ಬುಡಾಪೆಸ್ಟ್: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ(World Athletics Championships) ಭಾರತಕ್ಕೆ ಮಿಶ್ರ ಫಲಿತಾಂಶ ದಾಖಲಾಯಿತು. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ(Neeraj Chopra) ಐತಿಹಾಸಿಕ ಚಿನ್ನ ಗೆದ್ದರೆ, ರಿಲೇ ಓಟಗಾರರ ತಂಡ 5ನೇ ಸ್ಥಾನ ಪಡೆಯಿತು. ಮೂರು ಸಾವಿರ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ(Parul Chaudhary) 11ನೇ ಸ್ಥಾನ ಪಡೆದರೂ ನೂತನ ರಾಷ್ಟ್ರೀಯ(National Record) ದಾಖಲೆಯೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ(Paris Olympics) ಅರ್ಹತೆ ಪಡೆದರು. ಕೊರೊನಾ ಪಾಸಿಟಿವ್ ಆಗಿ ಆ ಬಳಿಕದ ಟೂರ್ನಿಯಲ್ಲಿ ಪಾಲ್ಗೊಳ್ಳಲಾಗದೆ ಶ್ರೇಯಾಂಕ ಪಟ್ಟಿಯಲ್ಲಿ ಕೇವಲ ಒಂದು ಅಂಕದ ಹಿನ್ನಡೆಯಿಂದ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಆದರೆ ಈ ಬಾರಿ ಒಲಿಂಪಿಕ್ಸ್ ಟಿಕೆಟ್ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ.
5ನೇ ಸ್ಥಾನ ಪಡೆದರೂ ಉತ್ತಮ ಪ್ರದರ್ಶನ
ಯಾರೂ ಊಹಿಸದ ರೀತಿಯಲ್ಲಿ ಫೈನಲ್ ತಲುಪಿದ್ದ ಭಾರತೀಯ ಪುರುಷರ 4×400 ರಿಲೇ ತಂಡ ಫೈನಲ್ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅರ್ಹತಾ ಸುತ್ತಿನಲ್ಲಿ ಜಪಾನ್ ಹೆಸರಿನಲ್ಲಿದ್ದ 2:59.51 ಸೆಕೆಂಡ್ನ ಏಷ್ಯನ್ ದಾಖಲೆ ಮುರಿದು ಭಾರತ ತಂಡ(2:59.05 ಸೆಕೆಂಡ್‌ಗಳಲ್ಲಿ) ಎರಡನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ 2:59.92 ಸೆಕೆಂಡ್‌ಗಳಲ್ಲಿ ಓಡಿ 5ನೇ ಸ್ಥಾನ ಪಡೆದರು. ಯುಎಸ್ಎ ಚಿನ್ನದ ಪದಕ ಜಯಿಸಿತು. ಭಾರತ ಪರ ಮುಹಮ್ಮದ್ ಅನಾಸ್, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ರಿಲೇ ಓಡಿದ ಕ್ರೀಡಾಪಟುಗಳು.
ಇದನ್ನೂ ಓದಿ World Championships: ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದ ನೀರಜ್ ಚೋಪ್ರಾ; ಕನ್ನಡಿಗ ಮನುಗೆ 6ನೇ ಸ್ಥಾನ
ರಾಷ್ಟ್ರೀಯ ದಾಖಲೆ ಬರೆದ ಚೌಧರಿ
ಭಾರತದ ಸ್ಟಾರ್ ಸ್ಟೀಪಲ್‌ಚೇಸ್ ಓಟಗಾರ್ತಿ ಪಾರುಲ್ ಚೌಧರಿ ಅವರು 11ನೇ ಸ್ಥಾನ ಪಡೆದರೂ ನೂತನ ರಾಷ್ಟ್ರೀಯ ದಾಖಲೆ ಬರೆದರು. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಲಲಿತಾ ಬಾಬರ್ ಅವರು 9:19.76 ಸೆಕೆಂಡ್‌ಗಳಲ್ಲಿ ಗುರಿ ಮಿಟ್ಟಿದ್ದು ಇದುವರೆಗಿನ ರಾಷ್ಟ್ರೀಯ ದಾಖಲೆಯಾಗಿತ್ತು. ಆದರೆ ಪಾರುಲ್ 9:15.31 ಸೆಕೆಂಡ್‌ಗಳನ್ನು ಓಟವನ್ನು ಪೂರ್ಣಗೊಳಿಸಿ ನೂತನ ರಾಷ್ಟ್ರೀಯ ದಾಖಲೆ ಬರೆದರು. ಜತೆಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು. ಒಲಿಂಪಿಕ್ಸ್ ಅರ್ಹತೆಗೆ 9:23.00 ಸೆಕೆಂಡ್‌ಗಳ ಮಾನದಂಡವಾಗಿತ್ತು. ಆದರೆ ಚೌಧರಿ ದಾಖಲೆಯ ಓಟದ ಮೂಲಕ ಒಲಿಂಪಿಕ್ ಟಿಕೆಟ್ ಪಡೆದರು.
ಚಿನ್ನ ಗೆದ್ದ ನೀರಜ್ ಚೋಪ್ರಾ
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಚಿನ್ನದ ಪದಕ್ಕೆ ಗುರಿ ಇಟ್ಟಿದ್ದಾರೆ. 88.17 ಮೀ. ದೂರ ಜಾವೆಲಿನ್ ಎಸೆದು(Javelin Throw) ಚೊಚ್ಚಲ ಮತ್ತು ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದರು. ಇದುವರೆಗೆ ದೇಶದ ಇತರ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದಿಂದ ಮಂಕು ಕವಿದಿದ್ದ ಭಾರತೀಯ ಪಾಳೆಯದಲ್ಲಿ ನೀರಜ್ ಅವರ ಸಾಧನೆ ನವೋಲ್ಲಾಸ ಮೂಡಿಸಿದೆ.
ಕನ್ನಡಿಗ ಡಿ. ಮನುಗೆ 6ನೇ ಸ್ಥಾನ
ಕನ್ನಡಿಗ ಡಿ. ಮನು(84.14 ಮೀ.) 6ನೇ ಸ್ಥಾನ ಪಡೆದರೆ, ಮತ್ತೋರ್ವ ಭಾರತೀಯ ಜೇನಾ(84.77 ಮೀ.) 5ನೇ ಸ್ಥಾನಿಯಾದರು. ಪಾಕಿಸ್ತಾನದ ಅರ್ಷದ್ ನದೀಮ್(87.82 ಮೀ) ಬೆಳ್ಳಿ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್(86.67 ಮೀ) ಕಂಚಿನ ಪದಕ ಗೆದ್ದರು. ಜರ್ಮನಿಯ ಬಲಿಷ್ಠ ಆಟಗಾರ ಜೂಲಿಯನ್ ವೆಬರ್(85.79 ಮೀ) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.