ಬೆಂಗಳೂರು: ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ತಯಾರಾಗಿದ್ದಾರೆ. ಬಿಜೆಪಿಯಿಂದ ತಮಗೆ ಟಿಕೆಟ್ ಸಿಗಲಿದೆ ಎನ್ನುವ ಭರವಸೆಯಲ್ಲಿ ಅವರು ಇದ್ದಾರೆ. ಕಳೆದ ಬಾರಿ ಅವರ ಪರವಾಗಿ ಯಶ್ ಹಾಗೂ ದರ್ಶನ್ ಪ್ರಚಾರ ಮಾಡಿದ್ದರು. ಈಗಾಗಲೇ ದರ್ಶನ್ ಅವರು ಸುಮಲತಾ ಪರ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಯಶ್ ಬಗ್ಗೆ ಇಷ್ಟು ದಿನ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಈ ಬಗ್ಗೆ ಸಮಲತಾ ಮಾತನಾಡಿ ಈ ಬಾರಿ ಪರಿಸ್ಥಿತಿ ಬೇರೆ ರೀತಿ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮದ ಜತೆ ಸುಮಲತಾ ಮಾತನಾಡಿ ʻʻಕಳೆದ ಬಾರಿ ನಾನು ನಿರ್ದಿಷ್ಟವಾಗಿ ಪ್ಲ್ಯಾನ್ ಯಾವುದೂ ಮಾಡಿರಲಿಲ್ಲ. ಇಂಡಿಪೆಂಡೆಂಟ್ ಆಗಿಯೇ ನಿಂತಿದ್ದೆ. ಈಗ ಪರಿಸ್ಥಿತಿ ಚೇಂಜ್ ಆಗಿದೆ. ನಾನು ಈ ಬಾರಿ ಒಂದು ಪಕ್ಷದಿಂದ ನಿಲ್ಲುತ್ತಿದ್ದೇನೆ. ಈ ಪಕ್ಷದಲ್ಲಿ ಲೀಡರ್ಸ್ ಕೂಡ ಇರುತ್ತಾರೆ. ಪ್ರಚಾರ, ಹೋರಾಟ ಯಾವುದೇ ಇರಲಿ ವಿಭಿನ್ನವಾಗಿರುತ್ತದೆ. ಈಗಲೂ ಎಲ್ಲರೂ ಸಪೋರ್ಟ್ ಮಾಡುತ್ತಾರೆ. ಆಗ ಆ ಇಬ್ಬರೂ ಸೂಪರ್ ಸ್ಟಾರ್ಸ್‌ಗಳು ಯಾವುದೇ ಸ್ವಾರ್ಥ ಇಲ್ಲದೇ, ಯಾವುದು ಎದುರು ನೋಡದೇನೆ ನನ್ನ ಪರ ನಿಂತಿದ್ದರಲ್ಲ ಅದು ಸಾಹಸ. ಪ್ರತಿ ಸಲ ನನ್ನ ಪರ ನಿಲ್ಲಿ ಎಂದು ಕೇಳೋದು ಸರಿನಾ? ದರ್ಶನ್ ಅವರಿಗೂ ಸಿನಿಮಾ ಕೆಲಸಗಳು ಇರುತ್ತವೆ. ಪ್ರತಿ ಸಲ ನಮ್ಮ ಜತೆ ಬನ್ನಿ ಎಂದು ಕರೆಯುವುದು ಸರಿ ಅಲ್ಲ. ಬರೋದು ಇದ್ದರೆ ನಾನು ಖಂಡಿತ ವೆಲ್‌ಕಮ್ ಮಾಡ್ತೀನಿ. ಯಶ್ ಕೂಡ ಪ್ಯಾನ್ ಇಂಡಿಯಾ ಸ್ಟಾರ್. ಅವರಿಂದ ಮತ್ತೆ ನಿರೀಕ್ಷೆ ಮಾಡೋದು ಸರಿಯಲ್ಲ. ಬಂದರೆ ಖುಷಿ. ನಮ್ಮ ಮನೆ ಕುಟುಂಬದ ನಂಟು ಇಟ್ಟುಕೊಂಡು ಆಗ ಯಶ್ ಅವರೇ ಬಂದರು. ಕಳೆದ ಚುನಾವಣೆಯಲ್ಲಿ ನನ್ನ ಮನೆಯ ಮಕ್ಕಳು ತರ ಓಡಾಡಿದ್ದಾರೆ. ಆವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಈ ಬಾರಿ ಅವರು ಬರದಿದ್ದರೂ ನಾನು ಬೇಜಾರು ಮಾಡಿಕೊಳ್ಳಲ್ಲ ʼʼಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ: Sumalatha Ambareesh: ಸಾಧನಾ ಪಟ್ಟಿ ಹೇಳುತ್ತಾ ವಿದಾಯದ ಭಾಷಣ ಮಾಡಿದ ಸುಮಲತಾ ಅಂಬರೀಶ್!
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ʻʻಇದು ಅತ್ಯಂತ ಭಯಾನಕ ವಿಚಾರ. ಇದನ್ನು ಎಲ್ಲರೂ ಖಂಡಿಸಬೇಕು. ತಪ್ಪಿತಸ್ಥರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಈ ಪ್ರಕರಣದಲ್ಲಿ ಬೇರೆ ಬೇರೆ ಹೇಳಿಕೆ ಕೊಡೋದು ಮಹಾಪರಾಧ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಬೇಗ ಬಂಧಿಸಲಿದ್ದಾರೆʼʼ ಎಂದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರಕ್ಕೆ ಸ್ಪಂದಿಸಿ, ʻʻಎಫ್‌ಎಸ್‌ಎಲ್ ವರದಿಯಲ್ಲೂ ಅದು ಫೇಕ್ ಅಲ್ಲ ಎಂಬಂತೆ ಬಂದಿದೆ. ಪಕ್ಷಗಳು ಒಂದು ಸಮುದಾಯವನ್ನು ಯಾವುದೇ ತಪ್ಪು ಮಾಡಿದರೂ ಖಂಡಿಸದೇ, ರಕ್ಷಣೆ ಮಾಡಿಕೊಂಡು ಬರಬರಬಾರದು. ಎಲ್ಲಾ ಚಾನೆಲ್‌ಗಳೂ ಆ ವಿಚಾರವನ್ನ ಪ್ರಚಾರ ಮಾಡಿವೆ. ಒಂದೆರಡು ಚಾನೆಲ್ ಆದ್ರೆ ತಪ್ಪು ಮಾಡಬಹುದು. ಎಲ್ಲಾ ಚಾನೆಲ್‌ಗಳು ತಪ್ಪು ಮಾಡುತ್ತವೆಯೇʼʼ ಎಂದು ಪ್ರಶ್ನಿಸಿದರು.