ಮಹಾಬಲಿಪುರಮ್: ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್‌ನ (chess olympiad) 46ನೇ ಆವೃತ್ತಿಯನ್ನು ಆಯೋಜಿಸುವ ಅವಕಾಶ ಭಾರತದ ಪಾಲಿಗೆ ಬಂದೊದಗಿದೆ. ರಷ್ಯಾದಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿ ಅಲ್ಲಿಂದ ಸ್ಥಳಾಂತರಗೊಳ್ಳಲಿದೆ ಎಂಬ ಸುಳಿವು ಸಿಕ್ಕ ತಕ್ಷಣವೇ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ತಮ್ಮ ಮಾಸ್ಟರ್ ಮೈಂಡ್ ಬಳಸಿ ಭಾರತಕ್ಕೆ ಅದರ ಆತಿಥ್ಯ ದೊರೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಜುಲೈ 28ರಿಂದ ಆಗಸ್ಟ್ 10ರವರೆಗೆ ಈ ಟೂರ್ನಿ ತಮಿಳುನಾಡಿನ ಮಹಾಬಲಿಪುರಮ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಭಾರತೀಯ ಚೆಸ್ ಒಕ್ಕೂಟ (AIFC) ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿಯ ಚೆಸ್ ಒಲಿಂಪಿಯಾಡ್‌ನಲ್ಲಿ ಮೊದಲ ಬಾರಿಗೆ ಚೆಸ್ ಕ್ರೀಡಾ ಜ್ಯೋತಿಯನ್ನೂ ಜಾರಿ ತರಲಾಗಿದ್ದು, ಪ್ರಮುಖ ನಗರಗಳನ್ನು ದಾಟಿ ಮಹಾಬಲಿಪುರಮ್ ಕಡೆಗೆ ಸಾಗುತ್ತಿದೆ.
ಚೊಚ್ಚಲ ಆತಿಥ್ಯ
1924ರಲ್ಲಿ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಆರಂಭಗೊಂಡಿದ್ದು, ಅಲ್ಲಿಂದ 95 ವರ್ಷಗಳ ಬಳಿಕ ಭಾರತದಲ್ಲಿ ಮೊಟ್ಟಮೊದಲ ಬಾರಿ ಈ ಟೂರ್ನಿ ನಡೆಯುತ್ತಿದೆ. 187 ದೇಶಗಳ 2000ಕ್ಕೂ ಅಧಿಕ ಚೆಸ್‌ಪಟುಗಳು ಮುಂಬರುವ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂತೆಯೇ ಓಪನ್ ವಿಭಾಗದಲ್ಲಿ 189 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 157 ತಂಡಗಳು ಸೇರಿದಂತೆ 343 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಪಾಳ್ಗೊಳ್ಳಲಿದೆ. ಹೀಗಾಗಿ ಇದು ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿಯೇ ಅತಿ ಹೆಚ್ಚು ತಂಡಗಳು ಭಾಗವಹಿಸುವ ಟೂರ್ನಿಯೆಂಬ ಖ್ಯಾತಿ ಪಡೆಯಲಿದೆ. ಅದರಲ್ಲೂ ಮಹಿಳಾ ವಿಭಾಗದಲ್ಲಿ ಇಷ್ಟೊಂದು ತಂಡಗಳು ಪಾಲ್ಗೊಳ್ಳಲಿರುವುದು ಇದೇ ಮೊದಲು. 2018ರಲ್ಲಿ ಜಾರ್ಜಿಯಾದಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ 334 ತಂಡಗಳು ಪಾಲ್ಗೊಂಡಿದ್ದವು.
ಏನಿದು ಚೆಸ್ ಒಲಿಂಪಿಯಾಡ್?
ಚೆಸ್ ಒಲಿಂಪಿಯಾಡ್ ಜಾಗತಿಕ ಮಟ್ಟದ ಪ್ರತಿಷ್ಠಿತ ಟೂರ್ನಿ. ಚೆಸ್ ಸ್ಪರ್ಧಿಗಳಿಗೆ ಇದುವೇ ಒಲಿಂಪಿಕ್ಸ್. ತಂಡಗಳ ನಡುವೆ ನಡೆಯುವ ಟೂರ್ನಿ ಇದಾಗಿದೆ. ಒಂದು ತಂಡದಲ್ಲಿ ಒಬ್ಬರು ಮೀಸಲು ಆಟಗಾರರು ಸೇರಿದಂತೆ ಐವರು ಚೆಸ್‌ಪಟುಗಳು ಇರುತ್ತಾರೆ. ಮುಕ್ತ ವಿಭಾಗ ಹಾಗೂ ಮಹಿಳೆಯರ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಇಲ್ಲಿ ಆಟಗಾರರು ಆಯಾ ದೇಶವನ್ನು ಪ್ರತಿನಿಧಿಸುತ್ತಾರೆ. ಅಂದರೆ ಆಡುವುದು ಒಬ್ಬರೇ ಆಗಿದ್ದರೂ, ಒಂದು ದೇಶ – ಒಂದು ತಂಡವಾಗಿ ಪರಿಗಣಿಸಲಾಗುತ್ತದೆ. ಪ್ರತಿ ಪಂದ್ಯಗಳಲ್ಲಿ ಒಂದು ರಾಷ್ಟ್ರದ ಆಟಗಾರರು ಎದುರಾಳಿ ರಾಷ್ಟ್ರದ ತಂಡಗಳ ವಿರುದ್ಧ ಆಡುತ್ತಾರೆ. ಇಲ್ಲಿ ಗೆಲ್ಲುವ ತಂಡಗಳ ಆಟಗಾರರಿಗೆ ರೇಟಿಂಗ್ ನೀಡಲಾಗುತ್ತದೆ. ಒಂದು ಗೆಲುವಿಗೆ ೨ ಅಂಕ, ಡ್ರಾ ಆದರೆ ೧ ಅಂಕ ನೀಡಲಾಗುತ್ತದೆ.
2 ವರ್ಷಕ್ಕೊಮ್ಮೆ ನಡೆಯುವ ಟೂರ್ನಿ
ಚೆಸ್ ಒಲಿಂಪಿಯಾಡ್ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅದರೆ, ಕೊರೊನಾ ಕಾರಣಕ್ಕೆ 2018ರಿಂದ ಚೆಸ್ ಒಲಿಂಪಿಯಾಡ್ ನಡೆದಿರಲಿಲ್ಲ. ಆದರೆ, 2020 ಹಾಗೂ 2021ರಲ್ಲಿ ಆನ್‌ಲೈನ್ ಒಲಿಂಪಿಯಾಡ್ ನಡೆದಿತ್ತು. ಮೊದಲ ಬಾರಿ ಭಾರತ ಹಾಗೂ ರಷ್ಯಾ ಜಂಟಿಯಾಗಿ ಚಾಂಪಿಯನ್ ಪಟ್ಟ ಪಡೆದಿತ್ತು. ಅಮೆರಿಕ ಮೂರನೇ ಸ್ಥಾನ ಪಡೆದಿತ್ತು. 2021ರಲ್ಲಿ ರಷ್ಯಾ ಚಾಂಪಿಯನ್ ಆಗಿದ್ದರೆ, ಅಮೆರಿಕ ಎರಡನೇ ಸ್ಥಾನ ಹಾಗೂ ಭಾರತ ಕಂಚಿನ ಪದಕ ಗೆದ್ದಿತ್ತು.
ಭಾರತಕ್ಕೆ ಆತಿಥ್ಯ ಲಭಿಸಿದ್ದು ಹೇಗೆ?
46ನೇ ಚೆಸ್ ಒಲಿಂಪಿಯಾಡ್ ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ನಡೆಯಬೇಕಾಗಿತ್ತು. ಆದರೆ, ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚೆಸ್ ಒಕ್ಕೂಟ (FIDE) ಆತಿಥ್ಯ ಹಕ್ಕನ್ನು ವಾಪಸ್ ಪಡೆಯಿತು. ಫಿಡೆಯಲ್ಲಿ ಪ್ರಭಾವ ಹೊಂದಿರುವ ಹಾಗೂ ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಹಾಗೂ ಭಾರತೀಯ ಚೆಸ್ ಒಕ್ಕೂಟ ರಷ್ಯಾ ಕಳೆದುಕೊಂಡು ಆತಿಥ್ಯವನ್ನು ಭಾರತಕ್ಕೆ ತರುವಲ್ಲಿ ಯಶಸ್ವಿಯಾದರು.
ಭಾರತವೇ ಚೆಸ್ ತವರೂರು
ಭಾರತ ಚೆಸ್ ಕ್ರೀಡೆಯ ತವರೂರು. ಪುರಾಣ ಕಾಲದಲ್ಲೇ ನಮ್ಮವರು ಚೆಸ್ ಅಡುತ್ತಿದ್ದರು. ಆಗ ಅದಕ್ಕೆ ಪಗಡೆಯಾಟ ಎಂದು ಕರೆಯುತ್ತಿದ್ದರು. ಆಧುನಿಕ ಯುಗದಲ್ಲಿ ಚೆಸ್ ಎಂದು ಹೆಸರು ಪಡೆದಿರುವ ಈ ಆಟಕ್ಕೆ ಜಾಗತಿಕವಾಗಿ ದೊಡ್ಡ ಮಟ್ಟದ ಮನ್ನಣೆಯಿದೆ. ಬುದ್ಧಿ ಮತ್ತೆ ಹಾಗೂ ಕಾಯಿಗಳ ನಡೆಸುವ ಚತುರತೆಯೇ ಈ ಸ್ಪರ್ಧೆಯ ಗೆಲುವಿನ ಗುಟ್ಟು. ಭಾರತಕ್ಕೆ ದಾಳಿ ಮಾಡಿರುವ ಮಧ್ಯಪ್ರಾಚ್ಯ ಹಾಗೂ ಪಾಶ್ಚಿಮಾತ್ಯ ರಾಜರು ಭಾರತದ ಚೆಸ್ ಕಲೆಯನ್ನೂ ತೆಗೆದುಕೊಂಡು ಹೋದರು. ರಷ್ಯಾ, ಅಮೆರಿಕ, ಚೀನಾ, ಜರ್ಮನಿ, ಬ್ರಿಟನ್, ನಾರ್ವೆ, ಪೋಲೆಂಡ್, ಸ್ವೀಡನ್, ಹಂಗರಿ, ಅರ್ಜೆಂಟೀನಾ, ಲಿಬಿಯಾ, ಉಕ್ರೇನ್, ಅರ್ಮೆನಿಯಾ ಮತ್ತು ಜಾರ್ಜಿಯಾ ಚೆಸ್ ಕ್ಷೇತ್ರದಲ್ಲಿ ಬಲಿಷ್ಠ ಸ್ಪರ್ಧಿಗಳನ್ನು ಹೊಂದಿರುವ ದೇಶಗಳಾಗಿವೆ.
ಮೊದಲ ಬಾರಿಗೆ ಟಾರ್ಚ್ ರಿಲೇ
ಚೆಸ್ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಜ್ಯೋತಿಯ ಯಾತ್ರೆಗೆ ಚಾಲನೆ ಕೊಡಲಾಗಿದೆ. ನವ ದೆಹಲಿಯಲ್ಲಿ ಜೂನ್ 19ರಂದು ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಚೆಸ್ ಒಲಿಂಪಿಯಾಡ್ ಕ್ರೀಡಾಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಯಿತು. ಫಿಡೆ ಅಧ್ಯಕ್ಷ ಅರ್ಕಾಡಿ ವೊರ್ಕೊವಿಚ್ ಅವರು ಜ್ಯೋತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಿದ್ದರು. ಉತ್ತರ ಭಾರತದ ರಾಜ್ಯಗಳನ್ನು ದಾಟಿದ ಕ್ರೀಡಾ ಜ್ಯೋತಿ ಜುಲೈ 18ರಂದು ಬೆಂಗಳೂರಿಗೆ ಬಂದಿತ್ತು. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜ್ಯೋತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದ್ದರು. ಜುಲೈ 28ರಂದು ಅದು ಮಹಾಬಲಿಪುರಕ್ಕೆ ತಲುಪಲಿದೆ.
ಲೇಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೋಪಾಲ್, ಪಾಟ್ನಾ, ಕೋಲ್ಕತ್ತಾ, ಗ್ಯಾಂಗ್ಟಾಕ್, ಹೈದರಾಬಾದ್, ಬೆಂಗಳೂರು, ತ್ರಿಶೂರ್, ಪೋರ್ಟ್ ಬ್ಲೇರ್ ಮತ್ತು ಕನ್ಯಾಕುಮಾರಿಈ ಜ್ಯೊತಿ ದೇಶದ 75 ನಗರಗಳಲ್ಲಿ ಸಾಗಲಿದ್ದು, ಪ್ರತಿ ಸ್ಥಳದಲ್ಲಿ, ರಾಜ್ಯದ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ.
ಇನ್ನು ಮುಂದೆ ಭಾರತದಿಂದಲೇ ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ಆರಂಭವಾಗಲಿದೆ. ಬಳಿಕ ಆತಿಥೇಯ ನಗರವನ್ನು ತಲುಪುವ ಮೊದಲು ಎಲ್ಲಾ ಖಂಡಗಳಲ್ಲಿ ಪ್ರಯಾಣಿಸಲಿದೆ. ಆದರೆ, ಈ ಬಾರಿ ಜ್ಯೋತಿ ಸಮಯದ ಅಭಾವದಿಂದಾಗಿ ಜಗತ್ತು ಸುತ್ತಿಲ್ಲ.
ಇದನ್ನೂ ಓದಿ | Asian games ದಿನಾಂಕ ಪ್ರಕಟ, ಚೀನಾದಲ್ಲೇ ನಡೆಯಲಿದೆ ಕ್ರೀಡಾಕೂಟ