆನ್ನಾಗಿ ಮಾತಾಡಿದ ರೆಂದರೆ ನಮ್ಮಲ್ಲಿ ಅನೇಕರಿಗೆ ನಾವು ಎಷ್ಟೋ ಸಾರಿ ಓದಿದ ಅಡಿಗರನ್ನು ಮತ್ತೆ ಹೊಸ ಕಣ್ಣಿಂದ ನೋಡಿದ ಅನುಭವ ಅವತ್ತು ಆಯಿತು. ನಾನು ಏನೇ ಹೊಸದನ್ನು ಓದಲಿ ಗೌಡರಿಗೆ ಅದನ್ನು ವಿವರಿಸುವ ತನಕ ನನಗೆ ಸಮಾಧಾನವಿಲ್ಲ.

ಗೌಡರ ಮನಸ್ಸನ್ನು ಒಂದು ಹೊಸ ವಿಚಾರ ಹೊಕ್ಕು ಹೊರಗೆ ಬರುವಾಗ ಪಡೆಯುವ ನವ್ಯರೂಪ, ಅವರ ನುಡಿಕಟ್ಟಿನಲ್ಲಿ ಈ ವಿಚಾರ ಹೊಳೆಯಿಸುವ ತನ್ನ ಇನ್ನೊಂದು ಮಗ್ಗಲು ನನಗೆ ಯಾವಾಗಲೂ ಆಶ್ಚರ್ಯದ ಅನುಭವ. ಇದಕ್ಕೆ ಕಾರಣ ರೈತರ ನುಡಿಕಟ್ಟುಗಳಲ್ಲಿ, ಅನುಭವದ ವಿವರಗಳಲ್ಲಿ ಗೌಡರ ಸಂವೇದನೆ ಬೇರು ಬಿಟ್ಟಿರುವುದು; ಎಲ್ಲವನ್ನೂ ಸ್ವಂತಕ್ಕೆ ಅನ್ವಯಿಸಿಕೊಳ್ಳಬೇಕೆಂಬ ಎಚ್ಚರದ ಕೌತುಕವನ್ನು ಇವರು ಯಾವತ್ತೂ ಬಿಟ್ಟುಕೊಡದಿರುವುದು. ಅಮೂರ್ತವಾದ್ದು ದೊಡ್ಡ ಸತ್ಯ ವೆಂದಾಗಲೀ, ಮೂರ್ತವಾದ ವಿವರ ಕೀಳೆಂದಾಗಲೀ ಗೌಡರಿಗೆ ಅನ್ನಿಸದೆ ಇರುವುದ ರಿಂದ ಸಮಾಜವಾದದ ಐತಿಹಾಸಿಕ ದೃಷ್ಟಿಯನ್ನೂ ಗೊಬ್ಬರವನ್ನು ತಲೆಯ ಮೇಲೆ ಹೊತ್ತು ಕೆಸರು ಮಣ್ಣನ್ನು ತುಳಿದು ನಡೆಯುವ ರೈತನೊಬ್ಬನ ಭಾಷೆಯಲ್ಲಿ ದಕ್ಕಿಸಿ ಕೊಳ್ಳಲು ಇವರು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ.

ವಾಸ್ತವ ಸತ್ಯವನ್ನು ಬದಲಾಯಿಸಬೇಕೆನ್ನುವ ರಾಜಕೀಯ ಆತುರದ ಜೊತೆಗೆ ಜೀವನವನ್ನು ಇದ್ದ ಹಾಗೇ ಅರಿಯಬೇಕೆನ್ನುವ ನಿರ್ಲಿಪ್ತದೃಷ್ಟಿ ರಾಜಕಾರಣಿಗಳಲ್ಲಿ ಸಾಮಾನ್ಯವಾಗಿ ಕಾಣುವುದಿಲ್ಲ. ಕಮ್ಯುನಿಸ್ಟರು ಆತುರದ ಜನ; ಅವರಿಗೆ ಸಾಂಸಾರಿಕನ ಸಾಮಾನ್ಯ ದಿನಚರಿಗಳಲ್ಲಿ ವ್ಯಕ್ತವಾಗುವ ಸತ್ಯ ಕಾಣುವುದಿಲ್ಲ. ಊಟ, ಉಪಚಾರ, ಹಬ್ಬಕ್ಕೆ ಹೊಲಿಸುವ ಬಟ್ಟೆ, ಜಾತ್ರೆಯ ಗೌಜು, ಮಕ್ಕಳನ್ನು ಸಾಕುವ ಗೋಳು, ಸಣ್ಣ ವಿಷಯಗಳಲ್ಲಿ ನಿತ್ಯ ಸಿಗುವ ಸುಖ. ಸಂಸಾರಿಯಾದ ಹೆಣ್ಣು ನಿತ್ಯ ಯೋಚಿಸುವ ವಿಷಯಗಳು – ಇವೂ ಜೀವನ. ಬಹಳ ಜನರ ಜೀವನ ಇಂಥ ಸಾಮಾನ್ಯದಲ್ಲಿ ಸಫಲತೆ ಕಂಡುಕೊಳ್ಳುತ್ತದೆ. ಕನ್ಸಟಿವ್ ಜನರಿಗೆ ಜೀವನದ ಈ ವಾಸ್ತವ ಕಾಣಿ ಸುತ್ತದೆ; ಆದರೆ ಇವುಗಳನ್ನು ಸೀಳಿಕೊಂಡು ಬರಬೇಕೆನ್ನುವ ಒಳಗಿನ ಕಸಿವಿಸಿ ಕಾಣಿಸುವುದಿಲ್ಲ.

ಪ್ರಜಾತಂತ್ರಕ್ಕೂ, ಸಮಾಜಕ್ರಾಂತಿಗೆ ಒಟ್ಟಿಗೇ ಗಂಟುಬಿದ್ದ ಲೋಹಿಯಾ ತತ್ವಕ್ಕೆ ರೈತರ ನಡುವೆ ಬೆಳೆದ ಗೌಡರಂಥವರು ಆಕರ್ಷಿತರಾಗುವುದು ನನಗೆ ತುಂಬ ಮುಖ್ಯ ವಿಷಯವೆನ್ನಿಸುತ್ತದೆ. ಜೀವನದ ದಿನನಿತ್ಯದ ನಿಜಕ್ಕೂ, ಬದಲಾವಣೆಯ ಆತುರಕ್ಕು ಒಟ್ಟಿಗೆ ಸ್ಪಂದಿಸಬಲ್ಲ ಗೌಡರಿಗೆ ಚಿಕ್ಕಂದಿನಿಂದಲೂ ತನ್ನ ಸ್ವಭಾವದ ಜನರೇ ಗಂಟು ಬಿದ್ದಿರುವುದೂ ಕುತೂಹಲದ ಸಂಗತಿಯಾಗಿದೆ. ಇವರಿಗೆ ಶಾಸ್ತ್ರಿ ಎನ್ನುವ ಹಿರಿಯರೊಬ್ಬ ಸ್ನೇಹಿತರಿದ್ದರು. ಕೆಸೆಂಡ್ರಾನಂತೆ ಭವಿಷ್ಯ ವನ್ನು ಅರಿಯುವ ಶಕ್ತಿ ಪಡೆದಿದ್ದ ಈ ಅಲೆಮಾರಿ ಅತ್ಯಂತ ವಿಚಿತ್ರ, ಮೋಹಕ ವ್ಯಕ್ತಿ. ಅವರ ಜೀವನ ಒಂದು ಪುರಾಣವೇ ಸರಿ. ಸಂಸ್ಕೃತ, ಸಂಗೀತದಲ್ಲಿ ಪಂಡಿತರಾಗಿದ್ದ ಇವರು ಗೌಡರ ಮೇಲೆ ಪ್ರಭಾವ ಬೀರಿರಬೇಕು. ಗೋಲ್ಡ್ಸ್ಮಿತ್‌ನನ್ನು ನೆನಪಿಗೆ ತರುವ ಔದಾರ್ಯ ಇವರದು. ಇವರು ಹಾಕಿದ ಕೋಟನ್ನು ಯಾರೋ ಕೇಳಿದಾಗ ಸ್ವಲ್ಪ ತಾಳು ಎಂದು ಅದನ್ನು ಒಗೆಸಿ, ಇಸ್ತ್ರಿ ಮಾಡಿಸಿ ಕೊಟ್ಟದ್ದನ್ನು ನಾನೇ ನೋಡಿದ್ದೇನೆ. ಈ ವಿರಾಗಿ ನಿಜವಾದ ಹಿಪ್ಪಿ, ಒಮ್ಮೆ ನಾನೂ ಲಂಕೇಶ್ ಜೊತೆಯಲ್ಲಿದ್ದಾಗ, ಗೌಡರು ಶಾಸ್ತ್ರಿಗಳ ಅದ್ಭುತವಾದ ಜೀವನವನ್ನು ನಮಗೆ ವರ್ಣಿಸಿದರು. ಒಂದು ಸಾಹಿತ್ಯಕೃತಿಯನ್ನು ಓದಿದ ಅನುಭವ ಆ ದಿನ ನಮಗಾಯಿತು. ಶಾಸ್ತ್ರಿಗಳಂತೆಯೇ ನಾನು ಹಿಂದೆಯೇ ಹೇಳಿದ ರಾಘವೇಂದ್ರರಾಯರೂ ಸಹ ಒಬ್ಬ “ಬೈರಾಗಿ’, ಶಾಸ್ತ್ರಿ & ರಾಘವೇಂದ್ರರಾಯರಂಥ ಅಥೆಂಟಿಕ್ ಮನುಷ್ಯರ ಜೊತೆ ಬೆಳೆದ ಗೌಡರು ತನ್ನ ಆಚಾರ ವಿಚಾರಗಳಲ್ಲಿ ಏಕತ್ವ ಸಾಧಿಸಲು ಜೀವನದುದ್ದಕ್ಕೂ ಪ್ರಯತ್ನಿಸುತ್ತ ಬಂದಿರುವುದು ಆಶ್ಚರ್ಯವಲ್ಲ. ಮುಂದೆ ಅಶೋಕ ಮಹಾರಂಥವರ ಸುಲಭ ಸಮಾಜವಾದದ ಸಲೀಸು ರಾಜಕಾರಣ ಬಿಟ್ಟು ಲೋಹಿಯಾ ಶಿಷ್ಯರಾದದ ಆಶ್ಚರ್ಯವಲ್ಲ. ಒಂದು ಉದ್ದೇಶದ ಬೆನ್ನು ಹತ್ತಿ ಹೊರಟ ಹುಚ್ಚರೆಲ್ಲರೂ ಯಾವುದೋ ಆಕಸ್ಮಿಕದಿಂದ ಎಂಬಂತೆ ತಾವು ಓದಲೇಬೇಕಾದ್ದನ್ನು ಓದುತ್ತಾರೆ, ಸಂಧಿಸಲೇಬೇಕಾದ ಮನುಷ್ಯರನ್ನು ಸಂಧಿಸುತ್ತಾರೆ ಎಂದು ಏಟ್ಸ್ ಹೇಳಿದ್ದು ನಿಜವೆನ್ನಿಸುತ್ತದೆ.

ಕುಮಾರವ್ಯಾಸನನ್ನು ಸೊಗಸಾಗಿ ವಾಚಿಸುತ್ತಿದ್ದ ಈ ಹುಡುಗ ಆರಗದ ಪೋಸ್ಟ್ಮನ್ ಒಬ್ಬರ ಮಗ, ತಂದೆಯ ನಿಯಮ ನೀತಿ, ಮನೆಗೆ ಅವರು ತರುತ್ತಿದ್ದ ಪತ್ರಿಕೆಗಳು, ಅವುಗಳನ್ನು ತಾನು ಓದುತ್ತಿದ್ದುದು – ತನ್ನ ಸಣ್ಣ ಪ್ರಪಂಚದಲ್ಲಿ ಹೊರಗಿನ ಜಗತ್ತು ಅರಳುತ್ತಿದ್ದುದು – ಎಲ್ಲವನ್ನೂ ಈಚೆಗೆ ಗೌಡರು ವರ್ಣಿಸಿ ಬರೆದಿದ್ದಾರೆ. ದನ ಕಾದುಕೊಂಡು, ಬೀಡಿ ಕಟ್ಟಿಕೊಂಡು ಇದ್ದ ಈ ಹುಡುಗ ಸಾಹಿತ್ಯ ಸಂಗೀತಗಳಲ್ಲಿ ಆಸಕ್ತರಾಗಿದ್ದ ಶಾಸ್ತ್ರಿಗಳ ಕಣ್ಣಿಗೆ ಬಿದ್ದ. ಪಕ್ಕಾ ವಿಜ್ಞಾನ ದೃಷ್ಟಿ ಯುಳ್ಳ ಗೋಪಾಲಗೌಡರೂ ಈ ಶಾಸ್ತ್ರಿಗಳ ಭವಿಷ್ಯ ಜ್ಞಾನದ ಬಗ್ಗೆ ಬೆರಗಿನಿಂದ ಮಾತಾಡುತ್ತಾರೆ. ಆದರೆ ಈ ಬಗ್ಗೆ ಉದಾಸೀನ, ಗೌಡರ ಜೀವನಕ್ರಮ ಬದಲಾ ಯಿಸಲು ಶಾಸ್ತ್ರಿಗಳು ನೆಪವಾದದ್ದು, ಆ ಹೊತ್ತಿಗೆ ಯಾವ ಕಾಯಿಲೆಯಿಂದಲೋ ಎಲ್ಲಿಂದಲೋ ಬಂದ ಶಾಸ್ತ್ರಿಗಳು ಗೌಡರ ಊರಲ್ಲಿ ಬಿಡಾರ ಹಚ್ಚಿದ್ದು ನನಗೆ ಅದ್ಭುತ ರಮ್ಯ ಕಥೆ. ಗೋಪಾಲಗೌಡರ ಜೀವನದಲ್ಲಿ ಈ ಶಾಸ್ತ್ರಿಗಳು ಹಿಂದೆಯೇ ಎಲ್ಲೆಲ್ಲೋ ಪ್ರತ್ಯಕ್ಷರಾಗುತ್ತಾರೆ; ಇದ್ದಕ್ಕಿದ್ದಂತೆ ಮಾಯವಾಗುತ್ತಾರೆ. ಸಾಹಿತ್ಯದಲ್ಲಿ ರೊಮಾಂಟಿಕ್ ಮಾರ್ಗವನ್ನು ತ್ಯಜಿಸಿದ್ದೇನೆಂದು ಭಾವಿಸಿದ ನನಗೆ ನಿಜಜೀವನದಲ್ಲಿ ಶಾಸ್ತ್ರಿಗಳಂಥವರು ಇರುತ್ತಾರೆ, ಗೋಪಾಲನಂಥವರು ಸಮಾಜ ವ್ಯವಸ್ಥೆಯ ಚಕ್ರವ್ಯೂಹ ಭೇದಿಸಿ ಹೊರಬರುತ್ತಾರೆ ಎಂಬುದೆಲ್ಲ ಒಳಗೊಳಗೆ ಸುಖ ಕೊಡುವ ವಿಷಯಗಳು.

ಗೌಡರ ಮತ್ತೊಬ್ಬ ಬಾಲ್ಯಸ್ನೇಹಿತರಾದ ಪುರುಷೋತ್ತಮ್ ಕೂಡ ಹಾಗೆಯೆ, ಗೌಡರ ಯಾವ ಪ್ರಿಯ ಸ್ನೇಹಿತರೂ ಮಧ್ಯಮ ವರ್ಗದ ಮೌಲ್ಯಗಳಿಗೆ ಒಗ್ಗಿ ಬದುಕಲಿಲ್ಲವೆಂಬುದು ಮುಖ್ಯವಾದ ವಿಷಯ. ತನ್ನ ಈ ಸ್ನೇಹಿತರ ಬಗ್ಗೆ ಗೌಡರು ಮೈಮರೆತು ಮಾತಾಡಬಲ್ಲರು. ಚಿಕ್ಕಂದಿನಲ್ಲಿ ಗೌಡರು ಒಳ್ಳೆ ಈಜುಗಾರರು. ಒಮ್ಮೆ ಪುರುಷೋತ್ತಮ್ ಮತ್ತು ಇವರು ತುಂಗಾ ನದಿಯಲ್ಲಿ ಈಜುತ್ತಿದಾಗ ಪುರು ಷೋತ್ತಮ್ ಕೈ ಸೋತು ಮುಳುಗಿದರಂತೆ; ಮುಳುಗುವುದಕ್ಕೆ ಮುಂಚೆ ಯಾವ ವಿಕಾರವೂ ಇಲ್ಲದೆ ‘ಗೋಪಾಲ್ ಹೋಗಿ ಬರುತ್ತೇನೆ’ ಎಂದು ಹೇಳಿ ನೀರಿನಲ್ಲಿ ಮಾಯವಾದರಂತೆ. ಬಂಡೆಯೊಂದು ಅಕಸ್ಮಾತ್ ಕಾಲಿಗೆ ಸಿಕ್ಕದಿದ್ದರೆ ಅವತ್ತು ಅವರು ಸಾಯಬೇಕಿತ್ತು. ಇನ್ನೊಮ್ಮೆ ಯಾವುದೋ ಗುಂಗು ತಲೆಗೆ ಹೊಕ್ಕು ತೀರ್ಥಹಳ್ಳಿ ಸೇತುವೆಯ ಅತ್ಯಂತ ಅಪಾಯಕಾರಿಯಾಗಿ ಜಾರುವ ಕಮಾನು ಹತ್ತಿ ಕೂತ ಪುರುಷೋತ್ತಮನಂಥ ಗೆಳೆಯರು ಗೌಡರ ಜೀವನದುದ್ದಕ್ಕೂ ಸಿಗುತ್ತಾರೆ. ಪಟೇಲ್, ಶಂಕರ್, ಅಣ್ಣಯ್ಯ, ಐತಾಳರು, ಚಂದ್ರಶೇಖರ್, ಸದಾಶಿವರಾಯರು, ವೆಂಕಟ ರಾಮ್, ಕಾಗೋಡು ಸತ್ಯಾಗ್ರಹದಲ್ಲಿ ಇವರ ಪ್ರಭಾವಕ್ಕೆ ಸಿಕ್ಕಿದ ತಿಮ್ಮಪ್ಪರಂತಹ ಎಷ್ಟೋ ಯುವಕರು – ಗೌಡರಲ್ಲಿರುವ ಅನೇಕ ಮಾನವೀಯ ದೋಷಗಳನ್ನು ಕಂಡೂ ಎರಡು ಮೂರು ದಶಕಗಳಷ್ಟು ಕಾಲ ಇವರ ಜೊತೆ ನಿಂತವರು; ಇವರನ್ನು ನಾಯಕನೆಂದು ಯಾವ ಕಪಟವೂ ಇಲ್ಲದೆ ಒಪ್ಪಿಕೊಂಡವರು.

ಗೌಡರ ಬಗ್ಗೆ ಮಾತಾಡ ಹೋದರೆ ಹೀಗೆಯೆ. ಎಲ್ಲೆಲ್ಲೋ ಸುತ್ತಾಡ ಬೇಕಾ ಗುತ್ತೆ. ಸಾಹಿತ್ಯ, ರಾಜಕೀಯ, ಸಂಗೀತ, ರಾಯರು, ಶಾಸ್ತ್ರಿಗಳು, ಪುರುಷೋತ್ತಮ, ರೈತರು – ಹೀಗೆ ನಾನು ಅಲೆಯಬೇಕಾದ್ದರ ಕಾರಣ ಗೌಡರ ಜೀವನ ವೈಖರಿ.

ಗೌಡರು ಸದ್ಗುಣ ಸಂಪನ್ನನೆಂದು ಹೊಗಳುವುದು ನನ್ನ ಉದ್ದೇಶವಲ್ಲ, ಇವರನ್ನು ತುಂಬ ಪ್ರೀತಿಸುವ ಇವರಿಗಾಗಿ ಪ್ರಾಣವನ್ನಾದರೂ ಕೊಡಬಲ್ಲ ಎಲ್ಲ ಸ್ನೇಹಿತರಿಗೂ ಇವರ ಸ್ವಭಾವದ ವಕ್ರತೆಗಳೆಲ್ಲ ಗೊತ್ತು. ಗೌಡರು ಮುಂಗೋಪಿ ಗಳೆನ್ನುವುದಕ್ಕೆ ನನ್ನ ಅನುಭವವನ್ನೇ ಹೇಳುತ್ತೇನೆ. ಶಿವಮೊಗ್ಗದಲ್ಲಿ ಓದುತ್ತಿದ್ದಾಗ ಹದಿನಾರೊ ಹದಿನೇಳೋ ವರ್ಷ ವಯಸ್ಸಿನ ನಾನು ಸಮಾಜವಾದಿ ವಿದ್ಯಾರ್ಥಿ ಸಂಘದ ಸೆಕ್ರೆಟರಿಯಾಗಿದ್ದೆ. ಯಾವುದೋ ಒಂದು ಸಮಾರಂಭಕ್ಕೆ ಗೌಡರನ್ನು ಮಾತಾಡಲು ನಾನು ಕೇಳಲಿಲ್ಲ. ಅದಕ್ಕೆ ಕಾರಣ ಮಾತಾಡಲು ಅವತ್ತು ಬಹಳ ಜನರಿದ್ದರು. ಅಲ್ಲದೆ ಗೌಡರ ಭಾಷಣ ಯಾವತ್ತೂ ಸ್ವಲ್ಪ ಉದ್ದ. ವಿಪರೀತ ಸಮಯ ವಾಗುತ್ತದೆಂದು ನನಗೆ ಭಯ. ಸಭೆ ಮುಗಿದ ಮೇಲೆ ಗೌಡರು ನನ್ನ ಹತ್ತಿರ ಜಗಳ ವಾಡಿದರು. ‘ಜಗಳವಾಡಿದರು’ ಎನ್ನುವುದು ಅತ್ಯಂತ ಸೌಮ್ಯ ಶಬ್ದ – ಹಾಗೆ ಮಾತಾಡಿದರು. ಇದರಿಂದ ಗೌಡರಿಗೆ ಎಷ್ಟು ಕಸಿವಿಸಿಯಾಯಿತೆಂದರೆ ಯಾವ ಸಂಕೋಚವೂ ಇಲ್ಲದೆ ತನ್ನ ತಪ್ಪನ್ನು ಆಮೇಲೆ ಕಂಡುಗೊಂಡರು. ಈಚೆಗೆ ಅಸೆಂಬ್ಲಿಯಲ್ಲಿ ಮೈಕ್ ಕಿತ್ತ ಪ್ರಕರಣದಲ್ಲಿ ಸಹ ಗೌಡರ ಈ ಉದ್ವೇಗ ಪ್ರವೃತ್ತಿ, ಆದರೆ ನಿಷ್ಕಪಟ ನಿರ್ಮಲ ಮನಸ್ಸು ಕಂಡುಬರುತ್ತದೆ.

ಪ್ರಾಯಶಃ ಇನ್ನು ಯಾರಲ್ಲೂ ಅಷ್ಟೇ ತಪ್ಪಾಗಿ ಕಾಣದಿರುವುದು ಗೌಡರು ರಾಜಕಾರಣಿಯಾದ್ದರಿಂದ ಕೆಲವರಿಗೆ ಹಿಡಿಸದಿರಬಹುದು. ಇವರ ನಿಧಾನ, ಇವರ ಅರಿಸ್ಟೋಕ್ರಸಿ, ಇವರ ಆತ್ಮಾಭಿಮಾನ, ದೊಡ್ಡಸ್ತಿಕೆಯ ಜನರಿಗೆ ಸೊಪ್ಪು ಹಾಕದ ಇವರ ಹೆಮ್ಮೆ – ರಾಜಕಾರಣಿಗೆ ತೊಡಕುಗಳೆ, ಆದರೆ ಪೋಸ್ಟ್ ಮನ್ ಮಗನ ಈ ಅರಿಸ್ಟೋಕ್ರಸಿ ನನ್ನ ಹೃದಯವನ್ನು ಖುಷಿಯಲ್ಲಿ ಹಿಗ್ಗಿಸುತ್ತದೆ. ಈ ಆತ್ಮಾಭಿಮಾನ ಈ ಅರಿಸ್ಟೋಕ್ರಸಿ ಇಲ್ಲದಿದ್ದಲ್ಲಿ ಗೌಡರು ಎಂದೋ ಮಂತ್ರಿಯಾಗುತ್ತಿದ್ದರು; ದುಡ್ಡು, ಬಂಗ್ಲ, ಜಮೀನು ಮಾಡಿಕೊಳ್ಳುತ್ತಿದ್ದರು, ಬಡಜನರಿಂದ ದುಡ್ಡನ ಓಟನ ಕೇಳಿ, ಚುನಾವಣೆ ನಡೆಸಿ, ಪ್ರತಿ ಶ್ರೀಮಂತ ಅಭ್ಯರ್ಥಿಯನ್ನೂ ನವ ರಿಂದ ಚುನಾಯಿತರಾಗುತ್ತ ಗೌಡರು ಬರುತ್ತಿರುವುದರಿಂದಲೇ ನನಗೆ ಡೆಮಾಕ್ರಸಿಯಲ್ಲಿ ನಂಬಿಕೆ ಉಳಿದು ಬಂದಿರುವುದು, ಇವರು ಚುನಾವಣೆಯಲ್ಲಿ ಗೆದ್ದರೆಂದು ನಮ್ಮೂರಲ್ಲಿ ಇವರ ಮಯ್ಯಾದೆಗಾಗಿ ಯಕ್ಷಗಾನ ನಡೆಯಿತು; ರೈತ ಜನರ ಸಂಭ್ರಮ ಇದು.

ಆದ್ದರಿಂದಲೇ ನಿಜವಾದ ಜನಬಲವಿರುವ ಗೌಡರು ಬಹು ಸಂಖ್ಯಾತರಿಗೆ ಅಪ್ರಿಯ ವಾದ ನಿಲುವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಸತ್ಯ ಪಕ್ಷಪಾತಿಗಳಾಗಿ ಇವರು ಚಿಕ್ಕಮಗಳೂರಿನ ಜಾತಿ ಗಲಭೆ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು ಅದರಿಂದ ಅನುಭವಿಸಿದ ಸಂಕಷ್ಟಗಳು ನಿಜವಾದ ಜನನಾಯಕನಿಗಿರುವ ಧೈರ್ಯ ವನ್ನು ತೋರಿಸುತ್ತವೆ. ಗೌಡರು ಐಹಿಕಕ್ಕೆ ಗಂಟುಬಿದ್ದ ಸಾಮಾನ್ಯ ರಾಜಕಾರಣಿ ಯಾಗಿದ್ದರೆ ಹೀಗೆ ತತ್ವಕ್ಕೆ ಗಂಟುಬಿದ್ದು ಲೋಹಿಯಾನ ಪ್ರವಾದಿತನಕ್ಕೆ ಮರುಳಾಗಿ ಹೋರಾಡುತ್ತಿರಲಿಲ್ಲ. ನನಗೊಬ್ಬ ಎಂ. ಎಲ್. ಎ. ಒಮ್ಮೆ ಹೇಳಿದರು. “ತಾತ್ವಿಕ ರಾಜಕಾರಣ ಗೋಪಾಲಗೌಡರಂಥವರಿಗೆ ಸರಿ; ನಮಗೆ ಆ ತಾಕತ್ತಿಲ್ಲ”, ಈ ತಾಕ ನೈತಿಕ ಜೀವನಕ್ಕೆ ಅತ್ಯವಶ್ಯವಾದ ಮೂಲದ್ರವ್ಯ; ಗೌಡರು ನಿಜವಾಗಿಯೂ ತುಂಬ ತಾಕತ್ತಿರುವ ಮನುಷ್ಯ. ಇವರಿಗೆ ಸರಿಸಾಟಿಯಾದ ತಾತ್ವಿಕ ರಾಜಕಾರಣಿ ಮೈಸೂರು ದೇಶದಲ್ಲಿ ಇನ್ನೊಬ್ಬನಿಲ್ಲ. ಅಮೆರಿಕದಲ್ಲೊ, ಇಂಗ್ಲೆಂಡ ಬಂಡಾಯವೆದ್ದ ರಾಜಕಾರಣಿಗಳನ್ನು ನಮ್ಮ ಯುವಕ ಸಾಹಿತಿಗಳು ಮೆಚ್ಚಿ ಹೊಗಳುತ್ತಾರೆ. ಗಿನ್ಸ್ ಬರ್ಗನ ವರ್ತನೆಯಿಂದ ಪುಳಕಿತರಾಗುತ್ತಾರೆ. ಆದರೆ ಗೌಡರು ಸಿಟ್ಟಿನಲ್ಲಿ ಚಪ್ಪಲಿ ಬಿಚ್ಚಿದ್ದು ಕಂಡು ಇದೇ ಸಾಹಿತಿಗಳೇ ಅಸಭ್ಯ ವರ್ತನೆಯೆಂದು ಮೂಗು ಮುರಿದದ್ದು ನೋಡಿದ್ದೇನೆ. ನಮ್ಮ ಸಾಮಾಜಿಕ ಪರಿಸರದಲ್ಲಿ ಬಂಡಾಯ ಕಂಡಾಗ ನಾವು ಕನ್ಸಲ್ವೇಟಿವ್ ಆಗಿ ಬಿಡುತ್ತೇವೆ. ಅತ್ಯಂತ ಪ್ರಗತಿಶೀಲ ಸಾಹಿತಿಯೂ ತನ್ನ ಸ್ವಂತದ ಹೆಂಗಸರು ಪತಿವ್ರತೆಯರೂ ದೇಶಭಕ್ತರೂ ಆಗಿರಬೇಕೆಂದು ಬಯಸಿದ ಹಾಗೆ, ನಾವು ಹೀಗೆ ಬಿರುಕುಬಿಟ್ಟ ಜನರಲ್ಲದಿದ್ದರೆ ನಮ್ಮ ಸಾಹಿತಿಗಳಿಗೆ ನಮ್ಮೊಳಗಿನ ಗೋಪಾಲ ಗೌಡರಂಥವರೂ ಎಂದೋ ಕುತೂಹಲದ ವ್ಯಕ್ತಿಗಳಾಗುತ್ತಿದ್ದರು.

ಲೋಹಿಯಾನ ಬರವಣಿಗೆ, ಬದುಕು ನಮ್ಮ ಸಾಹಿತಿಗಳ ಕಣ್ಣಿಗೆ ಬೀಳಲು ಅಧಿಕಾರದ ಮುದ್ರೆ ಅದರ ಮೇಲೆ ಬೀಳಬೇಕು ! ಆದರೆ ಗೌಡರು ಮಾತ್ರ ಖಾಹಿಲೆಯಿಂದ ಹಾಸಿಗೆ ಹಿಡಿದಾಗಲೂ ಶಂಬಾಜೋಷಿಯವರ ಪುಸ್ತಕಗಳು ಖರ್ಚಾಗದೆ ಉಳಿದಿವೆಯೆಂದು, ಸಂಕೇತದ ಬಗ್ಗೆ ಅವರು ಹೇಳುವ ಮಾತು ಬಹಳ ಮುಖ್ಯವೆಂದು, ಅಡಿಗರು ಈಚೆಗೆ ಏನು ಬರೆದಿದ್ದಾರೆಂದು ಯೋಚಿಸುತ್ತಿರುವ ವ್ಯಕ್ತಿ. ಹೀಗೆ ತನ್ನ ಅಂತಃಕರಣವನ್ನು, ಸಂವೇದನೆಯನ್ನು ಜಡ್ಡಾಗದಂತೆ ಉಳಿಸಿಕೊಂಡು ಸಂತೆ ಗದ್ದಲದಲ್ಲಿ ಬದುಕಿದ ಗೋಪಾಲಗೌಡರು ಜೀವಂತ ರಾಜಕಾರಣಿ ಹೇಗಿರಬೇಕೆಂಬುದಕ್ಕೆ ಮಾದರಿ.

ಗೌಡರು ಸುಸಂಸ್ಕೃತರು, ರಸಿಕರು ಎನ್ನುವ ಭಾವನೆಯಷ್ಟೆ ನಾನು ಮಾಡಿ ಕೊಟ್ಟಿರುವ ಪರಿಚಯದಿಂದ ಹುಟ್ಟುವುದಾದರೆ ನಾನು ದೊಡ್ಡ ತಪ್ಪು ಮಾಡಿದಂತೆ. ಒಮ್ಮೆ ನನ್ನ ಪ್ರಿಯ ಗೆಳೆಯರೊಬ್ಬರು ನಿಮ್ಮಂಥವರಿಂದಾಗೆ ಗೌಡರು ಸಪ್ಪೆ ಯಾಗುತ್ತಿದ್ದಾರೆ. ಅವರನ್ನು ಸಾಹಿತ್ಯ ಸಂವೇದನೆಯುಳ್ಳವರೆಂದು ಹೊಗಳಿ ನಿಜ ವಾದ ಕ್ರಾಂತಿಕಾರಣದಿಂದ ಅವರ ಮನಸ್ಸು ತಿರುಗುವಂತೆ ನೀವೆಲ್ಲ ಫಿತೂರಿ ಹೂಡಿದ್ದೀರಿ’ ಎಂದು ಹೇಳಿದ್ದು ನೆನಪಿದೆ. ಗೌಡರು ನಿಧಾನ ಪ್ರಕೃತಿಯ ಬಗ್ಗೆ ಬಿರುಸಿನ ಯುವಕ ಮಿತ್ರರಲ್ಲದೆ, ಲೋಹಿಯಾರೂ ರೇಗಿದ್ದಿದೆ. ಗೌಡರು ಒಬ್ಬಂಟಿ ಯಾಗಿ ಸಮಾಜವಾದಕ್ಕಾಗಿ ಕನ್ನಡ ನಾಡಿನಲ್ಲಿ ನಿಂತು ಹೋರಾಡುತ್ತಿರುವವರು; ರೈತರ ಸಮಸ್ಯೆಗಳನ್ನು ವಿವರಿಸಿ, ವಿಶ್ಲೇಷಿಸಿ; ಅದಕ್ಕಾಗಿ ಜೈಲಿಗೆ ಹೋಗಿ, ಹೊತ್ತಿಗೆ ಊಟ ನಿದ್ರೆಯಿಲ್ಲದೆ ಓಡಾಡಿ, ತನ್ನ ಜೀವನವನ್ನು ತೇಯ್ದು, ಆರೋಗ್ಯವನ್ನು ಕಳೆದುಕೊಂಡವರು. ಹೀಗೆ ಸಮಾಜವಾದದ ಧೈಯಕ್ಕಾಗಿ ತನ್ನ ಆರೋಗ್ಯವನ್ನೂ, ಎಲ್ಲ ಸುಖಗಳನ್ನೂ ಗೌಡರು ಕಡೆಗಣಿಸಿರುವಾಗ, ‘ಭೂಸುಧಾರಣೆಯ ನಿಜವಾದ ಶಿಲ್ಪಿ’ ಅವರಾಗಿರುವಾಗ ಈ ಸಂಗತಿಗಳನ್ನು ಮರೆತು ಗೌಡರ ಸಂವೇದನೆ ಬಗ್ಗೆ ಮಾತಾಡುವುದು ಕ್ಷುಲ್ಲಕವಾಗಿ ಕಾಣುವುದು ಸಹಜವೆ.

ಗೋಪಾಲಗೌಡರ ರಾಜಕೀಯ ಸಾಧನೆ, ಸೋಲು; ಲೋಹಿಯಾರಂಥವರ ಜೊತೆ ಗೌಡರು ಅಲ್ಪ ಸಂಖ್ಯಾತರಾಗಿ ಉಳಿಯಬೇಕಾದ್ದರ ಐರನಿ ಇದು ಇತಿಹಾಸಕ್ಕೆ ಸೇರಿದ್ದು. ಗೌಡರಿಗೆ ನಾವು ಋಣಿಯಾಗಿರಬೇಕಾದ್ದು ಹಲವು ಕಡೆ ಜೀವನ ಒಡೆದು ಕೊಳ್ಳತ್ತಿರುವಾಗ ಒಟ್ಟಂದದ ತುಂಬು ಜೀವನಕ್ಕೆ ಇವರು ಶ್ರಮಿಸುತ್ತಾರೆ ಎಂಬುದ ಕ್ಕಾಗಿ, ನೆಹರು ಯುಗದ ಬರಿ ಕನಸುದಾರರಾಗಿ ಉಳಿಯದೆ ಯಾವುದೋ ಹಳ್ಳಿಯ ಉಪಾಧ್ಯಾಯನಿಗೆ ಭಡ್ತಿ, ಎಲ್ಲೋ ಮುರಿದ ಸೇತುವೆಯ ರಿಪೇರಿಗಳಿಂದ ಹಿಡಿದು ಆಮೂಲಾಗ್ರವಾದ ಸಾಮಾಜಿಕ ಬದಲಾವಣೆಗೂ ಹಾತೊರೆಯುತ್ತಾರೆ ಎಂಬುದಕ್ಕಾಗಿ.

ಗೌಡರು ಮಾತಾಡುವಾಗ ಅವರ ಭಂಗಿ, ಅವರ ಸ್ವರ, ಅವರ ಹಾಸ್ಯ ಪ್ರಿಯತೆ ಯನ್ನು ಸೂಚಿಸುವಂತ ಮಾತಿನ ಮೇಲೆ ಬೀಳುವ ಘಾತಗಳು – ಎಲ್ಲ ಜೀವಂತವಾಗಿ ನಮ್ಮ ಕಣ್ಣೆದುರಿಗಿರುತ್ತವೆ. ಅವರ ಎಲ್ಲ ಮಾತಿಗೂ ಮುನ್ನೆಲೆ ಹಿನ್ನೆಲೆಗಳು ಬೇರೆ ಇರುತ್ತವೆ. ಅವೆಲ್ಲ ಬರೆದಿಟ್ಟಾಗ ಕಾಣಿಸುವುದಿಲ್ಲ. ಅಲ್ಲದೆ ಗೌಡರಿಗೆ ದೀರ್ಘವಾಗಿ ಮಾತಾಡುವುದು ಅಭ್ಯಾಸವಾದಕ್ಕೆ ಇನ್ನೊಂದು ಕಾರಣವಿದೆ. ಅವರು ಇಡೀ ಜೀವನ ವನ್ನು ಕಳೆಯುತ್ತಿರುವುದು ರೈತರ ಜೊತೆ, ಡಾರ್ವಿನ್, ಮಾರ್ಕ್ಸ್, ರಸೆಲ್, ಲೋಹಿಯಾ ತಾನು ಓದಿದ ಎಲ್ಲವನ್ನೂ ರೈತರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳ ಬೇಕೆಂದು ತನ್ನ ವಾಗಿತೆ ಬೆಳೆಸಿಕೊಂಡವರು ಗೌಡರು. ಯಾವ ಒಂದು ಶಬ್ದದಲ್ಲಿ ತನ್ನ ವಿಚಾರವನ್ನು ಭಟ್ಟಿಯಿಳಿಸಲು ಪ್ರಯತ್ನಿಸದೆ, ತನ್ನೆದುರಿಗಿರುವ ಜನಕ್ಕೆ ಅರ್ಥ ವಾಗಲೆಂದು, ಶಬ್ದಗಳಿಂದ ಅವರು ದಿಗಿಲು ಬೀಳದಿರಲೆಂದು ಎಲ್ಲವನ್ನೂ ಅತ್ಯಂತ ಸರಳವಾಗಿ ಬಿಡಿಸಿ ಹೇಳುವುದು ಇವರಿಗೆ ಅಭ್ಯಾಸವಾಗಿತ್ತು.

ಜನರ ಜೀವನ ಬದಲಾಗಬೇಕೆಂಬ ಅವಸರದ ಜೊತೆಗೇ ಅಂತರಂಗದಲ್ಲಿ ಆಲಿಸಿ ದಾಗ ಮಾತ್ರ ಕೇಳುವ ಪಿಸುಮಾತಿನ ನಿಜಗಳನ್ನೂ ಕೇಳಿಸಿಕೊಳ್ಳಬಲ್ಲ ಈ ತಾತ್ವಿಕ; ಸಂತೆ ಗದ್ದಲಗಳಲ್ಲಿ ಬದುಕಲು ನಿರ್ಧರಿಸಿಯೂ ತನ್ನತನ ಕಳೆದುಕೊಳ್ಳದ ಈ ರಾಜ ಕಾರಣಿ; ಕಾರ್ಪಣ್ಯ, ದೈನ್ಯ, ಬಡತನಗಳ ಬಗ್ಗೆಯೇ ಯೋಚಿಸುತ್ತಿದ್ದೂ ಈ ಕೆಸರಲ್ಲ ಅರಳುವ ಜೀವನದ ಸೊಗಸುಗಳನ್ನು ಮರೆಯದ ಈ ರಸಿಕ; ಕಡುಕೋಪಿ ಯಾಗಬಲ್ಲನಾದರೂ ಈ ಹಾಸ್ಯ ಪ್ರಿಯ; ಅತ್ಯಂತ ಸಭ್ಯನಾದರೂ ನಿಷ್ಟುರವಾಗಿ ಉಳಿದ ಈ ಸಂಕೀರ್ಣ ಮನುಷ್ಯ ನನ್ನ ಗೆಳೆತನದ ಅತ್ಯುತ್ತಮ ಗಳಿಕೆಗಳಲ್ಲಿ ಬಹು ಮುಖ್ಯರಾದವರು.
ನಮ್ಮ ರಾಜಕೀಯ ಕ್ಷೇತ್ರದಲ್ಲಿ ಗೌಡರಂಥವರು ಇರುವುದು ಒಬ್ಬರೇ; ಆದ್ದ ರಿಂದ ಆವರೊಬ್ಬರೇ ಹೀಗೆ ಎದ್ದು ಕಾಣುವುದು. ನಮ್ಮ ಸಮಾಜ ಜೀವನದ ದುರಂತ ಇದು.

(ಕೃಪೆ: ಕೋಣಂದೂರು ವೆಂಕಪ್ಪಗೌಡ ಸಂಪಾದಕತ್ವದ
ಶಾಂತವೇರಿ ಗೋಪಾಲಗೌಡ ಸ್ಮರಕ ಗ್ರಂಥ ʻಜೀವಂತ ಜ್ವಾಲೆʼ)

Exit mobile version