ಬೆಂಗಳೂರು: ಕಳೆದೊಂದು ವರ್ಷದ ಈ ರಾಜ್ಯ ಸರ್ಕಾರದ (Congress Government) ಸಾಧನೆ ಶೂನ್ಯ. ಇದು ಕೊಲೆಗಡುಕರ ಸರ್ಕಾರವಾಗಿದೆ. ಕರ್ನಾಟಕ ಎಂದರೆ ಕೊಲೆಗಡುಕರ ಸರ್ಕಾರ ಎಂದು ದೇಶದೆಲ್ಲೆಡೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾತು ಕೇಳುತ್ತಿದೆ. ಕೊಲೆ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. ಲವ್ ಜಿಹಾದ್ (Love Jihad) ಪ್ರಕರಣದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದೆ. ಕೊಲೆಗಡುಕರಿಗೆ ಶಕ್ತಿ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕಿಡಿಕಾರಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಗುದ್ದಲಿ ಪೂಜೆಯ ಉದಾಹರಣೆಯೂ ಇಲ್ಲ. ಮಹಿಳಾ ಸುರಕ್ಷತೆ ಬಗ್ಗೆ ಯಕ್ಷಪ್ರಶ್ನೆ ಮೂಡಿದೆ. ಅಭಿವೃದ್ಧಿ ಇಲ್ಲ. ರೈತರ ವಿಚಾರದಲ್ಲಿ ಕಾಳಜಿ ಇಲ್ಲದಂತಾಗಿದೆ. ಲವ್ ಜಿಹಾದ್ ಹೆಚ್ಚಳ, ಹಿಂದೂ ಕಾರ್ಯಕರ್ತರ ಹತ್ಯೆಯೂ ದಿನೇದಿನೇ ಹೆಚ್ಚಾಗುತ್ತಿದ್ದರೂ ಸರಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಹುಬ್ಬಳ್ಳಿ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹತ್ಯೆ ಪ್ರಕರಣ, ಮನೆಗೆ ನುಗ್ಗಿ ಅಂಜಲಿ ಹತ್ಯೆ, ಕೊಡಗಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಹತ್ಯೆ, ಕೊಡಗಿನಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕಾರು ಹರಿಸಿ ಹತ್ಯೆ ಮಾಡಲಾಗಿದೆ. ಈ ಸರ್ಕಾರ ಬಂದ ಬಳಿಕ ಕಲಬುರಗಿಯಲ್ಲಿ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. 3-4 ತಿಂಗಳಿನಿಂದ 450ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ. ಇದರಿಂದ ರಾಜ್ಯವೇ ದೇಶದ ಮುಂದೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನ ಹೊರಹಾಕಿದರು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಮೊತ್ತವನ್ನು ಬೇರೆಡೆಗೆ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಕೊಡುತ್ತಿದ್ದ 4 ಸಾವಿರವನ್ನು ತಡೆ ಹಿಡಿದಿದ್ದಾರೆ ಎಂದರಲ್ಲದೆ, ಪ್ರಕೃತಿ ವಿಕೋಪ ನಿಧಿಯಡಿ ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಬರಗಾಲದ ಸಂದರ್ಭದಲ್ಲೂ 7 ತಾಸು ವಿದ್ಯುತ್ ಕೊಡದ ನಿಷ್ಕ್ರಿಯ ಸರ್ಕಾರ ಇಲ್ಲಿದೆ ಎಂದು ಬಿ.ವೈ. ವಿಜಯೇಂದ್ರ ದೂರಿದರು.
ಅಭಿವೃದ್ಧಿ ಎಂದು ಬಿಂಬಿಸುವ ಕೆಲಸ
ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದರು. ಈ ಸರ್ಕಾರ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಆಶಯ ಜನರದ್ದಾಗಿತ್ತು. ನುಡಿದಂತೆ ನಡೆಯುವ ಸರ್ಕಾರ ಎಂದು ಕಾಂಗ್ರೆಸ್ಸಿಗರು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ. ಹೊಗಳುಭಟರು, ಜಾಹೀರಾತಿನ ಮೂಲಕ ತಮ್ಮನ್ನು ತಾವು ಹೊಗಳಿಸಿಕೊಳ್ಳುವುದು ಮತ್ತು ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಸಾಧನೆ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಜತೆ ಜತೆಗೇ ಈ ನಾಡಿನ ಜನಸಾಮಾನ್ಯರೂ ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂದು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು.
ಬರಗಾಲದ ವಿಚಾರದಲ್ಲಿ ಸರ್ಕಾರದ ನಡವಳಿಕೆ ಅಕ್ಷಮ್ಯ ಅಪರಾಧ
ಗ್ಯಾರಂಟಿಯನ್ನೇ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಬರಗಾಲದ ವಿಚಾರದಲ್ಲಿ ಸರ್ಕಾರದ ನಡವಳಿಕೆ ಅಕ್ಷಮ್ಯ ಅಪರಾಧ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಹೋರಾಟ ಮಾಡಿದರು. ಆದರೆ, ಚುನಾಯಿತ ಸರ್ಕಾರದ ಜವಾಬ್ದಾರಿ ಏನು? ಮುಖ್ಯಮಂತ್ರಿಗಳ ಹೊಣೆ ನಿಭಾಯಿಸುತ್ತಿದ್ದಾರೆ ಎಂದು ರೈತರಿಗೆ ಯಾವತ್ತೂ ಅನಿಸಿಲ್ಲ ಎಂದು ಬಿ.ವೈ.ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 692ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರವು ಕೃಷಿ ಸಾಲ, ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಗಂಭೀರವಾದ ಅಥವಾ ಜವಾಬ್ದಾರಿಯುತ ಸರ್ಕಾರವಾಗಿ ನಡೆದುಕೊಳ್ಳದೆ ಇರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಬಗೆಗಿನ ಸರ್ಕಾರದ ಅಸಡ್ಡೆಯ ಧೋರಣೆ ಗೋಚರಿಸಿದೆ. ಸರ್ಕಾರವು ಜವಾಬ್ದಾರಿಯುತವಾಗಿ ನಡೆದುಕೊಂಡಿದೆಯೇ? ತನ್ನ ಹೊಣೆ ನಿಭಾಯಿಸಿದೆಯೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಹೈನುಗಾರಿಕೆ ಪ್ರೋತ್ಸಾಹಧನವನ್ನೂ 8-10 ತಿಂಗಳಿನಿಂದ ನೀಡಿಲ್ಲ. ಗ್ಯಾರಂಟಿಗಳ ಅನುಷ್ಠಾನದ ಆತುರದಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.
ಸಿಎಂ ಒಳಗೊಂಡಂತೆ ಸಚಿವರು ಕರ್ನಾಟಕ ಸರ್ಕಾರ, ಕರ್ನಾಟಕದ ಅಭಿವೃದ್ಧಿ ದೇಶಕ್ಕೇ ಮಾದರಿ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಒಬ್ಬರು ಕಾಂಗ್ರೆಸ್ ನಾಯಕರು ಅಸಾಧ್ಯವಾದುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎನ್ನುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಈ ಸರ್ಕಾರದ ವೈಫಲ್ಯಗಳನ್ನು ತೆರೆದಿಡುವುದು ನಮ್ಮ ಕರ್ತವ್ಯವೂ ಹೌದು ಎಂದು ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನ್ನು ಕೇಳಿದರೆ, ಗ್ಯಾರಂಟಿಯೇ ಈ ರಾಜ್ಯದ ಅಭಿವೃದ್ಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿಗೆ ಪ್ರಚಾರ ಕೊಟ್ಟು, ಅದರ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಜತೆ ಸಂಘರ್ಷದ ಹಾದಿ
ಕೇಂದ್ರ ಸರ್ಕಾರದ ಜತೆ ಸಂಘರ್ಷದ ಹಾದಿಯನ್ನು ತೆಗೆದುಕೊಂಡಿರುವುದೇ ಈ ಸರ್ಕಾರದ ಸಾಧನೆಯಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವುದು, ಗೂಬೆ ಕೂರಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಆದಿಯಾಗಿ ಎಲ್ಲರೂ ಎಲ್ಲ ವಿಚಾರದಲ್ಲೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಕೇಂದ್ರ ಸರ್ಕಾರದತ್ತ ಯಶಸ್ವಿಯಾಗಿ ಬೊಟ್ಟು ಮಾಡುತ್ತಾ ಬಂದಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು.
ಬೆಲೆ ಏರಿಕೆಯ ಕೊಡುಗೆಯನ್ನು ರಾಜ್ಯ ಸರಕಾರ ಜನರಿಗೆ ಕೊಟ್ಟಿದೆ. ಸ್ಟ್ಯಾಂಪ್ ಪೇಪರ್ ದರ ಹೆಚ್ಚಳ, ವಿದ್ಯುತ್ ದರ ಏರಿಕೆ, ಪಹಣಿ ಪತ್ರ ಶುಲ್ಕ ಏರಿಕೆ ಮಾಡಿದ್ದಾರೆ. ರೈತರು ಟ್ರಾನ್ಸ್‍ಫಾರ್ಮರ್ ಪಡೆಯಲು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ 25 ಸಾವಿರ ಕಟ್ಟಿದರೆ ಸಾಕಿತ್ತು. ಈಗ ಟಿಸಿ ಪಡೆಯಲು 2.5 ಲಕ್ಷದಿಂದ 3 ಲಕ್ಷ ಖರ್ಚು ಮಾಡಬೇಕಾದ ಪರಿಸ್ಥಿತಿಯನ್ನು ರಾಜ್ಯ ಸರಕಾರ ತಂದಿದೆ. ಇದೊಂದು ನೀಚ ನಿರ್ಧಾರ ಎಂದು ಟೀಕಿಸಿದರು. ಬರಗಾಲದ ಸಂದರ್ಭದಲ್ಲೂ ರಾಜ್ಯ ಸರಕಾರವು ರೈತವಿರೋಧಿ ಎಂದು ಸಾಬೀತಾಗಿದೆ ಎಂದರು.
ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಹೇಳಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿಗೆ ಯಥೇಚ್ಛವಾಗಿ ನೀರು ಬಿಟ್ಟಿದ್ದಾರೆ. ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಟ್ಟು ಬೆಳೆದು ನಿಂತ ಬೆಳೆಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಹೋರಾಟ ಮಾಡಿದ ರೈತರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಇದನ್ನೂ ಓದಿ: 2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ನಾಳೆ; ಸಿಇಟಿ ಫಲಿತಾಂಶ ಯಾವಾಗ?
ಫಲಿತಾಂಶ ಬಳಿಕ ಹಣೆಬರಹ ಗೊತ್ತಾಗುತ್ತೆ
ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಈ ಸರ್ಕಾರದ ಹಣೆಬರಹ ಗೊತ್ತಾಗಲಿದೆ. ಮೋದಿಜೀ ಅವರ ಮೋದಿ ಗ್ಯಾರಂಟಿ ಬಗ್ಗೆ ಜನತೆ ಭರವಸೆ ಇಟ್ಟು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರಕಾರವು ಅಭಿವೃದ್ಧಿಯ ಕಡೆ ಗಮನ ಕೊಡಬೇಕು; ಕಾನೂನು- ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.