ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಭಾರತ ಕ್ರಿಕೆಟ್ ತಂಡಕ್ಕೆ ಟಿ 20 ವಿಶ್ವಕಪ್ ಸಿದ್ಧತೆಗಳಿಗೆ ಹಿನ್ನಡೆಯಾಗಿದೆ. 2024ರ ಟಿ20 ವಿಶ್ವಕಪ್ಗೆ ಈಗ ಕೇವಲ 5 ಪಂದ್ಯಗಳು ಬಾಕಿ ಇದ್ದು ಮೆನ್ ಇನ್ ಬ್ಲೂ ಅದರಲ್ಲೇ ಉಳಿದ ಸಿದ್ಧತೆ ಹಾಗೂ ಸಂಯೋಜನೆಗಳನ್ನು ನಡೆಸಬೇಕಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೂರು ಟಿ20 ಪಂದ್ಯಗಳನ್ನು ಆಡಬೇಕಾಗಿತ್ತು. ಅದರಲ್ಲೀಗ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಸರಣಿಯ ಮುಕ್ತಾಯದ ನಂತರ ಮೆನ್ ಇನ್ ಬ್ಲೂ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಟಿ 20 ಐ ಸರಣಿಯಲ್ಲಿ ತೊಡಗಲಿದೆ. ಅದು ವಿಶ್ವ ಕಪ್ಗೆ ಮೊದಲು ಭಾರತಕ್ಕಿರುವ ಕೊನೇ ಸರಣಿಯಾಗಿದೆ.
ಮೆನ್ ಇನ್ ಬ್ಲೂಗೆ ಆದ್ಯತೆಗಳನ್ನು ನಿಗದಿಪಡಿಸಲಾಗಿದೆ. ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತ ನಂತರ ಭಾರತ ಕ್ರಿಕೆಟ್ ತಂಡ ಈಗ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಯೋಜನೆ ರೂಪಿಸಿಕೊಂಡಿದೆ. ಆದರೆ ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿಯ ಬಗ್ಗೆ ಹೇಳುವುದಾದರೆ ಇನ್ನು ಹೆಚ್ಚು 20ಐ ಪಂದ್ಯಗಳು ಉಳಿದಿಲ್ಲ. ಹೀಗಾಗಿ ವ್ಯರ್ಥಗೊಂಡ ಇಂದಿನ ಪಂದ್ಯವು ರಾಹುಲ್ ದ್ರಾವಿಡ್ ಅವರಿಗೆ ಪ್ರಯೋಗಗಳನ್ನು ನಡೆಸಲು ಇದ್ದ ಅವಕಾಶ ನಷ್ಟವಾಗಿದೆ.
ಮಳೆಯಿಂದಾಗಿ ಉಳಿದ 5 ಪಂದ್ಯಗಳು ಮೊಟಕುಗೊಳ್ಳುವುದಿಲ್ಲ ಎಂದು ಭಾರತ ಭಾವಿಸಿದೆ. ಆದರೆ ಟಿ 20 ವಿಶ್ವಕಪ್ಗಾಗಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ಗೆ ಪ್ರಯಾಣಿಸುವ ಮೊದಲು ಭಾರತ ತಂಡದ ಆಟಗಾರರಿಗೆ ಐಪಿಎಲ್ ಅನುಕೂಲ ಸಿಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 12 ರಂದು ಸೇಂಟ್ ಜಾರ್ಜ್ಸ್ ಪಾರ್ಕ್ನಲ್ಲಿ ನಡೆಯಲಿದ್ದು, ಸರಣಿಯ ಅಂತಿಮ ಪಂದ್ಯ ಡಿಸೆಂಬರ್ 14 ರಂದು ಜೊಹಾನ್ಸ್ಬರ್ಗ್ ವಾಂಡರರ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ಮಳೆಯಿಂದಾಗಿ ಪಂದ್ಯ ರದ್ದು
ಭಾರತ(IND vs SA) ಮತ್ತು ದಕ್ಷಿಣ ಆಫ್ರಿಕಾ(South Africa vs India, 1st T20) ಪಂದ್ಯವನ್ನು ವೀಕ್ಷಿಸಲು ಭಾರಿ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮೊದಲ ಟಿ20 ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಟಾಸ್ ಆರಂಭಕ್ಕೂ ಮುನ್ನವೇ ಮಳೆ ಅಡ್ಡಿ ಪಡಿಸಿತು. ಪಂದ್ಯ ಆರಂಭಕ್ಕೆ ಸುಮಾರು 2 ಗಂಟೆಗಳ ಕಾಲ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಳೆ ಬಿಡುವ ಸೂಚನೆ ಕಂಡು ಬಾರದ ಕಾರಣ ಅಂತಿಮವಾಗಿ ಪಂದ್ಯದ ಅಂಪೈರ್ಗಳು ಪಂದ್ಯವನ್ನು ರದ್ದು ಎಂದು ಘೋಷಿಸಿದರು. ಇತ್ತಂಡಗಳ ನಡುವಣ ದ್ವಿತೀಯ ಪಂದ್ಯ ಡಿ.12ರಂದು ನಡೆಯಲಿದೆ.
ಕವರ್ನಿಂದ ಮುಚ್ಚಿದ ಮೈದಾನ
ಡರ್ಬಾನ್ನ ಕಿಂಗ್ಸ್‌ಮೀಡ್ ಮೈದಾನವನ್ನು ಕವರ್ನಿಂದ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆಟಗಾರರೆಲ್ಲ ಡ್ರೆಸಿಂಗ್ ರೂಮ್ನಲ್ಲಿ ಮಳೆ ಯಾವಾಗ ಬಿಡುತ್ತದೆ ಎಂದು ಕಾದು ಕುಳಿತಿದ್ದರು. ಆದರೆ ಇದಕ್ಕೆ ಮಳೆ ಅನುವು ಮಾಡಿಕೊಡಲಿಲ್ಲ. ಆರಂಭದಲ್ಲಿ ಇದು ಐಸಿಸಿ ಅಡಿಯಲ್ಲಿ ನಡೆಯುವ ಟೂರ್ನಿಯಾದ ಕಾರಣ ನಿಗದಿತ ಸಮಯಕ್ಕೆ ಮಳೆ ನಿಂತು ಆಟ ಪ್ರಾರಂಭವಾಗದ ಕಾರಣ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು.
ಇದನ್ನೂ ಓದಿ : ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ
ಸಮಯ ಬದಲಿಸಿದ್ದ ಬಿಸಿಸಿಐ
ಸರಣಿಯ ಮೂಲ ವೇಳಾಪಟ್ಟಿಯ ಪ್ರಕಾರ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30 ನಿಗದಿಯಾಗಿತ್ತು. ಪಂದ್ಯ ಮುಗಿಯುವಾಗ ಮಧ್ಯರಾತ್ರಿಯಾಗುದರಿಂದ ಭಾರತೀಯ ಕ್ರಿಕಟ್ ಅಭಿಮಾನಿಗಳಿಗ ಇದು ತೊಂದರಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ಬಿಸಿಸಿಐ ಪಂದ್ಯವನ್ನು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭಗೊಳ್ಳುವಂತೆ ಮಾಡಿತ್ತು. ಆದರೆ ಮಳೆ ಯಾವುದಕ್ಕೂ ಅನುವು ಮಾಡಿಕೊಡಲಿಲ್ಲ. ಒಂದೊಮ್ಮೆ ಪಂದ್ಯ ಮೂಲಕ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದ್ದರೆ ಮಳೆ ನಿಂತು ಪಂದ್ಯ ನಡೆಯುವ ಸಾಧ್ಯತೆ ಇತ್ತು.
ಟಿ20 ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 24 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತವು 13 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ, ‘ಮೆನ್ ಇನ್ ಬ್ಲೂ’ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿದ್ದರೆ, ಆತಿಥೇಯರು ಎರಡರಲ್ಲಿ ಗೆದ್ದಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮೊದಲ ಬಾರಿ ಆಡಿದ ತಂಡವೆಂದರೆ ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ. 2007ರಲ್ಲಿ ನಡೆದ ಚೊಚ್ಚಲ ಅಂತಾರಾಷ್ಟೀಯ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹವಾಗ್ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 82 ರನ್ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 6 ವಿಕೆಟ್ಗೆ 169 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 87 ರನ್ಗೆ ಸರ್ವಪತನ ಕಂಡಿತ್ತು.