ನವ ದೆಹಲಿ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಶಾಲಾ ಬಾಲಕಿಯೊಬ್ಬಳು ಕ್ರಿಕೆಟ್ ಆಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಭರ್ಜರಿಯಾಗಿ ಬ್ಯಾಟ್ ಬೀಸುವ ಆಕೆಯ ವಿಡಿಯೊವನ್ನು ಲಡಾಖ್‌ನ ಶಿಕ್ಷಣ ಇಲಾಖೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಹುಡುಗಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಫ್ಯಾನ್. ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಲಿಕಾಪ್ಟರ್ ಶಾಟ್ ಕೂಡ ಕಲಿಯಬೇಕಂತೆ.
ಭಾರತದಲ್ಲಿ ಲಕ್ಷಾಂತರ ಮಂದಿ ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚುವುದಕ್ಕೆ ಬಯಸುತ್ತಾರೆ. ಆದರೆ, ಕೆಲವೇ ಕೆಲವು ಮಂದಿಗೆ ಮಾತ್ರ ಆಡುವ ಅವಕಾಶ ದೊರಕುತ್ತದೆ. ಈ ಪರಿಸ್ಥಿತಿಯ ನಡುವೆ ಲಡಾಖ್‌ನ ಹುಡುಗಿ ಟೀಮ್ ಇಂಡಿಯಾಕ್ಕೆ ಪ್ರವೇಶಿಸುವ ಕನಸು ಕಂಡಿದ್ದಾಳೆ.
ಬಾಲಕಿ ಕ್ರಿಕೆಟ್ ಆಡುವ ವಿಡಿಯೊವನ್ನು ಪ್ರಕಟಿಸಿರುವ ಲಡಾಖ್ ಶಿಕ್ಷಣ ಇಲಾಖೆ, ೬ನೇ ತರಗತಿಯ ಬಾಲಕಿಯ ಮಕ್ಸೂಮಾ ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಲು ಬಯಸುತ್ತಿದ್ದಾಳೆ ಎಂಬುದಾಗಿ ಬರೆದಿದೆ.
“ಮನೆಯಲ್ಲಿ ನನ್ನ ತಂದೆ ಹಾಗೂ ಶಾಲೆಯಲ್ಲಿ ನನ್ನ ಶಿಕ್ಷಕರು ಕ್ರಿಕೆಟ್ ಆಡಲು ಉತ್ತೇಜನ ನೀಡಿದ್ದಾರೆ. ನಾನು ವಿರಾಟ್ ಕೊಹ್ಲಿ ರೀತಿ ಆಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇನೆ,” ಎಂದು ಮಕ್ಸೂಮಾ ವಿಡಿಯೊದಲ್ಲಿ ಹೇಳಿದ್ದಾಳೆ.
“ಬಾಲ್ಯದಿಂದಲೇ ನಾನು ಕ್ರಿಕೆಟ್ ಆಡುತ್ತಿದ್ದೇನೆ. ಆದರೆ, ಈಗಲೂ ನಾನು ಹೆಲಿಕಾಪ್ಟರ್ ಶಾಟ್ ಹೊಡೆಯುವುದಕ್ಕೆ ಪ್ರಯತ್ನಿಸುತ್ತಿದ್ದೇನೆ. ಎರಡು ರನ್ ಓಡಿದಾಗ ಸಿಕ್ಕಾಪಟ್ಟೆ ಸುಸ್ತಾಗುತ್ತದೆ. ಮೂರನೇ ರನ್‌ಗೆ ಓಡಬೇಕು ಎಂದು ಎನಿಸುವುದಿಲ್ಲ. ವಿರಾಟ್ ಕೊಹ್ಲಿ ನನ್ನ ಫೇವರಿಟ್ ಆಟಗಾರ ಹಾಗೂ ಅವರಂತೆಯೇ ಆಗಬೇಕು ಎಂಬುದು ನನ್ನ ಕನಸು,” ಎಂದು ಮಕ್ಸೂಮಾ ವಿಡಿಯೊದಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ | BCCI President | ಗಂಗೂಲಿಗೆ ಕರ್ಮ ಫಲ ತಟ್ಟಿದೆ ಎನ್ನುತ್ತಿದ್ದಾರೆ ವಿರಾಟ್ ಕೊಹ್ಲಿ ಅಭಿಮಾನಿಗಳು!