Site icon Vistara News

Chandrayaan 3 : ರಷ್ಯಾ ಚಂದ್ರಯಾನ ಮಿಷನ್‌ ಸೋಲಿಗೇನು ಕಾರಣ? ವಿಜ್ಞಾನಿ ಗುರುಪ್ರಸಾದ್ ಹೇಳಿದ ಕಾರಣಗಳಿವು!

ISRO Scientist Dr BR Guruprasad and Hariprakash konemane and Chandrayaan 3

ಬೆಂಗಳೂರು: ಭಾರತಕ್ಕಿಂತ ಮೊದಲು ರಷ್ಯಾದವರು ಚಂದ್ರಯಾನ ಮಿಷನ್‌ ಕೈಗೊಂಡರು. ಆದರೆ, ಅದು ತನ್ನ ಗುರಿ ಮುಟ್ಟುವಲ್ಲಿ ವಿಫಲತೆಯನ್ನು ಕಂಡರು. ಇದಕ್ಕೆ ಅವರು ವೇಗವಾಗಿ ಹೋಗಿದ್ದೇ ಕಾರಣವಾಗಿದೆ. ಜತೆಗೆ ಪೂರ್ವಸಿದ್ಧತೆಯ ಕೊರತೆ ಕಾಣುತ್ತದೆ. ಆದರೆ, ನಮ್ಮ ಚಂದ್ರಯಾನ 3ರ (Chandrayaan 3) ಯಶಸ್ಸಿನ ಹಿಂದೆ ನಮ್ಮ ಎಚ್ಚರಿಕೆಯ ಹೆಜ್ಜೆ ಇತ್ತು ಎಂದು ಹಿರಿಯ ವಿಜ್ಞಾನಿ ಡಾ. ಬಿ.ಆರ್.‌ ಗುರುಪ್ರಸಾದ್ (Dr BR Guruprasad) ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜ್ಞಾನಿ ಡಾ. ಬಿ.ಆರ್.‌ ಗುರುಪ್ರಸಾದ್, ರಷ್ಯಾ ಕೈಗೊಂಡಿರುವ ಚಂದ್ರಯಾನ ಮಿಷನ್‌ ಕೇವಲ ಹತ್ತು ಪ್ಲಸ್‌ ದಿನದಲ್ಲಿ ಚಂದ್ರನಲ್ಲಿ ಹೋಯಿತು. ಆದರೆ, ನಾವು ಚಂದ್ರನತ್ತ ಹೋಗಬೇಕಾದರೆ 25 ದಿನಗಳನ್ನು ತೆಗೆದುಕೊಂಡೆವು. ರಷ್ಯಾದವರು ರಾಕೆಟ್‌ನಿಂದ ಲೂನಾ 25 ಅನ್ನು ಉಡಾಯಿಸಿ ನೇರವಾಗಿ ಚಂದ್ರನ ಬಳಿ ತೆಗೆದುಕೊಂಡು ಹೋಗಿ ಚಂದ್ರನ ಕಕ್ಷೆಗೆ ಸೇರಿಸಿದರು. ಅಲ್ಲಿಂದ ಕಕ್ಷೆಯನ್ನು ಬದಲಿಸಿ, ಇಳಿಯುವುದಕ್ಕೆ ಪೂರ್ವಭಾವಿಯಾಗಿರುವಂತಹ ಅಂದರೆ, ಕಕ್ಷೆಗೆ ಸೇರಿಸುತ್ತಿರುವಾಗ ವೈಫಲ್ಯವನ್ನು ಕಂಡರು. ಇದು ನಿಜಕ್ಕೂ ವಿಷಾದಕರ ವಿಚಾರವಾಗಿದೆ ಎಂದು ರಷ್ಯಾದ ಸೋಲಿನ ಕಾರಣವನ್ನು ಡಾ. ಬಿ.ಆರ್.‌ ಗುರುಪ್ರಸಾದ್ ವಿವರಿಸಿದರು.

ಇಸ್ರೋ ಯಶಸ್ಸಿಗೆ ಕಾರಣಗಳಿವು

ಎಲ್‌ವಿಎಂ 3 ಎಂಬ ರಾಕೆಟ್‌ ಭಾರತದಲ್ಲಿರುವ ರಾಕೆಟ್‌ಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾಗಿದ್ದು, ಇದು 6.42 ಲಕ್ಷ ಕಿಲೋ ಗ್ರಾಂ ತೂಕವನ್ನು ಹೊಂದಿದೆ. ಚಂದ್ರಯಾನ 3ರ ತೂಕ ಸುಮಾರು 3900 ಕಿಲೋ ಗ್ರಾಂ ಆಗಿದೆ. ಈ ರಾಕೆಟ್‌ನಲ್ಲಿ ನಾವು ಉಡಾಯಿಸಿ ಹಂತ ಹಂತವಾಗಿ ಅದರ ಎತ್ತರವನ್ನು ಜಾಸ್ತಿ ಮಾಡಿ, ಆ ಬಳಿಕವಷ್ಟೇ ನಾವು ಚಂದ್ರನ ಬಳಿ ಸಾಗಿದೆವು. ಇದಾದ ನಂತರ ನಾವು ಕಕ್ಷೆಯನ್ನು ಮತ್ತೆ ಮತ್ತೆ ಕಡಿಮೆ ಮಾಡಿದೆವು. ಸುರಕ್ಷತೆ ಮತ್ತು ದಕ್ಷತೆಯ ದೃಷ್ಟಿಯಿಂದ ನಾವು ಹೀಗೆ ಮಾಡಿದೆವು. ಯಾವುದೂ ಸಹ ಸುಲಭವಾಗಿ ದೊರಕುವಂಥದ್ದಲ್ಲ. ನಾವು ಎಚ್ಚರಿಕೆಯ ಹೆಜ್ಜೆಯನ್ನಿಟ್ಟ ಪರಿಣಾಮ ಚಂದ್ರನ ಅಂಗಳ ತಲುಪುವ ದಿನದಲ್ಲಿ ಸ್ವಲ್ಪ ಹೆಚ್ಚಳವಾಯಿತು. ಆದರೆ, ನಾವದರಲ್ಲಿ ಯಶ ಕಂಡೆವು ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ಹೇಳಿದರು.

ರಷ್ಯಾದವರು ಸೋತರು ಎಂದಲ್ಲ!

ರಷ್ಯಾದ ಲೂನಾ 25 ಅಂದರೆ ಹಿಂದಿನ ಸೋವಿಯತ್‌ ಒಕ್ಕೂಟವು ಲೂನಾ ಸರಣಿಯ 24 ನೌಕೆಗಳನ್ನು ಉಡಾಯಿಸಿತ್ತು. ಸೋವಿಯತ್‌ ಒಕ್ಕೂಟದಲ್ಲಿ ಬಹುಮಟ್ಟಿಗೆ ಪ್ರಾಬಲ್ಯ ಹೊಂದಿದ್ದು ರಷ್ಯನ್ನರೇ ಆಗಿದ್ದರು. ಅಷ್ಟು ಅನುಭವ ಇರುವವರಿಗೆ ಈ ರೀತಿಯಾಗಿದ್ದೂ ನಿಜಕ್ಕೂ ವಿಷಾದಕರ. ಇಲ್ಲಿ ನಾವು ಗೆದ್ದೆವು, ಅವರು ಸೋತರು ಎಂದೆಲ್ಲ ಏನಿಲ್ಲ. ಅವರಿಗೆ ಸಾಕಷ್ಟು ಅನುಭವ ಇದೆ. ಆದರೆ, ಅಂತರಿಕ್ಷ ಯಾನದಲ್ಲಿ ಕಂಡುಬರುವ ಸಮಸ್ಯೆ, ಸವಾಲುಗಳು ಎಂತಹ ಪ್ರಮುಖ ಮತ್ತು ಮಹತ್ತರ ಎಂಬುದನ್ನು ನಾನಿಲ್ಲಿ ಹೇಳುತ್ತಿದ್ದೇನೆ ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ತಿಳಿಸಿದರು.

ಇದನ್ನೂ ಓದಿ: Chandrayaan 3 : ಚಂದ್ರ ಗ್ರಹದಲ್ಲಿ ಮಾನವನ ವಾಸ ಅಸಾಧ್ಯ; ಅಲ್ಲಿ ಎಲ್ಲವೂ Extreme! ಡಾ. ಬಿ.ಆರ್.‌ ಗುರುಪ್ರಸಾದ್ ಹೇಳಿದ್ದೇನು?

ಇಸ್ರೋದಲ್ಲಿ ಇನ್ನೊಂದು ಮಹತ್ತರ ವಿಷಯ ಅಡಗಿದೆ. ಯಾವುದೇ ಒಂದು ಕೆಲಸ ಮಾಡಿದರೂ ಅದಕ್ಕೊಂದು ರಿವ್ಯೂ (ವಿಮರ್ಷೆ) ಮಾಡುವ ಪದ್ಧತಿಯನ್ನು ಬೆಳೆಸಿಕೊಂಡು ಬರಲಾಗಿದೆ. ಮಾಡಿರುವ ಕೆಲಸವು ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದು. ಆ ಒಂದು ಕೆಲಸವನ್ನು ಇಸ್ರೋದ ಹಿಂದಿನ ಮುಖ್ಯಸ್ಥರಾಗಿದ್ದ ಎ.ಎಸ್.‌ ಕಿರಣ್‌ ಕುಮಾರ್ ಅವರು ಮಾಡಿದ್ದಾರೆ. ಈ ಹಿಂದೆ ಅವರು ಮಂಗಳಯಾನದಲ್ಲೂ ಸಹ ಇಂತಹ ರಿವ್ಯೂವನ್ನು ಮಾಡಿದ್ದರು. ಈಗ ಚಂದ್ರಯಾನ 3ರಲ್ಲಿ ರಿವ್ಯೂ ಮಾಡಿದ್ದಾರೆ. ಎಲ್ಲೆಲ್ಲಿ ವೈಫಲ್ಯಗಳಾಗಬಹುದು? ಅದಕ್ಕೆ ಏನೇನು ಮುಂಜಾಗ್ರತೆಗಳನ್ನು ವಹಿಸಿಕೊಳ್ಳಬೇಕು? ಒಂದು ವೇಳೆ ಏನಾದರೂ ತೊಂದರೆ ಉಂಟಾದರೆ ಏನು ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ಬಗ್ಗೆ ಅವರು ಪುನಃ ಪುನಃ ಪರಿಶೀಲಿಸಿದ್ದಾರೆ ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ವಿವರಿಸಿದರು.

Exit mobile version