ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ಚೊಚ್ಚಲ ಟಿ20 ವಿಶ್ವಕಪ್ ಹೀರೋ ಮತ್ತು ಹರಿಯಾಣ ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಶರ್ಮಾ(Joginder Sharma) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಆದರೆ ಈ ಆರೋಪವನ್ನು ಜೋಗಿಂದರ್ ಅಲ್ಲಗಳೆದಿದ್ದಾರೆ.
ಜೋಗಿಂದರ್ ಶರ್ಮಾ ಸೇರಿದಂತೆ ಆರು ಜನರ ವಿರುದ್ಧ ಹರ್ಯಾಣದ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಸಾರ್‌ನ ದಬ್ರಾ ಗ್ರಾಮದ ಪವನ್ ಎಂಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಕ್ಕಾಗಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ-ಎಸ್‌ಟಿ ಸೆಕ್ಷನ್ ಸೇರಿಸಿ ಜೋಗಿಂದರ್ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‌ಪಿ ರಾಜೇಶ್ ಕುಮಾರ್ ಮೋಹನ್ ತಿಳಿಸಿದ್ದಾರೆ. ಪವನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ಸಂದೀಪ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ಮತ್ತೊಮ್ಮೆ ಮರು ತನಿಖೆ ನಡೆಸಲಾಗುವುದು ಎಂದು ಮೋಹನ್ ಮಾಧ್ಯಮದ ಮುಂದೆ ತಿಳಿಸಿದ್ದಾರೆ.
ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮ, ಅಜಯವೀರ್, ಈಶ್ವರ್ ಪ್ರೇಮ್, ರಾಜೇಂದ್ರ ಮತ್ತಿತರರು ತಮ್ಮ ಮಗನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೃತರ ತಾಯಿ ಸುನೀತಾ ಆರೋಪಿಸಿದ್ದರು. ಜನವರಿ 2ರಂದು ಆಜಾದ್ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಎಫ್‌ಐಆರ್ ದಾಖಲು ಮಾಡಲಾಗಿದೆ.
ಆರೋಪ ಅಲ್ಲಗಳೆದ ಜೋಗಿಂದರ್
ಈ ವಿಷಯದ ಬಗ್ಗೆ ಡಿಎಸ್ಪಿ ಜೋಗಿಂದರ್ ಶರ್ಮಾ ಅವರು ಪ್ರತಿಕ್ರಿಯೆ ನೀಡಿದ್ದು, ನನಗೆ ಪವನ್‌ನ ಪರಿಚಯವೂ ಇಲ್ಲ, ಭೇಟಿಯೂ ಇಲ್ಲ ಎಂದಿದ್ದಾರೆ. ನನ್ನ ಮೂರೂವರೆ ವರ್ಷಗಳ ಅವಧಿಯಲ್ಲಿ ಸಾಕಷ್ಟು ತನಿಖೆ ನಡೆಸಿದ್ದು, ಅಂತಹ ಯಾವುದೇ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದಾರೆ.
ಭಾರತದ ಪರವಾಗಿ ತಲಾ ನಾಲ್ಕು ಏಕದಿನ ಪಂದ್ಯ ಮತ್ತು ಟಿ20 ಪಂದ್ಯವಾಡಿರುವ ಜೋಗಿಂದರ್ ಶರ್ಮಾ ಅವರು 2007ರ ವಿಶ್ವಕಪ್ ಫೈನಲ್ ಪಂದ್ಯದ ಅಂತಿಮ ಓವರ್ ಕಾರಣದಿಂದ ಸದಾ ಕ್ರಿಕೆಟ್ ಪ್ರಿಯರ ನೆನಪಿನಲ್ಲಿ ಇರುತ್ತಾರೆ. 16 ಐಪಿಎಲ್ ಪಂದ್ಯಗಳಲ್ಲಿ ಜೋಗಿಂದರ್ ಶರ್ಮಾ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಯಿಟ್ಟ ಮೃತ ಯುವಕನ ಕುಟುಂಬಸ್ಥರು
ಮೃತ ಯುವಕನ ಕುಟುಂಬಸ್ಥರು ಶವವನ್ನು ಮುಂದಿಟ್ಟು ಪ್ರತಿಭಟನೆ ಜತೆಗೆ ಪ್ರಮುಖ ಬೇಡಿಕೆಯನ್ನಿಟ್ಟಿದ್ದಾರೆ. ಅಂತ್ಯಸಂಸ್ಕಾರದ ವೆಚ್ಚವನ್ನೂ ಆಡಳಿತ ಮಂಡಳಿಯೇ ಭರಿಸಬೇಕು. ಸಂತ್ರಸ್ತ ಕುಟುಂಬದ ಓರ್ವ ಮಗಳು ಮತ್ತು ಒಬ್ಬ ಮಗನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಬೇಕು. 50 ಲಕ್ಷ ರೂ. ಆರ್ಥಿಕ ನೆರವು ನೀಡಬೇಕು. ಜತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಬೇಡಿಕೆಯಿಟ್ಟಿದ್ದಾರೆ.