ಕೋಲ್ಕೊತಾ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಈ ಮೂಲಕ ಆತಿಥೇಯ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿತು. ತಿರುವನಂತಪುರದಲ್ಲಿ ಜನವರಿ 15ರಂದು ಕೊನೇ ಪಂದ್ಯ ನಡೆಯಲಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 39.4 ಓವರ್ಗಳಲ್ಲಿ 215 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ 43. ಓವರ್ಗಳಲ್ಲಿ 6 ವಿಕೆಟ್ಗೆ 219 ರನ್ ಬಾರಿಸಿ ಗೆಲುವು ಕಂಡಿತು. ಆರಂಭದಲ್ಲಿ ಭಾರತ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡ ಹೊರತಾಗಿಯೂ ಕೆ ಎಲ್ ರಾಹುಲ್ (64) ಅಜೇಯ ಅರ್ಧ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದರು.
ಸಣ್ಣ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡದ ಸತತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ (28) ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ನಿಂತರು. ಬಳಿಕ ಹಾರ್ದಿಕ್ ಪಾಂಡ್ಯ (36) ರಾಹುಲ್ ಜತೆ ಸೇರಿ ಮಧ್ಯಮ ಕ್ರಮಾಂಕದಲ್ಲಿ 75 ರನ್ಗಳ ಜತೆಯಾಟ ನೀಡಿದರು. ಇದು ಭಾರತ ತಂಡದ ಪಾಲಿನ ವಿಜಯ ಜತೆಯಾಟ ಎನಿಸಿಕೊಂಡಿತು. ಬಳಿಕ ಅಕ್ಷರ್ ಪಟೇಲ್ 21 ರನ್ಗಳ ಕೊಡುಗೆ ಕೊಟ್ಟರು.
ಭಾರತದ ಬೌಲರ್ಗಳ ಅಬ್ಬರ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಭಾರತೀಯ ಬೌಲರ್ಗಳ ಅಬ್ಬರಕ್ಕೆ ನಲುಗಿದರು. ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಹೊರತಾಗಿಯೂ ಬಳಿಕ ಸತತವಾಗಿ ವಿಕೆಟ್ಗಳನ್ನು ಕಳೆದಕೊಂಡಿತು. ನುವಾನಿದು ಫೆರ್ನಾಂಡೊ (50) ಲಂಕಾ ಪರ ಅರ್ಧ ಶತಕ ಬಾರಿಸಿದರು. ಕುಸಾಲ್ ಮೆಂಡಿಸ್ (34), ದುನಿತ್ ವೆಲ್ಲಲಗೆ (32) ತಂಡದ ಮೊತ್ತ 200 ರನ್ಗಳ ಗಡಿ ದಾಟಲು ನೆರವಾದರು.
ಭಾರತ ಪರ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜಾ್ (30ಕ್ಕೆ3), ಉಮ್ರಾನ್ ಮಲಿಕ್ (48ಕ್ಕೆ2), ಕುಲ್ದೀಪ್ ಯಾದವ್ (52ಕ್ಕೆ3) ಉತ್ತಮ ಪ್ರದರ್ಶನ ತೋರಿದರು.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಮೂರು ವಿಕೆಟ್ ಕಿತ್ತು ವಿಶೇಷ ಸಾಧನೆ ಮಾಡಿದ ಕುಲ್ದೀಪ್ ಯಾದವ್!