ಮುಂಬಯಿ: ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಆರ್ಸಿಬಿ ತಂಡ ಡಬ್ಲ್ಯುಪಿಎಲ್ನ (WPL 2023) 13ನೇ ಪಂದ್ಯದಲ್ಲಿ ಎದುರಾಳಿ ಯುಪಿ ವಾರಿಯರ್ಸ್ ತಂಡವನ್ನು 135 ರನ್ಗಳಿಗೆ ಕಟ್ಟಿ ಹಾಕಿತು. ಈ ಮೂಲಕ ಗೆಲುವಿಗೆ 136 ರನ್ಗಳ ಸಾಧಾರಣ ಗುರಿಯನ್ನು ಪಡೆದುಕೊಂಡಿದೆ. ಆರ್ಸಿಬಿ ತಂಡದ ಬೌಲರ್ಗಳಾದ ಎಲಿಸ್ ಪೆರಿ (16 ರನ್ಗಳಿಗೆ 3 ವಿಕೆಟ್), ಸೋಫಿ ಡಿವೈನ್ (23 ರನ್ಗಳಿಗೆ 2 ವಿಕೆಟ್), ಶೋಭನಾ ಆಶಾ (27 ರನ್ಗಳಿಎಗ 2 ವಿಕೆಟ್) ಎದುರಾಳಿ ತಂಡ ದೊಡ್ಡ ಮೊತ್ತ ಪೇರಿಸದಂತೆ ನೋಡಿಕೊಂಡರು.
ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಯೋಜನೆಯಂತೆ ಬೌಲಿಂಗ್ ನಡೆಸಿ ಯುಪಿ ತಂಡವನ್ನು 19.3 ಓವರ್ಗಳಲ್ಲಿ 135 ರನ್ಗಳಿಗೆ ಆಲ್ಔಟ್ ಮಾಡಿತು.
ಇದನ್ನೂ ಓದಿ : WPL 2023 : ಮುಂಬಯಿ ತಂಡಕ್ಕೆ ಐದನೇ ಗೆಲುವು, ಗುಜರಾತ್ ಜಯಂಟ್ಸ್ಗೆ 55 ರನ್ ಹೀನಾಯ ಸೋಲು
ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆದ ಯುಪಿ ವಾರಿಯರ್ಸ್ ಬಳಗ ಆರಂಭದಲ್ಲಿ ಆಘಾತ ಎದುರಿಸಿತು. ನಾಯಕಿ ಅಲಿಸಾ ಹೀಲಿ (1) ಹಾಗೂ ದೇವಿಕಾ ವೈದ್ಯ (0) ವಿಕೆಟ್ ಪಡೆದ ಸೋಫಿ ಡಿವೈನ್ ಆರ್ಸಿಬಿಗೆ ಮುನ್ನಡೆ ಕಲ್ಪಿಸಿಕೊಟ್ಟರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಕಿರಣ್ ನವ್ಗಿರೆ 22 ರನ್ ಬಾರಿಸಿ ಸ್ವಲ್ಪ ಹೊತ್ತು ಕ್ರೀಸ್ ಕಾಯ್ದುಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ತಾಹಿಲಾ ಮೆಕ್ಗ್ರಾಥ್ 2 ರನ್ಗೆ ಔಟಾದರು.
ಗ್ರೇಸ್ ಸ್ಫೋಟಕ ಬ್ಯಾಟಿಂಗ್
ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿದ ಆಲ್ರೌಂಡರ್ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 32 ಎಸೆತಗಳಲ್ಲಿ ಅವರು 46 ರನ್ ಬಾರಿಸಿ 29 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. ದೀಪ್ತಿ ಶರ್ಮಾ ಕೂಡ 22 ರನ್ ಬಾರಿಸಿ ತಂಡದ ಮೊತ್ತ 100 ರನ್ ಗಡಿ ದಾಟುವಂತೆ ನೋಡಿಕೊಂಡರು. ಕೊನೆಯಲ್ಲಿ ಮತ್ತೆ ಬಿರುಸಿನ ದಾಳಿ ನಡೆಸಿದ ಆರ್ಸಿಬಿ ಸ್ಕೋರ್ ಗ್ರಾಫ್ ಏರದಂತೆ ನೋಡಿಕೊಂಡಿತು.