ಇಂದು ಬುದ್ಧ ಪೂರ್ಣಿಮಾ. ಅಂದರೆ ಭಗವಾನ್ ಗೌತಮ ಬುದ್ಧನ ಜಯಂತಿ. ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ, ಬೌದ್ಧ ಧರ್ಮದ ಸ್ಥಾಪಕರಾದ ಗೌತಮ ಬುದ್ಧನ ಬೋಧನೆಗಳ ಸರ್ವಕಾಲಕ್ಕೂ ಸಮ್ಮತವಾದಂತವು. ನಮ್ಮ ವ್ಯಕ್ತಿತ್ವವನ್ನು ಅರಳಿಸುವಂತಹ, ಆಧ್ಯಾತ್ಮಿಕ ಸ್ತರಕ್ಕೆ ಏರಿಸುವ ಅವರ ಹಿತವಚನಗಳು ಈಗಲೂ ಜನಪ್ರಿಯ.
“ʼನಾವು ಏನಾಗಿದ್ದೇವೋ ಅದು ನಮ್ಮ ಯೋಚನೆಯ ಫಲ. ಯೋಚನೆಗಳೇ ನಮ್ಮ ಸ್ಥಿತಿಗೆ ತಳಹದಿʼʼ ಎಂಬ ಬುದ್ಧನ ನುಡಿ ಈಗಲೂ ವ್ಯಕ್ತಿತ್ವ ವಿಕಸನದ ಮೊದಲ ಪಾಠವಾಗಿದೆ. ನಾವು ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತೇವೆಯೋ ಮುಂದೆ ಅದೇ ಸಂಭವಿಸುತ್ತದೆ. ಸದಾ ಕೆಟ್ಟದ್ದರ ಬಗ್ಗೆ ಯೋಚಿಸುತ್ತಿದ್ದರೆ ನಮ್ಮೊಳಗೆ
ಆ ವಿಚಾರವೇ ತುಂಬಿಕೊಂಡು, ಕ್ರಮೇಣ ನಾವೂ ಕೆಡುಕನ್ನೆ ಮಾಡಲು ಆರಂಭಿಸುತ್ತೇವೆ. ಒಳ್ಳೆಯ ಚಿಂತನೆಗಳು, ಯೋಚನೆಗಳು ನಮ್ಮದಾದರೆ ನಮ್ಮ ನಡೆ-ನುಡಿಗಳಲ್ಲಿಯೂ ಇದು ಪ್ರತಿಫಲಿಸುತ್ತದೆ. ಹೀಗಾಗಿಯೇ ‘ಸದಾ ಸಚ್ಚಿಂತನೆ ಮಾಡುತ್ತಿರಿ’ ಎಂದು ಬಲ್ಲವರು ಹೇಳುತ್ತಲೇ ಇರುತ್ತಾರೆ. ಈ ಮಾತನ್ನ ಬುದ್ಧ ಅಂದೇ ಹೇಳಿದ್ದ. ಬುದ್ಧ ಪೂರ್ಣಿಮಾದ ಹಿನ್ನೆಲೆಯಲ್ಲಿ ಇದನ್ನು ನಾವೆಲ್ಲರೂ ನೆನಪಿಸಿಕೊಳ್ಳೋಣ.
ನಿತ್ಯಧ್ಯಾನ ಸೂತ್ರ
ಬುದ್ಧ ನಮ್ಮ ವ್ಯಕ್ತಿತ್ವ ಅರಳಿಸಿಕೊಳ್ಳಲು ಐದು ನಿತ್ಯಧ್ಯಾನ ಸೂತ್ರ ನೀಡಿದ್ದಾರೆ. ʼಬುದ್ಧ ಸೂಕ್ತಿʼ ಯಲ್ಲಿ ಈ ಬಗ್ಗೆ ವಿವರಣೆಗಳಿವೆ. ಈ ನಿತ್ಯಧ್ಯಾನ ಸೂತ್ರದಿಂದ ಕೇವಲ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದು ಮಾತ್ರವಲ್ಲ ಆಧ್ಯಾತ್ಮಿಕ ಸಾಧನೆಗೂ ಈ ಧ್ಯಾನ ಅಡಿಗಲ್ಲುಗಳಾಗಿವೆ. ಈ ನಿತ್ಯಧ್ಯಾನ ಸೂತ್ರಗಳೆಂದರೆ;
1. ಪ್ರೀತಿಯ ಧ್ಯಾನ : ಸೂತ್ರದ ಹೆಸರೇ ಹೇಳುವಂತೆ ಸರ್ವರನ್ನೂ ಪ್ರೀತಿಸುವುದು. ನೀವು ಎಲ್ಲರನ್ನೂ ಪ್ರೀತಿಸಬೇಕೆಂದರೆ ಅದಕ್ಕೆ ನಿಮ್ಮ ಹೃದಯದ ಹೊಂದಾಣಿಕೆ ಮಾಡಿಕೊಳ್ಳಬೇಕು. ನೀವು ಮಾತ್ರ ಖುಷಿಯಾಗಿರುವುದಲ್ಲ, ನಿಮ್ಮ ಜತೆಯಲ್ಲಿರುವವರು, ಸುತ್ತಮುತ್ತಲಿವರು… ಕೊನೆಗೆ ಎಲ್ಲರೂ ಸುಖ, ಸಂತೋಷದಿಂದ ಇರಬೇಕೆಂದು ಬಯಸಬೇಕು. ನಿಮ್ಮ ಶತ್ರುಗಳನ್ನೂ ಕೂಡ ದ್ವೇಷಿಸದೇ ಅವರೂ ಕೂಡ ಆನಂದದಿಂದ, ಸುಖದಿಂದ ಇರಬೇಕೆಂದು ನಿರೀಕ್ಷಿಸಬೇಕು.
2. ಅನುಕಂಪದ ಧ್ಯಾನ: ಸಕಲ ಜೀವಿಗಳ ಬಗ್ಗೆ ಅನುಕಂಪ ಹೊಂದಿರಬೇಕು ಎಂಬುದು ಎರಡನೇ ಸೂತ್ರ. ನೀವು ನಿಮಗೆ ಅಥವಾ ನಿಮ್ಮವರಿಗೆ ಮಾತ್ರ ಸಂಕಟ ಬಂದಾಗ ಅಲ್ಲ, ಎಲ್ಲ ಜೀವಿಗಳ ಕುರಿತು ಚಿಂತಿಸಬೇಕು. ಬೇರೆಯವರಿಗೆ ಸಂಕಟವಾದಾಗ, ದುಃಖವಾದಾಗ ನೀವು ಅದನ್ನೇನು ಅನುಭವಿಸಲಾರಿರಿ. ಆದರೆ, ಇದಕ್ಕೆ ನೀವು ಸ್ಪಂದಿಸುವ ಮೂಲಕ, ಈ ಬಗ್ಗೆ ಆಳವಾಗಿ ಆಲೋಚಿಸಿ, ಮಿಡಿಯುವ ಮೂಲಕ ಅವರ ಸಂಕಟವನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಆತ್ಮದಲ್ಲಿ ಅವರಿಗಾಗಿ ಆಳವಾದ ಅನುಕಂಪ – ಸಹಾನುಭೂತಿ ಉಂಟಾಗುತ್ತದೆ.
3. ಆನಂದದ ಧ್ಯಾನ : ಬುದ್ಧನ ಮಾತನ್ನೇ ಇಲ್ಲಿ ನೆನಪಿಸಿಕೊಳ್ಳಿ. ನಾವು ಒಳ್ಳೆಯದನ್ನು ಯೋಚಿಸಿದರೆ ಒಳ್ಳೆಯದೇ ಆಗುತ್ತದೆ. ಹೀಗಾಗಿ ನೀವು ಒಳ್ಳೆಯದನ್ನೇ ಯೋಚಿಸಿ. ಆದರೆ ಇಲ್ಲಿ ನೀವು ನಿಮ್ಮ ಮತ್ತು ನಿಮ್ಮವರಿಗೆ ಒಳ್ಳೆಯದಾಗಲಿ ಎಂದು ಮಾತ್ರ ಬಯಸುವುದಲ್ಲ. ಇತರರ ಸಮೃದ್ಧಿಯನ್ನು ಕುರಿತು ಚಿಂತಿಸಬೇಕು. ಇತರರ ಸಂತೋಷದಲ್ಲಿ ನೀವು ಸಂತೋಷವನ್ನು ಕಾಣಬೇಕು.
4. ಅಶುಚಿಯ ಧ್ಯಾನ : ನಾವು ಸದಾ ಒಳ್ಳೆಯದರ ಬಗ್ಗೆಯೇ ಯೋಚಿಸುತ್ತಿದ್ದರೆ, ಕೆಡುಕಿನ ಅಪಾಯದ ಅರಿವಾಗುವುದಿಲ್ಲ. ಅದಕ್ಕಾಗಿ ಈ ಧ್ಯಾನ ಸೂತ್ರ ರೂಪಿಸಲಾಗಿದೆ. ಇಲ್ಲಿ ನಾವು ಕೆಡುಕಿನ, ಭ್ರಷ್ಟಜೀವನದ ಕೆಟ್ಟ ಪರಿಣಾಮಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಈ ಕುರಿತು ನಾವು ಯೋಚಿಸಿದಾಗ ಒಂದು ಕ್ಷಣದ ಸುಖ ಎಷ್ಟು ಕ್ಷುಲ್ಲಕವಾಗಿರುತ್ತದೆ ಎಂಬ ಅರಿವು ನಮ್ಮಲ್ಲಿ ಮೂಡುತ್ತದೆ. ಅಲ್ಲದೆ ಕೆಟ್ಟದ್ದರ, ಭ್ರಷ್ಟ ಜೀವನದ ಪರಿಣಾಮಗಳು ಎಷ್ಟು ಘೋರ ಎಂಬುದನ್ನು ಮನದಟ್ಟಾಗುತ್ತದೆ. ಅವುಗಳಿಂದ ದೂರ ಉಳಿಯುವ ಸಂಕಲ್ಪ ನಮ್ಮಲ್ಲಿ ಇನ್ನಟ್ಟು ಗಟ್ಟಿಯಾಗುತ್ತದೆ.
5. ಶಾಂತಿಯ ಧ್ಯಾನ: ಮನುಷ್ಯನಿಗೆ ಎಲ್ಲದಕ್ಕಿಂತ ಅಗತ್ಯವಾಗಿ ಬೇಕಾಗಿರುವುದು ಮಾನಸಿಕ ಶಾಂತಿ. ಶಾಂತಚಿತ್ತರಾಗಿದ್ದಲ್ಲಿ ನೀವು ಪ್ರೀತಿ – ದ್ವೇಷ, ಸರ್ವಾಧಿಕಾರ – ಸ್ವಾತಂತ್ರ್ಯ, ಬಡತನ – ಶ್ರೀಮಂತಿಕೆಗಳನ್ನು ಮೀರಿ ಉನ್ನತ ಭಾವದಲ್ಲಿರುತ್ತೀರಿ. ಜೀವನದಲ್ಲಿ ಏನೇ ಸಂಭವಿಸಿದರೂ ನಿಷ್ಪಕ್ಷಪಾತ ಶಾಂತಭಾವದಿಂದ ಅನುಭವಿಸಿ. ಪರಿಪೂರ್ಣ ಶಾಂತಿಯನ್ನು ಹೊಂದುವಿರಿ.
ಸರಳವಾಗಿರುವ ಈ ಐದು ಧ್ಯಾನ ಸೂತ್ರಗಳನ್ನು ಬುದ್ಧ ನಮಗೆ ನೀಡಿದ್ದಾರೆ. ಅನುಸರಿಸುವ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದರ ಜತೆಯಲ್ಲಿಯೇ, ಇಡೀ ಜಗತ್ತು ಸುಖ-ಶಾಂತಿಯಿಂದ ಇರುವಂತೆ ಮಾಡಬಹುದಾಗಿದೆ. ʼಜಗತ್ತು ಬದಲಾಗಬೇಕಾದರೆ ಮೊದಲು ನೀವು ಬದಲಾಗಿʼ ಎಂಬ ಮಹತ್ಮಾ ಗಾಂಧೀಜಿಯ ಮಾತಿನಂತೆ ನಾವು ಬದಲಾಗಲು ಬುದ್ಧನ ಈ ಧ್ಯಾನ ಸೂತ್ರಗಳು, ಬೋಧನೆಗಳು ದಾರಿ ದೀಪವಾಗಿವೆ.
ಯಾವ ಪಾಪವನ್ನೂ ಮಾಡದಿರು
(ಎಲ್ಲಾ) ಒಳ್ಳೆಯದನ್ನು ಮಾಡು,
(ಪೂರ್ಣವಾಗಿ) ಚಿತ್ತವನ್ನು ಪರಿಶುದ್ಧಗೊಳಿಸು
ಎಂಬ ಭಗವಾನ್ ಬುದ್ಧರ ಸರಳವಾದ ಬೋಧನೆ. ಇಂದಿಗೂ ಪ್ರಸ್ತುತ. ಈ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ನಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತಾ ಸಾಗುವುದೇ ನಾವೆಲ್ಲರೂ ಬುದ್ಧನಿಗೆ ನಿಜವಾಗಿ ತೋರಿಸುವ ಗೌರವವಾಗಿದೆ.