ಜೈಪುರ: ಐಪಿಎಲ್ 16ನೇ ಆವೃತ್ತಿಯ (IPL 2023) 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 112 ರನ್ಗಳ ಹೀನಾಯ ಸೋಲಿಗೆ ಒಳಗಾಗಿದೆ. ಟಾಸ್ ಗೆದ್ದ ಫಾಫ್ ಡು ಪ್ಲೆಸಿಸ್ ಬಳಗ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 10.3 ಓವರ್ಗಳಲ್ಲಿ 59 ರನ್ಗಳಿಗೆ ಆಲ್ಔಟ್ ಆಯಿತು.
ಇದು ಐಪಿಎಲ್ ಇತಿಹಾಸದ ಮೂರನೇ ಕನಿಷ್ಠ ಮೊತ್ತ. ಅಂದ ಹಾಗೆ ಐಪಿಎಲ್ ಕನಿಷ್ಠ ಮೊತ್ತಗಳ ಪಟ್ಟಿಯಲ್ಲಿ ಆರ್ಸಿಬಿಯೇ ಮೊದಲ ಸ್ಥಾನದಲ್ಲಿದೆ 2017ರ ಆವೃತ್ತಿಯಲ್ಲಿ ಕೆಕೆಅರ್ ವಿರುದ್ಧ ಆರ್ಸಿಬಿ ಕನಿಷ್ಠ ಮೊತ್ತದ ಕಳಪೆ ದಾಖಲೆ ಮಾಡಿತ್ತು. ಎರಡನೇ ಸ್ಥಾನವನ್ನು ರಾಜಸ್ಥಾನ್ ತಂಡವೇ ಹೊಂದಿದೆ. 2009ರ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧವೇ ಆರ್ಆರ್ ತಂಡ 58 ರನ್ಗಳಿಗೆ ಆಲ್ಔಟ್ ಆಗಿತ್ತು. ಈ ಫಲಿತಾಂಶಗಳ ಬಳಿಕ ಎರಡೂ ತಂಡಗಳು ಟ್ರೋಲ್ಗೆ ಒಳಗಾದವು. ಸೋಶಿಯಲ್ ಮೀಡಿಯಾಗಳಲ್ಲಿ 49 ತಂಡವನ್ನು ಭೇಟಿಯಾದ 59 ತಂಡ ಎಂಬ ಮಿಮ್ಸ್ಗಳು ಶುರುವಾದವು.
ಆರ್ಸಿಬಿ ತಂಡವೇ ಕನಿಷ್ಠ ಮೊತ್ತದ ಕೆಟ್ಟ ದಾಖಲೆಯನ್ನು ಹೊಂದಿದೆ. ಇದೇ ತಂಡದ ವಿರುದ್ಧ ರಾಜಸ್ಥಾನ್ ತಂಡವೂ 59 ರನ್ಗೆ ಔಟಾಗಿದೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಬೃಹತ್ ರನ್ಗಳ ಗೆಲುವಿನೊಂದಿಗೆ, ಆರ್ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ, ಈಗ 0.166 ನೆಟ್ ರನ್ ರೇಟ್ ಹೊಂದಿದೆ. ಆರ್ಸಿಬಿಗೆ ತವರಿನಲ್ಲಿ ಆಡಲು ಇನ್ನೂ ಎರಡು ಪಂದ್ಯಗಳಿವೆ. ಇದು ಆರ್ಸಿಬಿ ಅಭಿಮಾನಿಗಳಿಗೆ ಪ್ಲೇಆಫ್ ಅರ್ಹತೆಯ ಭರವಸೆಯನ್ನು ನೀಡಿದೆ. ಮತ್ತೊಂದೆಡೆ, ರಾಜಸ್ಥಾನ್ ತಂಡ ಪ್ಲಸ್ ರನ್ರೇಟ್ನೊಂದಿಗೆ ಆರನೇ ಸ್ಥಾನದಲ್ಲಿದೆ. ಆರ್ಸಿಬಿ ಎರಡೂ ಪಂದ್ಯಗಳಲ್ಲಿ ಸೋತರೆ ರಾಜಸ್ಥಾನ್ ತಂಡಕ್ಕೂ ಗೆಲುವಿನ ಅವಕಾಶವಿದೆ.
ಪಂದ್ಯದ ಬಳಿಕ ಮಾತನಾಡಿದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಂಡದ ಪಜೀತಿಯನ್ನು ವಿವರಿಸಿದ್ದಾರೆ. ನಮ್ಮ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಮಿಂಚುವ ಭರವಸೆ ನಮಗಿತ್ತು. ಆದರೆ, ಪವರ್ಪ್ಲೇನಲ್ಲಿ ನಾವು ಸತತವಾಗಿ ವಿಕೆಟ್ ಒಪ್ಪಿಸಿದೆವು. ಚೆಂಡು ಹಳೆಯದಾಗುತ್ತಿದ್ದಂತೆ ಹೆಚ್ಚು ತಿರುವು ಪಡೆಯಲು ಆರಂಭಿಸಿತು. ಹೆಚ್ಚು ರನ್ ಗಳಿಸುವ ಒತ್ತಡವಿದ್ದ ಕಾರಣ ದೊಡ್ಡ ಹೊಡೆತಗಳಿಗೆ ಮುಂದಾಗಿ ಸೋಲಿಗೆ ಒಳಗಾಗಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಆರ್ಸಿಬಿ ಅಬ್ಬರ
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ವಿರಾಟ್ ಕೊಹ್ಲಿ 18 ರನ್ಗಳಿಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಹೊಂದಿತು. ಆದರೆ, ನಾಯಕ ಫಾಫ್ ಡು ಪ್ಲೆಸಿಸ್ (55) ಹಾಗೂ ಗ್ಲೆನ್ ಮ್ಯಾಕ್ಸ್ವೆ್ (54) ರನ್ ಸಿಡಿಸಿ ದೊಡ್ಡ ಮೊತ್ತಕ್ಕೆ ಮುನ್ನುಡಿ ಬರೆದರು. ಅನುಜ್ ರಾವತ್ 11 ಎಸೆತಗಳಲ್ಲಿ 29 ರನ್ ಬಾರಿಸಿದ ಕಾರಣ ಆರ್ಸಿಬಿಗೆ 172 ರನ್ ಪೇರಿಸಲು ಸಾಧ್ಯವಾಯಿತು.
ಪ್ರತಿಯಾಗಿ ಆಡಿದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ತಲಾ ಎರಡು ಎಸೆತಗಳಲ್ಲಿ ಶೂನ್ಯಕ್ಕೆ ಔಟಾದರು. ಅಲ್ಲದೆ ಕೇವಲ ನಾಲ್ಕು ರನ್ಗಳಿಗೆ ಅಗ್ರ 3 ಸ್ಥಾನಗಳನ್ನು ಕಳೆದುಕೊಂಡಿತು. ಪವರ್ಪ್ಲೇನಲ್ಲಿ ಅಂತ್ಯದ ವೇಳೆಗೆ ಅವರು ಇನ್ನೂ ಎರಡು ವಿಕೆಟ್ಗಳನ್ನು ಕಳೆದುಕೊಂಡು ಸಂಪೂರ್ಣ ಹಿನ್ನಡೆ ಅನಭವಿಸಿತು. ಅಂತಿಮವಾಗಿ 59 ರನ್ಗೆ ಆಲ್ಔಟ್ ಆಯಿತು.