Site icon Vistara News

Yuvaraj Singh: ಇಂದು ಯುವರಾಜ್‌ ಜನುಮ ದಿನ, ಅವರ ಅಮೋಘ ಆಟ ಕಾಡುವುದು ಅನುಕ್ಷಣ!

Yuvaraj SIngh

ಬೆಂಗಳೂರು: ಭಾರತ ಕ್ರಿಕೆಟ್​ ತಂಡ ವಿಶ್ವ ಕ್ರಿಕೆಟ್​ನಲ್ಲಿ ಮಿಂಚುವುದಕ್ಕೆ ಹಲವು ಕಾರಣಗಳಿವೆ. ಹಲವಾರು ಪ್ರತಿಭೆಗಳ ಕೊಡುಗೆಗಳಿವೆ. ಆದರೆ, ಭಾರತ ತಂಡ ಸಮಗ್ರ ಆಲ್​ರೌಂಡ್​ ಬಳಗವಾಗಿ ವಿಶ್ವ ಕ್ರಿಕೆಟ್​ ಕ್ಷೇತ್ರದಲ್ಲಿ ಮಿಂಚುವುದಕ್ಕೆ ಕಾರಣರಾದವರು ಯುವರಾಜ್​ ಸಿಂಗ್ (Yuvaraj Singh)​ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ ಎಲ್ಲದರಲ್ಲೂ ಅವರು ಪರಿಪೂರ್ಣರಾಗಿದ್ದರು. ಕ್ರಿಕೆಟ್​ ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ ಅವರೊಬ್ಬ ತ್ರಿಡಿ ಪ್ಲೇಯರ್​. 2000 ನೇ ದಶಕದ ಆರಂಭದಲ್ಲಿ ಯುವರಾಜ್ ಸಿಂಗ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಆಟಗಾರನಾಗಿ ಹೊರಹೊಮ್ಮಿದಾಗ ಅವರಿಗೆ ಸರಿಸಾಟಿಯಾಗಬಲ್ಲವರು ಯಾರೂ ಇರಲಿಲ್ಲ. ಅವರ ಧೈರ್ಯ ಮತ್ತು ಉತ್ಸಾಹ ಮತ್ತು ಆಕ್ರಮಣಕಾರಿ ಸ್ವಭಾಗ ಆ ಪೀಳಿಗೆಯ ಇತರ ಆಟಗಾರರಿಂದ ಅವರನ್ನು ಪ್ರತ್ಯೇಕಿಸಿತ್ತು. ಆ ಬಳಿಕದಿಂದ ಅವರು ಭಾರತ ಕ್ರಿಕೆಟ್​ ತಂಡದಲ್ಲಿ ಅಪ್ಪಟ ಅಪರಂಜಿಯಂತೆ ಮಿಂಚಿದರು. ಕ್ರಿಕೆಟ್​ ಕ್ಷೇತ್ರವೇ ನೆನಪಿಡಬಹುದಾದ ಹಲವಾರು ಸಾಧನೆಗಳನ್ನು ಮಾಡಿದರು. ಅವರಿಗೆ 2023ರ ಡಿಸೆಂಬರ್ 12ಕ್ಕೆ ಜನುಮ ದಿನದ ಸಂಭ್ರಮ. ಈ ಹಿನ್ನಲೆಯಲ್ಲಿ ಅವರ ಸಾಧನೆಗಳನ್ನು ಮೆಲುಕು ಹಾಕೋಣ.

2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಎಂಎಸ್ ಧೋನಿ ನೇತೃತ್ವದ ತಂಡದಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. 2011 ರ ಏಕದಿನ ವಿಶ್ವಕಪ್ ನಲ್ಲಿ ಅವರು ಸ್ಮರಣೀಯ ಪ್ರದರ್ಶನವನ್ನು ನೀಡಿದ್ದರು. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉನ್ನತ ದರ್ಜೆಯ ಪ್ರದರ್ಶನ ನೀಡಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ಅಲ್ಲಿ ಅವರು 365 ರನ್ ಬಾರಿಸುವ ಜತೆಗೆ 15 ವಿಕೆಟ್ ಪಡೆದಿದ್ದರು. ಅದಕ್ಕಿಂತ ಮೊದಲು ಅವರು ಭಾರತ ತಂಡದ ಪರವಾಗಿ ಹಲವು ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.

ಐಸಿಸಿ ನಾಕೌಟ್ ಟ್ರೋಫಿ 2000ರಲ್ಲಿ ಆಸ್ಟ್ರೇಲಿಯಾ ವಿರುದ್ಧ 84 ರನ್

2000ನೇ ಇಸವಿಯ ಐಸಿಸಿ ನಾಕೌಟ್ ಟ್ರೋಫಿಯಲ್ಲಿ ಯುವರಾಜ್ ಸಿಂಗ್ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್​ನಲ್ಲಿ ಯುವರಾಜ್ ಆಸ್ಟ್ರೇಲಿಯಾ ವಿರುದ್ಧ 84 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿಗಳು ಸೇರಿವೆ. ಈ ಮೂಲಕ ಭಾರತ 265 ರನ್​ ಪೇರಿಸಿ 20 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

ಒಂದೇ ಓವರ್​ನಲ್ಲಿ 6 ಸಿಕ್ಸರ್

ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್​ನಲ್ಲಿ ಯುವರಾಜ್ 6 ಸಿಕ್ಸರ್ಗಳನ್ನು ಬಾರಿಸಿದಾಗ ಆ ಕಾಲಕ್ಕೆ ಅದು ಊಹಿಸಲಾಗದ ಸಾಧನೆಯಾಗಿತ್ತು. ಹಲವಾರು ಆಟಗಾರರು ನಂತರ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಆದರೆ ಯುವರಾಜ್ ಅವರ ಅಬ್ಬರದ ಪ್ರದರ್ಶನವು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.

ಸಚಿನ್ ತೆಂಡೂಲ್ಕರ್ ಅವರೊಂದಿಗೆ ಪಂದ್ಯ ವಿಜೇತ ಜತೆಯಾಟ

ಯುವರಾಜ್ ಆಟದ ಆರಂಭಿಕ ದಿನಗಳಲ್ಲಿ ವೈಟ್-ಬಾಲ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿದ್ದರು. ಆದರೆ 2008 ರಲ್ಲಿ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು ಸಾಧಿಸಲು ಈ ಆಲ್​ರೌಂಡರ್​ ಸಹಾಯ ಮಾಡಿದರು. ಅಲ್ಲಿಂದ ಈ ಕಲ್ಪನೆ ಬದಲಾಯಿತು. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಆತಿಥೇಯ ಭಾರತ 382 ರನ್ ಗಳಿಸಬೇಕಾಗಿತ್ತು. 224ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡ ನಂತರ ಯುವರಾಜ್ ಬ್ಯಾಟಿಂಗ್ ಗೆ ಬಂದರು. ಸಚಿನ್ ತೆಂಡೂಲ್ಕರ್ ಅವರೊಂದಿಗೆ 163 ರನ್​ಗಳ ಜೊತೆಯಾಟದ ಮೂಲಕ ಭಾರತಕ್ಕೆ ನೆರವಾಗಿದ್ದರು.

2002ರ ನ್ಯಾಟ್​ವೆಸ್ಟ್​​ ಸೀರಿಸ್​ ಫೈನಲ್​

ಇಂಗ್ಲೆಂಡ್​ ಲಾರ್ಡ್ಸ್​​ನಲ್ಲಿ ನಡೆದ 2002 ರ ನಾಟ್​ವೆಸ್ಟ್​ ಸರಣಿಯ ಫೈನಲ್​ನಲ್ಲಿ ಭಾರತದ ಐತಿಹಾಸಿಕ ಗೆಲುವಿಗೆ ಯುವರಾಜ್ ಸಿಂಗ್ ಕಾರಣ. ಇಂಗ್ಲೆಂಡ್​ನ 325 ರನ್​ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆಡಿದ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. 5 ವಿಕೆಟ್ ನಷ್ಟಕ್ಕೆ 146 ರನ್ ಮಾಡಿ ಹೆಣಗಾಡುತ್ತಿತ್ತು. ಈ ವೇಳೆ ಯುವರಾಜ್ 63 ಎಸೆತಗಳಲ್ಲಿ 69 ರನ್ ಗಳಿಸಿದ್ದರು. ಜತೆಗೆ ಮೊಹಮ್ಮದ್ ಕೈಫ್ ಜತೆ ಸೇರಿ 121 ರನ್ ಜತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಕೈಫ್​ ಅಜೇಯ 87 ರನ್ ಗಳಿಸಿದ ಕೈಫ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಕ್ಯಾನ್ಸರ್​ ಗೆದ್ದ ವೀರ

2011ರಲ್ಲಿ ಯುವರಾಜ್​ ಸಿಂಗ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಶ್ವಾಸಕೋಶದ ನಡುವಿನ ಎದೆಯಲ್ಲಿನ ಅಂಗಾಂಶಗಳ ಮೇಲೆ ಪರಿಣಾಮ ಬೀರುವ ಮೆಡಿಯಾಸ್ಟಿನಲ್ ಸೆಮಿನೋಮಾ ಎಂಬ ಅಪರೂಪದ ರೀತಿಯ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. , ಯುವರಾಜ್ ಬೋಸ್ಟನ್ ಮತ್ತು ಇಂಡಿಯಾನಾಪೊಲಿಸ್ನಲ್ಲಿ ಕೀಮೋಥೆರಪಿಗೆ ಒಳಗಾಗಿದ್ದರು. ಅವರು ಯಶಸ್ವಿಯಾಗಿ ಚೇತರಿಸಿಕೊಂಡರು ಮತ್ತು 2012ರಲ್ಲಿ ರಲ್ಲಿ ಕ್ರಿಕೆಟ್ಗೆ ಮರಳಿದ್ದರು. ಈ ಮೂಲಕ ಕ್ಯಾನ್ಸರ್​ ವಿರುದ್ಧ ಹೋರಾಡಿ ಜಯಿಸಿದ್ದರು.

ಯುವರಾಜ್​ ಸಿಂಗ್ ಇನ್ನಷ್ಟು ಸಾಧನೆಗಳು

ಯುವರಾಜ್ ಸಿಂಗ್ ಫ್ಯಾಮಿಲಿ ಸ್ಟೋರಿ

ಯುವರಾಜ್ ಸಿಂಗ್ ಅವರ ಪತ್ನಿ ಹ್ಯಾಜೆಲ್​ ಕೀಚ್​. ಅವರಿಗೆ ಇಬ್ಬರು ಮಕ್ಕಳು. ಹ್ಯಾಜೆಲ್ ಕೀಚ್ ಅವರೊಂದಿಗಿನ ಪರಿಚಯ ಜಾಹೀರಾತು ಚಿತ್ರೀಕರಣದ ಸೆಟ್ ನಲ್ಲಿ ಪ್ರಾರಂಭವಾಗಿತ್ತು. 2015ರಲ್ಲಿ ಯುವರಾಜ್ ಬಾಲಿ ಪ್ರವಾಸದ ಸಮಯದಲ್ಲಿ ಹ್ಯಾಜೆಲ್​​ಗೆ ಸಿನಿಮಾ ಶೈಲಿಯಲ್ಲಿ ಪ್ರಪೋಸ್ ಮಾಡುವವರೆಗೂ ಅವರಿಬ್ಬರು ಸ್ನೇಹಿತರಾಗಿದ್ದರು. ಒಂದು ವರ್ಷದ ನಂತರ, ದಂಪತಿಗಳು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಯುವರಾಜ್ ಮತ್ತು ಹ್ಯಾಜೆಲ್ ಈಗ ಇಬ್ಬರು ಸುಂದರ ಮಕ್ಕಳ ಪೋಷಕರು. ಮಗ ಓರಿಯನ್ ಮತ್ತು ಮಗಳು ಔರಾ.

Exit mobile version