ನವ ದೆಹಲಿ: ನವ ದೆಹಲಿಯ ಜಂತರ್ ಮಂತರ್ನಲ್ಲಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ (Wrestler protest) ರಾಜಕೀಯ ತಿರುವು ಪಡೆಯುತ್ತಿದೆ. ಕುಸ್ತಿಪಟುಗಳಿಗೆ ನೈತಿಕ ಬೆಂಬಲ ನೀಡಲು ಕೆಲವು ರಾಜಕಾರಣಿಗಳು ಅಲ್ಲಿ ತೆರಳಿದ ಬಳಿಕ ರಾಜಕೀಯ ಅರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಸಾಮಾಜಿಕ ಜಾಲತಾಣದಲ್ಲೂ ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಬೆಂಬಲಿಗರೆಲ್ಲರೂ ಪ್ರತಿಭಟನೆ ನಡೆಸುತ್ತಿರುವ ಅಥ್ಲೀಟ್ಗಳ ವಿರುದ್ದ ತಿರುಗಿ ಬಿದ್ದಿದ್ದಾರೆ. ಬೇಕಾಬಿಟ್ಟಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಪ್ರತಿಯಾಗಿ ಕುಸ್ತಿಪಟುಗಳ ಪರ ವಹಿಸಿ ಸಾಕಷ್ಟು ಮಂದಿ ಟ್ವೀಟ್ ಮಾಡುತ್ತಿದ್ದಾರೆ.
2017ರಲ್ಲಿ ಸಾಕ್ಷಿ ಮಲಿಕ್ ತಮ್ಮ ಮದುವೆಗೆ ಇದೀಗ ಆರೋಪ ಮಾಡುತ್ತಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರನ್ನೂ ಆಹ್ವಾನಿಸಿದ್ದರು. ಆ ಸಂದರ್ಭದ ಫೋಟೊವನ್ನು ಶೇರ್ ಮಾಡುತ್ತಿರುವ ಕೆಲವರು ಸಾಕ್ಷಿ ಮಲಿಕ್ ಅವರ ಪ್ರತಿಭಟನೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.ಮದುವೆಗೆ ಅತಿಥಿಯಾಗಿ ಬಂದಿದ್ದ ಅವರ ಬಳಿ ಬ್ರಿಜ್ಭೂಷಣ್ ಬಳಿ ಸಾಕ್ಷಿ ಸಿಂಗ್ ನಗುತ್ತಿರುವ ಚಿತ್ರ ಅದಾಗಿದೆ. ಅದನ್ನೇ ಮುಂದಿಟ್ಟುಕೊಂಡು ಲೈಂಗಿಕ ಕಿರುಕುಳ ಕೊಟ್ಟ ವ್ಯಕ್ತಿ ಜತೆ ನಗುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಿಸ್ಟರ್ ಸಿನ್ಹಾ ಎಂಬ ಅಧಿಕೃತ ಟ್ವಿಟರ್ ಖಾತೆ ಹೊಂದಿರುವವರೊಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿ ಸಾಕ್ಷಿ ಮಲಿಕ್ ಅವರನ್ನು ಪ್ರಶ್ನಸಿದ್ದರು. ಇದಕ್ಕೆ ಹಿನ್ನಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಪ್ರತಿಕ್ರಿಯೆ ಕೊಟ್ಟಿದ್ದು, ಹೌದು, ಕಿರುಕುಳ ಕೊಟ್ಟಿರುವ ವ್ಯಕ್ತಿ ಅತ್ಯಂತ ಬಲಿಷ್ಠನಾಗಿರುವಾಗ ಸಾಕ್ಷಿ ಮಲಿಕ್ ನಗಲೇಬೇಕು. ಅವಳಿಗೆ ಬೇರೆ ಯಾವುದೇ ಆಯ್ಕೆಗಳು ಇಲ್ಲ. ಕುಟುಂಬದೊಳಗಿನ ವ್ಯಕ್ತಿಯೇ ದೌರ್ಜನ್ಯ ಎಸಗಿದ್ದರೂ ಎಲ್ಲರ ಮುಂದೆ ಎಲ್ಲರೂ ಸರಿಯಾಗಿದೆ ಎಂದು ನಗುವ ಅನಿವಾರ್ಯತೆ ಮಹಿಳೆಗೆ ಇರುತ್ತದೆ. ಸ್ತ್ರೀ ಪೀಡಕರು ಹಾಗೂ ಅತ್ಯಾಚಾರಿಗಳು ಅವರ ಬೆಂಬಲಿಗರು ನಮ್ಮ ಭೂಮಿಯನ್ನೇ ನಾಶ ಮಾಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಅನ್ನು ಶೇರ್ ಮಾಡುವ ಮೂಲಕ ಸಾಕ್ಷಿ ಮಲಿಕ್ ಅವರು ಉತ್ತರ ಕೊಟ್ಟಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆ ಜನವರಿಯಿಂದ ಎರಡನೇ ಬಾರಿಗೆ ನಡೆಯುತ್ತಿರುವುದರಿಂದ, ಅದರ ಸುತ್ತಲೂ ಹಲವಾರು ನಿರೂಪಣೆಗಳನ್ನು ಕೇಳಿ ಬರುತ್ತಿವೆ. ಕೆಲವು ಕ್ರೀಡಾಪಟುಗಳು ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಅವರು ಕುಸ್ತಿ ಪಟುಗಳ ಅಶಿಸ್ತಿನ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡ ಬಳಿಕ ಪ್ರತಿಭಟನಾ ವೇದಿಕೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಬಬಿತಾ ಫೋಗಟ್ ಖಂಡಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಅಣಕಿಸಿದ ಪಪ್ಪು ಯಾದವ್ ಅವರಿಗೆ ವೇದಿಕೆ ಒದಗಿಸಿ, ಮೋದಿ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರತಿಭಟನಾಕಾರರ ಮೇಲೆ ಆರೋಪಿಸಲಾಗುತ್ತಿದೆ.
ಇದನ್ನೂ ಓದಿ : Wrestlers Protest : ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದ ಬ್ರಿಜ್ ಭೂಷಣ್
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿರುವ ಆರೋಪಿ ಬ್ರಿಜ್ ಭೂಷಣ್ ಸಿಂಗ್ ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರು ರಾಜಕೀಯ ಪ್ರೇರಿತರಾಗಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ. ಪ್ರತಿಭಟನೆಯ ಮೊದಲ ದಿನದಿಂದಲೂ ರಾಜಕೀಯ ಪ್ರೇರಿತವಾಗಿದೆ. ಇದು ಕ್ರೀಡಾಪಟುಗಳ ಧ್ವನಿಯಲ್ಲ ಎಂದು ನಾನು ಭಾವಿಸಿದ್ದೇನೆ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಹರಿಯಾಣದ 90% ಕ್ರೀಡಾಪಟುಗಳು ಮತ್ತು ಪೋಷಕರು ಭಾರತೀಯ ಕುಸ್ತಿ ಒಕ್ಕೂಟವನ್ನು ನಂಬುತ್ತಾರೆ. ಆದರೆ, ಆರೋಪಗಳನ್ನು ಮಾಡಿದ ಕೆಲವು ಕುಟುಂಬಗಳು ಮತ್ತು ಹುಡುಗಿಯರು ಒಂದೇ ‘ಅಖಾಡ’ಕ್ಕೆ ಸೇರಿದವರು… ಆ ‘ಅಖಾಡ’ದ ಪೋಷಕ ದೀಪೇಂದರ್ ಹೂಡಾ” ಎಂದು ಬ್ರಿಜ್ ಭೂಷಣ್ ಸಿಂಗ್ ಕೂಡ ಆರೋಪಿಸಿದ್ದಾರೆ.