ನವ ದೆಹಲಿ: ಆಗಸ್ಟ್ 18, 2008ರಂದು ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತೀಯ ಕ್ಯಾಪ್ ಧರಿಸಿ ತಮ್ಮ ಅಂತಾರರಾಷ್ಟ್ರೀಯ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅದಕ್ಕಿಂತ ಕೆಲವೇ ತಿಂಗಳುಗಳ ಹಿಂದೆ ಐಸಿಸಿ ಅಂಡರ್ 19 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾರತದ ಅಂಡರ್ 19 ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು. ಆ ವೇಳೆಗೆ ಅವರ ಸಾಮರ್ಥ್ಯದ ಜಗತ್ತಿಗೆ ಪರಿಚಯವಾಗಿತ್ತು. ಹೀಗೆ ಆರಂಭಗೊಂಡ ವಿರಾಟ್ ಕೊಹ್ಲಿಯ ಪಯಣ ಅದ್ಬುತ ಮೈಲುಗಲ್ಲುಗಳನ್ನು ಸೃಷ್ಟಿಸಿದೆ. ಆಗಸ್ಟ್ 18ಕ್ಕೆ ಅವರ ಕ್ರಿಕೆಟ್ ವೃತ್ತಿಗೆ 15 ವರ್ಷಗಳಾಗಿದ್ದು ಅವರು ಸಂಭ್ರಮದಲ್ಲಿದ್ದಾರೆ.
ಡೆಲ್ಲಿ ತಂಡದ ಸಹ ಆಟಗಾರ ಗೌತಮ್ ಗಂಭೀರ್ ಅವರೊಂದಿಗೆ ತಂಡಕ್ಕೆ ಸೇರ್ಪಡೆಗೊಂಡಿದ್ದ ವಿರಾಟ್ ಕೊಹ್ಲಿ ಲಂಕಾ ವಿರುದ್ಧ ಕೇವಲ 12 ರನ್ ಗಳಿಸಿದ್ದರು. ಅದು ಅವರ ಸಾಧನೆಗೆ ಅಡಿಪಾಯವಾಗಿತ್ತು. ಅವರ ಆರಂಭಿಕ ದಿನಗಳ ರನ್ಗಳು ಭರವಸೆ ಮೂಡಿಸಿತ್ತು. ಮೊದಲ ಐದು ಪಂದ್ಯಗಳಲ್ಲಿ 31.80 ಸರಾಸರಿಯಲ್ಲಿ 159 ರನ್ ಬಾರಿಸಿದ್ದರು. ತಮ್ಮ ಐದನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದರು. ಇದೀಗ ಅವರು ದಿಗ್ಭ್ರಮೆಗೊಳಿಸುವಂಥ ಎತ್ತರವನ್ನು ಏರಿದ್ದಾರೆ. ಟೆಸ್ಟ್, ಏಕ ದಿನ ಹಾಗೂ ಟಿ20 ಮಾದರಿಯ ಕ್ರಿಕೆಟ್ನಲ್ಲಿ ಅಸಾಮಾನ್ಯ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದಾರೆ. ಹೀಗೆ ಕಲಾತ್ಮಕ ಬ್ಯಾಟಿಂಗ್ ಮೂಲಕವೇ ವಿಶ್ವ ಕ್ರಿಕೆಟ್ನ ಮನಗೆದ್ದಿರುವ ಕೊಹ್ಲಿಯ ಸಾಧನೆಗಳ ಇಣುಕುನೋಟ ಇಲ್ಲಿದೆ.
ಟೆಸ್ಟ್ ಮಾಂತ್ರಿಕ
ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿಯ ಆರಂಭ ಉತ್ತಮವಾಗಿರಲಿಲ್ಲ. ಐದು ಇನಿಂಗ್ಸ್ಗಳಲ್ಲಿ ಕೇವಲ 76 ರನ್ ಗಳಿಸಿದ್ದರು. ಆದರೆ ದಿನ ಕಳೆದಂತೆ ಕೆಂಪು ಚೆಂಡಿನ ಕ್ರಿಕೆಟ್ನ ಮಾಂತ್ರಿಕ ಎನಿಸಿಕೊಂಡರು. ಜೋ ರೂಟ್, ಸ್ಟೀವ್ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್ ಅವರಂತೆಯೇ ಈ ಮಾದರಿಯಲ್ಲಿ ಎಲ್ಲರನ್ನೂ ಬೆರಗುಗೊಳಿಸಿದರು.
111 ಟೆಸ್ಟ್ ಪಂದ್ಯಗಳಲ್ಲಿ 49.29ರ ಸರಾಸರಿಯಂತೆ 8,676 ರನ್ ಗಳಿಸಿದ್ದು, ಏಳು ದ್ವಿಶತಕ ಸೇರಿದಂತೆ 29 ಶತಕಗಳನ್ನು ಬಾರಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು 58.82% ಗೆಲುವಿನ ದರದೊಂದಿಗೆ ಮುನ್ನಡೆಸಿದ್ದಾರೆ.. ಅವರ ನಾಯಕತ್ವದ ಅಡಿಯಲ್ಲಿ, ಭಾರತ ತಂಡ ವಿದೇಶಿ ನೆಲದಲ್ಲಿ ಸರಣಿ ವಿಜಯಗಳನ್ನು ಸಾಧಿಸಿತು. ಐಸಿಸಿ ವಿಶ್ವ ಟೆಸ್ಟ್ ರ್ಯಾಕಿಂಗ್ನಲ್ಲಿ ಸತತ ಐದು ಕಾಲ ಭಾರತವನ್ನು ಅಗ್ರ ಸ್ಥಾನಕ್ಕೇರಿಸಿದ್ದರು.
ಏಕ ದಿನ ಮಾದರಿ ರನ್ ಮೆಷಿನ್
275 ಏಕದಿನ ಪಂದ್ಯಗಳನ್ನು ಆಡಿರುವ ರನ್ ಮೆಷಿನ್ ವಿರಾಟ್ ಕೊಹ್ಲಿ 57.32ರ ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಸ್ಥಾನದಲ್ಲಿರುವ ಕೊಹ್ಲಿ, 150 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಲ್ಲಿ ಅತಿ ಹೆಚ್ಚು ಸರಾಸರಿಯೊಂದಿಗೆ ಸ್ಥಿರ ಬ್ಯಾಟಿಂಗ್ ಮಾಡಿದ್ದಾರೆ.
ನಾಯಕನಾಗಿ 95 ಪಂದ್ಯಗಳನ್ನು ಆಡಿರುವ ಕೊಹ್ಲಿ 68.42% ಗೆಲುವಿನ ಪ್ರಮಾಣವನ್ನು ಹೊಂದಿದ್ದಾರೆ. ಅವರು 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು 2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪರ ಆಡಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡ ವಿಶ್ವ ಕಪ್ ಗೆದ್ದಿಲ್ಲ ಎಂಬ ಕೊರಗು ಇದೆ.
ಟಿ20ಯಲ್ಲಿ ವಿಸ್ಫೋಟ
ಟಿ 20 ಕ್ರಿಕೆಟ್ ಅಂಗಣದಲ್ಲಿ, ವಿರಾಟ್ ಕೊಹ್ಲಿ ಪ್ರಬಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. 115 ಟಿ20 ಪಂದ್ಯಗಳಲ್ಲಿ 52.73ರ ಸರಾಸರಿಯಲ್ಲಿ 4,008 ರನ್ ಗಳಿಸಿದ್ದಾರೆ. 2014 ಮತ್ತು 2016ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಇದನ್ನೂ ಓದಿ: Virat Kohli : 15 ವರ್ಷಗಳ ಕ್ರಿಕೆಟ್ ಪಯಣವನ್ನು ಎರಡೇ ಪದಗಳಲ್ಲಿ ಬಣ್ಣಿಸಿದ ವಿರಾಟ್ ಕೊಹ್ಲಿ
ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಕೊಹ್ಲಿಯ ಪರಾಕ್ರಮವು ಜಗಜ್ಜಾಹೀರಾಗಿದೆ. ವಿರಾಟ್ ಕೊಹ್ಲಿ 501 ಪಂದ್ಯಗಳಲ್ಲಿ 53.63 ಸರಾಸರಿಯಲ್ಲಿ 25,582 ರನ್ ಗಳಿಸಿದ್ದಾರೆ. ಅವರು ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು ಮತ್ತು ವಿಶ್ವದ ಐದನೇ ಸ್ಥಾನದಲ್ಲಿದ್ದಾರೆ, ಸಚಿನ್ ಅವರ ಹಲವು ಶ್ರೇಷ್ಠ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ಅವರ ಗಮನಾರ್ಹ ಸಾಧನೆಗಳಿಗಾಗಿ 2011-2020ರ ಐಸಿಸಿ ‘ದಶಕದ ಆಟಗಾರ’ ಪ್ರಶಸ್ತಿ ಲಭಿಸಿದೆ. ವಿರಾಟ್ ಕೊಹ್ಲಿಯ ಕ್ರಿಕೆಟ್ ಯಾನವು ಸ್ಥಿರತೆ, ಶ್ರೇಷ್ಠತೆ ಮತ್ತು ಬದ್ಧತೆಯ ಸಂಕೇತವಾಗಿದೆ.