ಶಿವರಾಜ್ ಡಿ.ಎನ್.ಎಸ್.
ಬದಲಾವಣೆ ಜಗದ ನಿಯಮ. ಎಲ್ಲಾ ಕ್ಷೇತ್ರಗಳಲ್ಲೂ ಕಾಲಕ್ಕೆ ಬದಲಾವಣೆಗಳು ಘಟಿಸಿವೆ. ಇದೀಗ ಜಾಗತೀಕರಣದ ಯುಗದಲ್ಲಿ ನಿಂತಿದ್ದೇವೆ. ಈ ನಡುವೆ ಒಂದು ಬಾರಿ ಹಿಂದಿರುಗಿ ಸಾಗಿ ಹಾದಿಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಸುಧಾರಣೆ ನೆಪದಲ್ಲಿ ನಾವು ಮೂಲ ಉದ್ದೇಶಗಳಿಗೆ ಘಾಸಿ ಮಾಡಿರುವುದನ್ನು ಕಾಣಬಹುದು. ಇಂಥದ್ದೊಂದು ಅಮೂಲ್ಯ ಸಂಗತಿಯನ್ನು ಮುನ್ನೆಲೆಯಾಗಿಟ್ಟುಕೊಂಡು ನಿರ್ಮಾಣಗೊಂಡಿರುವ ದೂತ (Dhootha) ಎಂಬ ವೆಬ್ಸೀರಿಸ್ ಹೇಳಬೇಕಾಗಿದ್ದ ಸಂದೇಶವನ್ನು ಸ್ಪಷ್ಟವಾಗಿ ವೀಕ್ಷಕನ ಮನಸಿನೊಳಗೆ ದಾಟಿಸಿದೆ.
‘ದೂತ’ ಎನ್ನುವ ವೆಬ್ ಸರಣಿ ಪತ್ರಿಕಾರಂಗದ ಹುಳುಕನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತಿ ಹೇಳುತ್ತ.ದೆ ಪತ್ರಿಕೆಯ ಜವಾಬ್ದಾರಿ ಮತ್ತು ಅದರ ಮಹತ್ವದ ಕುರಿತು ಹಲವು ಸಂದರ್ಭಗಳಲ್ಲಿ ವಿವರಣೆ ನೀಡುತ್ತದೆ. ಇದೊಂದು ಸಖತ್ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸರಣಿ/ ಹಾರರ್ ಸೀರಿಸ್ ಆದರೂ ಪ್ರೇತಾತ್ಮಗಳು ಎಲ್ಲೂ ಕಾಣುವುದಿಲ್ಲ. ಯಾವ ಹಿನ್ನೆಲೆ ಧ್ವನಿಯಲ್ಲಿ ಕೂಗುವ ಸದ್ದು ಗದ್ದಲದ ಸಂಗೀತ ಇಲ್ಲಿಲ್ಲ. ದಸಕ್ಕನೆ ಮೇಲಕ್ಕೆದ್ದು ಕೆಟ್ಟ ಸ್ವರದಲ್ಲಿ ಹೆದರಿಸುವಂತ ಚೀಪ್ ಗಿಮಿಕ್ ಸೀರಿಸ್ ನಲ್ಲಿ ಇಲ್ಲವೇ ಇಲ್ಲ. ಇದೊಂದು ಬಿಗಿ ನಿರೂಪಣೆ. ಸುದೀರ್ಘ ಕಥೆಯ ಅತ್ಯುತ್ತಮ ಸೌತ್ ಇಂಡಿಯನ್ ಸೀರಿಸ್ ಅನ್ನಬಹುದು.
ಸರಣಿಯ ಕಥಾನಾಯಕ ‘ಸಾಗರ್’ ಪ್ರಭಾವಶಾಲಿ ಪತ್ರಕರ್ತ. ಪತ್ರಿಕೆಯೊಂದರ ಮುಖ್ಯಸಂಪಾದಕನಾಗಿ ಆಯ್ಕೆಯಾಗುತ್ತಾನೆ. ಆತನ ನೇತೃತ್ವದಲ್ಲಿ ಹೊಸದೊಂದು ಪತ್ರಿಕೆ ಆರಂಭಗೊಳ್ಳುತ್ತಿದೆ. ಆತನ ಪತ್ನಿ ಪ್ರಿಯಾ ಕೂಡ ಪತ್ರಕರ್ತ. ಈ ಸಾಗರ್ ಅಪ್ಪ, ಅಮ್ಮ, ಹೆಂಡತಿ- ಮಕ್ಕಳು, ಪ್ರೀತಿಯ ಸಾಕುನಾಯಿ, ಕಾರು ಬಂಗ್ಲೆ, ಫಾರಂ ಹೌಸ್, ಇದೆಲ್ಲವನ್ನು ಹೊಂದಿದ್ದು ಸಿರಿವಂತಿಕೆಯ ಸರದಾರ.
ಮೊದಲ ಸಂಚಿಕೆಯಲ್ಲೆ ಒಂದು ದುರಂತ ನೆಡೆಯುತ್ತದೆ ಸಾಗರ್ ಮನೆಯ ಸಾಕುಪ್ರಾಣಿ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತದೆ. ಅದು ಆಕಸ್ಮಿಕ ಅಪಘಾತವಾದರೂ ಘಟನೆ ನೆಡೆಯುವ ಮುಂದೆಯೇ ಸಾಗರ್ಗೆ ಇಂಥದ್ದೊಂದು ದುರ್ಘಟನೆ ನಡೆಸಯುತ್ತದೆ ತಿಳಿಯುತ್ತದೆ. ಮುಂದೆ ಇಂಥ ಹಲವಾರು ಘಟನೆಗಳು ನಡೆಯುತ್ತವೆ. ಎಲ್ಲದರ ಬಗ್ಗೆಯೂ ಸಾಗರ್ಗೆ ಮೊದಲೇ ಗೊತ್ತಾಗುತ್ತದೆ. ನಂತರ ಸಾಗರ್ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಎಲ್ಲವೂ ಕೌತುಕವೇ ಆಗಿರುತ್ತದೆ. ಈ ದುರ್ಘಟನೆಯನ್ನು ಕಥಾನಾಯಕ ಬೆನ್ನಟ್ಟುವುದೇ ಸರಣಿಯ ಮೂಲ ಕತೆ.
ವೆಬ್ಸೀರಿಸ್ನಲ್ಲಿ ಅನೇಕ ಭ್ರಷ್ಟ ಪತ್ರಕರ್ತರು ಒಬ್ಬೊಬ್ಬರಾಗಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರುತ್ತಾರೆ. ಅವರ ಸಾವಿಗೆಲ್ಲ ಒಂದೇ ಒಂದು ಕಾರಣವಿರುತ್ತದೆ. ಕೊನೇ ತನಕವೂ ಸಾವಿಗೊಂದು ಕಾರಣವಿರುತ್ತದೆ. ಮೊದಲ ಸಂಚಿಕೆಯಿಂದ ಕೊನೆಯ ಸಂಚಿಕೆಯಲ್ಲಿ ಕಾಣದ ಶಕ್ತಿಯ ಕೈವಾಡವಿರುತ್ತದೆ. ಅದು ಯಾವುದು? ಹೀಗೆ ಪ್ರತಿ ಸಂಚಿಕೆಯೂ ರೋಚಕತೆಯಿಂದ ಕೂಡಿದ್ದು, ನಾವು ಪತ್ರಿಕೆಯ ಪುಟತಿರುಹುವಂತೆ ಒಂದೊಂದೇ ಎಳೆ ತೆರೆದಿಡುತ್ತ, ಕುತೂಹಲ ಕೆರಳಿಸುತ್ತಲೇ ಕೊನೆಯ ಸಂಚಿಕೆಯವರೆಗೂ ನೋಡಿಸಿಕೊಳ್ಳುತ್ತದೆ. ಅಂತ್ಯವೇ ಇಲ್ಲದಂತ ವಿಷಯಕ್ಕೆ ಒಂದಕ್ಕೆ ತಾರ್ಕಿಕ ಅಂತ್ಯಹಾಡಿದ್ದಾರೆ.
ವೆಬ್ ಸರಣಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಪಾತ್ರವರ್ಗದಲ್ಲಿ ನಾಗಚೈತನ್ಯ ಅಕ್ಕಿನೇನಿ. ಪಾರ್ವತಿ ತಿರುವತ್ತೂರ್. ಪ್ರಾಚಿದೇಸಾಯಿ. ಪ್ರಿಯಾ ಭವಾನಿ ಶಂಕರ್. ರೋಹಿಣಿ ಮೊಳೇಟಿ. ತಮಿಳಿನ ಪಶುಪತಿ. ತೆಲುಗಿನ ತರುಣ್ ಬಾಸ್ಕರ್. ತಣಿಕೆಲ್ಲ ಭರಣಿ. ಅನಿಶ್ ಕುರುವಿಳ್ಳ. ಶ್ರೀಕಾಂತ್ ಮುರಳಿ. ರವೀಂದ್ರ ವಿಜಯ್. ಈಶ್ವರಿ ರಾವ್ ಮುಂತಾದ ಬಹುದೊಡ್ಡ ತಾರಗಣವೇ ಇದೆ.
ಇದನ್ನೂ ಓದಿ : Salaar Movie: ಸಲಾರ್ ಒಟಿಟಿ ಸ್ಟ್ರೀಮಿಂಗ್ ಎಲ್ಲಿ?
ಎಲ್ಲರೂ ತಮ್ಮ ಉತ್ತಮ ಅಭಿನಯ ನೀಡಿದ್ದು, ಇನ್ನೂ ಕೆಲವರೂ ಅಭಿನಯದ ಕೌಶಲವನ್ನು ಸಂಪೂರ್ಣವಾಗಿ ಪ್ರಸ್ತುತಪಡಿಸಿದ್ದಾರೆ. ಸರಣಿಯ ಬಹುತೇಕ ಅರ್ಧಕ್ಕೂ ಹೆಚ್ಚು ದೃಶ್ಯಗಳು ಮಳೆಯಲ್ಲೆ ನಡೆಯುವಂತಿರುತ್ತವೆ. ನೋಟದಲ್ಲಿ ಅತ್ಯುತ್ತಮ ಎನಿಸಿಕೊಳ್ಳುವಂತೆ ಛಾಯಗ್ರಾಹಕ Mikolaj sygula ಕೆಲಸ ಮಾಡಿದ್ದಾರೆ. ಬರವಣಿಗೆಯಲ್ಲಿ Vikram kumar . Venkat d Patil. Poorna pragna. Sripal reddy. Ng Thomas. Venkatesh dondapati.. ಮುಂತಾದವರಿದ್ದೂ Vikram k kumar ನಿರ್ದೇಶನ ಮಾಡಿದ್ದಾರೆ.
ಮೂಲ ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡಿರುವ ‘ದೂತ’ ನಾಗಚೈತನ್ ಅಭಿನಯದ ಚೊಚ್ಚಲ ಸರಣಿ. ಅಭಿನಯ ಬರವಣಿಗೆ, ಹಾಗೂ ಛಾಯಾಗ್ರಹಣ ಸಂಗೀತ ಸೇರಿದಂತೆ ಎಲ್ಲ ವರ್ಗದಲ್ಲೂ ಅತ್ತುತ್ಯಮವಾಗಿರುವುದಲ್ಲದೇ ಸೃಜನಶೀಲವಾಗಿದೆ. ಈ ಸೂಪರ್ ನ್ಯಾಚ್ಯುರಲ್ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸರಣಿ ಡಿಸೆಂಬರ್-1 ರಂದು ಬಿಡುಗಡೆಗೊಂಡು ಅಮೇಜನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಾರರ್ ಸಿನಿಮಾ ಆಸಕ್ತರಿಂದ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಸೀರಿಸ್ ಇಷ್ಟವಾಗಬಹುದು.