ತಿರುವನಂತಪುರ: ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ (INDvsSL ODI) ಮೂರನೇ ಪಂದ್ಯದಲ್ಲಿ ಭಾರತ ತಂಡ 317 ರನ್ಗಳ ಬೃಹತ್ ಅಂತರದ ವಿಜಯ ಸಾಧಿಸಿದೆ. ಏಕ ದಿನ ಮಾದರಿಯಲ್ಲಿ ಇದು ವಿಶ್ವ ದಾಖಲೆಯ ರನ್ಗಳ ಅಂತರದ ಗೆಲುವಾಗಿದೆ. ಭಾರತ ತಂಡದ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು ಗೆಲುವಿನ ಶ್ರೇಯಸ್ಸನ್ನು ಸಮಾನವಾಗಿ ಹಂಚಿಕೊಂಡರು. ವಿರಾಟ್ ಕೊಹ್ಲಿ (166*) ಶುಭ್ಮನ್ ಗಿಲ್ (116) ಶತಕಗಳನ್ನು ಬಾರಿಸುವ ಮೂಲಕ ಬ್ಯಾಟಿಂಗ್ನಲ್ಲಿ ಮಿಂಚಿದರೆ, ಮೊಹಮ್ಮದ್ ಸಿರಾಜ್ (32ರನ್ಗಳಿಗೆ 4 ವಿಕೆಟ್) ಮೊಹಮ್ಮದ್ ಶಮಿ (20 ರನ್ಗಳಿಗೆ 2 ವಿಕೆಟ್) ಬೌಲಿಂಗ್ನಲ್ಲಿ ಮಿಂಚಿದರು.
ಇಲ್ಲಿನ ಗ್ರೀನ್ಫೀಲ್ಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ಗೆ 390 ರನ್ ಬಾರಿಸಿತು. ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ಪ್ರವಾಸಿ ಬಳಗ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 22 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 73 ರನ್ಗಳಿಗೆ ಇನಿಂಗ್ಸ್ ಮುಗಿಸಿತು. ಲಂಕಾ ತಂಡದ ಕೊನೇ ಬ್ಯಾಟರ್ ಅಶ್ಹೆನ್ ಬಂಡಾರ ಗಾಯಗೊಂಡಿದ್ದ ಕಾರಣ ಬ್ಯಾಟಿಂಗ್ಗೆ ಬರಲಿಲ್ಲ.
ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡ ಯಾವೊಬ್ಬ ಆಟಗಾರನೂ ಕೆಚ್ಚೆದೆಯ ಪ್ರದರ್ಶನ ನೀಡಲು ಮುಂದಾಗಲಿಲ್ಲ. ತಮ್ಮ ಇನಿಂಗ್ಸ್ ಪೂರ್ತಿಯಾಗಿ ಪೆವಿಲಿಯನ್ ಪರೇಡ್ ನಡೆಸಿದರು. ನುವಿಂದು ಫೆರ್ನಾಂಡೊ (19) ಹಾಗೂ ದಸುನ್ ಶನಕ (11), ಕಸುನ್ ರಜಿತ (13ಶ್ರೀ) ಎರಡಂಕಿ ಮೊತ್ತ ಬಾರಿಸಿದರು. ಉಳಿದವರು ಸಣ್ಣ ಪುಟ್ಟ ಮೊತ್ತಕ್ಕೆ ಔಟಾದರು.
ಭಾರತದ ಬ್ಯಾಟಿಂಗ್ ಅಬ್ಬರ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಜೋಡಿ ರೋಹಿತ್ ಶರ್ಮ (42) ಹಾಗೂ ಶುಬ್ಮನ್ ಗಿಲ್ (116) ಮೊದಲ ವಿಕೆಟ್ಗೆ 95 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, 2 ಪೋರ್ ಹಾಗೂ ಮೂರು ಮನಮೋಹಕ ಸಿಕ್ಸರ್ ಬಾರಿಸಿ ಪ್ರೇಕ್ಷಕರಿಗೆ ರಂಜನೆ ನೀಡಿದ್ದ ನಾಯಕ ರೋಹಿತ್ ಶರ್ಮ ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.
ಬಳಿಕ ಜತೆಯಾದ ಶುಭ್ಮನ್ ಮತ್ತು ಕೊಹ್ಲಿ ಜೋಡಿ ಲಂಕಾ ಬೌಲರ್ಗಳನ್ನು ನಿರಂತರವಾಗಿ ದಂಡಿಸಿದರು. ಅವರಿಬ್ಬರೂ 131 ರನ್ಗಳ ಜತೆಯಾಟ ನೀಡಿದರು. 89 ಎಸೆತಗಳಲ್ಲಿ ಎರಡನೇ ಏಕ ದಿನ ಶತಕ ಬಾರಿಸಿದ ಗಿಲ್ 97 ಎಸೆತಗಳಲ್ಲಿ 116 ರನ್ ಬಾರಿಸಿ ಔಟಾದರು. ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕೊಹ್ಲಿ 85 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಅವರ 74 ನೇ ಅಂತಾರಾಷ್ಟ್ರೀಯ ಶತಕ ಹಾಗೂ 46ನೇ ಏಕ ದಿನ ಶತಕವಾಗಿದೆ.
ಈ ಸರಣಿಯ ಮೊದಲ ಪಂದ್ಯದಲ್ಲೂ ವಿರಾಟ್ ಶತಕ ಬಾರಿಸಿದ್ದರು. ಅಲ್ಲದೆ ವರ್ಷಾರಂಭದಲ್ಲೇ ಎರಡು ಶತಕಗಳನ್ನು ಬಾರಿಸಿದ್ದಾರೆ. ಮುಂದುವರಿದ ಅವರು 110 ಎಸೆತಗಳಲ್ಲಿ 166 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಮೊದಲ ನೂರು ರನ್ ಬಾರಿಸಲು 85 ಎಸೆತ ತೆಗೆದುಕೊಂಡ ಕೊಹ್ಲಿ, ನಂತರದ 25 ಎಸೆತಗಳಲ್ಲಿ 66 ರನ್ ಬಾರಿಸಿದರು. ಶ್ರೇಯಸ್ ಅಯ್ಯರ್ (38) ರನ್ಗಳ ಕೊಡುಗೆ ಕೊಟ್ಟರೆ, ಕೆ. ಎಲ್ ರಾಹುಲ್ (7) ಹಾಗೂ ಸೂರ್ಯಕುಮಾರ್ ಯಾದವ್ (4) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಲಂಕಾ ತಂಡದ ಪರ ಕಸುನ್ ರಜಿತ ಹಾಗೂ ಲಾಹಿರು ಕುಮಾರ ತಲಾ ಎರಡು ವಿಕೆಟ್ ಕಬಳಿಸಿದರು.
ಇದನ್ನೂ ಓದಿ | Virat kohli | ಲಂಕಾ ವಿರುದ್ಧ ಪಂದ್ಯದಲ್ಲಿ 97 ಮೀಟರ್ ಸಿಕ್ಸರ್ ಬಾರಿಸಿ ಗಮನ ಸೆಳೆದ ವಿರಾಟ್ ಕೊಹ್ಲಿ