ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು (Population Control Bill) ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಉತ್ತರಪ್ರದೇಶದಲ್ಲಿ (uttarpradesh) ಜಾರಿಗೊಳಿಸಿದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ (Viral News) ಭಾರಿ ಚರ್ಚೆ ನಡೆಯುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಎಲ್ಲ ಸರ್ಕಾರಿ ಸಬ್ಸಿಡಿಗಳು ಮತ್ತು ಸೌಲಭ್ಯಗಳನ್ನು ಸರ್ಕಾರ ತೆಗೆದುಹಾಕಿದೆ. ಮಾತ್ರವಲ್ಲದೇ ಸ್ಥಳೀಯ ಚುನಾವಣೆಯಲ್ಲೂ ಭಾಗವಹಿಸುವಂತಿಲ್ಲ ಎಂದು ಎಕ್ಸ್ (x) ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಇದು ಸುಳ್ಳು. ಉತ್ತರಪ್ರದೇಶದಲ್ಲಿ ಅಂತಹ ಯಾವುದೇ ಕಾನೂನು ಜಾರಿಯಾಗಿಲ್ಲ ಎಂಬುದು ಮಾಧ್ಯಮಗಳು ನಡೆಸಿದ ತನಿಖೆಯಿಂದ ತಿಳಿದು ಬಂದಿದೆ.
ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು 2021ರಲ್ಲಿ ಬಿಡುಗಡೆ ಮಾಡಲಾಯಿತಾದರೂ ಅದನ್ನು ಇದುವರೆಗೆ ಶಾಸಕಾಂಗ ಸಭೆಯಲ್ಲಿ ಮಂಡಿಸಲಾಗಿಲ್ಲ.
ಉತ್ತರಪ್ರದೇಶದ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು ರಾಜ್ಯ ಕಾನೂನು ಆಯೋಗವು ರಚಿಸಿದ್ದು, 2021ರ ಜುಲೈ 10ರಂದು ಅದರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು ಕಳುಹಿಸಲು ಹೇಳಲಾಗಿದೆ. ಈ ಕರಡು ಮಸೂದೆಯು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳಿಂದ ದೂರವಿಡುವ ನಿಬಂಧನೆಗಳನ್ನು ಹೊಂದಿದೆ. ಆಆದರೂ ಉತ್ತರಪ್ರದೇಶ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿಲ್ಲ.
ಈ ಕುರಿತು 2021ರ ಸೆಪ್ಟೆಂಬರ್ ನಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯಿಸಿ, ಎಲ್ಲದಕ್ಕೂ ಒಂದು ಸಮಯವಿದೆ. ನೀವು ಈ ಹಿಂದೆ ಮಂದಿರ ವಹೀಂ ಬನೇಂಗೆ, ತಾರೀಖ್ ನಹೀಂ ಬತಾಯೇಂಗೆ ಎಂದು ಹೇಳುತ್ತಿದ್ದೀರಿ. ಆದರೆ ಮಂದಿರದ ನಿರ್ಮಾಣ ಪ್ರಾರಂಭವಾಗಿದೆ. ಆರ್ಟಿಕಲ್ 370 ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೇಳಿದ್ದರು.
ಬಿಜೆಪಿ ಯುಪಿ ವಕ್ತಾರ ಮನೀಶ್ ಶುಕ್ಲಾ ಮಾತನಾಡಿ, ಮಸೂದೆಯನ್ನು ಇನ್ನೂ ವಿಧಾನಸಭೆಯಲ್ಲಿ ಮಂಡಿಸಿಲ್ಲ. ಕರಡನ್ನು 2021 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಕೇಳಲಾಗಿದೆ. ಆದರೆ ಅದನ್ನು ವಿಧಾನಸಭೆಯಲ್ಲಿ ತೆಗೆದುಕೊಳ್ಳಲೇ ಇಲ್ಲ ಎಂದು ತಿಳಿಸಿದ್ದಾರೆ.
2021ರ ಜುಲೈ 11ರ ಬಳಿಕ ಟಿವಿ ಚಾನೆಲ್ ಒಂದರ ತುಣುಕನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಅದು ವೈರಲ್ ಆಗುತ್ತಲೇ ಇದೆ.
ರಿಪಬ್ಲಿಕ್ ಭಾರತ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವಿಡಿಯೋದಿಂದಲೇ ಈ ಸುಳ್ಳು ಸುದ್ದಿ ಹುಟ್ಟಿಕೊಂಡಿರುವುದು ದೃಢಪಟ್ಟಿದೆ. ಇದರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರ ಮೃಗಾಲಯಕ್ಕೆ ಭೇಟಿ ನೀಡಿ ಘೇಂಡಾಮೃಗಗಳಾದ ‘ಹರ್’ ಮತ್ತು ‘ಗೌರಿ’ಗೆ ಆಹಾರ ನೀಡುತ್ತಾರೆ. ಇದರೊಂದಿಗೆ ಉತ್ತರ ಪ್ರದೇಶ ಕಾನೂನು ಆಯೋಗವು ಜನಸಂಖ್ಯೆ ನಿಯಂತ್ರಣದ ಕರಡು ಮಸೂದೆಯನ್ನು ರಾಜ್ಯಕ್ಕೆ ರವಾನಿಸಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ
ಈ ಕರಡಿನ ಪ್ರಕಾರ ಸರ್ಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಸರ್ಕಾರಿ ಉದ್ಯೋಗಗಳು ಮತ್ತು ಕಲ್ಯಾಣಕ್ಕಾಗಿ ಅನರ್ಹತೆಯಂತಹ ದಂಡವನ್ನು ಸೂಚಿಸುತ್ತದೆ ಅಸ್ಸಾಂನಂತಹ ರಾಜ್ಯಗಳಲ್ಲಿ ಇದೇ ರೀತಿಯ ನೀತಿಗಳಿವೆ. 2024ರ ಜೂನ್ 7ರಿಂದ ಉತ್ತರ ಪ್ರದೇಶ ಸರ್ಕಾರದ ಈ ಹಕ್ಕು ಜಾರಿಗೊಳಿಸುತ್ತದೆ ಎಂದು ಹೇಳಲಾಗಿದೆ.
ಟಿವಿ ಚಾನೆಲ್ ವೊಂದರ ಯೂಟ್ಯೂಬ್ ಚಾನೆಲ್‌ನಲ್ಲಿನ ಇದರ ಸಂಪೂರ್ಣ ವಿಡಿಯೋ ವರದಿಯಲ್ಲಿ ನಿರೂಪಕಿ ಕರಡು ಕುರಿತು ಮಾತನಾಡುತ್ತಿದ್ದಾರೆಯೇ ಹೊರತು ಅದರ ಅನುಷ್ಠಾನದ ಬಗ್ಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಹೀಗಾಗಿ ವೈರಲ್ ಪೋಸ್ಟ್ ಗಳು ಸುಳ್ಳು. ಉತ್ತರಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.