Site icon Vistara News

Neeraj Chopra: ನೀರಜ್​ ಚೋಪ್ರಾ ಕೈಯಲ್ಲಿದ್ದ ಜಾವೆಲಿನ್​ ಮಾಯ; ಪೊಲೀಸರು ನೀಡಿದ ಸ್ಪಷ್ಟನೆ ಏನು?

Neeraj Chopra statue

ಮೀರತ್​: ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ, ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ(Neeraj Chopra) ಅವರ ಪ್ರತಿಮೆಯಲ್ಲಿದ್ದ ಜಾವೆಲಿನ್​ ಮಾಯವಾಗಿದೆ. ಇತ್ತೀಚೆಗೆ ಮೀರತ್​ನಲ್ಲಿ(Meerut) ನೀರಜ್​ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಈ ಪ್ರತಿಮೆಯಲ್ಲಿದ್ದ ಜಾವೆಲಿನ್​ ನಾಪತ್ತೆಯಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ವಿಶ್ವ ಚಾಂಪಿಯನ್​ಶಿಪ್​ನಲ್ಲಿ(world athletics championships 2023) ಭಾರತಕ್ಕೆ ಮೊತ್ತ ಮೊದಲ ಚಿನ್ನ ಗೆದ್ದ ಸಾಧನೆಗಾಗಿ ಆಗಸ್ಟ್ 29ರಂದು ನೀರಜ್‌ ಪ್ರತಿಮೆಯನ್ನು ಮೀರತ್​ನ ಅಭಿವೃದ್ಧಿ ಪ್ರಾಧಿಕಾರವು ಹಾಪುರ್‌ ಎಂಬಲ್ಲಿ ಪ್ರತಿಮೆಯನ್ನು ಸ್ಥಾಪಿಸಿತ್ತು. ಆದರೆ ಮಂಗಳವಾರ ಪ್ರತಿಮೆಯ ಜಾವೆಲಿನ್‌ ಕಾಣೆಯಾಗಿತ್ತು. ಇದನ್ನು ಇಲ್ಲಿನ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಎಲ್ಲಡೆ ವೈರಲ್​ ಆಗಿತ್ತು. ಅಲ್ಲದೆ ಕಳವಾಗಿರುವ ಶಂಕೆ ವ್ಯಕ್ತವಾಗಿತ್ತು.

ಯು ಟರ್ನ್​ ಹೊಡೆದ ಪ್ರಾಧಿಕಾರ

ಜಾವೆಲಿನ್​ ಕಾಣದ ವಿಚಾರ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಮೀರತ್​ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅಭಿಷೇಕ್ ಪಾಂಡೆ, “ಈ ಘಟನೆಯ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಈ ಘಟನೆ ನಿಜವೇ ಆಗಿದ್ದರೆ, ಹೊಸದಾಗಿ ಅಭಿವೃದ್ಧಿ ಪ್ರಾಧಿಕಾರವು ಈ ಪ್ರತಿಮೆಗೆ ಜಾವೆಲಿನ್ ಅಳವಡಿಸಲಿದೆ” ಎಂದು ಹೇಳಿದ್ದರು. ಆದರೆ ಸಂಜೆಯ ವೇಳೆಗೆ ಇದೇ ಅಧಿಕಾರಿ ತಮ್ಮ ಹೇಳಿಯನ್ನು ಬದಲಿದ್ದರು. ಜಾವೆಲಿನ್ ನಾವೇ ತೆರವುಗೊಳಿಸಿದ್ದು, ಹೊಸದಾಗಿ ಅಸಲಿ ಜಾವೆಲಿನ್ ಅಳವಡಿಸಲಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ Neeraj Chopra: ಪ್ಯಾರಿಸ್​ನಲ್ಲಿಯೂ ನೀರಜ್​ ಚೋಪ್ರಾಗೆ ಚಿನ್ನ ಒಲಿಯಲಿದೆ; ಶಿರಸಿಯ ಕಾಶಿನಾಥ್ ನಾಯ್ಕ್ ವಿಶ್ವಾಸ

ಸ್ಪಷ್ಟನೆ ನೀಡಿದ ಪೊಲೀಸರು

ಜಾವೆಲಿನ್ ಕಳವಾದ ವಿಚಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಜಾವೆಲಿನ್‌ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಮೊದಲಿಗೆ ನಕಲಿ ಜಾವೆಲಿನ್‌ ಅಳವಡಿಸಲಾಗಿತ್ತು. ಅದನ್ನು ಈಗ ಬದಲಾಯಿಸಿ ಹೊಸದಾಗಿ ಅಸಲಿ ಜಾವೆಲಿನ್‌ ಅಳವಡಿಸಲಾಗಿದೆ’ ಇದನ್ನು ಬದಲಿಸುವ ಸಂದರ್ಭ ಪ್ರತಿಮೆಯಲ್ಲಿ ಜಾವೆಲಿನ್​ ಇರಲಿಲ್ಲ. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಗೊಂದಲಕ್ಕೆ ತೆರೆ

ಈ ಘಟನೆ ಬಗ್ಗೆ ಮಾತನಾಡಿದ ಮೀರತ್​ ಅಭಿವೃದ್ಧಿ ಪ್ರಾಧಿಕಾರದ ಜೂನಿಯರ್ ಇಂಜಿನಿಯರ್ ಪವನ್ ಭಾರಧ್ವಾಜ್, ನೀರಜ್ ಪ್ರತಿಮೆಗೆ ಆರಂಭದಲ್ಲಿ ನಾವು ಪ್ಲಾಸ್ಟಿಕ್​ನ ಜಾವೆಲಿನ್ ಹಾಕಲಾಗಿತ್ತು. ಆದರೆ ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ನಾವು ಭಾನುವಾರ ರಾತ್ರಿ ಜಾವೆಲಿನ್ ತೆರವು ಮಾಡಿದ್ದೆವು. ಇದಕ್ಕೆ ಕಬ್ಬಿಣದ ಜಾವೆಲಿನ್ ಅಳವಡಿಸಲು ನಿರ್ಧರಿಸಿದ್ದೆವು. ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ಜಾವೆಲಿನ್​ ಕಳವು ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಶೀಘ್ರದಲ್ಲೇ ನಾವು ಕಬ್ಬಿಣದ ಜಾವೆಲಿನ್ ಅಳವಡಿಸಲಿದ್ದೇವೆ ಎಂದು ಹೇಳಿದರು.

Exit mobile version