Site icon Vistara News

IPL 2024 : ಅಂತಾರಾಷ್ಟ್ರೀಯ ಕ್ರಿಕೆಟ್​ ನಿವೃತ್ತಿ ಬಳಿಕ ಐಪಿಎಲ್​ನಲ್ಲಿ ಮಿಂಚಿದ ಆಟಗಾರರು ಇವರು

Shane warne

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಲವಾರು ಯುವ ಕ್ರಿಕೆಟಿಗರ ವೃತ್ತಿಜೀವನ ಆರಂಭಕ್ಕೆ ಕಾರಣವಾಗಿದೆ. ರಾಷ್ಟ್ರೀಯ ತಂಡಗಳಿಗೆ ಪ್ರವೇಶಿಸಲು ಅವರಿಗೆ ಸಹಾಯ ಮಾಡಿದೆ. ಅದಕ್ಕಾಗಿ ಯುವ ಕ್ರಿಕೆಟಿಗರು ಐಪಿಎಲ್​​ಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಿದ್ದಾರೆ. ಭಾರತ ತಂಡ ಸೇರಿದಂತೆ ಹಲವಾರು ತಂಡಗಳಲ್ಲಿ ಐಪಿಎಲ್​ನಲ್ಲಿ ಮಿಂಚಿದ ಆಟಗಾರರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಈ ಲಾಭದಾಯಕ ಟೂರ್ನಿಯು ಕ್ರಿಕೆಟಿಗರಿಗೆ ತಮ್ಮ ವೈಯುಕ್ತಿಕ ಜೀವನ ಉದ್ಧಾರ ಮಾಡಲು ವೇದಿಕೆ ಒದಗಿಸಿದೆ. ಐಪಿಎಲ್​ 2024ರ (IPL 2024 ) ಆವೃತ್ತಿ ಆರಂಭಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿವೆ ಇವೆಲ್ಲದರ ನಡುವೆಯೂ ಕೆಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಬಳಿಕ ಐಪಿಎಲ್​ನಲ್ಲಿ ಮಿಂಚಿದ್ದಾರೆ. ಅಂಥ ಕೆಲವು ಆಟಗಾರರ ವಿವರ ಇಲ್ಲಿದೆ.

ಫಾಫ್ ಡು ಪ್ಲೆಸಿಸ್

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ನಂತರದಿಂದ ಫಾಫ್ ಡು ಪ್ಲೆಸಿಸ್ ವಿಶ್ವಾದ್ಯಂತ ಟಿ 20 ಲೀಗ್​​ಗಳಲ್ಲಿ ವಿಶೇಷವಾಗಿ ಐಪಿಎಲ್​​ನಲ್ಲಿ ನಿರತರಾಗಿದ್ದಾರೆ. ಐಪಿಎಲ್​​ನ ಕಳೆದ ಮೂರು ಋತುಗಳಲ್ಲಿ ಅವರು 633, 468 ಮತ್ತು 730 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 17 ಅರ್ಧಶತಕಗಳಿವೆ ಗರಿಷ್ಠ ಸ್ಕೋರ್ 96. ಇದು ಐಪಿಎಲ್ 2022 ರಲ್ಲಿ ಮೂಡಿ ಬಂದಿದೆ. ದೀರ್ಘಕಾಲದ ನಾಯಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ಅವರನ್ನು ತಂಡಕ್ಕೆ ಕರೆತರಲಾಗಿದೆ.

ಶೇನ್ ವ್ಯಾಟ್ಸನ್

ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಶೇನ್ ವ್ಯಾಟ್ಸನ್ 2015 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಅವರು 2007 ಮತ್ತು 2015 ರಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದ ಆಸೀಸ್ ಪರ ಸುದೀರ್ಘ ವೃತ್ತಿಜೀವನ ಕಂಡಿದ್ದಾರೆ. ಅವರು 59 ಟೆಸ್ಟ್ ಪಂದ್ಯಗಳಲ್ಲಿ 3,731 ರನ್, 190 ಏಕದಿನ ಪಂದ್ಯಗಳಲ್ಲಿ 5,757 ರನ್ ಮತ್ತು 58 ಟಿ 20 ಪಂದ್ಯಗಳಲ್ಲಿ 1,462 ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 291 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ನಿವೃತ್ತಿಯ ನಂತರವೂ ಅವರು ಐಪಿಎಲ್ ಮತ್ತು ಇತರ ಟಿ 20 ಲೀಗ್​ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ಆರ್​ಸಿಬಿ ಮತ್ತು ಸಿಎಸ್​ಕೆ ಪರ ಆಡಿದ್ದರು. ಫೈನಲ್​ನಲ್ಲಿ ಶತಕ ಬಾರಿಸುವ ಮೂಲಕ 2018ರಲ್ಲಿ ಸಿಎಸ್​ಕೆಗೆ ಕಪ್ ಗೆಲ್ಲಲು ನೆರವಾಗಿದ್ದರು.

ಎಂ ಎಸ್​ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಎಲ್ಲಾ ಆವೃತ್ತಿಗಳಲ್ಲಿ ಆಡಿದ ಕೆಲವೇ ಆಟಗಾರರಲ್ಲಿ ಎಂಎಸ್ ಧೋನಿ ಕೂಡ ಒಬ್ಬರು. ಅವರು ಐಪಿಎಲ್ ಋತುಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 2008-2015ರವರೆಗೆ ಸಿಎಸ್​ಕೆ 2016ರಲ್ಲಿ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್​​ ತಂಡವನ್ನು ಮುನ್ನಡೆಸಿದ್ದಾರೆ.

ರಾಂಚಿ ಮೂಲದ ಅನುಭವಿ ಆಟಗಾರ 2020 ರಲ್ಲಿ ಅಂತಾರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರು ಮತ್ತು 2021 ಮತ್ತು 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ನಿವೃತ್ತಿಯ ನಂತರ ಹಿಂದಿನ ಮೂರು ಐಪಿಎಲ್ ಋತುಗಳಲ್ಲಿ ಭಾರತದ ಮಾಜಿ ನಾಯಕನ ಬ್ಯಾಟಿಂಗ್ ಉನ್ನತ ಮಟ್ಟದಲ್ಲಿಲ್ಲ. ಆದರೆ ಇಷ್ಟು ವರ್ಷಗಳ ಹೊರತಾಗಿಯೂ ಅವರು ಐಪಿಎಲ್​​ನಲ್ಲಿ ಅತ್ಯುತ್ತಮ ನಾಯಕ.

ಆ್ಯಡಂ ಗಿಲ್​ಕ್ರಿಸ್ಟ್​​​

2008ರ ಐಪಿಎಲ್ ಹರಾಜಿನಲ್ಲಿ ಆಡಮ್ ಗಿಲ್​ಕ್ರಿಸ್ಟ್​​ ಅವರನ್ನು ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿ ಖರೀದಿಸಿತ್ತು. ವಿವಿಎಸ್ ಲಕ್ಷ್ಮಣ್ ಅವರಿಂದ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಐಪಿಎಲ್ 2009ರ ಟ್ರೋಫಿಯತ್ತ ತಂಡವನ್ನು ಮುನ್ನಡೆಸಿದರು. ಗಿಲ್​ಕ್ರಿಸ್ಟ್​​ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 1996-2008ರ ಅವಧಿಯಲ್ಲಿ ಆಸ್ಟ್ರೇಲಿಯಾ ಪರ 96 ಟೆಸ್ಟ್, 287 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಗಿಲ್​ಕ್ರಿಸ್ಟ್​ ಡೆಕ್ಕನ್ ಚಾರ್ಜರ್ಸ್​ ಪರ ಹೆಚ್ಚು ಯಶಸ್ಸು ಹೊಂದಿದ್ದಾರೆ. 2013ರಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಮೊದಲು ಪಂಜಾಬ್ ಕಿಂಗ್ಸ್ (ಕಿಂಗ್ಸ್ ಇಲೆವೆನ್ ಪಂಜಾಬ್) ಗೆ ಸೇರಿದರು. ಅವರು 80 ಪಂದ್ಯಗಳಲ್ಲಿ 27.22 ಸರಾಸರಿ ಮತ್ತು 138.39 ಸ್ಟ್ರೈಕ್ ರೇಟ್ನಲ್ಲಿ 2069 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 109* ಮತ್ತು ಅವರು ತಮ್ಮ ವೃತ್ತಿಜೀವನದಲ್ಲಿ 2 ಶತಕಗಳು ಮತ್ತು 11 ಅರ್ಧಶತಕಗಳನ್ನು ಗಳಿಸಿದ್ದಾರೆ.

ಶೇನ್​ ವಾರ್ನ್​​

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ 2007 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಸೇರಿಕೊಂಡರು. ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಮತ್ತು 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್​ ಆಟದ ದಂತಕಥೆಯಾಗಿದ್ದರು. ಅವರು 2022 ರಲ್ಲಿ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಇದನ್ನೂ ಓದಿ : Virat Kohli: ಟಿ20 ವಿಶ್ವಕಪ್​ಗೆ ವಿರಾಟ್​ ಕೊಹ್ಲಿ ಅನುಮಾನ; ಆಯ್ಕೆ ಸಮಿತಿ ಯೋಜನೆ ಏನು?

ವಾರ್ನ್​ ರಾಜಸ್ಥಾನ್ ರಾಯಲ್ಸ್ ನಾಯಕ ಮತ್ತು ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಉದ್ಘಾಟನಾ ಆವೃತ್ತಿಯಲ್ಲಿಯೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಾಯಕ ಅವರು. ವಾರ್ನ್ ಅವರನ್ನು ನಾಯಕನನ್ನಾಗಿ ಮಾಡದಿರುವ ಮೂಲಕ ಆಸ್ಟ್ರೇಲಿಯಾ ಏನನ್ನು ಕಳೆದುಕೊಂಡಿದೆ ಎಂಬುದಕ್ಕೆ ವಾರ್ನ್ ಐಪಿಎಲ್​ ಮೂಲಕ ಉತ್ತರ ಕೊಟ್ಟಿದ್ದರು. ವಾರ್ನ್ 2008-2011ರ ಅವಧಿಯಲ್ಲಿ 55 ಪಂದ್ಯಗಳನ್ನು ಆಡಿದ್ದು, 57 ವಿಕೆಟ್​ ಉರುಳಿಸಿದ್ದಾರೆ.

Exit mobile version