ವಿಶಾಖಪಟ್ಟಣ: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ 10 ವಿಕೆಟ್ ಹೀನಾಯ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು 1-1 ಸಮಬಲದ ಸಾಧನೆ ಮಾಡಿವೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ಗಳಾದ ಮಿಚೆಲ್ ಮಾರ್ಷ್ (ಅಜೇಯ 66) ಹಾಗೂ ಟ್ರಾವಿಡ್ ಹೆಡ್ (ಅಜೇಯ 51) ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 72 ಎಸೆತಗಳಲ್ಲಿ ಭಾರತ ತಂಡ ನೀಡಿದ್ದ 118 ರನ್ಗಳ ಗುರಿ ಬೆನ್ನಟ್ಟಿತು.
ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ26 ಓವರ್ಗಳಲ್ಲಿ 117 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 121 ರನ್ ಬಾರಿಸಿ ವಿಜಯ ಸಾಧಿಸಿತು.
ಐಸಿಸಿ ಟ್ವೀಟ್ ಇಲ್ಲಿದೆ
ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ಗಳು ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟ್ರಾವಿಡ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಹೆಡ್ ಬಾರಿಸಿದ 51 ರನ್ಗಳಲ್ಲಿ 10 ಫೋರ್ಗಳು ಸೇರಿಕೊಂಡಿದ್ದರೆ, ಮಾರ್ಷ್ ಬಾರಿಸಿದ 66 ರನ್ಗಳಲ್ಲಿ 6 ಫೋರ್ ಹಾಗೂ 6 ಸಿಕ್ಸರ್ ಸೇರಿಕೊಂಡಿವೆ. ಇವರಿಬ್ಬರ ಆಟಕ್ಕೆ ಭಾರತದ ಬೌಲರ್ಗಳು ನಿರುತ್ತರರಾದರು.
ಭಾರತದ ಬ್ಯಾಟಿಂಗ್ ವೈಫಲ್ಯ
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ನಾಯಕತ್ವ ವಹಿಸಿಕೊಂಡರು. ಆದರೆ ಅವರ ಆಗಮನ ತಂಡಕ್ಕೆ ಯಾವುದೇ ಪ್ರಯೋಜನಾಗಲಿಲ್ಲ ಅವರು 13 ರನ್ಗೆ ಆಟ ಮುಗಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟಾಗುವ ಮೂಲಕ ಘೋರ ವೈಫಲ್ಯ ಕಂಡರು. ಮೊದಲ ಪಂದ್ಯದಲ್ಲಿಯೂ ಅವರು ಸ್ಟಾರ್ಕ್ ಎಸೆತಕ್ಕೆ ಶೂನ್ಯ ಸುತ್ತಿದ್ದರು.
ಮುಂಬಯಿ ಪಂದ್ಯದ ಗೆಲುವಿನ ಹೀರೋ ಕೆ.ಎಲ್. ರಾಹುಲ್(9) ಕೂಡ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ವಿರಾಟ್ ಕೊಹ್ಲಿ 31 ರನ್ ಗಳಿಸಿದರು. ಅಂತಿಮವಾಗಿ ಅಕ್ಷರ್ ಪಟೇಲ್ ಅವರು ನಡೆಸಿದ ಸ್ಣಣ ಮಟ್ಟದ ಹೋರಾಟದಿಂದಾಗಿ ಭಾರತ 100 ಗಡಿ ದಾಟಿತು. ಅಕ್ಷರ್ ಪಟೇಲ್ ಅಜೇಯ 29 ರನ್ ಬಾರಿಸಿದರು. ಇವರಿಗೆ ಒಬ್ಬ ಆಟಗಾರ ಸಾಥ್ ನೀಡುತ್ತಿದ್ದರೂ ಭಾರತ 150 ಗಡಿ ದಾಟುತ್ತಿತ್ತು.
ಇದನ್ನೂ ಓದಿ IND VS AUS: ಸ್ಮಿತ್ ಸೂಪರ್ ಮ್ಯಾನ್ ಕ್ಯಾಚ್ ಕಂಡು ಬೆರಗಾದ ಪ್ರೇಕ್ಷಕರು; ವಿಡಿಯೊ ವೈರಲ್
ಮಿಚೆಲ್ ಸ್ಟಾರ್ಕ್ ಮತ್ತು ಸೀನ್ ಅಬೋಟ್ ಅವರು ಸೇರಿಕೊಂಡು ಭಾರತದ ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ಸು ಕಂಡರು. ಅದರಲ್ಲಿಯೂ ಸ್ಟಾರ್ಕ್ ಅವರ ದಾಳಿ ತುಂಬಾನೆ ಘಾತಕವಾಗಿತ್ತು. ಆರಂಭಿಕ ನಾಲ್ಕು ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಆರಂಭಿಕ ಆಘಾತವಿಕ್ಕಿದರು. 8 ಓವರ್ ಎಸೆದ ಅವರು ಒಂದು ಮೇಡನ್ ಸಹಿತ 53 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ಮಿಂಚಿದರು. ಸೀನ್ ಅಬೋಟ್ 3 ವಿಕೆಟ್ ಕಿತ್ತರು.
ಮಿಚೆಲ್ ಸ್ಟಾರ್ಕ್ ಅವರ ಸ್ವಿಂಗ್ ದಾಳಿಗೆ ತತ್ತರಿಸಿದ ಭಾರತ(IND VS AUS) ತಂಡ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 117 ರನ್ಗೆ ಕುಸಿತ ಕಂಡಿದೆ. ಇದು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತಿ ಕಡಿಮೆ ಮೊತ್ತವಾಗಿದೆ. ಆದರೆ 1981ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ 63 ರನ್ಗೆ ಆಲೌಟ್ ಆದ ಸಂಕಟಕ್ಕೆ ಸಿಲುಕಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ 26 ಓವರ್ಗಳಲ್ಲಿ 117 ರನ್ಗೆ ಆಲೌಟ್( ವಿರಾಟ್ ಕೊಹ್ಲಿ 31, ಅಕ್ಷರ್ ಪಟೇಲ್ ಅಜೇಯ 29, ಮಿಚೆಲ್ ಸ್ಟಾರ್ಕ್ 53ಕ್ಕೆ 5, ಸೀನ್ ಅಬೋಟ್ 23ಕ್ಕೆ 3)