Site icon Vistara News

Suresh Gopi: ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿರುವ ಸುರೇಶ್‌ ಗೋಪಿ ಜೀವನದಲ್ಲಿ ನಡೆದಿತ್ತೊಂದು ಘೋರ ದುರಂತ

Suresh Gopi

ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ ಬಹುತೇಕ ಬಿಜೆಪಿಗೆ (BJP) ಬೇಸರವನ್ನು ಉಂಟು ಮಾಡಿದ್ದರೂ ಕಮ್ಯುನಿಸ್ಟ್ (Communist) ಆಡಳಿತವಿರುವ ಕೇರಳದಲ್ಲಿ (kerala) ಒಂದು ಖಾತೆ ತೆರೆದು ಸಂಭ್ರಮ ಪಡುವಂತೆ ಮಾಡಿದೆ. ಹಲವು ಹಲವು ದಶಕಗಳ ಸುದೀರ್ಘ ಕಾಯುವಿಕೆಯ ಬಳಿಕ ಮೊದಲ ಬಾರಿಗೆ ಕೇರಳದಲ್ಲಿ ಕಮಲ ಅರಳಿದೆ. ಈ ಸಾಧನೆ ಬಿಜೆಪಿ ನಾಯಕ ಮತ್ತು ನಟ ಸುರೇಶ್ ಗೋಪಿ (Suresh Gopi) ಅವರದ್ದು.

ಸಮಾಜ ಸೇವೆಗಾಗಿ ಹೆಸರುವಾಸಿಯಾಗಿರುವ ಸುರೇಶ್ ಗೋಪಿ ಅವರು ತ್ರಿಶೂರ್ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಕೇಸರಿ ಪಕ್ಷದ ಸುರೇಶ್ ಗೋಪಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ “ತ್ರಿಶೂರ್ ನಂ ಎಡುಕ್ಕುವ (ತ್ರಿಶೂರ್ ಅನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ), ಎನಿಕ್ಕು ವಿಷ ತ್ರಿಶೂರ್ (ನನಗೆ ತ್ರಿಶೂರ್ ಬೇಕು)” ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸಿದ್ದರು.


ಬಿಜೆಪಿಗೆ ಐತಿಹಾಸಿಕ ಗೆಲುವು

ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಸುರೇಶ್ ಗೋಪಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ನ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಮತ್ತು ಮಾಜಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಅವರನ್ನು 73,573 ಮತಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ದಾಖಲಿಸಿದರು.


ಯಾರು ಸುರೇಶ್ ಗೋಪಿ?

ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿರುವ ಸುರೇಶ್ ಗೋಪಿ ಮಲಯಾಳಂ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ಇವರ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ.

ಕೊಲ್ಲಂನಲ್ಲಿ ಚಲನಚಿತ್ರ ವಿತರಕ ಗೋಪಿನಾಥನ್ ಪಿಳ್ಳೈ ಮತ್ತು ಅವರ ಪತ್ನಿ ಜ್ಞಾನಲಕ್ಷ್ಮಿ ಅವರ ಮೂವರು ಮಕ್ಕಳಲ್ಲಿ ಸುರೇಶ ಗೋಪಿ ಕೂಡ ಒಬ್ಬರು. ಪ್ರಾಣಿಶಾಸ್ತ್ರದಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ನಟ, ಟಿವಿ ನಿರೂಪಕ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ ತಮ್ಮ ವಿನಮ್ರ ಸ್ವಭಾವ ಮತ್ತು ಸಮಾಜ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ.


ಬಹುಬೇಡಿಕೆಯ ನಟ

ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಸುರೇಶ್ ಗೋಪಿ, 1965ರಲ್ಲಿ ಓಡೈಲ್ ನಿನ್ನಲ್ಲಿ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅನಂತರ ಅವರು 1986ರಲ್ಲಿ ನೀರಮುಲ್ಲಾ ರಾವುಕಲ್ ಚಿತ್ರಕ್ಕೆ ಪ್ರವೇಶ ಮಾಡಿದರು. 1992ರಲ್ಲಿ ತಲಸ್ತಾನಂ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿದರು. ಏಕಲವ್ಯನ್ ಚಿತ್ರದ ಮೂಲಕ ಅವರು ಚಿತ್ರರಂಗದ ಅದ್ಭುತ ತಾರೆಯಾಗಿ ಗುರುತಿಸಿಕೊಂಡರು.

ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಕಲಿಯಾಟಂನಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. 2015ರ ಬಳಿಕ ಚಿತ್ರರಂಗದಿಂದ ದೂರವಾದ ಅವರು 2020 ರಲ್ಲಿ ವರಣೆ ಅವಶ್ಯಮುಂದ್ ಚಿತ್ರದೊಂದಿಗೆ ಮತ್ತೆ ಬಣ್ಣ ಹಚ್ಚಿದರು.


ನಿರೂಪಕನಾಗಿಯೂ ಸೈ

2012ರಲ್ಲಿ ಸುರೇಶ್ ಗೋಪಿ ಅವರು ಕೌನ್ ಬನೇಗಾ ಕರೋಡ್ ಪತಿಯ ಮಲಯಾಳಂ ಆವೃತ್ತಿಯಾದ ನಿಂಗಲ್ಕ್ಕುಮ್ ಆಕಾಂ ಕೋಡೀಶ್ವರನ್ ಕಾರ್ಯಕ್ರಮದೊಂದಿಗೆ ಟಿವಿ ಶೋ ನಿರೂಪಣೆಗೆ ಇಳಿದರು. ಇದರಲ್ಲಿ ಅವರು ಲಕ್ಷಾಂತರ ಮಂದಿಯ ಹೃದಯವನ್ನು ಗೆದ್ದರು.

ವೈವಾಹಿಕ ಜೀವನ

ಸುರೇಶ್ ಗೋಪಿ ಅವರು ನಟಿ ಅರ್ಣಮುಲಾ ಪೊನ್ನಮ್ಮ ಅವರ ಮೊಮ್ಮಗಳು ರಾಧಿಕಾ ನಾಯರ್ ಅವರನ್ನು 1990 ರಲ್ಲಿ ವಿವಾಹವಾದರು. ಇವರಿಗೆ ಗೋಕುಲ್ ಸುರೇಶ್, ಭಾಗ್ಯ ಸುರೇಶ್, ಭವ್ನಿ ಸುರೇಶ್ ಮತ್ತು ಮಾಧವ್ ಸುರೇಶ್ ಎಂಬ ನಾಲ್ಕು ಮಕ್ಕಳಿದ್ದಾರೆ. ಗೋಕುಲ್ ಸುರೇಶ್ ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ನಟನೆಗೆ ಕಾಲಿಟ್ಟಿದ್ದಾರೆ.


ಬದುಕಿನಲ್ಲಿ ನಡೆದ ದುರಂತ

ಸುರೇಶ್ ಗೋಪಿ ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅವರು ತಮ್ಮ ಮೊದಲ ಭೇಟಿಯಲ್ಲಿ ತಮ್ಮ ಪತ್ನಿ ರಾಧಿಕಾ ಅವರಿಗೆ ಇದನ್ನು ಹೇಳಿದ್ದರು. ರಾಧಿಕಾ ಅವರು ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಲಕ್ಷ್ಮಿ ಎಂದು ಹೆಸರಿಟ್ಟರು. 1992ರ ಜೂನ್ 6ರಂದು, ದಂಪತಿ ತಮ್ಮ ಒಂದೂವರೆ ವರ್ಷದ ಮಗಳೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿಂದ ಸುರೇಶ್ ತಮ್ಮ ಶೂಟಿಂಗ್‌ಗಾಗಿ ಕೊಚ್ಚಿಗೆ ಹೋದರೆ ರಾಧಿಕಾ ಮತ್ತು ಲಕ್ಷ್ಮಿ ಸುರೇಶ್ ಅವರ ಸಹೋದರನೊಂದಿಗೆ ತಮ್ಮ ಮನೆಗೆ ಮರಳಲು ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯಿತು, ಈ ಭೀಕರ ಅಪಘಾತದಲ್ಲಿ ಸುರೇಶ್ ಮತ್ತು ರಾಧಿಕಾ ತಮ್ಮ ಒಂದೂವರೆ ವರ್ಷದ ಮಗಳು ಲಕ್ಷ್ಮಿಯನ್ನು ಕಳೆದುಕೊಂಡರು. ಕೆಲವು ದಿನಗಳ ಕಾಲ ರಾಧಿಕಾ ಪ್ರಜ್ಞಾಹೀನರಾಗಿದ್ದರು. ಸುರೇಶ್ ಮತ್ತು ರಾಧಿಕಾ ಸದಾ ಲಕ್ಷ್ಮಿಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.


ರಾಜಕೀಯ ಜೀವನ

ಕಾಲೇಜಿನಲ್ಲಿದ್ದಾಗ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಸಕ್ರಿಯ ಸದಸ್ಯರಾಗಿದ್ದಾಗ ಸುರೇಶ್ ಗೋಪಿ ರಾಜಕೀಯದಲ್ಲಿ ಆಸಕ್ತಿಯನ್ನು ಪ್ರಾರಂಭಿಸಿದರು. 2016ರ ಏಪ್ರಿಲ್ ನಲ್ಲಿ ಸುರೇಶ್ ಗೋಪಿ ಅವರು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. 2016ರ ಅಕ್ಟೋಬರ್‌ನಲ್ಲಿ ಅವರು ಬಿಜೆಪಿ ಸೇರಿದರು.

ಇದನ್ನೂ ಓದಿ: Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

2019ರ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆದರೆ ಈ ಬಾರಿ ಮತ್ತೆ ತ್ರಿಶೂರ್‌ನಿಂದ ಕಣಕ್ಕೆ ಇಳಿದ ಅವರು ಭರ್ಜರಿ ಬಹುಮತದೊಂದಿಗೆ ಐತಿಹಾಸಿಕ ವಿಜಯ ದಾಖಲಿಸಿದರು.


ಸಮಾಜ ಸೇವೆ

ದತ್ತಿ ಕಾರ್ಯಗಳಿಂದಾಗಿ ಸುರೇಶ್ ಅವರು ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ನಿರಾಶ್ರಿತರಿಗೆ ಸೂರು ಕಲ್ಪಿಸುವುದರಿಂದ ಹಿಡಿದು, ಹಿಂದುಳಿದವರ ಸಂಪೂರ್ಣ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವವರೆಗೆ ಅವರ ಮಾನವೀಯ ಕಾರ್ಯಗಳು ಸಾಕಷ್ಟಿವೆ. ಇವರ ಸಮಾಜ ಸೇವೆಯ ಕುರಿತು ನಟ ಜಯರಾಮ್ ಹೇಳುವುದು ಹೀಗೆ.. ರಾಜಕಾರಣಿಗಳಾದ ಮೇಲೆ ಹಲವರು ಸಮಾಜ ಸೇವೆ ಮಾಡುತ್ತಾರೆ. ಆದರೆ ಸುರೇಶ್ ಗೋಪಿ ಇದಕ್ಕೆ ಅಪವಾದ. ರಾಜಕೀಯಕ್ಕೆ ಬರುವ ಮುನ್ನವೇ ಅವರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯತೊಡಗಿದರು. ಅದೂ ಪ್ರಚಾರವಿಲ್ಲದೆ. ಯಾರಾದರೂ ಕಷ್ಟವನ್ನು ಅವರ ಮುಂದೆ ಹೇಳಿಕೊಂಡರೆ ಸಾಕು ಅವರ ಕಣ್ಣುಗಳು ತೇವವಾಗುತ್ತವೆ ಎನ್ನುತ್ತಾರೆ ಅವರು.

Exit mobile version