Site icon Vistara News

1983 World Cup: ಕಪಿಲ್‌ ಪಡೆಯ ಏಕದಿನ ವಿಶ್ವಕಪ್‌ ವಿಜಯ ದಿವಸಕ್ಕೆ 40ರ ಸಂಭ್ರಮ

kapil dev

ಮುಂಬಯಿ: ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ಈ ಮಹಾ ವಿಜಯಕ್ಕೆ(1983 World Cup) ಭಾನುವಾರ 40ನೇ ವರ್ಷದ ಸಂಭ್ರಮ. 1983ರ ಜೂ. 25ರಂದು ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್‌, ಭಯಾನಕ ವೆಸ್ಟ್‌ ಇಂಡೀಸ್​ ತಂಡವನ್ನು ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿದ “ಕಪಿಲ್‌ ಡೆವಿಲ್ಸ್‌’ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು.

ಸಹಜವಾಗಿಯೇ ಕಪಿಲ್‌(Kapil Dev) ತನ್ನ ತಂಡದ ಸಾಧನೆಯನ್ನು ಮೆಲುಕು ಹಾಕಿದ್ದಾರೆ. ಸಾಧನೆಯ ಹಾದಿ ಯಾವತ್ತೂ ದುರ್ಗಮವಾಗಿರುತ್ತದೆ. ನಾವು ಈ ಎಲ್ಲ ಘಟ್ಟಗಳನ್ನು ದಾಟಿ ಮುನ್ನಡೆದು ಯಶಸ್ಸಿನ ಶಿಖರವನ್ನು ತಲುಪಿದೆವು. ನಮ್ಮ ಪಾಲಿಗೆ ಇದೊಂದು ಅನಿರೀಕ್ಷಿತ, ಆದರೆ ಅಷ್ಟೇ ರೋಮಾಂಚಕಾರಿ ಪಯಣವಾಗಿತ್ತು. ಉತ್ತಮ ಆಲ್‌ರೌಂಡರ್‌ಗಳ ಪಡೆ, ಅಮೋಘ ಮಟ್ಟದ ಫೀಲ್ಡಿಂಗ್‌, ಇದಕ್ಕೂ ಮಿಗಿಲಾಗಿ ನಮ್ಮ ಮೇಲೆ ಯಾವುದೇ ನಿರೀಕ್ಷೆ ಮತ್ತು ಒತ್ತಡ ಇಲ್ಲವಾದ್ದರಿಂದ ಇಂಥ ಅಸಾಮಾನ್ಯ ಸಾಧನೆಯೊಂದು ದಾಖಲಾಯಿತು ಎನ್ನುತ್ತಾರೆ ಕಪಿಲ್‌.

ವಿಂಡೀಸಿಗೆ ಮೊದಲ ಸೋಲು

ಭಾರತ ಲೀಗ್‌ ಹಂತದ ಮೊದಲ ಪಂದ್ಯದಲ್ಲೇ ಬಲಿಷ್ಠ ವಿಂಡೀಸ್​ ಪಡೆಯನ್ನು 34 ರನ್ನುಗಳಿಂದ ಉರುಳಿಸಿದಾಗಲೇ ಕಪಿಲ್‌ ಪಡೆ ಅಸಾಮಾನ್ಯ ಸಾಹಸವೊಂದಕ್ಕೆ ಮುನ್ನುಡಿ ಬರೆದಿತ್ತು. ಅದು ವಿಂಡೀಸಿಗೆ ವಿಶ್ವಕಪ್‌ನಲ್ಲಿ ಎದುರಾದ ಪ್ರಪ್ರಥಮ ಸೋಲು ಕೂಡ ಇದಾಗಿತ್ತು.

ಹಿಂದಿನ ದಿನವೇ ಬೋನಸ್‌

ಭಾರತ ಆತಿಥೇಯ ಇಂಗ್ಲೆಂಡನ್ನು ಮಣಿಸಿ ಫೈನಲ್‌ ಪ್ರವೇಶಿಸಿದಾಗ ಜಾಗತಿಕ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿತ್ತು. ಬಿಸಿಸಿಐ ಅಧಿಕಾರಿಗಳೆಲ್ಲ ಜೂ. 24ರ ಸಂಜೆ ಸಭೆ ಸೇರಿ, ತಂಡದ ಸದಸ್ಯರಿಗೆಲ್ಲ 25 ಸಾವಿರ ರೂ. ಬೋನಸ್‌ ಪ್ರಕಟಿಸಿದ್ದರು!

ಕಪಿಲ್‌ ಸುಂಟರಗಾಳಿ

ಜಿಂಬಾಬ್ವೆ ಎದುರಿನ ಲೀಗ್‌ ಪಂದ್ಯದ ವೇಳೆ ಭಾರತದ ವಿಕೆಟ್‌ಗಳು ತರಗೆಲೆಯಂತೆ ಉದುರುತ್ತಿದ್ದಾಗ ನಾಯಕ ಕಪಿಲ್‌ದೇವ್‌ ಸ್ನಾನ ಮಾಡುತ್ತಿದ್ದರು. ಆಟಗಾರರೆಲ್ಲ ಕಪ್ತಾನನಿಗಾಗಿ ಹೊರಗೆ ಕಾಯುತ್ತಿದ್ದರಂತೆ. ಭಾರತದ 5 ವಿಕೆಟ್‌ 17 ರನ್ನಿಗೆ ಬಿದ್ದಾಗ ಕಪಿಲ್‌ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್‌ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವನ್ನು ತಂದುಕೊಟ್ಟರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು.

ಪ್ರವಾಸ ಹೋಗಿದ್ದ ತಂಡ ಕಪ್​ ಗೆದ್ದು ಇತಿಹಾಸ ನಿರ್ಮಿಸಿತು

ಆ ಕಾಲಕ್ಕೆ ಭಾರತದಲ್ಲಿ ಇನ್ನೂ ಕ್ರಿಕೆಟ್​ ಅಷ್ಟಾಗಿ ಖ್ಯಾತಿ ಪಡೆದಿರಲಿಲ್ಲ. ಭಾರತ ತಂಡವೂ ಕೂಡ ಬಲಿಷ್ಠವಾಗಿರಲಿಲ್ಲ. ಕೇವಲ ಲೆಕ್ಕ ಭರ್ತಿಗೆ ಇದ್ದ ತಂಡ ಎಂದು ಎಲ್ಲರಿಂದಲೂ ಅಪಹಾಸ್ಯಕ್ಕೆ ಒಳಗಾಗಿತ್ತು. ಜತೆಗೆ ಭಾರತೀಯ ಆಟಗಾರರಿಗೂ ಇದೊಂದು ವಿದೇಶ ಪ್ರವಾಸ ಎಂಬ ಭಾವನೆ ಇದ್ದಿತ್ತು. ಆದರೆ ಲಂಡನ್​ನಲ್ಲಿ ನಡೆದದ್ದೇ ಬೇರೆ.

ಫೈನಲ್​ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್​ ಎದುರಾದಾಗ ಇಡೀ ವಿಶ್ವವೇ ಮತ್ತೊಮ್ಮೆ ವಿಂಡೀಸ್​ ಚಾಂಪಿಯನ್​ ಆಗಲಿದೆ ಎಂದು ಹೇಳಿದ್ದರು. ಆದರೆ, ಕಪಿಲ್​ದೇವ್​ ನೇತೃತ್ವದ ಭಾರತ ತಂಡ ಅಸಾಧಾರಣ ಪ್ರದರ್ಶನ ತೋರಿ ಹ್ಯಾಟ್ರಿಕ್​​ ಹಾದಿಯಲ್ಲಿದ್ದ ವಿಂಡೀಸ್​ ತಂಡವನ್ನು ಕಟ್ಟಿಹಾಕಿ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ ರಾಜ ಮಾರ್ಗ ಅಂಕಣ | ಆವತ್ತು ಕಪಿಲ್‌ ದೇವ್‌ ಮೈಯಲ್ಲಿ ಆವೇಶ ಬಂದಿತ್ತು, ಥೇಟ್‌ ಕಾಂತಾರದ ರಿಷಬ್‌ ಶೆಟ್ಟಿ ಸ್ಟೈಲಲ್ಲಿ!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 183 ರನ್​ಗಳಿಗೆ ಆಲೌಟ್​ ಆಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್​ಗೆ ಛಲ ಬಿಡದ ಮದನ್​ಲಾಲ್​ ಮತ್ತು ಮೊಹಿಂದರ್​ ಅಮರ್​ನಾಥ್​(Mohinder Amarnath) ಉತ್ಕೃಷ್ಟ ಮಟ್ಟದ ಬೌಲಿಂಗ್​ ನಡೆಸಿ ತಲಾ 3 ವಿಕೆಟ್​ ಕೆಡವಿದರು. ಅಂತಿಮವಾಗಿ ಕೆರೆಬಿಯನ್ನರನ್ನು 140 ರನ್​​ಗೆ ಆಲೌಟ್​ ಮಾಡುವ ಮೂಲಕ 43 ರನ್​ಗಳಿಂದ ಗೆಲುವು ಸಾಧಿಸಿ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್​ ತಂದುಕೊಟ್ಟರು. ನಾಯಕ ಕಪಿಲ್​ದೇವ್​ ಅವರು ಲಾರ್ಡ್ಸ್​ನಲ್ಲಿ ಕಪ್​ ಎತ್ತಿ ಭಾರತದ ವಿಜಯ ಪತಾಕೆ ಹಾರಿಸಿದ್ದರು. ಈ ಸವಿ ನೆನಪಿಗೆ ಇಂದು 40ರ ಸಂಭ್ರಮ. ಬಣ್ಣಿಸಿದವರು ಅಂದಿನ ಕಪಿಲ್‌ ಪಡೆಯ ಓರ್ವ ಸದಸ್ಯ ಸಯ್ಯದ್‌ ಕಿರ್ಮಾನಿ ಹೇಳಿದಂತೆ “ನಮ್ಮ 1983ರ ವಿಶ್ವಕಪ್‌ ಗೆಲುವು ಮೊದಲ ಪ್ರೀತಿಯಂತೆ, ಯಾವತ್ತೂ ಮರೆಯಲಾಗದ್ದು” ನಿಜಕ್ಕೂ ಈ ಮಾತು ಇಂದಿಗೂ ಮರೆಯಲಾಗದಂತೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.

Exit mobile version