ಮಾಸ್ಕೊ (ರಷ್ಯಾ) : ಅದು Chess robot. ಮೊದಲೇ ಲೋಡ್ ಮಾಡಿರುವ ಪ್ರೋಗ್ರಾಮ್ ಪ್ರಕಾರ ಮಾತ್ರ ಕೆಲಸ ಮಾಡುತ್ತದೆ. ತನ್ನೆದುರು ಆಡುತ್ತಿರುವುದು ವ್ಯಕ್ತಿಯೋ ಅಥವಾ ಇನ್ನೊಂದು ರೊಬೊಟ್ ಎಂಬುದಾಗಿಯೂ ನೋಡುವುದಿಲ್ಲ. ಹೀಗಾಗಿ Chess robot ವಿರುದ್ಧ ಆಡುವವರು ಸ್ವಲ್ಪ ಎಚ್ಚರಿಕೆ ವಹಿಸಲೇಬೇಕು. ರೊಬೊಟ್ ಆಡುವ ಮಧ್ಯ ಏನಾದರೂ ಕೈ ಹಾಕಿದರೆ, ಕಾಯಿಯೊ, ಬೆರಳೊ ಎಂದು ನೋಡದೆ ಹಿಡಿದುಕೊಂಡು ಬಿಡುತ್ತದೆ. ಕೂಗಿದರೂ, ಸಾರಿ ಎಂದು ಹೇಳಿದರೂ ಬಿಡುವುದಿಲ್ಲ.
ಇಂಥದ್ದೇ ಒಂದು ಘಟನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಆದರೆ, ಬೆರಳು ಮುರಿಸಿಕೊಂಡಿರುವುದು ಪುಟಾಣಿ ಬಾಲಕ. ಹೀಗಾಗಿ ಇದು ದೊಡ್ಡ ಸುದ್ದಿಯಾಗಿದೆ. ದೊಡ್ಡವರ ಬೆರಳು ಹಿಡಿದರೆ ಮೋಸದಾಟ ಎಂದು ಹೇಳಬಹುದಾಗಿತ್ತು. ಆದರೆ, ಈ ಬಾಲಕ ಆಟದ ಗಮ್ಮತ್ತಿನ ನಡುವೆ ಚೆಸ್ ಬೋರ್ಡ್‌ಗೆ ಕೈಹಾಕಿ ಬೆರಳು ಮುರಿಸಿಕೊಂಡಿದ್ದಾನೆ.
ಘಟನೆ ನಡೆದಿರುವುದು ಜುಲೈ ೧೯ರಂದು. ಮಾಸ್ಕೋದಲ್ಲಿ ಆಯೋಜಿಸಿದ್ದ ಮಾಸ್ಕೋ ಓಪನ್ ಚೆಸ್ ಟೂರ್ನಮೆಂಟ್‌ನಲ್ಲಿ ಏಳು ವರ್ಷದ ಬಾಲಕ ಕ್ರಿಸ್ಟೋಫರ್ ರೊಬೊಟ್‌ನ ದಾಳಿಗೆ ಒಳಗಾಗಿದ್ದಾನೆ. ಅದು ವಿಶೇಷವಾಗಿ ರೂಪಿಸಿರುವ ರೊಬೊಟ್ ಆಗಿದ್ದರೂ ಬಾಲಕ ನಡುವೆ ಕೈ ಹಾಕಿದ ಕಾರಣ ತೊಂದರೆ ಅನುಭವಿಸಬೇಕಾಗಿದೆ.
ಏನಿದು ಅವಾಂತರ?
Chess robot ಆಟದ ನಡುವೆ ಬಾಲಕನ ಪಾನ್ ಅನ್ನು ಉರುಳಿಸಿ ಅದನ್ನು ಬದಿಗೆ ಎತ್ತಿಡುತ್ತಿತ್ತು. ನಂತರ ಅದು ತನ್ನ ಕಾಯಿಯ ನಡೆ ಮುಂದುವರಿಸಬೇಕಾಗಿತ್ತು. ತನ್ನ ಪಾನ್ ಉರುಳಿ ಬೀಳುತ್ತಿದ್ದಂತೆ ಬೇಸರಕ್ಕೆ ಒಳಗಾದ ಬಾಲಕ ಮತ್ತೊಂದು ನಡೆಯನ್ನು ಮುಂದುವರಿಸಲು ಹೋಗಿದ್ದಾನೆ. ಈ ವೇಳೆ ರೊಬೊಟ್ ಆತನ ತೋರು ಬೆರಳನ್ನು ಏಕಾಏಕಿ ಹಿಡಿದಿದೆ. ಅದರ ಹಿಡಿತದಿಂದ ತಪ್ಪಿಸಿಕೊಳ್ಳಲು ಬಾಲಕ ಸಾಕಷ್ಟು ಪ್ರಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ. ಬಳಿಕ ಸ್ಥಳದಲ್ಲಿದ್ದವರು ಹೋಗಿ ಬೆರಳನ್ನು ಬಿಡಿಸಿದ್ದಾರೆ.
ರಷ್ಯಾ ಚೆಸ್ ಒಕ್ಕೂಟ ಈ ಸುದ್ದಿಗೆ ಪ್ರತಿಕ್ರಿಯಿಸಿದ್ದು, ರೊಬೊಟ್ ತನ್ನ ಆಟವನ್ನು ಪೂರ್ತಿಗೊಳಿಸುವ ಮೊದಲೇ ಬಾಲಕ ಕೈ ಹಾಕಿದ ಕಾರಣ ಘಟನೆ ನಡೆದಿದೆ ಎಂದಿದೆ. ಈ ರೀತಿಯ ಘಟನೆ ಇದೇ ಮೊದಲ ಬಾರಿಗೆ ನಡೆಯುತ್ತಿದೆ ಎಂದೂ ತಿಳಿಸಿದೆ.
ಇದೊಂದು ಕಾಕತಾಳೀಯ ಘಟನೆ. ಚೆಸ್ ರೊಬೊಟ್ ಸುರಕ್ಷಿತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇನ್ನೊಂದು ಪ್ರೋಗ್ರಾಮ್ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತಜ್ಞರ ಪ್ರಕಾರ Chess robot ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಕ್ರಿಸ್ಟೋಫರ್ ಮಧ್ಯ ಕೈ ಹಾಕಿದ ವೇಳೆ ಅದು ಕಾಯಿನ್ ಹಿಡಿಯಲು ಮುಂದಾಗಿತ್ತು. ಈ ವೇಳೆ ಕ್ರಿಸ್ಟೋಫರ್‌ನ ಕೈ ಬೆರಳು ಸಿಲುಕಿದೆ.
ಕ್ರಿಸ್ಟೋಫರ್ ಕೂಡ ಪ್ರತಿಭಾವಂತ ಚೆಸ್ ಆಟಗಾರ. ೯ ವರ್ಷದೊಳಗಿನವರ ವಿಭಾಗದಲ್ಲಿ ಮಾಸ್ಕೊದ ಅಗ್ರ ೩೦ ಆಟಗಾರರಲ್ಲಿ ಕ್ರಿಸ್ಟೋಫರ್ ಕೂಡ ಇದ್ದಾನೆ. ನೋವಿನ ನಡುವೆಯೂ ಆಟ ಮುಗಿಸಿಯೇ ವಾಪಸ್ ತೆರಳಿದ್ದಾನೆ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ | ರಜನಿಕಾಂತ್ ಭೇಟಿಯಾದ Grandmaster ಪ್ರಜ್ಞಾನಂದ; ರಾಘವೇಂದ್ರ ಸ್ವಾಮಿ ಫೋಟೊ ಗಿಫ್ಟ್