Site icon Vistara News

World Cup History: 2007ರ ವಿಶ್ವಕಪ್‌; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!

2007 World Cup Winner

2007 ODI World Cup Recap; Revisiting unforgettable moments

ಬೆಂಗಳೂರು: ಹೊಸ ತಂಡಗಳ ಸೇರ್ಪಡೆ, ನಿಯಮಗಳ ಬದಲಾವಣೆ ಸೇರಿ ಹೊಸತನದೊಂದಿಗೆ ಆರಂಭವಾದ 2007ರ ಏಕದಿನ ವಿಶ್ವಕಪ್‌ ಟೂರ್ನಿಯು (2007 ODI World Cup) ಹತ್ತಾರು ವಿವಾದ, ಮೈದಾನದಲ್ಲಿ ಮದಗಜಗಳ ಕಾದಾಟ, ಭಾರತ ತಂಡಕ್ಕೆ ಎಂದೂ ಮರೆಯಲಾಗದ ನಿರಾಸೆ, ಆಸ್ಟ್ರೇಲಿಯಾ ಪಾರಮ್ಯ, ಶ್ರೀಲಂಕಾ ಹೋರಾಟಕ್ಕೆ ಸಾಕ್ಷಿಯಾಯಿತು. ರೋಚಕ ಪಂದ್ಯಗಳು ಎಂದಿನಂತೆ ಕ್ರಿಕೆಟ್‌ ಟೂರ್ನಿಯನ್ನು (World Cup History) ಮೆರುಗುಗೊಳಿಸಿದವು. ಬ್ಯಾಟರ್‌ ಹಾಗೂ ಬೌಲರ್‌ಗಳ ಮೊನಚಾದ ಆಟವು ಕ್ರಿಕೆಟ್‌ ಜಗತ್ತನ್ನು ಬೆರಗುಗೊಳಿಸಿತು. ಅದರಲ್ಲೂ, ರಿಕಿ ಪಾಂಟಿಂಗ್‌ (Ricky Ponting) ಎಂಬ ಚಾಣಾಕ್ಷ ನಾಯಕ ಹಾಗೂ ಬಲಿಷ್ಠ ಆಟಗಾರರನ್ನು ಹೊಂದಿದ್ದ ಆಸ್ಟ್ರೇಲಿಯಾ ಮತ್ತೊಮ್ಮೆ ಕ್ರಿಕೆಟ್‌ ಲೋಕವನ್ನು ನಿಬ್ಬೆರಗುಗೊಳಿಸಿತು. ಹಾಗಾದರೆ, 2007ರ ವಿಶ್ವಕಪ್‌ನ ರೋಚಕ ಕ್ಷಣಗಳು ಯಾವವು? ಹೊಸ ತಂಡ, ನೂತನ ನಿಯಮಗಳು ಹೇಗಿದ್ದವು? ಯಾವ ವಿವಾದಗಳು ಚರ್ಚೆಗೆ ಬಂದವು? ಯಾವ ತಂಡದ ಪ್ರದರ್ಶನ ಹೇಗಿತ್ತು? ರೋಚಕ ಕ್ಷಣಗಳು ಯಾವವು? ಭಾರತ ತಂಡ (Indian Cricket Team) ಹೇಗೆ ನಿರಾಸೆ ಅನುಭವಿಸಿತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೆರಿಬಿಯನ್‌ ನಾಡಲ್ಲಿ ಮೊದಲ ವಿಶ್ವಕಪ್

ಮೊದಲ ಹಾಗೂ ದ್ವಿತೀಯ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ವೆಸ್ಟ್‌ ಇಂಡೀಸ್‌ಗೆ 2007ರವರೆಗೆ ತವರು ನೆಲದಲ್ಲಿ ವಿಶ್ವಕಪ್‌ ಆಯೋಜಿಸುವ ಭಾಗ್ಯ ಒದಗಿರಲಿಲ್ಲ. ಆದರೆ, 2007ರಲ್ಲಿ ಮೊದಲ ಬಾರಿಗೆ ವೆಸ್ಟ್‌ ಇಂಡೀಸ್‌ ವಿಶ್ವಕಪ್‌ ಆಯೋಜನೆಯ ಜವಾಬ್ದಾರಿ ನಿಭಾಯಿಸಿತು. ಜಮೈಕಾ ಸರ್ಕಾರವು ನೂರಾರು ಕೋಟಿ ರೂಪಾಯಿ ವ್ಯಯಿಸಿ ಒಟ್ಟು ಎಂಟು ಕ್ರೀಡಾಂಗಣಗಳಲ್ಲಿ ಸಕಲ ವ್ಯವಸ್ಥೆಯೊಂದಿಗೆ ಪಂದ್ಯಗಳನ್ನು ಆಯೋಜಿಸಿತು. 9ನೇ ಆವೃತ್ತಿಯ ವಿಶ್ವಕಪ್‌ ಪಂದ್ಯಗಳಿಗಾಗಿಯೇ ಕ್ರೀಡಾಂಗಣಗಳನ್ನು ನವೀಕರಣಗೊಳಿಸಿ ಮೊದಲ ಆಯೋಜನೆಯಲ್ಲಿಯೇ ಗಮನ ಸೆಳೆಯಿತು. ಆ ಮೂಲಕ ಅಮೆರಿಕ ಲಾಬಿ ಮಧ್ಯೆಯೂ ವಿಶ್ವಕಪ್‌ ಆಯೋಜನೆಯ ಅವಕಾಶ ಪಡೆದ ವೆಸ್ಟ್‌ ಇಂಡೀಸ್‌ ತನ್ನ ಸಾಮರ್ಥ್ಯ ಪ್ರದರ್ಶಿಸಿತು.

ಎರಡು ಹೊಸ ತಂಡ ಸೇರ್ಪಡೆ, ಮಾದರಿ ಬದಲು

2007ರ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಕಾದಾಡಿದವು. 2003ರ ವಿಶ್ವಕಪ್‌ನಲ್ಲಿ 14 ತಂಡಗಳು ಪಾಲ್ಗೊಂಡರೆ, 2007ರಲ್ಲಿ ಐರ್ಲೆಂಡ್‌ ಹಾಗೂ ಬರ್ಮುಡಾ ತಂಡಗಳು ಮೊದಲ ಬಾರಿಗೆ ವಿಶ್ವಕಪ್‌ ಕ್ರಿಕೆಟ್‌ಗೆ ಅರ್ಹತೆ ಪಡೆದು ಒಟ್ಟು 16 ತಂಡಗಳು ಪಾಲ್ಗೊಂಡವು. ಹಾಗಾಗಿ, ಟೂರ್ನಿಯ ಕೆಲ ನಿಯಮಗಳನ್ನು ಮಾರ್ಪಾಡು ಮಾಡಲಾಯಿತು. ಎರಡು ಗ್ರೂಪ್‌ಗಳ ಬದಲು ನಾಲ್ಕು ಗ್ರೂಪ್‌ಗಳನ್ನಾಗಿ ಮಾಡಿ, ಒಂದೊಂದು ಗ್ರೂಪ್‌ನಲ್ಲಿ 4 ತಂಡಗಳು ಸ್ಥಾನ ಪಡೆದವು. ಭಾರತವು ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಬರ್ಮುಡಾ ತಂಡಗಳನ್ನೊಳಗೊಂಡ ಬಿ ಗ್ರೂಪ್‌ನಲ್ಲಿ ಇತ್ತು. ಗ್ರೂಪ್‌ ಹಂತದ ಪಂದ್ಯಗಳಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೂಪರ್‌ 8 ರೌಂಡ್‌ಗೆ ಅರ್ಹತೆ ಪಡೆದವು. ಸೂಪರ್‌ 8 ಹಂತದಲ್ಲಿ ತಲಾ 7 ಪಂದ್ಯ ಆಡಿದ 8 ತಂಡಗಳಲ್ಲಿ ನಾಲ್ಕು ತಂಡ ಸೆಮಿಫೈನಲ್‌ಗೆ, ಸೆಮೀಸ್‌ನಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು.

ಇದನ್ನೂ ಓದಿ: World Cup History : ಆಂಗ್ಲರ ನಾಡಲ್ಲಿ ನಡೆದ 1999ರ ವಿಶ್ವ ಕಪ್​ ಆಸ್ಟ್ರೇಲಿಯಾ ತಂಡದ ಪಾಲಾಗಿದ್ದು ಹೀಗೆ

ಶಾಕ್‌ ಕೊಟ್ಟ ಬಾಂಗ್ಲಾ, ಲೀಗ್‌ ಹಂತದಲ್ಲೇ ಹೊರಬಿದ್ದ ಭಾರತ

ಟ್ರಿನಿಡಾಡ್‌ನಲ್ಲಿ ನಡೆದ ಲೀಗ್‌ ಹಂತದ ಮೊದಲ ಪಂದ್ಯದಲ್ಲಿಯೇ ರಾಹುಲ್‌ ದ್ರಾವಿಡ್‌ ಪಡೆಯು ಬಾಂಗ್ಲಾದೇಶ ತಂಡದ ಎದುರು ಮಂಡಿಯೂರಿದ್ದು ತುಂಬಲಾರದ ನಷ್ಟವಾಯಿತು. ಬಾಂಗ್ಲಾ ವಿರುದ್ಧ 191 ರನ್‌ಗೆ ಆಲೌಟ್‌ ಆಗಿ, ಇದನ್ನು ಬಾಂಗ್ಲಾ ಸುಲಭವಾಗಿ ಚೇಸ್‌ ಮಾಡಿತು. ಎರಡನೇ ಪಂದ್ಯದಲ್ಲಿ ಕ್ರಿಕೆಟ್‌ ಶಿಶು ಬರ್ಮುಡಾ ವಿರುದ್ಧ ದಾಖಲೆಯ 257 ರನ್‌ಗಳ ಅಂತರದಲ್ಲಿ ಭಾರತ ತಂಡ ಗೆಲುವು ಸಾಧಿಸಿದರೂ ಲೀಗ್‌ ಹಂತದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 69 ರನ್‌ಗಳ ಅಂತರದಲ್ಲಿ ಸೋಲನುಭವಿಸುವ ಮೂಲಕ ರಾಹುಲ್‌ ದ್ರಾವಿಡ್‌ ಬಳಗವು ಮನೆಯ ದಾರಿ ಹಿಡಿಯಿತು. ಮತ್ತೊಂದೆಡೆ, ಐರ್ಲೆಂಡ್‌ ವಿರುದ್ಧ ಪಂದ್ಯ ಸೋತ ಪಾಕಿಸ್ತಾನವೂ ಲೀಗ್‌ ಹಂತದಲ್ಲೇ ವಿಶ್ವಕಪ್‌ ಟೂರ್ನಿಯಿಂದ ಹೊರಬಿತ್ತು. ಭಾರತ ವಿರುದ್ಧದ ಪಂದ್ಯದ ವೇಳೆ ರಾಬಿನ್‌ ಉತ್ತಪ್ಪ ಕ್ಯಾಚ್‌ ಹಿಡಿದ ಬರ್ಮುಡಾ ತಂಡದ ಡ್ವೇನ್‌ ಲೆವರಾಕ್‌ ಸಂಭ್ರಮದ ದೃಶ್ಯವು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ವಿಶ್ವಕಪ್‌ ಲೀಗ್‌ ಹಂತದಲ್ಲೇ ಹೊರಬಿದ್ದ ಭಾರತ ತಂಡದ ಆಟಗಾರರ ಮನೆಗೆ ಕಲ್ಲೆಸೆದ ಪ್ರಕರಣಗಳು ಕೂಡ ನಡೆದಿದ್ದು ಈಗ ಇತಿಹಾಸ.

ಸೂಪರ್‌ 8ರಲ್ಲಿ 4 ತಂಡಗಳ ಸಾಧನೆ ‘ಸೂಪರ್‌’, ಲಂಕಾ ಫೈನಲ್‌ಗೆ ಲಗ್ಗೆ

ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ಹಾಗೂ ಐರ್ಲೆಂಡ್‌ ಸೂಪರ್‌ 8ರ ಹಂತ ತಲುಪಿದವು. ಸೂಪರ್‌ 8ರ ಸ್ಟೇಜ್‌ನಲ್ಲಿ ಎಂಟೂ ತಂಡಗಳು ತಲಾ ಏಳು ಪಂದ್ಯ ಆಡಿದವು. ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲ್ಯಾಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಅಧಿಕಾರಯುತವಾಗಿ ಸೆಮಿಫೈನಲ್‌ ತಲುಪಿದವು. ತವರು ನೆಲದಲ್ಲಿಯೇ ನಡೆದ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಸೂಪರ್‌ 8ರಲ್ಲಿ ಆಡಿದ 7 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಗೆದ್ದು ಸೆಮೀಸ್‌ ಕನಸು ಕೈಚೆಲ್ಲಿತು. ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 81 ರನ್‌ಗಳಿಂದ ಸೋಲಿಸಿದ ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟವು.

4 ಎಸೆತಗಳಲ್ಲಿ 4 ವಿಕೆಟ್‌ ಪಡೆದು ಲಸಿತ್‌ ಮಾಲಿಂಗ ಕಮಾಲ್‌

ಶ್ರೀಲಂಕಾ ವೇಗಿ, ಯಾರ್ಕರ್‌ ಸ್ಪೆಷಲಿಸ್ಟ್‌ ಲಸಿತ್‌ ಮಾಲಿಂಗ ಅವರು ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ ಪಡೆಯುವ ದಾಖಲೆ ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ ಗಯಾನದಲ್ಲಿ ನಡೆದ ಸೂಪರ್‌ 8 ಪಂದ್ಯದ ವೇಳೆ ಶ್ರೀಲಂಕಾ ನೀಡಿದ 209 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಗ್ರೇಮ್‌ ಸ್ಮಿತ್‌ ಬಳಗವು 44.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಸುಲಭ ಗೆಲುವಿನ ಸಮೀಪ ಇತ್ತು. ಆದರೆ, 45ನೇ ಓವರ್‌ನ ಕೊನೆಯ ಎಸೆತಗಳಲ್ಲಿ ಲಸಿತ್‌ ಮಾಲಿಂಗ ಎರಡು ವಿಕೆಟ್‌ ಪಡೆದರು. 47ನೇ ಓವರ್‌ನ ಮೊದಲ ಎಸೆತದಲ್ಲಿಯೇ ಮಾಲಿಂಗ ಅವರು ಜಾಕ್‌ ಕಾಲಿಸ್‌ ವಿಕೆಟ್‌ ಪಡೆದು ಹ್ಯಾಟ್ರಿಕ್‌ ಸಾಧನೆ ಮಾಡಿದರು. ಇನ್ನು ನಂತರದ ಎಸೆತದಲ್ಲಿ ಮಖಾಯ ಎನ್‌ಟಿನಿ ವಿಕೆಟ್‌ ಪಡೆದು ದಾಖಲೆ ಸೃಷ್ಟಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ ಕಿತ್ತ ಮೊದಲ ಬೌಲರ್‌ ಎನಿಸಿದರು. ಆದರೂ, ಆ ಪಂದ್ಯದಲ್ಲಿ ಲಂಕಾ ಒಂದು ವಿಕೆಟ್‌ನಿಂದ ಸೋಲನುಭವಿಸಿತು.

ಇದನ್ನೂ ಓದಿ: World Cup History : ಎರಡು ಪಂದ್ಯಗಳ ವಾಕ್​ ಓವರ್ ಪಡೆದು ವಿಶ್ವ ಕಪ್​ ಗೆದ್ದ ಶ್ರೀಲಂಕಾ!

ಬಾಬ್‌ ವೂಲ್ಮರ್‌ ಶಂಕಾಸ್ಪದ ಸಾವು

ಪಾಕಿಸ್ತಾನದ ಕೋಚ್‌ ಆಗಿದ್ದ, ಬ್ರಿಟನ್‌ ಮೂಲದ ಬಾಬ್‌ ವೂಲ್ಮರ್‌ ಅವರ ಸಾವು 2007ರ ವಿಶ್ವಕಪ್‌ ಟೂರ್ನಿಯ ಕಪ್ಪು ಚುಕ್ಕೆಯಾಗಿದೆ. ಐರ್ಲೆಂಡ್‌ ವಿರುದ್ಧ ಪಾಕಿಸ್ತಾನ ಸೋಲನುಭವಿಸಿದ ಒಂದು ದಿನ ನಂತರ ಅಂದರೆ 2007ರ ಮಾರ್ಚ್‌ 18ರಂದು ಹೋಟೆಲ್‌ ಕೋಣೆಯಲ್ಲಿ 58 ವರ್ಷದ ಬಾಬ್‌ ವೂಲ್ಮರ್‌ ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಜಮೈಕಾ ಪೊಲೀಸರು, ಸಾವಿನ ಕುರಿತು ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದರು. ಒಂದು ದಿನದ ತನಿಖೆ ಬಳಿಕ, ಬಾಬ್‌ ವೂಲ್ಮರ್‌ ಅವರನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿದೆ ಎಂದರು. ಅಷ್ಟೇ ಏಕೆ, ಕೆಲ ದಿನಗಳ ವಿಸ್ತೃತ ತನಿಖೆ ಬಳಿಕ ‘ಬಾಬ್‌ ವೂಲ್ಮರ್’‌ ಅವರದ್ದು ಸಹಜ ಸಾವು ಎಂದು ಷರಾ ಬರೆದರು. ಇಂದಿಗೂ ಬಾಬ್‌ ವೂಲ್ಮರ್‌ ಅವರ ಸಾವಿಗೆ ಕಾರಣ ಏನು ಎಂಬುದು ನಿಗೂಢವಾಗಿಯೇ ಉಳಿದಿದೆ.

ಹಿಸ್ಟರಿ ರಿಪೀಟ್;‌ ಆಸ್ಟ್ರೇಲಿಯಾ ವರ್ಸಸ್‌ ಶ್ರೀಲಂಕಾ ಫೈನಲ್‌

ಬಾರ್ಬಡಾಸ್‌ನ ಕೆನ್ಸಿಂಗ್‌ಟನ್‌ ಓವಲ್‌ ಕ್ರೀಡಾಂಗಣವು 2007ರ ಏಪ್ರಿಲ್‌ 28ರಂದು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ಫೈನಲ್‌ ಕಾಳಗಕ್ಕೆ ಸಾಕ್ಷಿಯಾಯಿತು. 1996ರ ಬಳಿಕ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಮತ್ತೆ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಎದುರಾದವು. ಆದರೆ, 1996ರಂತೆ 2007ರಲ್ಲಿ ಫೈನಲ್‌ನಲ್ಲಿ ಗೆಲುವು ಸಾಧಿಸಲು ಶ್ರೀಲಂಕಾ ತಂಡಕ್ಕೆ ಆಗಲಿಲ್ಲ. ಮಳೆಯಿಂದಾಗಿ ವಿಳಂಬವಾದ ಪಂದ್ಯವನ್ನು 38 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಿಕಿ ಪಾಂಟಿಂಗ್‌ ನಿರ್ಧಾರವನ್ನು ಆಸ್ಟ್ರೇಲಿಯಾ ಬ್ಯಾಟರ್‌ಗಳು ಸಮರ್ಥಿಸಿಕೊಂಡರು.

ಟೂರ್ನಿಯುದ್ದಕ್ಕೂ ನಿರೀಕ್ಷಿತ ಪ್ರದರ್ಶನ ತೋರದ ಆ್ಯಡಮ್‌ ಗಿಲ್‌ಕ್ರಿಸ್ಟ್‌, ಫೈನಲ್‌ನಲ್ಲಿ ನಿರೀಕ್ಷಿಗೂ ಮೀರಿದ ಆಟ ಪ್ರದರ್ಶಿಸಿದರು. ಗಿಲ್‌ಕ್ರಿಸ್ಟ್‌ ಅಬ್ಬರದ 149 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 38 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 284 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಶ್ರೀಲಂಕಾ ಅಷ್ಟೇನೂ ಅಬ್ಬರದ ಅಟವಾಡದೆ, 36 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 215 ರನ್‌ ಗಳಿಸಿತು. ಇದೇ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಆಗ, ಆಸ್ಟ್ರೇಲಿಯಾ ಆಟಗಾರರು ಘೋಷಣೆಗೂ ಮೊದಲೇ ಸಂಭ್ರಮಾಚರಣೆ ಮಾಡಿದರು. ಆದರೆ, ಅಂಪೈರ್‌ಗಳು ಆಟ ಮುಗಿದಿಲ್ಲ ಎಂದು ಘೋಷಿಸಿ, ಎರಡೂ ತಂಡಗಳ ನಾಯಕರ ಒಪ್ಪಿಗೆ ಮೇರೆಗೆ ಶ್ರೀಲಂಕಾಗೆ 3 ಓವರ್‌ಗಳಲ್ಲಿ 69 ರನ್‌ ಗುರಿ ನೀಡಿದರು.

ಫೈನಲ್‌ ಪಂದ್ಯದ ಹೈಲೈಟ್ಸ್‌

ಕ್ರೀಡಾಂಗಣದಲ್ಲಿ ಫ್ಲಡ್‌ಲೈಟ್‌ ಇಲ್ಲದ ಕಾರಣ ಕೊನೆಯ ಮೂರು ಓವರ್‌ಗಳನ್ನು ಬಹುತೇಕ ಕತ್ತಲಲ್ಲಿಯೇ ಆಡಿದಂತಾಯಿತು. ಅಸಹಾಯಕವಾದ ಶ್ರೀಲಂಕಾ 37 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಗೊಂದಲದ ತೀರ್ಮಾನಗಳನ್ನು ತೆಗೆದುಕೊಂಡ ಅಂಪೈರ್‌ಗಳು ಬಳಿಕ ಕ್ಷಮೆಯಾಚಿಸಿದರು. ಈಗಲೂ ಫೈನಲ್‌ ಪಂದ್ಯದಲ್ಲಿ ಅಂಪೈರ್‌ಗಳ ತೀರ್ಮಾನವು ವಿವಾದಾತ್ಮಕವಾಗಿಯೇ ಇದೆ. ಮತ್ತೊಂದೆಡೆ, ಸತತ ಮೂರನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವಕಪ್‌ ಎತ್ತಿಹಿಡಿಯಿತು. ಒಂದೇ ಒಂದು ಪಂದ್ಯ ಸೋಲದೆ ಆಸ್ಟ್ರೇಲಿಯಾ ಚಾಂಪಿಯನ್‌ ಎನಿಸಿತು. ಟೂರ್ನಿಯುದ್ದಕ್ಕೂ 26 ವಿಕೆಟ್‌ ಪಡೆದ ಆಸ್ಟ್ರೇಲಿಯಾದ ಗ್ಲೆನ್‌ ಮೆಕ್‌ಗ್ರಾತ್‌ ಪ್ಲೇಯರ್‌ ಆಫ್‌ ದಿ ಟೂರ್ನಿ (ಮ್ಯಾನ್‌ ಆಫ್‌ ದಿ ಸಿರೀಸ್)‌ ಎನಿಸಿದರು.

ಕ್ರಿಕೆಟ್‌ ದಿಗ್ಗಜರ ನಿವೃತ್ತಿ

2007ರ ವಿಶ್ವಕಪ್‌ ಟೂರ್ನಿಯು ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು.‌ ವಿಶ್ವಕಪ್‌ ಬಳಿಕ ವೆಸ್ಟ್‌ ಇಂಡೀಸ್‌ ದಂತಕತೆ ಬ್ರಿಯಾನ್‌ ಲಾರಾ, ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ನಿವೃತ್ತಿ ಘೋಷಿಸಿದರು.

ಲೀಗ್‌ ಹಂತದಲ್ಲೇ ಹೊರ ಬಿದ್ದ ಕಾರಣ ಟಿ20 ವಿಶ್ವಕಪ್‌ಗೆ ಮಹೇಂದ್ರ ಸಿಂಗ್‌ ಧೋನಿ ಅವರನ್ನು ನಾಯಕ ಎಂದು ಘೋಷಿಸಲಾಯಿತು. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ರಾಹುಲ್‌ ದ್ರಾವಿಡ್‌ ಅವರು ಏಕದಿನ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಟಿ20 ವಿಶ್ವಕಪ್‌ ಗೆದ್ದ ಖ್ಯಾತಿಯಲ್ಲಿದ್ದ ಮಹೇಂದ್ರ ಸಿಂಗ್‌ ಧೋನಿ ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕರಾದರು. ಮುಂದೆ ಆಗಿದ್ದೆಲ್ಲ ಈಗ ಇತಿಹಾಸ.

ವಿಶ್ವಕಪ್‌ ಕುರಿತು ಸ್ವಾರಸ್ಯಕರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version