Site icon Vistara News

INDvsNZ ODI | ಭಾರತಕ್ಕೆ ಗಿಲ್​ ಮಾಂಗೆ ಮೋರ್​; ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ 12 ರನ್​ ಜಯ

ಹೈದರಾಬಾದ್​ : ಶುಬ್ಮನ್ ಗಿಲ್ (208 ರನ್​) ​ಅಬ್ಬರದ ದ್ವಿಶತಕ ಹಾಗೂ ಮೊಹಮ್ಮದ್ ಸಿರಾಜ್​ (46 ರನ್​ಗಳಿಗೆ 4 ವಿಕೆಟ್​) ಮಾರಕ ಬೌಲಿಂಗ್​ ದಾಳಿಯ ನೆರವು ಪಡೆದ ಭಾರತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ 12 ರನ್​ಗಳ ಜಯ ದಾಖಲಿಸಿತು. ಇದರೊಂದಿಗೆ ರೋಹಿತ್ ಶರ್ಮಾ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ನ್ಯೂಜಿಲ್ಯಾಂಡ್​ನ ಮಧ್ಯಮ ಕ್ರಮಾಂಕದ ಬ್ಯಾಟರ್​ ಮೈಕೆಲ್​ ಬ್ರಾಸ್​ವೆಲ್​ 78 ಎಸೆತಗಳಿಗೆ 140 ರನ್​ ಬಾರಿಸಿ ಭಾರತ ತಂಡದ ಜಯ ಕಸಿಯುವ ಯತ್ನ ನಡೆಸಿದರೂ ಕೊನೇ ಓವರ್​ನಲ್ಲಿ ಎಲ್​ಬಿಡಬ್ಲ್ಯು ಔಟ್​ ಆಗಿ ನಿರಾಸೆಯಿಂದ ಪೆವಿಲಿಯನ್​ಗೆ ನಡೆದರು.

ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 349 ರನ್​ ಬಾರಿಸಿತು. ಬೃಹತ್ ಗುರಿ ಬೆನ್ನಟ್ಟಿದ ಟಾಮ್​ ಲೇಥಮ್​ ನೇತೃತ್ವದ ಪ್ರವಾಸಿ ಬಳಗ 49.2 ಓವರ್​ಗಳಲ್ಲಿ 337 ರನ್​ಗಳಿಗೆ ಆಲ್​ಔಟ್​ ಅಗಿ ಸೋಲೋಪ್ಪಿಕೊಂಡಿತು.

ದೊಡ್ಡ ಮೊತ್ತಕ್ಕೆ ಪ್ರತಿಯಾಗಿ ಆಡಿದ ನ್ಯೂಜಿಲ್ಯಾಂಡ್​ ತಂಡ ಆರಂಭದಲ್ಲಿ ಸತತವಾಗಿ ವಿಕೆಟ್​ ಕಳೆದುಕೊಂಡಿತು. 28.4 ಓವರ್​ಗಳಲ್ಲಿ 131 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಬಳಿಕ ಜತೆಯಾಟದ ಮೈಕೆಲ್​ ಬ್ರಾಸ್​ವೆಲ್​ (140) ಹಾಗೂ ಮಿಚೆಲ್​ ಸ್ಯಾಂಟ್ನರ್​ (57) 162 ರನ್​ಗಳ ಜತೆಯಾಟ ನೀಡಿದರೂ ಕೊನೇ ಹಂತದಲ್ಲಿ ವಿಕೆಟ್​ ಕಳೆದುಕೊಳ್ಳುವ ಮೂಲಕ ಸೋಲೊಪ್ಪಿಕೊಂಡಿತು. ಭಾರತ ಪರ ಬೌಲಿಂಗ್​ನಲ್ಲಿ ಕುಲ್ದೀಪ್​ ಯಾದವ್​, ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಕಬಳಿಸಿದರು.

ಭಾರತದ ಬ್ಯಾಟಿಂಗ್ ಅಬ್ಬರ

ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 60 ರನ್​ ಒಟ್ಟುಗೂಡಿಸಿತು. ಲಂಕಾ ವಿರುದ್ಧದ ಸರಣಿಯಲ್ಲಿ ತೋರಿದ ಪ್ರದರ್ಶನವೇ ಈ ಪಂದ್ಯದಲ್ಲಿಯೂ ಈ ಜೋಡಿ ಮುಂದುವರಿಸಿತು. ಆದರೆ ರೋಹಿತ್​ ಶರ್ಮಾ 34 ರನ್​ ಗಳಿಸಿದ ವೇಳೆ ಬ್ಲೇರ್‌ ಟಿಕ್ನರ್‌ ಎಸೆತದಲ್ಲಿ ಔಟಾದರು.

ರೋಹಿತ್​ ವಿಕೆಟ್​ ಪತನದ ಬಳಿಕ ಆಡಲಿಳಿದ ವಿರಾಟ್​ ಕೊಹ್ಲಿ(8) ಹೆಚ್ಚು ಕಾಲ ಕ್ರೀಸ್​ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಮಿಚೆಲ್​ ಸ್ಯಾಂಟ್ನರ್​ ಅವರ ಸ್ಪಿನ್​ ಮೋಡಿಗೆ ಕ್ಲೀನ್​ ಬೌಲ್ಡ್​ ಆಗಿ ಪೆವಿಲಿಯನ್ ಸೇರಿದರು. ಈ ವಿಕೆಟ್​ ಪತನದ ಬೆನ್ನಲೇ ಬಾಂಗ್ಲಾದೇಶ ವಿರುದ್ಧದ ಸರಣಿ ವೇಳೆ ಅತಿ ವೇಗದ ದ್ವಿಶತಕ ಬಾರಿಸಿ ಮಿಂಚಿದ್ದ ಇಶಾನ್‌ ಕಿಶನ್‌(5) ಕೂಡ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ತಂಡದ ಮೊತ್ತ 110 ಆಗುವ ವೇಳೆ ಪ್ರಮುಖ ಮೂರು ಆಟಗಾರರ ವಿಕೆಟ್​ ಪತನಗೊಂಡ ವೇಳೆ ಭಾರತ 250ರ ಗಡಿ ದಾಟುವುದೂ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಜವಾಬ್ದಾರಿಯುವಾಗಿ ಬ್ಯಾಟಿಂಗ್​ ನಡೆಸಿದ ಶುಭಮನ್​ ಗಿಲ್​ ಎದುರಾಳಿ ತಂಡದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್ ಮತ್ತು ಹಾರ್ದಿಕ್​ ಪಾಂಡ್ಯ ಜತೆ ಉತ್ತಮ ಜತೆಯಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ಯಕುಮಾರ್​ ಯಾದವ್​(31), ಹಾರ್ದಿಕ್​ ಪಾಂಡ್ಯ(28) ರನ್​ ಗಳಿಸಿದರು. ಉಭಯ ಆಟಗಾರರ ಈ ವಿಕೆಟ್​ ಡ್ಯಾರಿಲ್​ ಮಿಚೆಲ್ ಪಾಲಾಯಿತು.

​ಗಿಲ್​ ಸ್ಫೋಟಕ ಬ್ಯಾಟಿಂಗ್​

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ಕ್ರೀಸ್​ ಕಚ್ಚಿ ನಿಂತ ಯುವ ಆಟಗಾರ ಶುಭಮನ್​ ಗಿಲ್​ ಆತ್ಮವಿಶ್ವಾಸದಿಂದ ಬ್ಯಾಟ್​ ಬೀಸುವ ಮೂಲಕ ಕಿವೀಸ್​ ಬೌಲರ್​ಗಳ ಕಿವಿ ಹಿಂಡಿದರು. ಇದೇ ವೇಳೆ ಅವರು ಭಾರತ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಾಗೂ ಶಿಖರ್​​ ಧವನ್ ಅವರ ದಾಖಲೆ ಮುರಿದರು.

ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ಮೊದಲು ಅವರು ಒಟ್ಟು 18 ಅಂತಾರಾಷ್ಟ್ರೀಯ ಇನಿಂಗ್ಸ್​ಗಳಲ್ಲಿ 894 ರನ್​ ಬಾರಿಸಿದ್ದರು. ಇದೀಗ ಅವರು ದ್ವಿಶತಕದ ಸಾಧನೆಯ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 1000 ರನ್​ ಗಡಿದಾಟಿದ ಸರದಾರ ಎನಿಸಿಕೊಂಡಿದ್ದಾರೆ. ಈ ಸಾಧನೆಗೆ 19 ಇನಿಂಗ್ಸ್​ಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಭಾರತ ತಂಡದ ಪರ ಅತಿವೇಗದಲ್ಲಿ ಈ ಸಾಧನೆ ಮಾಡಿದ ಗರಿಮೆ ತಮ್ಮದಾಗಿಸಿಕೊಳ್ಳುವ ಮೂಲಕ ವಿರಾಟ್​ ಕೊಹ್ಲಿ ಹಾಗೂ ಧವನ್​ ಅವರನ್ನು ಹಿಂದಿಕ್ಕಿದರು.

ಗಿಲ್​ ಒಟ್ಟು 149 ಎಸೆತ ಎದುರಿಸಿ 208 ರನ್​ ಪೇರಿಸಿದರು. ಈ ಸ್ಫೋಟಕ ಇನಿಂಗ್ಸ್​ ವೇಳೆ ಬರೋಬ್ಬರಿ 19 ಬೌಂಡರಿ ಮತ್ತು 9 ಸಿಕ್ಸರ್​ ಬಾರಿಸಿದರು. ಇದರ ಜತೆಗೆ ಅತಿ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.

INDvsNZ ODI

ಇದನ್ನೂ ಓದಿ | Shubman Gill | ಭಾರತ ತಂಡದ ಪರ ದ್ವಿಶತಕ ಬಾರಿಸಿದ ಐದನೇ ಆಟಗಾರ ಶುಬ್ಮನ್​ ಗಿಲ್​, ಉಳಿದವರು ಯಾರು?

Exit mobile version