Site icon Vistara News

AB De Villiers | ಐಪಿಎಲ್​ 2023 ಸಿದ್ಧತೆಗೆ ಉದ್ಯಾನ ನಗರಿ ಬೆಂಗಳೂರು ತಲುಪಿದ ಎಬಿ ಡಿ ವಿಲಿಯರ್ಸ್‌

abd

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌(AB De Villiers) ಗುರುವಾರ (ನವೆಂಬರ್‌ 3) ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಸೀಸನ್​ಗೆ ತಂಡದ ಬಗ್ಗೆ ಮಹತ್ವದ ಚರ್ಚೆ ನಡೆಸಲು ಮತ್ತು ಆಟಗಾರರ ಜತೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಿಸ್ಟರ್‌ 360 ಖ್ಯಾತಿಯ ಬ್ಯಾಟರ್‌ ಇದೀಗ ಮರಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಳಗ ಸೇರಿಕೊಂಡಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.

“ಬೆಂಗಳೂರಿಗೆ ಮತ್ತೆ ಬಂದಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಹಲವು ವರ್ಷಗಳ ಬಳಿಕ ಇಲ್ಲಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ಗೆ ಬಂದು ಉಳಿದುಕೊಂಡಿದ್ದೇನೆ. ಇಲ್ಲಿ ಹಲವು ಅದ್ಭುತ ನೆನಪುಗಳಿವೆ” ಎಂದು ಟ್ವಿಟರ್​ನಲ್ಲಿ ವಿಡಿಯೊ ಮೂಲಕ ಎಬಿಡಿ ತಿಳಿಸಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಕೂಡ ಎಬಿಡಿ ಬೆಂಗಳೂರಿಗೆ ಬಂದಿರುವ ಸುದ್ದಿಯನ್ನು ತನ್ನ ಸಾಮಾಜಿಕ ಜಾಲತಾಣವಾದ ಟ್ವಿಟರ್​, ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದೆ. ಅದರಂತೆ ಎಬಿ ಡಿ ವಿಲಿಯರ್ಸ್‌ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದು ಮಾತನಾಡಿರುವ ವಿಡಿಯೊವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದೆ.

ಮಾರ್ಗದರ್ಶನ ನೀಡುವ ಸಾಧ್ಯತೆ

ಎಬಿಡಿ ತಮ್ಮ ಅಚ್ಚುಮೆಚ್ಚಿನ ಆರ್‌ಸಿಬಿ ತಂಡಕ್ಕೆ ಹಿಂದಿರುಗಿದ ವಿಚಾರ ತಿಳಿಯುತ್ತಿದ್ದಂತೆ ಇದೀಗ ಹಲವಾರು ಸುದ್ದಿಗಳು ಹರಿದಾಡಿದೆ. ಅದರಂತೆ ಎಬಿಡಿ ಅವರು ಆರ್​ಸಿಬಿ ತಂಡಕ್ಕೆ ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜತೆಗೆ ಡಿಸೆಂಬರ್‌ನಲ್ಲಿ ಐಪಿಎಲ್‌ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಈ ಸಲುವಾಗಿ ನವೆಂಬರ್‌ ಕೊನೇ ವಾರದ ಒಳಗೆ ಎಲ್ಲ ತಂಡಗಳು ತಾವು ಕಾಯ್ದಿರಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಬೇಕಾಗುತ್ತದೆ. ಇದಕ್ಕೆ ನೆರವಾಗುವ ಸಲುವಾಗಿ ಎಬಿಡಿ ಆರ್‌ಸಿಬಿ ಬಳಗ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | PAK VS SA | ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್​ಗೆ 33 ರನ್​ ಗೆಲುವು; ಸೆಮಿಫೈನಲ್​ ಆಸೆ ಜೀವಂತ

Exit mobile version