ಢಾಕಾ : ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (INDvsBAN) ಎರಡನೇ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್ಗಳ ವೀರೋಚಿತ ಜಯ ಸಾಧಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಹಾದಿಯಲ್ಲಿ ಪ್ರಗತಿ ಸಾಧಿಸಲು ಭಾರತ ತಂಡಕ್ಕೆ ಸಾಧ್ಯವಾಯಿತು. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾವನ್ನು 188 ರನ್ಗಳಿಂದ ಬಗ್ಗು ಬಡಿದಿತ್ತು.
ರೋಚಕವಾಗಿ ನಡೆದ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಭಾರತ ತಂಡ ಸತತವಾಗಿ ವಿಕೆಟ್ ಕಳೆದುಕೊಂಡಿತು. 145 ರನ್ಗಳ ಗೆಲುವಿನ ಗುರಿಗೆ ಪ್ರತಿಯಾಗಿ ಆಡುತ್ತಿದ್ದ ಭಾರತ 74 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಾಗ ವಿಜಯ ಕೈತಪ್ಪುವುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಶ್ರೇಯಸ್ ಅಯ್ಯರ್ (29) ಹಾಗೂ ಆರ್. ಅಶ್ವಿನ್ (42) ಭಾರತಕ್ಕೆ ಜಯ ತಂದುಕೊಟ್ಟರು. ಏತನ್ಮಧ್ಯೆ, ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಬ್ಯಾಟಿಂಗ್ ವೈಫಲ್ಯ ಎದುರಿಸಿ ಟೀಕೆಗೆ ಒಳಗಾದರು. ಸಣ್ಣ ಮೊತ್ತವನ್ನು ಬೆನ್ನಟ್ಟುವ ವೇಳೆ ಪರದಾಡಿ ಅಪಹಾಸ್ಯಕ್ಕೆ ಒಳಗಾದರು. ಕೊನೇ ಹಂತದಲ್ಲಿ ಅಶ್ವಿನ್ ಮತ್ತು ಶ್ರೇಯಸ್ ಜೋಡಿ 8 ವಿಕೆಟ್ಗೆ 71 ರನ್ಗಳ ಜತೆಯಾಟ ನೀಡಿದರು. ಇವರ ಸಾಹಸದಿಂದ 47 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿತು.
ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್ನಲ್ಲಿ 227 ರನ್ ಬಾರಿಸಿದ್ದರೆ, ಎರಡನೇ ಇನಿಂಗ್ಸ್ನಲ್ಲಿ 231 ರನ್ ಗಳಿಸಿತ್ತು. ಭಾರತ ಮೊದಲ ಇನಿಂಗ್ಸ್ನಲ್ಲಿ 314 ರನ್ ಬಾರಿಸಿತ್ತು.
ಇದನ್ನೂ ಓದಿ | Kuldeep Yadav | ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ ಕುಲ್ದೀಪ್ ಯಾದವ್ ಸಾಧನೆಗಳಿವು