ನವದೆಹಲಿ: ವೇಳಾಪಟ್ಟಿ ಗೊಂದಲ ಮಳೆಯ ಸಮಸ್ಯೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ (ind vs pak ) ತಂಡಗಳ ನಡುವಿನ ಪಂದ್ಯದದ ಟಿಕೆಟ್ಗಳು ಮಾರಾಟವಾಗಿಲ್ಲ. ಏಷ್ಯಾ ಕಪ್ 2023 ರ (Asia Cup 2023) ಸೂಪರ್ ಫೋರ್ 4 ಹಂತದ 3ನೇ ಪಂದ್ಯದ 15000 ಟಿಕೆಟ್ಗಳು ಮಾರಾಟವಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ (Premadasa Stadium) ನಿಗದಿಯಾಗಿರುವ ಪಂದ್ಯವು ಮಳೆಯಿಂದಾಗಿ ಪೂರ್ಣಗೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಹೇಳಲಾಗಿರುವ ಕಾರಣ ಟಿಕೆಟ್ಗಳು ಮಾರಾವಾಗದೇ ಉಳಿದಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಭಾನುವಾರ ಮತ್ತು ಸೋಮವಾರ (ಪಂದ್ಯದ ದಿನ ಮತ್ತು ಮೀಸಲು ದಿನ) ಮಳೆಯಾಗುವ ಶೇಕಡಾ 90ರಷ್ಟು ಅವಕಾಶವಿದೆ.
ಬಿಸಿಸಿಐ ಮತ್ತು ಪಿಸಿಬಿ ನಡುವಿನ ಗೊಂದಲವೇ ಈ ಸಮಸ್ಯೆಗೆ ಕಾರಣವಾಗಿದೆ. ಪಂದ್ಯ ಸ್ಥಳಾಂತರವಾಗಬಹುದು, ರದ್ದಾಗಬಹುದು ಎಂಬ ಅನುಮಾನದ ಮೇರೆಗೆ ಅಭಿಮಾನಿಗಳು ಟಿಕೆಟ್ಗಳನ್ನು ಖರೀದಿ ಮಾಡಲಿಲ್ಲ ಎಂದು ಹೇಳಲಾಗಿದೆ. ಮಧ್ಯಾಹ್ನ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಆರಂಭಗೊಂಡಾಗ ಹವಾಮಾನವು ಶುಭ್ರಗೊಂಡಂತೆ ತೋರುತ್ತಿದ್ದರೂ, ಸಂಜೆ ಮತ್ತು ರಾತ್ರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ ; Team India : ಶ್ರೇಯಸ್ ಅಯ್ಯರ್, ರಾಹುಲ್ ರೆಡಿ; ಹೊಸ ವಿಡಿಯೊ ಹಾಕಿದ ರಿಷಭ್ ಪಂತ್
ಆರ್ ಪ್ರೇಮದಾಸ ಕ್ರೀಡಾಂಗಣವು 35,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ ವೇಳಾಪಟ್ಟಿಯ ಗೊಂದಲ ಮತ್ತು ನಿರಂತರ ಮಳೆಯ ಅಡೆತಡೆಗಳಿಂದಾಗಿ ಸುಮಾರು 40% ಟಿಕೆಟ್ ಗಳು ಹಾಗೆಯೇ ಉಳಿದಿವೆ ಎನ್ನಲಾಗಿದೆ.
ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನ ನಿಯಮ
- ದೀರ್ಘಕಾಲದ ಮಳೆ ಅಡೆತಡೆಗಳ ಸಂದರ್ಭಗಳಲ್ಲಿ ಓವರ್ಗಳನ್ನು ಕಡಿಮೆ ಮಾಡುವುದು ಸೇರಿದಂತೆ ಮೂಲ ಪಂದ್ಯದ ದಿನದಂದು ಫಲಿತಾಂಶವನ್ನು ಸಾಧಿಸಲು ಅಗತ್ಯ ಕ್ರಮಗಳು ಕೈಗೊಳ್ಳುವುದು.
- ಮೂಲ ಪಂದ್ಯದ ದಿನದಂದು ಫಲಿತಾಂಶವನ್ನು ನಿರ್ಧರಿಸಲು ಎರಡೂ ಇನಿಂಗ್ಸ್ಗಳಲ್ಲಿ ಕನಿಷ್ಠ 20 ಓವರ್ಗಳನ್ನು ಎಸೆಯಬೇಕು.
- ಎರಡೂ ಇನಿಂಗ್ಸ್ಗಳಲ್ಲಿ 20 ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ಮೀಸಲು ದಿನದಂದು ಮುಂದುವರಿಸಲಾಗುವುದು.
- ಮೀಸಲು ದಿನವು ಮೂಲ ಪಂದ್ಯದ ಮುಂದುವರಿಕೆಯಾಗಿದೆ, ಮರುಪ್ರಾರಂಭವಲ್ಲ. ಆದ್ದರಿಂದ, ಮೂಲ ಪಂದ್ಯದ ದಿನದಿಂದ ಸ್ಕೋರ್ ಮೀಸಲು ದಿನದಿಂದ ಮುಂದುವರಿಯುವುದು.
- ಮೂಲ ಪಂದ್ಯದ ದಿನದಂದು ಯಾವುದೇ ಆಟ ಸಾಧ್ಯವಾಗದಿದ್ದರೆ, ಪೂರ್ಣ ಏಕದಿನ ಪಂದ್ಯವು ಮೀಸಲು ದಿನದಂದು ಪ್ರಾರಂಭವಾಗುತ್ತದೆ.
ರಾಹುಲ್ ಫಿಟ್, ಪಂದ್ಯಕ್ಕೆ ಲಭ್ಯ
ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ, ಸ್ಟಾರ್ ಆಟಗಾರ ಕೆ.ಎಲ್ ರಾಹುಲ್(kl rahul) ಅವರು ಭಾನುವಾರ ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಕಣಕ್ಕಿಳಿದರು. ಅವರ ಆಗಮನದಿಂದ ಎದುರಾಳಿ ಪಾಕ್ಗೆ ಭಯ ಕಾಡಿದೆ. ಒಂದು ಸಲ ರಾಹುಲ್ ಕ್ರೀಸ್ ಕಚ್ಚಿ ನಿಂತರೆ ಮತ್ತೆ ಅವರನ್ನು ತಡೆಯುವುದು ಕಷ್ಟದ ಮಾತು. ಸಿಕ್ಸರ್ ಬೌಂಡರಿಗಳ ಸುರಿಮಳೆ ಖಚಿತ.
ಕಳೆದ ಸುಮಾರು ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ರಾಹುಲ್ ಅವರು ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ. ಸದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಸಾಮರ್ಥ್ಯ ಇರುವುದು ಕೂಡ ರಾಹುಲ್ ಅವರಲ್ಲಿ ಮಾತ್ರ. ಈ ಮಾತನ್ನು ಈಗಾಗಲೇ ಟೀಮ್ ಇಂಡಿಯಾದ ಅನೇಕ ಮಾಜಿ ಆಟಗಾರರು ಸೇರಿ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಹೇಳಿದ್ದಾರೆ. ವಿಶ್ವಕಪ್ಗೆ ತಂಡ ಪ್ರಕಟಿಸುವ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಗರ್ಕರ್, “ರಾಹುಲ್ ಉಪಸ್ಥಿತಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ರಾಹುಲ್
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.
ಟೀಕೆಗೆ ಉತ್ತರಿಸಬೇಕು ರಾಹುಲ್
ಗಾಯದಿಂದ ಚೇತರಿಕೆ ಕಂಡ ತಕ್ಷಣ ರಾಹುಲ್ ಹಿಂದಿನ ಫಾರ್ಮ್ಗೆ ಮರಳುವುದು ಕಷ್ಟ. ಹೀಗಾಗಿ ಅವರನ್ನು ಮಹತ್ವದ ಟೂರ್ನಿಯಲ್ಲಿ ಆಡಿಸುವ ಬದಲು ದ್ವಿಪಕ್ಷೀಯ ಸರಣಿಯಲ್ಲಿ ಆಡಿಸಿ ಬಳಿಕ ಮಹತ್ವದ ಟೂರ್ನಿಗೆ ಅವಕಾಶ ನೀಡಿದರೆ ಉತ್ತಮ ಎಂದು ಹಲವು ಮಾಜಿ ಆಟಗಾರರು ಹೇಳಿದ್ದರು. ಹೀಗಾಗಿ ರಾಹುಲ್ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಟೀಕೆಗೆ ತಕ್ಕ ಉತ್ತರ ನೀಡಬೇಕು. ಮಂಗಳವಾರ ಪಕಟಗೊಂಡ ವಿಶ್ವಕಪ್ ತಂಡದಲ್ಲಿಯೂ ರಾಹುಲ್ ಅವರು ಮೊದಲ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.