Site icon Vistara News

The Hunt For Veerappan : ದಿ ಹಂಟ್‌ ಫಾರ್‌ ವೀರಪ್ಪನ್ ವೆಬ್‌ ಸಿರೀಸ್‌ ಹೇಗಿದೆ? ನರಹಂತಕನೋ ನಾಯಕನೋ!

The Hunt For Veerappan

ನರಹಂತಕ, ಆನೆಗಳ ದಂತಚೋರ ವೀರಪ್ಪನ್‌ ಕರ್ನಾಟಕ ಹಾಗೂ ತಮಿಳುನಾಡನ್ನು ಬೆಚ್ಚಿ ಬೀಳಿಸಿದ ವ್ಯಕ್ತಿ. ಕುಕೃತ್ಯಗಳ ಮೇಲೆ ಕುಕೃತ್ಯಗಳನ್ನು ಎಸೆದು ಪುಂಡು ರಾಜನಂತೆ ಮೆರೆದಿದ್ದ ವೀರಪ್ಪನ್‌ ಬಗ್ಗೆ ಈಗಾಗಲೇ ಹಲವಾರು ಸಿನಿಮಾಗಳು ಬಿಡುಗಡೆಯಾಗಿವೆ. ಹಲವಾರು ಸಾಕ್ಷ್ಯಚಿತ್ರಗಳನ್ನೂ ಕೂಡ ನಾವು ಕಂಡಿದ್ದಾಗಿದೆ. ಇದೀಗ ಹೊಸದಾಗಿ ನೆಟ್‌ಫ್ಲಿಕ್ಸ್‌ನಲ್ಲಿ ವೀರಪ್ಪನ್‌ ಬಗ್ಗೆ ಸಾಕ್ಷ್ಯಚಿತ್ರದ ರೀತಿಯ ಸೀರಿಸ್‌ (The Hunt For Veerappan) ಆ.4ರಂದು ಬಿಡುಗಡೆಯಾಗಿದೆ.

ನಿರ್ದೇಶಕ ಸೆಲ್ವಮಣಿ ಅವರ ನಿರ್ದೇಶನದಲ್ಲಿ ʼದಿ ಹಂಟ್‌ ಫಾರ್‌ ವೀರಪ್ಪನ್‌ʼ ಸೀರಿಸ್‌ ಮೂಡಿಬಂದಿದೆ. ಒಟ್ಟು ನಾಲ್ಕು ಸಂಚಿಕೆಗಳಲ್ಲಿ ಸೀರಿಸ್‌ ಅನ್ನು ಬಿಡುಗಡೆ ಮಾಡಲಾಗಿದೆ. ಮೊದಲನೇ ಸಂಚಿಕೆಯಲ್ಲಿ ವೀರಪ್ಪನ್‌ನ ಪತ್ನಿ ಮುತ್ತುಲಕ್ಷ್ಮಿ ಅವರಿಂದಲೇ ಮಾತನಾಡಿಸಲಾಗಿದೆ. ಅವರ ಬಾಯಿಯಲ್ಲೇ ವೀರಪ್ಪನ್‌ ಜೀವನದ ಬಗ್ಗೆ ಹೇಳಿಸಲಾಗಿದೆ. ಅದರಲ್ಲಿ ಮುತ್ತುಲಕ್ಷ್ಮಿ ತಮ್ಮ ಪತಿ ವೀರಪ್ಪನ್‌ನನ್ನು ಹೆಗಲಲ್ಲಿ ದೊಡ್ಡ ಬಂದೂಕು ಇಟ್ಟುಕೊಂಡು ಗ್ಯಾಂಗ್‌ ಕಟ್ಟಿಕೊಂಡು ಬರುತ್ತಿದ್ದ ವೀರ ಎನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ.

ಇದನ್ನೂ ಓದಿ: Viral News : ಬಾನೆಟ್​ ಮೇಲೆ ಕುಳಿತು ಜಾಲಿ ರೈಡ್​; ಯೂಟ್ಯೂಬರ್​ ಗೌರಿಯ ಥಾರ್​ ಪೊಲೀಸ್​ ವಶಕ್ಕೆ!
ಹಾಗೆಯೇ ವೀರಪ್ಪನ್‌ ಯಾವ ರೀತಿಯಲ್ಲಿ ಅವರ ಗುಂಪಿನಲ್ಲಿ ನಾಯಕನಾಗಿ ಬೆಳೆಯುತ್ತ ಹೋದ ಎನ್ನುವ ವಿಚಾರವನ್ನು ಹಲವಾರು ಪೊಲೀಸ್‌ ಅಧಿಕಾರಿಗಳು ಮತ್ತು ಪತ್ರಕರ್ತರ ಬಾಯಿಯಿಂದ ವಿವರಣೆ ಕೊಡಿಸಲಾಗಿದೆ.
ಎರಡನೇ ಎಪಿಸೋಡ್‌ನಲ್ಲಿ ವೀರಪ್ಪನ್‌ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ಗಳಿಗೆ ಯಾವ ರೀತಿಯಲ್ಲಿ ಸವಾಲಾಗತೊಡಗಿದ ಎನ್ನುವುದನ್ನು ತೋರಿಸಲಾಗಿದೆ. ಆತನಿಂದ ನಡೆಯುವ ಕೊಲೆಪಾತಗಳ ಬಗ್ಗೆ ವಿವರಣೆ ನೀಡಲಾಗಿದೆ. ಆತನ ಬಗ್ಗೆ ಆದ ವರದಿಗಳನ್ನೆಲ್ಲ ತೋರಿಸಲಾಗಿದೆ. ಹಾಗೆಯೇ ಈ ಹಿಂದೆ ಅವನ ಗ್ಯಾಂಗ್‌ನಲ್ಲಿದ್ದವರು, ಪೊಲೀಸ್‌ ಅಧಿಕಾರಿ ಟೈಗರ್‌ ಅಶೋಕ್‌ ಕುಮಾರ್‌, ಮುತ್ತುಲಕ್ಷ್ಮಿ ಮತ್ತು ವೀರಪ್ಪನ್‌ನ ಊರಾಗಿದ್ದ ಗೋಪಿನಾಥಂನ ಗ್ರಾಮಸ್ಥರಲ್ಲಿ ಕೆಲವರು ವೀರಪ್ಪನ್‌ ಬಗ್ಗೆ ಹಂಚಿಕೊಂಡ ನೆನಪುಗಳಲ್ಲಿ ಈ ಎಪಿಸೋಡ್‌ನಲ್ಲಿ ತೋರಿಸಿಕೊಡಲಾಗಿದೆ.

ನಂತರ ನಿರ್ದೇಶಕ ಸೆಲ್ವಮಣಿ ಅವರು ವೀರಪ್ಪನ್‌ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಾ ಹೋಗುತ್ತಾರೆ. ಮುತ್ತುಲಕ್ಷ್ಮಿ ಅವರ ಬಾಯಿಯಲ್ಲಿ ಕರ್ನಾಟಕ ಪೊಲೀಸರು ತಮ್ಮನ್ನು ಬಂಧಿಸಿ ದೈಹಿಕ, ಮಾನಸಿಕ ಹಿಂಸೆ ನೀಡಿದ ಕುರಿತಾಗಿ ವಿವರಣೆ ಪಡೆಯಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ಹಿಡಿಯುವಲ್ಲಿ ಪೊಲೀಸರು ಅಸಮರ್ಥರಾದ ಬಗ್ಗೆ, ಹಾಗೆಯೇ ಆತನ ಬೇಡಿಕೆಗಳನ್ನು ಪೂರೈಸಲು ಅಸಮರ್ಥರಾದ ಬಗ್ಗೆ ಪ್ರಶ್ನಿಸಲಾಗುತ್ತದೆ. ವರನಟ ಡಾ. ರಾಜ್‌ಕುಮಾರ್‌ ಅವರನ್ನು ಅಪಹರಣ ಮಾಡಿ ನಂತರ ಬಿಡುಗಡೆ ಮಾಡಿದ ಬಗ್ಗೆಯೂ ತೋರಿಸಲಾಗುತ್ತದೆ. ಆದರೆ ಎಲ್ಲಿಯೂ ಕೂಡ ರಾಜ್‌ಕುಮಾರ್‌ ಕುಟುಂಬದಿಂದ ಪ್ರತಿಕ್ರಿಯೆ ಪಡೆಯುವ ಪ್ರಯತ್ನವನ್ನು ಸೆಲ್ವಮಣಿ ಅವರು ಮಾಡಿಲ್ಲ. ವೀರಪ್ಪನ್‌ಗೆ ಸಂಬಂಧಿಸಿದ ಎಲ್ಲರನ್ನೂ ಮಾತನಾಡಿಸಿ ಅವರಿಂದಲೇ ನಿರೂಪಣೆ ಪಡೆದಾಗ ಕಥೆಯ ಮುಖ್ಯ ಘಟನೆಗಳಲ್ಲಿ ಒಂದಾದ ರಾಜ್‌ಕುಮಾರ್‌ ಅಪಹರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದಿಂದ ವಿವರಣೆ ಪಡೆಯದಿರುವುದು ಅಪೂರ್ಣ ಎನಿಸುತ್ತದೆ.

ಇದನ್ನೂ ಓದಿ: Viral News : ಇವರ ಬಳಿ ಇದೆ 38 ವಿಮಾನ, 300 ಕಾರು, 52 ಬೋಟ್‌!
ಪೂರ್ತಿ ಸೀರಿಸ್‌ನಲ್ಲಿ ಒಟ್ಟಾರೆಯಾಗಿ ವೀರಪ್ಪನ್‌ ಬಾಲ್ಯದಿಂದ ಆತನ ಎನ್‌ಕೌಂಟರ್‌ವರೆಗಿನ ವಿಚಾರಗಳನ್ನು ತೆರೆದಿಡುತ್ತಾ ಸಾಗಲಾಗಿದೆ. ಆತನನ್ನು ಹಿಡಿಯಲು ಭಾರತದಲ್ಲಿ ಈವರೆಗಿನ ಪಾತಕಿ ಸೆರೆ ಕಾರ್ಯಾಚರಣೆಯ ಅತಿ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಯಿತು ಎನ್ನುವುದನ್ನೂ ತೋರಿಸುತ್ತದೆ ಈ ಸರಣಿ. ದಶಕಗಳ ಕಾಲ ಆತನಿಗಾಗಿ ಮಾಡಿದ ಹುಡುಕಾಟದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಆತನಿಂದಾಗಿ ಬಂಧನಕ್ಕೊಳಗಾದ ಮತ್ತು ಸಾವಿಗೀಡಾದ ಎಷ್ಟೋ ಕುಟುಂಬಗಳ ಬಗ್ಗೆ ವಿವರಣೆ ನೀಡಲಾಗಿದೆ. ಹಾಗೆಯೇ ಇನ್ನೂ ಬೆಳಕಿಗೆ ಬರದೆ ಉಳಿದುಕೊಂಡಿರುವ ನೋವಿನ ಬಗ್ಗೆಯೂ ಪರಿಚಯ ನೀಡಲಾಗಿದೆ.

ಒಟ್ಟಿನಲ್ಲಿ ನೋಡಿದರೆ ಈ ಹಿಂದೆ ವೀರಪ್ಪನ್‌ ಬಗ್ಗೆ ಬಂದಂತಹ ಸಿನಿಮಾಗಳು ಮತ್ತು ಸಾಕ್ಷ್ಯಚಿತ್ರಗಳಿಗಿಂತ ಈ ಸೀರಿಸ್‌ ವಿಭಿನ್ನವಾಗಿದೆ ಎನ್ನಬಹುದು. ಇಲ್ಲಿ ವೀರಪ್ಪನ್‌ ಒಬ್ಬ ನರಹಂತಹ ಎಂದು ತೋರಿಸುವ ಜತೆಯಲ್ಲಿ ಆತ ಒಬ್ಬ ʼಹೀರೊʼ ಕೂಡ ಹೌದು ಎಂದು ಬಿಂಬಿಸಲಾಗಿದೆ. ವೀರಪ್ಪನ್‌ ಕತೆ ಹೇಳುವ ಭರದಲ್ಲಿ ಆತನ ದುಸ್ಸಾಹಸವನ್ನು ವಿಜ್ರಂಭಿಸಿದ್ದು ಸರಿ ಅನಿಸುವುದೇ ಇಲ್ಲ.

Exit mobile version