Site icon Vistara News

IND vs SA | ಬೆಳಗಿದ ರಾಹುಲ್‌- ಸೂರ್ಯ; ಭಾರತಕ್ಕೆ 8 ವಿಕೆಟ್ ಜಯ, ಸರಣಿಯಲ್ಲಿ 1-0 ಅಂತರದ ಮುನ್ನಡೆ

Ind vs SA

ತಿರುವನಂತಪುರ : ಸೂರ್ಯಕುಮಾರ್ ಯಾದವ್‌ (೫೦*), ಕೆ. ಎಲ್‌ ರಾಹುಲ್ (೫೧*) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಭಾರತ ತಂಡ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಪಂದ್ಯದಲ್ಲಿ ೮ ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ೨೦ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ಕಳೆದುಕೊಂಡು ೧೦೬ ರನ್‌ ಬಾರಿಸಿದರೆ, ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡ ಇನ್ನೂ ೨೦ ಎಸೆತಗಳ ಬಾಕಿ ಇರುವಂತೆಯೇ 2 ವಿಕೆಟ್‌ ಕಳೆದುಕೊಂಡು ೧೧೦ ರನ್‌ ಬಾರಿಸಿ ಜಯ ಸಾಧಿಸಿತು.

ಬೌಲರ್‌ಗಳ ಸ್ವರ್ಗವಾಗಿದ್ದ ತಿರುವನಂತಪುರದ ಗ್ರಿನ್‌ಫೀಲ್ಡ್‌ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಸಣ್ಣ ಗುರಿಯನ್ನು ಪಡೆದ ಹೊರತಾಗಿಯೂ ಭಾರತ ತಂಡ ತಾಳ್ಮೆಯ ಬ್ಯಾಟಿಂಗ್‌ ಮೂಲಕ ವಿಜಯ ಸಾಧಿಸಿತು. ಭಾರತ ತಂಡದ ಆರಂಭಿಕ ಬ್ಯಾಟರ್‌ ರೋಹಿತ್‌ ಶರ್ಮ ಶೂನ್ಯಕ್ಕೆ ಔಟಾದರೆ, ವಿರಾಟ್‌ ಕೊಹ್ಲಿ ೩ ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಹೀಗಾಗಿ ೧೭ ರನ್‌ಗಳಿಗೆ ೨ ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಬಿದ್ದ ಭಾರತ ತಂಡವನ್ನು ಕೆ. ಎಲ್. ರಾಹುಲ್‌ ಹಾಗೂ ಸೂರ್ಯಕುಮಾರ್ ಯಾದವ್‌ ಕಾಪಾಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ ೯೩ ರನ್‌ ಬಾರಿಸಿದರು.

ಭಾರತದ ಬೌಲರ್‌ಗಳ ಅಬ್ಬರ

ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡಕ್ಕೆ ಭಾರತದ ವೇಗದ ಬೌಲರ್‌ಗಳಾದ ದೀಪಕ್‌ ಚಾಹರ್‌ (೨೪ ರನ್‌ ವೆಚ್ಚದಲ್ಲಿ ೨ ವಿಕೆಟ್‌) ಪಡೆದರೆ, ಅರ್ಶದೀಪ್‌ ಸಿಂಗ್‌ (೩೨ ರನ್‌ಗಳಿಗೆ ೨ ವಿಕೆಟ್‌), ಹರ್ಷಲ್‌ ಪಟೇಲ್‌ (೨೬ ರನ್‌ಗಳಿಗೆ ೨ ವಿಕೆಟ್‌) ಆರಂಭದಲ್ಲೇ ಕಡಿವಾಣ ಹಾಕಿದರು. ಹಸಿರಾಗಿದ್ದ ಪಿಚ್‌ನಲ್ಲಿ ಸತತವಾಗಿ ಸ್ವಿಂಗ್‌ ಎಸೆತಗಳನ್ನು ಎಸೆದು ಬ್ಯಾಟರ್‌ಗಳನ್ನು ತಬ್ಬಿಬ್ಬುಗೊಳಿಸಿದರು.

ದ. ಆಫ್ರಿಕಾ ತಂಡದ ಬ್ಯಾಟರ್‌ಗಳಾದ ಕ್ವಿಂಟನ್‌ ಡಿ’ಕಾಕ್‌ ಒಂದು ರನ್‌ ಬಾರಿಸಿದರೆ ತೆಂಬ ಬವುಮಾ, ರೀ ರೊಸ್ಸೊ, ಡೇವಿಡ್‌ ಮಿಲ್ಲರ್‌, ಟ್ರಿಸ್ಟನ್‌ ಸ್ಟಬ್ಸ್‌ ಸೊನ್ನೆ ಸುತ್ತಿದರು. ಹೀಗಾಗಿ ೯ ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕೇಶವ್‌ ಮಹಾರಾಜ್‌ (೪೧) ಹಾಗೂ ವೇಯ್ನ್‌ ಪಾರ್ನೆಲ್‌ (೨೪) ಪ್ರವಾಸಿ ತಂಡಕ್ಕೆ ಆಧಾರವಾದರು. ಇವರಿಬ್ಬರ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರಂಕಿ ಮೊತ್ತವನ್ನು ದಾಟಿತು.

ಸ್ಕೋರ್‌ ವಿವರ

ದಕ್ಷಿಣ ಆಫ್ರಿಕಾ : ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೦೬ (ಕೇಶವ್‌ ಮಹಾರಾಜ್‌ ೪೧, ವೇಯ್ನ್‌ ಪಾರ್ನೆಲ್‌ ೨೪; ದೀಪಕ್ ಚಾಹರ್‌ ೨೪ಕ್ಕೆ೨, ಅರ್ಶ್‌ದೀಪ್ ಸಿಂಗ್ ೩೨ಕ್ಕೆ೨, ಹರ್ಷಲ್‌ ಪಟೇಲ್‌ ೨೪ಕ್ಕೆ೨, ಅಕ್ಷರ್‌ ಪಟೇಲ್‌ ೪ಕ್ಕೆ ೧).

ಭಾರತ : …. ಓವರ್‌ಗಳಲ್ಲಿ.. ವಿಕೆಟ್‌ಗೆ … (ಕೆ.ಎಲ್‌ ರಾಹುಲ್‌ … ಸೂರ್ಯಕುಮಾರ್‌ ಯಾದವ್‌ ; )

Exit mobile version