Site icon Vistara News

IPL 2023 : ಇನ್ನೂ ಸುಧಾರಿಸಿಕೊಳ್ಳದ ಚೆನ್ನೈ ತಂಡದ 16.25 ಕೋಟಿ ರೂಪಾಯಿಯ ಆಟಗಾರ!

Ben Stokes leaves CSK camp for one-off Test against Ireland

#image_title

ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಶುಕ್ರವಾರ ನಡೆದ ಸನ್ ರೈಸರ್ಸ್ ಹೈದರಬಾದ್​ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್​ಗಳ ಅಮೋಘ ವಿಜಯ ಸಾಧಿಸಿದೆ. ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಏತನ್ಮಧ್ಯೆ, ಆ ತಂಡಕ್ಕೊಂದು ಕೊರಗು ಎದುರಾಗಿದೆ. ಕಳೆದ ಐಪಿಎಲ್​ ಹರಾಜಿನಲ್ಲಿ 16.25 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದ ಇಂಗ್ಲೆಂಡ್ ಆಲ್​ರೌಂಡರ್​ ಬೆನ್​ಸ್ಟೋಕ್ಸ್​​ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಆಡಲು ಸಾಧ್ಯವಾಗುತ್ತಿಲ್ಲ. ಇದು ತಂಡ ಪಾಲಿಗೆ ಹಿನ್ನಡೆ ಎನಿಸಿದೆ.

ಬೆನ್​ಸ್ಟೋಕ್ಸ್​ ನಾಯಕತ್ವದ ಇಂಗ್ಲೆಂಡ್​ ತಂಡ 2022ರ ಟಿ20 ವಿಶ್ವ ಕಪ್​ ಗೆದ್ದಿತ್ತು. ಫೈನಲ್​ ಪಂದ್ಯದಲ್ಲಿ ಸ್ಟೋಕ್ಸ್​ ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಇದೇ ಹಿನ್ನೆಲೆಯಲ್ಲಿ ಹರಾಜಿನಲ್ಲಿ ಅವರನ್ನು 16.25 ಕೋಟಿ ರೂಪಾಯಿ ಕೊಟ್ಟು ತನ್ನದಾಗಿಸಿಕೊಂಡಿತ್ತು ಚೆನ್ನೈ ಫ್ರಾಂಚೈಸಿ. ಧೋನಿ ನಿವೃತ್ತಿ ಘೋಷಿಸಲಿರುವು ಹಿನ್ನೆಲೆಯಲ್ಲಿ ಅವರನ್ನು ತಂಡದ ನಾಯಕರನ್ನಾಗಿ ಅಯ್ಕೆ ಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಆದರೆ, ಮೊದಲೆರಡು ಪಂದ್ಯಗಳಲ್ಲಿ ಆಡಿದ ಬಳಿಕ ಸ್ಟೋಕ್ಸ್​ಗೆ ಆಟ ಮುಂದುವರಿಸಲು ಸಾಧ್ಯವಾಗಿಲ್ಲ. ಪಾದದ ನೋವಿಗೆ ಒಳಗಾದ ಅವರು ವಿಶ್ರಾಂತಿಯಲ್ಲಿದ್ದಾರೆ.

ಇದೀಗ ಬೆನ್​ಸ್ಟೋಕ್ಸ್​ ಕುರಿತು ಕೋಚ್ ಸ್ಪೀಫನ್​ ಪ್ಲೆಮಿಂಗ್ ಮಾಹಿತಿ ಕೊಟ್ಟಿದ್ದಾರೆ. ಆಲ್​ರೌಂಡರ್ ಸ್ಟೋಕ್ಸ್​ ಒಂದು ವಾರದ ತನಕ ಐಪಿಎಲ್​ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. 31 ವರ್ಷದ ಆಟಗಾರನಿಗೆ ದೊಡ್ಡ ಪ್ರಮಾಣದ ಗಾಯಗಳೇನೂ ಆಗಿಲ್ಲ. ಆದರೆ, ಪುನಶ್ಚೇತನಕ್ಕಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

“ಬೆನ್ ಸ್ಟೋಕ್ಸ್ ಗಾಯದ ಸಮಸ್ಯೆಗೆ ಒಳಗಾಗಿದ್ದು ಒಂದು ವಾರದವರೆಗೆ ಹೊರಗುಳಿಯಲಿದ್ದಾರೆ. ಅದೇನೂ ದೊಡ್ಡ ಪ್ರಮಾಣದ ಗಾಯವಲ್ಲ. ಆದರೂ ಹೆಚ್ಚಿನ ವಿಚಾರಗಳನ್ನು ಹೇಳುವುದು ಸಾಧ್ಯವಿಲ್ಲ. ರಿಕವರಿಗಾಗಿ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅದೃಷ್ಟ ಅವರ ಕೈ ಹಿಡಿದರೆ ಬೇಗ ತಂಡ ಸೇರಿಕೊಳ್ಳುತ್ತಾರೆ ಎಂದು ಫ್ಲೆಮಿಂಗ್​ ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ; ಏನಿದು ರೆಕಾರ್ಡ್​?

ಚೆನ್ನೈ ಸೂಪರ್​ ಕಿಂಗ್ಸ್ ತಂಡವೂ ದೊಡ್ಡ ಪ್ರಮಾಣದಲ್ಲಿ ಗಾಯದ ಆತಂಕಕ್ಕೆ ಒಳಗಾಗಿದೆ. ಮಹೇಂದ್ರ ಸಿಂಗ್​ ಧೋನಿಯೂ ನೋವಿಗೆ ಒಳಗಾಗಿದ್ದರು. ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಾಲಿನ ಗಾಯಕ್ಕೆ ಒಳಗಾಗಿ ಕುಂಟುತ್ತಾ ನಡೆದಿದ್ದರು. ಆದರೆ, ಮುಂದಿನ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದ ಧೋನಿ ವಿಜಯ ಸಾಧಿಸಿದ್ದರು.

ಈ ಕುರಿತೂ ವಿವರಣೆ ನೀಡಿದ ಫ್ಲೆಮಿಂಗ್​, ಮಹೇಂದ್ರ ಸಿಂಗ್ ಧೋನಿ ಸಂಪೂರ್ಣವಾಗಿ ಫಿಟ್​ ಆಗಿದ್ದಾರೆ. ಅವರು ಗಾಯದ ಸಮಸ್ಯೆಯನ್ನು ಬೇಗ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಅವರು ತಂಡಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಒಂದು ವೇಳೆ ಗಾಯದ ಸಮಸ್ಯೆಯಿಂದಾಗಿ ತಂಡಕ್ಕೆ ನೆರವು ಕೊಡಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಅನಿಸಿದರೆ ಖಂಡಿತವಾಗಿಯೂ ಅವರು ಹೊರಗುಳಿಯುತ್ತಾರೆ ಎಂದು ಫ್ಲೆಮಿಂಗ್ ಮಾಹಿತಿ ನೀಡಿದ್ದಾರೆ..

Exit mobile version