1975ರ ಜೂನ್ 07ರಂದು ಇಂಗ್ಲೆಂಡ್ನಲ್ಲಿ ಉದ್ಘಾಟನಾ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ (World Cup Recap) ಆರಂಭಗೊಂಡಿತು. ಇದು ಕ್ರಿಕೆಟ್ ಪ್ರಪಂಚದ ಅತಿದೊಡ್ಡ ಪಂದ್ಯಾವಳಿಗೆ ಅಡಿಗಲ್ಲಾಯಿತು. ಆದರೆ, ಟೆಸ್ಟ್ ಮಾದರಿಯಲ್ಲಿದ್ದ ಕ್ರಿಕೆಟ್ ಅನ್ನು ಚುಟುಕು ಕ್ರಿಕೆಟ್ ಮಾದರಿಗೆ ಇಳಿಸಿರುವುದಕ್ಕೆ ಕ್ರಿಕೆಟ್ ವಿಮರ್ಶಕರ ಟೀಕೆಗಳು ವ್ಯಕ್ತಗೊಂಡವು. ಹೀಗಾಗಿ ಉದ್ಘಾಟನಾ ಆವೃತ್ತಿಗೆ (cricket news) ಕೆಲವೊಂದು ಹಿನ್ನಡೆಗಳು ಉಂಟಾದವು.
ಚುಟುಕು ಕ್ರಿಕೆಟ್ ಹಣದ ಹರಿವಿಗೆ ಮೂಲ ಹಾಗೂ ಕ್ರಿಕೆಟ್ ಕ್ಷೇತ್ರವನ್ನು ಶ್ರೀಮಂತಗೊಳಿಸಬಹುದು ಎಂದು ಆಗಲೇ ಸಾಕಷ್ಟು ಮಂದಿ ಅಂದಾಜು ಮಾಡಿದ್ದರು. ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರ ಮಿಶ್ರ ಭಾವನೆಗಳ ನಡುವೆ, 1975 ರ ಇಂಗ್ಲಿಷ್ ಬೇಸಿಗೆಯಲ್ಲಿ ವಿಶ್ವ ಕಪ್ ನಡೆಯಿತು. ಈ ವೇಳೆ ಬೌಲರ್ ಎಸೆಯುವ ಚೆಂಡು ಬ್ಯಾಟರ್ನ ತಲೆ ಮೇಲೆ ಹಾರಿದರೆ ಅದು ವೈಡ್ ಎಂದು ಪರಿಗಣಿಸುವ ತೀರ್ಮಾನವನ್ನೂ ತೆಗೆದುಕೊಳ್ಳಲಾಯಿತು. ಇದು ಈಗಿನಂತೆ ತಲಾ 50 ಓವರ್ಗಳ ಇನಿಂಗ್ಸ್ ಆಗಿರಲಿಲ್ಲ. ಅದು 60 ಓವರ್ಗಳ ಇನಿಂಗ್ಸ್ ಹೊಂದಿರುವ ಮಾದರಿಯಾಗಿತ್ತು.
ಭಾಗವಹಿಸಿದ ತಂಡಗಳು ಮತ್ತು ಸ್ವರೂಪ
ಈ ಪಂದ್ಯಾವಳಿಯನ್ನು ಪ್ರುಡೆನ್ಷಿಯಲ್ ಅಶ್ಯೂರೆನ್ಸ್ ಕಂಪನಿ ಪ್ರಾಯೋಜಿಸಿತು. ಆ ಸಮಯದಲ್ಲಿ ಟೆಸ್ಟ್ ಆಡುವ ಆರು ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಆ ಸಮಯದಲ್ಲಿ ಎರಡು ಪ್ರಮುಖ ಅಸೋಸಿಯೇಟ್ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಪೂರ್ವ ಆಫ್ರಿಕಾ ಈ ಪಂದ್ಯಾವಳಿಯ ಭಾಗವಾಗಿದ್ದವು.
ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆದವು. ಅಲ್ಲಿನ ವಿಜೇತರು ಫೈನಲ್ಗೆ. ಪಂದ್ಯಗಳನ್ನು ಸಾಂಪ್ರದಾಯಿಕ ಬಿಳಿ ಬಟ್ಟೆಯಲ್ಲಿ ಕೆಂಪು ಚೆಂಡಿನೊಂದಿಗೆ ಆಡಲಾಯಿತು.
ಟೂರ್ನಿಯು ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು. ಅಲ್ಲಿ ಡೆನ್ನಿಸ್ ಅಮಿಸ್ ವಿಶ್ವಕಪ್ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದಾಗ್ಯೂ, ಎರಡನೇ ಇನಿಂಗ್ಸ್ಗಳಲ್ಲಿ ಭಾರತದ ದಂತಕಥೆ ಬ್ಯಾಟರ್ ಸುನಿಲ್ ಗವಾಸ್ಕರ್ ಇಡೀ 60 ಓವರ್ ಬ್ಯಾಟಿಂಗ್ ಮಾಡಿ ಕೇವಲ 36 ರನ್ (174 ಎಸೆತ) ರನ್ ಗಳಿಸಿದರು.
ಇಂಗ್ಲೆಂಡ್ ನಿಗದಿತ 60 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು. ಭಾರತ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಎರಡನೇ ಪಂದ್ಯದಲ್ಲಿ, ಗ್ಲೆನ್ ಟರ್ನರ್ ಪೂರ್ವ ಆಫ್ರಿಕಾ ತಂಡದ ವಿರುದ್ಧ ಅಜೇಯ 171* (201) ರನ್ ಗಳಿಸಿದರು ಚುಟುಕು ಸ್ವರೂಪದಲ್ಲಿ ಅಂದಿನ ಅತ್ಯಧಿಕ ವೈಯಕ್ತಿಕ ಸ್ಕೋರ್ ಅದು. ಈ ದಾಖಲೆಯನ್ನು 1983 ರಲ್ಲಿ ಕಪಿಲ್ ದೇವ್ (175) ಮುರಿದರು.
ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ರೋಮಾಂಚಕ ಮುಖಾಮುಖಿ
ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಶ್ರೀಲಂಕಾವನ್ನು ಕೇವಲ 86 ರನ್ಗಳಿಗೆ ಆಲೌಟ್ ಮಾಡಿತು. ಇದು ಈ ಸ್ವರೂಪದಲ್ಲಿ 100 ಕ್ಕಿಂತ ಕಡಿಮೆ ಆಲ್ಔಟ್ ಆದ ಮೊದಲ ತಂಡವಾಯಿತು. 8ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ಅತ್ಯಂತ ರೋಚಕ ಗೆಲುವು ದಾಖಲಿಸಿತು. ಪಂದ್ಯದಲ್ಲಿ ವಿಂಡೀಸ್ ಒಂದು ವಿಕೆಟ್ ಜಯ ಸಾಧಿಸಿತು.
ಇದನ್ನೂ ಓದಿ : World Cup Recap : ಏಕ ದಿನ ವಿಶ್ವ ಕಪ್ನಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ವಿವರ ಇಲ್ಲಿದೆ
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ 7 ನೇ ಪಂದ್ಯದ ಸಮಯದಲ್ಲಿ ಪಂದ್ಯಾವಳಿಯು ಸಾಕಷ್ಟು ವಿವಾದದಿಂದ ಕೂಡಿತ್ತು. ಪಂದ್ಯದ ಸಮಯದಲ್ಲಿ, ಆಸ್ಟ್ರೇಲಿಯಾದ ವೇಗದ ಬೌಲರ್ಗಳು ತಮ್ಮ ಶಾರ್ಟ್ ಬಾಲ್ ತಂತ್ರಗಳೊಂದಿಗೆ ಶ್ರೀಲಂಕಾದ ಬ್ಯಾಟರ್ಗಳ ತಲೆಗೆ ಚೆಂಡು ಬಡಿಯುವಂತೆ ಮಾಡಿದರು. ಇದನ್ನು ಮಾಧ್ಯಮಗಳು ಖಂಡಿಸಿದವು.
ಭಾರತವು ಪೂರ್ವ ಆಫ್ರಿಕಾ ವಿರುದ್ಧ ಹತ್ತು ವಿಕೆಟ್ ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಗೆಲುವನ್ನು ದಾಖಲಿಸಿತು. ಆದಾಗ್ಯೂ, ಮುಂದಿನ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಸೋತಿತು. ಇದರ ಪರಿಣಾಮವಾಗಿ, ಕಿವೀಸ್ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಇಂಗ್ಲೆಂಡ್ ಜೊತೆಗೆ ಸೆಮಿಫೈನಲ್ಗೆ ಅರ್ಹತೆ ಪಡೆಯಿತು.
ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಗೆ ಅರ್ಹತೆ ಪಡೆದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನ ಗಳಿಸಿತು. ಲೀಗ್ ಹಂತದಲ್ಲಿ ಭಾರತದ ಹೋರಾಟ ಮುಗಿಯಿತು.
ಸೆಮಿಫೈನಲ್ ಗೆದ್ದವರು ಯಾರು?
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದವು. ಗಿಲ್ಮೊರ್ 12 ಓವರ್ಗರ್ಗಳಲ್ಲಿ 14 ರನ್ಗೆ 6 ವಿಕೆಟ್ ಪಡೆದು ಆಸ್ಟ್ರೇಲಿಯಾ ಪರ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮವಾಗಿ, ಇಂಗ್ಲೆಂಡ್ ಕೇವಲ 93 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾವು ಪಂದ್ಯವನ್ನು ನಾಲ್ಕು ವಿಕೆಟ್ಗಳಿಂದ ಗೆದ್ದು ಫೈನಲ್ಗೆ ಪ್ರವೇಶಿಸಿತು. ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೇರಿತು.
ಫೈನಲ್ ಹೇಗಿತ್ತು?
ಜೂನ್ 21 ರಂದು ಫೈನಲ್ ನಡೆಯಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಅದ್ಭುತ ಶತಕ ಬಾರಿಸಿದರು. (85 ಎಸೆತಗಳಲ್ಲಿ 102). ಅವರ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಬಳಿಕ ಆಸ್ಟ್ರೇಲಿಯಾವನ್ನು 274 ರನ್ಗಳಿಗೆ ನಿಯಂತ್ರಿಸಿ ಪಂದ್ಯವನ್ನು 17 ರನ್ ಗಳಿಂದ ಗೆದ್ದಿತು. ವಿಶ್ವ ಕ್ರಿಕೆಟ್ ನ ಮೊದಲ ಚಾಂಪಿಯನ್ ಆಗಿ ವೆಸ್ಟ್ ಇಂಡೀಸ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಮುಂದಿನ ವರ್ಷಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಈ ತಂಡದ ಪ್ರಾಬಲ್ಯಕ್ಕೆ ಅಡಿಪಾಯ ಇದಾಯಿತು. ನಾಯಕ ಕ್ಲೈವ್ ಲಾಯ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನ್ಯೂಜಿಲೆಂಡ್ನ ಗ್ಲೆನ್ ಟರ್ನರ್ ನಾಲ್ಕು ಇನ್ನಿಂಗ್ಸ್ಗಳಿಂದ 166.50 ಸರಾಸರಿಯಲ್ಲಿ 333 ರನ್ ಗಳಿಸಿ ಪಂದ್ಯಾವಳಿಯ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದರೂ ವಿಕೆಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಯಾರಿ ಗಿಲ್ಮೊರ್ 11 ವಿಕೆಟ್ಗಳನ್ನು ಉರುಳಿಸಿದರು. ಎರಡು ಬಾರಿ ಐದು ವಿಕೆಟ್ಗಳನ್ನು ಪಡೆದರು.