Site icon Vistara News

World Cup History: 2011ರ ವಿಶ್ವಕಪ್‌; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…

2011 World Cup India Champion

2011 World Cup History: Revisiting all unforgettable moments and victory of India

ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆಲ್ಲದೆ 28 ವರ್ಷಗಳಾಗಿದ್ದವು. ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಚಾಂಪಿಯನ್‌ ಆದ ಆಸ್ಟ್ರೇಲಿಯಾ ತಂಡದ ಅಶ್ವಮೇಧಯಾಗವನ್ನು ತಡೆಯುವುದು ಯಾರು ಎಂಬ ಪ್ರಶ್ನೆ ಕ್ರಿಕೆಟ್‌ ಜಗತ್ತನ್ನು ಕಾಡುತ್ತಿತ್ತು. ಆದರೆ, 2011ರ ವಿಶ್ವಕಪ್‌ (2011 World Cup) ಹಲವು ನಿರೀಕ್ಷೆಗಳನ್ನು ಹುಸಿ ಮಾಡಲಿಲ್ಲ. ‘ಈ ಸಲ ಕಪ್‌ ನಮ್ದೆʼ ಎಂಬ ಮನಸ್ಥಿತಿಯೊಂದಿಗೆ ಭಾರತ ತಂಡ ಕಾಲಿಟ್ಟು, ‘ಆ ಸಲ ಕಪ್‌ ನಮ್ದೆʼ ಎಂದು ಈಗಲೂ ನಾವು ಹೇಳಿಕೊಂಡು ತಿರುಗಾಡುವಂತೆ ಮಾಡಿತು. ಹಾಗೆಯೇ, 2011ರ ವಿಶ್ವಕಪ್‌ ಟೂರ್ನಿಯು ಕೂಡ ಎಲ್ಲ ವಿಶ್ವಕಪ್‌ ಟೂರ್ನಿಗಳಂತೆ ಹಲವು ದಾಖಲೆ, ಸಂಭ್ರಮ, ಹಿನ್ನಡೆ, ನಿರಾಸೆ, ತಿರುವು, ತಿಮಿರು, ವಿವಾದ, ಪ್ರಮಾದಗಳಿಗೆ ಸಾಕ್ಷಿಯಾಯಿತು. ಹಾಗಾದರೆ, 2011ರ ವಿಶ್ವಕಪ್‌ ಯಾವೆಲ್ಲ ಕ್ಷಣಗಳಿಗೆ (World Cup History) ಸಾಕ್ಷಿಯಾಯಿತು? ಎಲ್ಲ ದೇಶಗಳನ್ನು ಹಿಮ್ಮೆಟ್ಟಿಸಿ ಭಾರತ ತಂಡ ಹೇಗೆ ಚಾಂಪಿಯನ್‌ ಆಯಿತು? ಭಾರತದ ಜತೆಗೆ ಯಾವ ತಂಡಗಳು ಉತ್ತಮ ಪ್ರದರ್ಶನ ತೋರಿದವು? ಯಾವ ತಂಡ ಕಳಪೆ ಪ್ರದರ್ಶನ ನೀಡಿದವು ಎಂಬುದರ ಸಮಗ್ರ ಮಾಹಿತಿ ಹೀಗಿದೆ…

ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಜಂಟಿ ಆಯೋಜನೆ

ವಿಶ್ವಕಪ್‌ ಟೂರ್ನಿಯ 10ನೇ ಸರಣಿಯ ಪಂದ್ಯಗಳ ಆಯೋಜನೆಯು 2011ರಲ್ಲಿ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೆ ದೊರೆಯಿತು. ಸುಮಾರು 15 ವರ್ಷಗಳ ಬಳಿಕ ಏಷ್ಯಾ ಉಪಖಂಡದಲ್ಲಿ ವಿಶ್ವಕಪ್‌ ಆಯೋಜನೆಯ ಅವಕಾಶ ದೊರೆಯಿತು. ಒಂದು ಸೆಮಿಫೈನಲ್‌ ಹಾಗೂ ಫೈನಲ್‌ ಸೇರಿ ಭಾರತದ ಎಂಟು ಕ್ರೀಡಾಂಗಣಗಳಲ್ಲಿ 29 ಪಂದ್ಯ ನಡೆದರೆ, ಒಂದು ಸೆಮಿಫೈನಲ್‌ ಸೇರಿ 12 ಪಂದ್ಯಗಳನ್ನು ಶ್ರೀಲಂಕಾ ಆಯೋಜಿಸಿತು. ಬಾಂಗ್ಲಾದೇಶವು ಎರಡು ಕ್ರೀಡಾಂಗಣಗಳಲ್ಲಿ 8 ಪಂದ್ಯಗಳನ್ನು ಆಯೋಜಿಸಿತು. ಫೆಬ್ರವರಿ 17ರಂದು ವಿಶ್ವಕಪ್‌ ಉದ್ಘಾಟನಾ ಸಮಾರಂಭ ನಡೆದರೆ, ಫೆಬ್ರವರಿ 19ರಂದು ಮೊದಲ ಪಂದ್ಯದಿಂದ ಅಧಿಕೃತ ಚಾಲನೆ ದೊರೆಯಿತು. ಏಪ್ರಿಲ್‌ 2ರವರೆಗೆ ವಿಶ್ವಕಪ್‌ ಪಂದ್ಯಗಳು ನಡೆದವು.

2011ರ ವಿಶ್ವಕಪ್‌ ತಂಡಗಳ ನಾಯಕರು.

ಆಯೋಜನೆಗೆ ಸಿಗದ ಅವಕಾಶ, ಪಾಕಿಸ್ತಾನಕ್ಕೆ ಮುಖಭಂಗ

ಏಷ್ಯಾದಲ್ಲಿಯೇ 2011ರ ಏಕದಿನ ವಿಶ್ವಕಪ್‌ ಆಯೋಜನೆಗೊಂಡರೂ ಒಂದೇ ಒಂದು ಪಂದ್ಯ ಆಯೋಜಿಸಲು ಅವಕಾಶ ಸಿಗದಿರುವುದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಮುಖಭಂಗವಾಯಿತು. 2009ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಆಟಗಾರರ ಮೇಲೆ ಉಗ್ರರು ದಾಳಿ ನಡೆಸಿದ ಕಾರಣ ಭದ್ರತೆಯ ಕಾರಣಗಳಿಂದಾಗಿ 2011ರ ವಿಶ್ವಕಪ್‌ನ ಒಂದೂ ಪಂದ್ಯ ಆಯೋಜಿಸಲು ಪಾಕ್‌ಗೆ ಅವಕಾಶ ಸಿಗಲಿಲ್ಲ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ 14 ಪಂದ್ಯಗಳಲ್ಲಿ 8 ಪಂದ್ಯ ಭಾರತದಲ್ಲಿ, 4 ಮ್ಯಾಚ್‌ ಶ್ರೀಲಂಕಾ ಹಾಗೂ 2 ಮ್ಯಾಚ್‌ ಬಾಂಗ್ಲಾದೇಶದಲ್ಲಿ ನಡೆದವು.

ಹೀಗಿತ್ತು ವಿಶ್ವಕಪ್‌ ಮಾದರಿ…

ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ 2011ರ ವಿಶ್ವಕಪ್‌ಗೆ ಚಾಲನೆ ದೊರೆಯಿತು. 2007ರ ವಿಶ್ವಕಪ್‌ ಟೂರ್ನಿಯಲ್ಲಿ 16 ತಂಡ ಭಾಗವಹಿಸಿದರೆ, 2011ರಲ್ಲಿ ತಂಡಗಳ ಸಂಖ್ಯೆ 14ಕ್ಕೆ ಇಳಿಯಿತು. ಹಾಗೆಯೇ, 4 ಗ್ರೂಪ್‌ಗಳಿಗೆ ಬದಲಾಗಿ 2 ಗ್ರೂಪ್‌ಗಳನ್ನಾಗಿ ವಿಂಗಡಿಸಲಾಯಿತು. ಐಸಿಸಿಯ 10 ಪೂರ್ಣಕಾಲಿಕ ಸದಸ್ಯ ರಾಷ್ಟ್ರಗಳ ಜತೆಗೆ ಐರ್ಲೆಂಡ್‌, ಕೆನಡಾ, ನೆದರ್ಲೆಂಡ್ಸ್‌ ಹಾಗೂ ಕೀನಾ ತಂಡಗಳು ಅರ್ಹತೆ ಪಡೆದಿದ್ದವು. ಒಂದೊಂದು ಗ್ರೂಪ್‌ನಲ್ಲಿ ತಲಾ 7 ತಂಡಗಳು ಸ್ಥಾನ ಪಡೆದವು. ಪ್ರತಿಯೊಂದು ತಂಡದ ವಿರುದ್ಧ ಸ್ಪರ್ಧಿಸಿದ ಬಳಿಕ ಗ್ರೂಪ್‌ನಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಕ್ವಾರ್ಟರ್‌ಫೈನಲ್‌ಗೆ, ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದ ತಂಡಗಳು ಸೆಮಿಫೈನಲ್‌ ಹಾಗೂ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ ಟೀಮ್‌ಗಳು ಫೈನಲ್‌ಗೆ ಇಟ್ಟವು.

ಇದನ್ನೂ ಓದಿ: World Cup History: 2007ರ ವಿಶ್ವಕಪ್‌; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!

ಲೀಗ್‌ ಹಂತದಿಂದ ಸೆಮೀಸ್‌ವರೆಗಿನ ಜರ್ನಿ…

2007ರಲ್ಲಿ ಬಾಂಗ್ಲಾದೇಶ ತಂಡ ಭಾರತ ತಂಡವನ್ನು, ಐರ್ಲೆಂಡ್‌ ಪಾಕಿಸ್ತಾನ ತಂಡವನ್ನು ಸೋಲಿಸಿದಂತಹ ಅಚ್ಚರಿಯ ಫಲಿತಾಂಶಗಳು 2011ರ ವಿಶ್ವಕಪ್‌ನಲ್ಲೂ ಕಾಣಿಸಿತು. ಇಂಗ್ಲೆಂಡ್‌ ನೀಡಿದ 327 ಗುರಿಯನ್ನು ಬೆನ್ನತ್ತಿದ ಐರ್ಲೆಂಡ್‌ ತಂಡವು ಎಲ್ಲರನ್ನೂ ನಿಬ್ಬೆರಗು ಮೂಡಿಸಿತು. ಆದರೂ, ಇಂಗ್ಲೆಂಡ್‌ ಬೇರೆ ತಂಡಗಳ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ತಲುಪಿತು. ಎ ಗ್ರೂಪ್‌ನಲ್ಲಿ ಅಗ್ರ 4 ಸ್ಥಾನ ಪಡೆದ ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌, ಬಿ ಗ್ರೂಪ್‌ನಲ್ಲಿದ್ದ ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್‌ ಹಾಗೂ ವೆಸ್ಟ್‌ ತಂಡಗಳು ಕ್ವಾರ್ಟರ್‌ ಫೈನಲ್‌ ತಲುಪಿದವು. ಎ ಗ್ರೂಪ್‌ನಲ್ಲಿ ಜಿಂಬಾಬ್ವೆ, ಕೆನಡಾ ಮತ್ತು ಕೀನ್ಯಾ, ಬಿ ಗ್ರೂಪ್‌ನಲ್ಲಿ ಬಾಂಗ್ಲಾದೇಶ, ಐರ್ಲೆಂಡ್‌ ಹಾಗೂ ನೆದರ್ಲೆಂಡ್ಸ್ ತಂಡಗಳು ಕೊನೆಯ ಸ್ಥಾನ ಪಡೆದು ಹೋರಾಟ ಅಂತ್ಯಗೊಳಿಸಿದವು.

ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದ ಭಾರತ ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಹಾಗೆಯೇ, ವೆಸ್ಟ್‌ ಇಂಡೀಸ್‌ ತಂಡವನ್ನು ಸುಲಭವಾಗಿ ಮಣಿಸಿದ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಗೆದ್ದ ಶ್ರೀಲಂಕಾ ಸೆಮೀಸ್‌ಗೆ ತಲುಪಿದವು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಸಚಿನ್‌, ಗಂಭೀರ್‌ ಹಾಗೂ ಯುವರಾಜ್‌ ಅದ್ಭುತ ಪ್ರದರ್ಶನಸ ತೋರಿ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿದರು.

ವಿಶ್ವದಾಖಲೆ ಸೃಷ್ಟಿಸಿದ ಕೆವಿನ್‌ ಒಬ್ರಿಯಾನ್‌

ಲೀಗ್‌ ಹಂತದಲ್ಲಿ ಐರ್ಲೆಂಡ್‌ ಆಲ್ರೌಂಡರ್‌ ತೋರಿದ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವು ಕ್ರಿಕೆಟ್‌ ಲೋಕದ ಗಮನ ಸೆಳೆಯಿತು. ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಕೇವಲ 50 ಎಸೆತಗಳಲ್ಲಿ ಕೆವಿನ್‌ ಓಬ್ರಿಯಾನ್‌ ಅವರು ಶತಕ ಬಾರಿಸುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿವೇಗದ ಶತಕ ಬಾರಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾದರು. ಈಗಲೂ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ದಾಖಲೆ ಕೆವಿನ್‌ ಒಬ್ರಿಯಾನ್‌ ಹೆಸರಲ್ಲೇ ಇದೆ. ಹಾಗೆಯೇ, ವೆಸ್ಟ್‌ ಇಂಡೀಸ್‌ನ ಕೆಮರ್‌ ರೋಚ್‌, ಶ್ರೀಲಂಕಾದ ಲಸಿತ್‌ ಮಾಲಿಂಗ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯೂ ಈ ವಿಶ್ವಕಪ್‌ನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

ಯುವರಾಜ್‌ ಸಿಂಗ್‌ ಅಲ್ರೌಂಡ್‌ ಆಟದ ದಾಖಲೆ

ಐರ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಭಾರತದ ಯುವರಾಜ್‌ ಸಿಂಗ್‌ ಅವರು ತೋರಿದ ಆಲ್ರೌಂಡ್‌ ಪ್ರದರ್ಶನವೂ ದಾಖಲೆಯಾಯಿತು. ವಿಶ್ವಕಪ್‌ನಲ್ಲಿ ಐದು ವಿಕೆಟ್‌ ತೆಗೆಯುವ ಜತೆಗೆ ಅದೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಯುವರಾಜ್‌ ಸಿಂಗ್‌ ಭಾಜನರಾದರು. 10 ಓವರ್‌ ಬೌಲಿಂಗ್‌ ಮಾಡಿದ ಯುವಿ, ಕೇವಲ 31 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿ 50 ರನ್‌ ಗಳಿಸಿ ತಂಡದ ಗೆಲುವಿಗೆ ನಿರ್ಣಾಯಕ ಎನಿಸಿದರು.

ಇದನ್ನೂ ಓದಿ: World Cup History : ಭಾರತ ಫೈನಲ್​​ನಲ್ಲಿ ಸೋತ 2003 ಆವೃತ್ತಿಯ ಅವಿಸ್ಮರಣೀಯ ಕ್ಷಣಗಳು ಇಲ್ಲಿವೆ

ಪಾಕ್‌ ಬಗ್ಗುಬಡಿದು ಭಾರತ ಫೈನಲ್‌ಗೆ

ಪಾಕಿಸ್ತಾನದ ವಿರುದ್ಧ ಭಾರತ ತಂಡವು ಬೇರೆ ಟೂರ್ನಿಗಳಲ್ಲಿ ತೋರುವ ಆಟವೇ ಬೇರೆ, ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಜತೆಗೆ ಆಡುವ ಆಟದ ಶೈಲಿಯೇ ಬೇರೆ. ಇದೇ ಕಾರಣಕ್ಕಾಗಿ ಇಂದಿಗೂ ಏಕದಿನ ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತ ಒಂದೇ ಒಂದು ಪಂದ್ಯ ಸೋತಿಲ್ಲ. 2011ರ ವಿಶ್ವಕಪ್‌ ಸೆಮಿಫೈನಲ್‌ನಲ್ಲೂ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಸಚಿನ್‌ ತೆಂಡೂಲ್ಕರ್‌ ಅವರ ಅಮೋಘ 85 ರನ್‌ಗಳ ನೆರವಿನಿಂದ ಭಾರತ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 260 ರನ್‌ ಗಳಿಸಿತು. ಆದರೆ, ಜಹೀರ್‌ ಖಾನ್‌, ಮುನಾಫ್‌ ಪಟೇಲ್‌, ಆಶಿಶ್‌ ನೆಹ್ರಾ, ಹರ್ಭಜನ್‌ ಸಿಂಗ್‌ ಹಾಗೂ ಯುವರಾಜ್‌ ಸಿಂಗ್‌ ಅವರ ಸಂಘಟಿತ ಬೌಲಿಂಗ್‌ ದಾಳಿಗೆ (ಐವರೂ ತಲಾ ಎರಡು ವಿಕೆಟ್)‌ ನಲುಗಿದ ಪಾಕಿಸ್ತಾನ 231 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಧೋನಿ ಬಳಗವು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು. ಮತ್ತೊಂದೆಡೆ, ನ್ಯೂಜಿಲ್ಯಾಂಡ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ ಕೂಡ ಫೈನಲ್‌ ಬ್ಯಾಟಲ್‌ಗೆ ಟಿಕೆಟ್‌ ಪಡೆಯಿತು.

ವಿಶ್ವಕಪ್ ‘ದೋಣಿ’ಯನ್ನು ದಡ ಸೇರಿಸಿದ ‘ಧೋನಿ’ ಬಳಗ‌, ನಾವೇ ವಿಶ್ವ ಚಾಂಪಿಯನ್

1983ರಲ್ಲಿ ಭಾರತ ವಿಶ್ವಕಪ್‌ ಗೆದ್ದರೂ ಒಂದಿಡೀ ಪೀಳಿಗೆಗೆ ಆ ಪಂದ್ಯ ವೀಕ್ಷಿಸಲು, ಗೆಲುವಿನ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗಿರಲಿಲ್ಲ. 2003ರಲ್ಲಿ ಭಾರತ ತಂಡ ಫೈನಲ್‌ಗೆ ತಲುಪಿದರೂ ಅನುಭವಿಸಿದ ಸೋಲಿನ ನೋವು ಭಾರತೀಯರನ್ನು ಕಾಡದೆ ಬಿಟ್ಟಿರಲಿಲ್ಲ. ಹಾಗಾಗಿ, 2011ರ ವಿಶ್ವಕಪ್‌ ಫೈನಲ್‌ ಪಂದ್ಯದ ಮೇಲೆ ಶತಕೋಟಿ ಭಾರತೀಯರ ನಿರೀಕ್ಷೆ, ಬಯಕೆ, ತಹತಹಿಕೆ, ಆಶಾಭಾವ ಎಲ್ಲವೂ ಇತ್ತು. ಇದನ್ನು ಹುಸಿ ಮಾಡಲೇಬಾರದು ಎಂಬಂತೆ ಆಟವಾಡಿದ ಗೌತಮ್‌ ಗಂಭೀರ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿಯು ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟರು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 6 ವಿಕೆಟ್‌ ಕಳೆದುಕೊಂಡು 274 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಹಿನ್ನಡೆ ಅನುಭವಿಸಿದರೂ, ಗಂಭೀರ್‌ ಹಾಗೂ ಧೋನಿ ಅವರ ಸಮಯೋಚಿತ ಆಟದಿಂದ ಗೆಲುವು ದಕ್ಕಿತು. ಅದರಲ್ಲೂ, ಧೋನಿ ಅವರು ಸಿಕ್ಸರ್‌ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟ ವಿಡಿಯೊ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್‌ 500 ರನ್‌ ಗಳಿಸಿ ಅತ್ಯಧಿಕ ಸ್ಕೋರರ್‌ ಎನಿಸಿದರು. ಪಾಕಿಸ್ತಾನದ ಶಹೀದ್‌ ಅಫ್ರಿದಿ ಹಾಗೂ ಭಾರತದ ಜಹೀರ್‌ ಖಾನ್‌ ಅವರು ಬೌಲಿಂಗ್‌ನಲ್ಲಿ ಮಿಂಚಿ ತಲಾ 21 ವಿಕೆಟ್‌ ಪಡೆದು ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳೆನಿಸಿದರು.

ಫೈನಲ್‌ ಪಂದ್ಯದ ಸ್ಕೋರ್‌ ಕಾರ್ಡ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಸಿಕ್ಕರ್‌ ಮೂಲಕ ಲಂಕಾವನ್ನು ‘ಫಿನಿಶ್‌ ಮಾಡಿದ ಧೋನಿ (Dhoni Finishes Off In Style)

ಕ್ಯಾನ್ಸರ್‌ ಜತೆಗೇ ವಿಶ್ವಕಪ್‌ ಆಡಿದ ಯುವಿ ಎಂಬ ಹೋರಾಟಗಾರ

262 ರನ್‌, 9 ವಿಕೆಟ್‌, ಅತ್ಯದ್ಭುತ ಫೀಲ್ಡಿಂಗ್‌. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ, ಅದರ ಲಕ್ಷಣಗಳು ನೋವಿನ ಮೂಲಕ ಬಾಧಿಸುತ್ತಿದ್ದರೂ, ಒಬ್ಬರೇ ಒಬ್ಬರ ಗಮನಕ್ಕೆ ಬಾರದಂತೆ ವಿಶ್ವಕಪ್‌ನಲ್ಲಿ ಆಡಿದ ಯುವರಾಜ್‌ ಸಿಂಗ್‌ ಖಂಡಿತವಾಗಿಯೂ 2011ರ ವಿಶ್ವಕಪ್‌ ಹೀರೊ. ಟೂರ್ನಿಯುದ್ದಕ್ಕೂ ತಂಡಕ್ಕೆ ಆಲ್ರೌಂಡ್‌ ಪ್ರದರ್ಶನ ನೀಡಿ, ಪಂದ್ಯಗಳ ಗೆಲುವಿಗೆ ಕಾರಣರಾದ ಯುವಿ ಮ್ಯಾನ್‌ ಆಫ್ ದಿ ಸಿರೀಸ್‌ ಪ್ರಶಸ್ತಿ ಪಡೆದರು. ವಿಶ್ವಕಪ್‌ ಗೆದ್ದ ಬಳಿಕವೇ ಯುವಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಲಂಗ್‌ ಕ್ಯಾನ್ಸರ್‌ ಮೊದಲ ಸ್ಟೇಜ್‌ನಲ್ಲಿದೆ ಎಂಬುದು ಗೊತ್ತಾಯಿತು. ಆದರೇನಂತೆ, 2011ರ ವಿಶ್ವಕಪ್‌ ವೇಳೆ ಮೈದಾನದಲ್ಲಿ ವೀರನಂತೆ ಹೋರಾಡಿದ ಯುವರಾಜ್‌ ಸಿಂಗ್‌, ಕ್ಯಾನ್ಸರ್‌ ವಿರುದ್ಧವೂ ಹೋರಾಡಿದರು. ವಿಶ್ವಕಪ್‌ ಗೆದ್ದ ವರ್ಷವೇ ಎದೆಗುಂದದೆ, ಹಿಂದಡಿ ಇಡದೆ ಚಿಕಿತ್ಸೆ ಪಡೆದ ಯುವಿ, ಕ್ಯಾನ್ಸರ್‌ಅನ್ನೂ ಗೆದ್ದು 2012ರಲ್ಲಿ ತಂಡಕ್ಕೆ ಮರಳಿದರು. ಕ್ಯಾನ್ಸರ್‌ ನೋವು ಕಾಣಿಸಿಕೊಂಡರೂ ಆಟದ ಮೇಲೆ ಗಮನ ಹರಿಸಿದ ಯುವಿಯನ್ನು ನಾವೆಲ್ಲ ಅಂಕಿ-ಅಂಶಗಳಾಚೆ, ಆಟಗಾರರ ನಡುವಿನ ಹೋಲಿಕೆಗಳ ಆಚೆ ಇಷ್ಟಪಡುವುದು ಇದೇ ಕಾರಣಕ್ಕೆ!

ಕ್ರಿಕೆಟ್‌ ದೇವರಿಗೆ ವಿಶ್ವಕಪ್‌ ಉಡುಗೊರೆ

ಭಾರತ ಕ್ರಿಕೆಟ್‌ ತಂಡಕ್ಕೆ 2 ದಶಕಗಳವರೆಗೆ ಅಪಾರ ಕೊಡುಗೆ ನೀಡಿದ, ಶತಕೋಟಿ ಭಾರತೀಯರ ನಿರೀಕ್ಷೆಗಳನ್ನು ಹೊತ್ತುಕೊಂಡು ಆಟವಾಡಿದ, ಪ್ರತಿ ಬಾರಿ ಬ್ಯಾಟ್‌ ಹಿಡಿದು ಮೈದಾನಕ್ಕೆ ಬಂದಾಗಲೂ ಖುರ್ಚಿಯ ತುದಿಗೆ ಕೂರುವಂತೆ ಮಾಡಿದ, ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಗೂ ವಿಶ್ವಕಪ್‌ ಗೆಲ್ಲದ ಕೊರಗಿತ್ತು. ಆದರೆ, 2011ರಲ್ಲಿ ಆ ಕೊರಗನ್ನು ಭಾರತ ತಂಡ ನೀಗಿಸಿತು. ಫೈನಲ್‌ ಗೆದ್ದ ಬಳಿಕ ಕಪ್‌ ಎತ್ತುವ ಮೊದಲು ವಿರಾಟ್‌ ಕೊಹ್ಲಿ, ಯುಸುಫ್‌ ಪಠಾಣ್‌ ಸೇರಿ ಹಲವರು ಸಚಿನ್‌ ತೆಂಡೂಲ್ಕರ್‌ ಎಂಬ ವಾಮನ ಮೂರ್ತಿಯನ್ನು ಮೈದಾನದ ಸುತ್ತಲೂ ಹೊತ್ತು ತಿರುಗಿದರು.

ಅಷ್ಟೇ ಅಲ್ಲ, ತಂಡದ ಆಟಗಾರರು ಇಡೀ ವಿಶ್ವಕಪ್‌ ಗೆಲುವನ್ನು ಸಚಿನ್‌ ತೆಂಡೂಲ್ಕರ್‌ ಅವರಿಗೆ ಅರ್ಪಿಸಿದರು. “21 ವರ್ಷಗಳವರೆಗೆ ದೇಶದ ಜನರ ನಿರೀಕ್ಷೆಗಳ ಭಾರವನ್ನು ತೆಂಡೂಲ್ಕರ್‌ ಹೊತ್ತುಕೊಂಡರು. ಈಗ ನಾವು ಅವರನ್ನ ಹೊತ್ತುಕೊಂಡು ತಿರುಗುವ ಸಮಯ ಬಂದಿದೆ” ಎಂದು ವಿರಾಟ್‌ ಕೊಹ್ಲಿ ಹೇಳಿದರು. “ನಾವು ನಿಜವಾಗಿಯೂ ಸಾಧಿಸಿದ್ದೇವೆ. ವಿಶ್ವಕಪ್‌ ಸಚಿನ್‌ ತೆಂಡೂಲ್ಕರ್‌ಗೆ ಅರ್ಪಣೆ” ಎಂದು ಯುವರಾಜ್‌ ಸಿಂಗ್‌ ಭಾವುಕರಾದರು. ಗೌತಮ್‌ ಗಂಭೀರ್‌ ಕೂಡ ಗೆಲುವನ್ನು ಮಾಸ್ಟರ್‌ ಬ್ಲಾಸ್ಟರ್‌ಗೆ ಅರ್ಪಿಸಿದರು. ಇದರೊಂದಿಗೆ ಭಾರತದ 28 ವರ್ಷಗಳ ಕನಸು ನನಸು ನನಸಾಯಿತು. 1983ರಷ್ಟೇ 2011ನೇ ಇಸವಿ ಕೂಡ ಚಿರಸ್ಥಾಯಿಯಾಯಿತು.

ವಿಶ್ವಕಪ್‌ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version