Site icon Vistara News

kannada Bigg Boss | ಮೊಟ್ಟ ಮೊದಲ ಬಾರಿಗೆ ವೂಟ್‌ನಲ್ಲಿ ಬಿಗ್ ಬಾಸ್: ಕಿಚ್ಚ ಹೇಳಿದ್ದೇನು?

Bigg Boss Kannada

ಬೆಂಗಳೂರು: ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬಿಗ್‌ ಬಾಸ್‌ (Bigg Boss Kannada) ಅನ್ನು ಈ ಬಾರಿ ಕಿರುತೆರೆಯಲ್ಲಿ ನೋಡುವ ಭಾಗ್ಯವಿಲ್ಲ. ಈಗ ಮಿನಿ ಬಿಗ್‌ ಬಾಸ್‌ ಆರಂಭವಾಗುತ್ತಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗೆ ಶಿಫ್ಟ್‌ ಆಗಿದೆ.

ಈ ಬಗ್ಗೆ ಬಿಗ್‌ಬಾಸ್‌ ನಿರೂಪಣೆ ಹೊಣೆ ಹೊತ್ತಿರುವ ಕಿಚ್ಚ ಸುದೀಪ್‌ ಹಾಗೂ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಮಾತನಾಡಿ ʻʻಸಿನಿಮಾ ಶೂಟಿಂಗ್‌ ಹಾಗೂ ಬಿಗ್‌ಬಾಸ್‌ ಶೂಟಿಂಗ್‌ ನನಗೆ ಬೇರೆ ಅಲ್ಲ. ಬಿಗ್ ಬಾಸ್ ನನ್ನ ಪ್ಲಾನ್ ಮೇಲೆ ನಡೆಯುವುದಿಲ್ಲ. ಶನಿವಾರ, ಭಾನುವಾರ ನಾನು ಏನು ಮಾತಾಡಬೇಕು ಎಲವೂ ಪ್ಲಾನ್‌ನಲ್ಲಿ ನಡೆಯುತ್ತದೆ. ಕೆಲವು ಸೀಸನ್‌ಗಳಲ್ಲಿ ನಾನೇ ಸುಸ್ತಾಗಿದ್ದೇನೆ. ಹಲವು ಬಿಗ್ ಬಾಸ್ ಸೀಸನ್ಸ್ ಮಾಡಿದ ಮೇಲೆ ಸಾಕು ಅನಿಸಿದ್ದು ಉಂಟು. ಆದರೆ 2 ಸೀಸನ್ ಬಹಳ ಇಷ್ಟ ಆಯಿತು. ಬಿಗ್ ಬಾಸ್‌ನಿಂದ ನಾನು ಯಾರಿಗೆ ಏನು ಹೇಳಬೇಕು ಅನ್ನುವುದನ್ನು ಕಲಿತಿದ್ದೇನೆ. ಯಾರಿಗೆ ತಟ್ಟಿ ಹೇಳಬೇಕು? ಯಾರಿಗೆ ನೋವಾಗದಂತೆ ಹೇಳಬೇಕು ಎಂಬುದನ್ನು ಕಲಿತಿರುವೆ. ಸಿನಿಮಾಕ್ಕಿಂತ ಡ್ಯೂರೇಶನ್‌ ಜಾಸ್ತಿ ಇರುತ್ತದೆ. ನಾನು ಯಾವ ರೀತಿ ಮಾತಾಡುತ್ತೇನೆ ಎಂಬುದರ ಜತೆಗೆ ಮಾತಾಡುವಾಗ ಸಾಮಾಜಿಕ ಕಳಕಳಿ ಕೂಡ ನಿರ್ಧಾರವಾಗುತ್ತದೆ ʼʼಎಂದರು.

ಇದನ್ನೂ ಓದಿ | Shamita Shetty | ಬೈ ಬೈ ಹೇಳಿದ ಶಮಿತಾ ಶೆಟ್ಟಿ ಹಾಗೂ ರಾಕೇಶ್‌ ಬಾಪಟ್‌

ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ʻʻನನಗೆ ಬಿಗ್ ಬಾಸ್ ಮಾಡಲು ಎರಡು ಕಾರಣ. ಒಂದು ಸುದೀಪ್, ಮತ್ತೊಂದು ಹೊಸದಾಗಿ ಕಲಿಯುವ ಅವಕಾಶ. ಬೇರೆ ಭಾಷೆಯಲ್ಲಿ ಆಗದೆ ಇರುವುದು ಕನ್ನಡದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಇಷ್ಟು ವರ್ಷದಲ್ಲಿ ಮಾಡಿದ ಸೀಸನ್‌ಗಿಂತ ಈ ಬಾರಿಯ ಬಿಗ್ ಬಾಸ್ ವಿಭಿನ್ನವಾಗಿರಲಿದೆ. 16 ಜನ ಸ್ಪರ್ಧಿಗಳು ಒಟಿಟಿ ಬಿಗ್ ಬಾಸ್‌ನಲ್ಲಿ ಇರಲಿದ್ದಾರೆ. 8 ಸೀಸನ್ಸ್‌ಗಳಲ್ಲಿ ಯಾವ ಸ್ಪರ್ಧಿ 45 ದಿನ ಉಳಿದುಕೊಂಡಿದ್ದಾರೋ ಅವರು ಬರುವ ಸಾಧ್ಯತೆ ಇದೆ. ಟಾಪ್ ಸ್ಪರ್ದಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಿಚ್ಚ ಸುದೀಪ್‌ ಅವರು ಒಟಿಟಿ ಹಾಗೂ ಟಿವಿ ಹೋಸ್ಟ್‌ ಅನ್ನು ಒಬ್ಬರೇ ನಡೆಸಿಕೊಡುತ್ತಿರುವುದು ಸಂತಸದ ವಿಷಯ.ʼʼ ಎಂದರು.

ಮಿನಿ ಬಿಗ್‌ ಬಾಸ್‌

ಇದೀಗ ಬಿಗ್ ಬಾಸ್ ಸೀಸನ್- 9ಕ್ಕಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಭರ್ಜರಿ ಆಫರ್‌ ಅನ್ನು ನೋಡುಗರಿಗೆ ನೀಡಿದೆ. ವೂಟ್‌ ಸೆಲೆಕ್ಟ್‌ನಲ್ಲಿ 15 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂಟರ್‌ನೆಟ್‌ ಸ್ಟಾರ್‌ಗಳು, ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್‌ ಮಾಡಿದವರು ಹೀಗೆ ಮನರಂಜನೆ ನೀಡುವವರು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ. ಈ ಮಿನಿ ಬಿಗ್‌ ಬಾಸ್‌ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಗಳು ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಸೀಸನ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. 90 ದಿನಗಳ ಕಾಲ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಪ್ರಸಾರವಾಗಲಿದೆ. ಒಟಿಟಿಯಲ್ಲಿ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ ಮಿನಿ ಸೀಸನ್‌ ಅನ್ನು ಕಿಚ್ಚ ಸುದೀಪ್‌ ಅವರೇ ನಡೆಸಿಕೊಡಲಿರುವುದು ವಿಶೇಷ.

ಹೇಗೆ ಪ್ರಸಾರವಾಗುತ್ತದೆ ಬಿಗ್‌ಬಾಸ್‌ ಒಟಿಟಿ?
ವೂಟ್‌ನ ಶೋನಲ್ಲಿ ಭಾಗವಹಿಸಿದ, ಅತ್ಯುತ್ತಮವಾಗಿ ಆಟ ಆಡಿದ 6 ಜನ ಸ್ಪರ್ಧಿಗಳು ಮುಂದೆ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಭಾಗವಹಿಸುತ್ತಾರೆ. ಆದರೆ, ಓಟಿಟಿ ಶೋದಲ್ಲಿ ಗೆದ್ದವರಿಗೆ ಬಿಗ್ ಬಾಸ್ ಕನ್ನಡ 9ರಲ್ಲಿ ಭಾಗವಹಿಸುವ ಅವಕಾಶ ಇಲ್ಲ.

24 ಗಂಟೆ ಲೈವ್‌ನಲ್ಲಿ ಪ್ರಸಾರವಾಗಲಿದ್ದು, ಮನೆಯಲ್ಲಿ ನಡೆಯುವ ಎಲ್ಲ ಮಾಹಿತಿ ಸಿಗಲಿದೆ. ಬಿಗ್ ಬಾಸ್ ಒಟಿಟಿ ಶೋ ಮೊದಲು ಪ್ರಸಾರ ಆಗುವುದು, ಆ ನಂತರ ಬಿಗ್ ಬಾಸ್ ಕನ್ನಡ ಸೀಸನ್ 9 ಬರುವುದು. ಒಟಿಟಿಯಲ್ಲಿ ಬರುವ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಆಗೋದಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಮಾತ್ರ ಸೀಸನ್ 8ರಂತೆ ಟಿವಿಯಲ್ಲಿ ನೇರವಾಗಿ ಬರುತ್ತದೆ. ಬಿಗ್ ಬಾಸ್ ಒಟಿಟಿ ಶೋ ಮುಗಿದ ನಂತರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಶುರುವಾಗುತ್ತದೆ.

ಇದನ್ನೂ ಓದಿ | Bigg Boss Kannada | ಶೀಘ್ರದಲ್ಲೇ ಬರಲಿದೆ ಮಿನಿ ಬಿಗ್ ಬಾಸ್!

Exit mobile version