ಬೆಂಗಳೂರು : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಮರಳಲು ಬಯಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ. 11 ಋತುಗಳಲ್ಲಿ ಬೆಂಗಳೂರು ಫ್ರಾಂಚೈಸಿ ಪರ ಆಡಿದ ಡಿವಿಲಿಯರ್ಸ್ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಆದರೂ ಅವರಿಗೆ ಆರ್ಸಿಬಿ ಬಗ್ಗೆ ವಿಶೇಷವಾದ ಅಭಿಮಾನವಿದೆ. ಹೀಗಾಗಿ ಅವರು ಈ ತಂಡವನ್ನು ಅವರು ಪದೇಪದೇ ಉಲ್ಲೇಖಿಸುತ್ತಾರೆ.
ಐಪಿಎಲ್ನಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅವರು ಆರ್ಸಿಬಿಗೆ ಮಾರ್ಗದರ್ಶಕರಾಗಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಅದು ಸುಳ್ಳಾಯಿತು. ಎಬಿ ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಆರ್ಸಿಬಿಗೆ ಸೇರಲು ಎದುರು ನೋಡುತ್ತಿದ್ದಾರೆ. ಆರ್ಸಿಬಿ ನನ್ನ ಹೃದಯದಲ್ಲಿದೆ ಎಂದು ಹೇಳುವ ಮೂಲಕ ಅವರ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ.
“ನಾನು ಹಾಗೆ ಭಾವಿಸುತ್ತೇನೆ. ನನ್ನ ಹೃದಯವು ಆರ್ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆರ್ಸಿಬಿ ಬಣ್ಣ ಇಷ್ಟ
ನಾನು ಸದಾ ಆರ್ಸಿಬಿಗೆ ಬೆಂಬಲ ನೀಡಿದ್ದೇನೆ. ಎಲ್ಲಾ ಬೆಂಬಲ ಮತ್ತು ಪ್ರೀತಿಯನ್ನು ಪಡೆದುಕೊಂಡಿದ್ದೇನೆ. ಆರ್ಸಿಬಿ ಸೇರುವ ಬಗ್ಗೆ ನಾನು ಈಗ ಏನನ್ನೂ ಖಾತರಿಪಡಿಸಲಾರೆ. ಆದರೆ ಭವಿಷ್ಯದಲ್ಲಿ ನನ್ನನ್ನು ಆರ್ಸಿಬಿ ಬಣ್ಣದ ಲ್ಲಿ ನೋಡುವಿರಿ. ಆ ಬಣ್ಣ ನನಗೆ ಇಷ್” ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹೇಳಿದ್ದಾರೆ.
ಇದನ್ನೂ ಓದಿ : Team India : ವಿಶ್ವಕಪ್ ಫೈನಲ್ನಲ್ಲಿ ಸೋತಿದ್ದು ಯಾಕೆ? ದ್ರಾವಿಡ್, ರೋಹಿತ್ಗೆ ಪ್ರಶ್ನೆಗಳ ಸುರಿಮಳೆ
ಆರ್ಸಿಬಿ ಫ್ರಾಂಚೈಸಿ ಪರ 11 ಋತುಗಳನ್ನು ಆಡಿರುವ ಎಬಿ ಡಿವಿಲಿಯರ್ಸ್ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ಮೈದಾನದ ಯಾವುದೇ ಭಾಗಕ್ಕೆ ಚೆಂಡನ್ನು ಹೊಡೆಯುವ ಸಾಮರ್ಥ್ಯಕ್ಕಾಗಿ ಅವರನ್ನು 360 ಡಿಗ್ರಿ ಬ್ಯಾಟ್ಸ್ಮನ್ ಎಂದು ಕರೆಯಲಾಗುತ್ತದೆ. ಅವರು ಬೆಂಗಳೂರು ತಂಡದ ಪರ 184 ಪಂದ್ಯಗಳನ್ನು ಆಡಿದ್ದಾರೆ.
ಐಪಿಎಲ್ನ 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ ಡಿವಿಲಿಯರ್ಸ್ 5000 ರನ್ ಗಳಿಸಿದ್ದಾರೆ. ಅವರು 151 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಆ ರನ್ ಗಳನ್ನು ಗಳಿಸಿದ್ದಾರೆ. ಅವರು ೪೦ಕ್ಕಿಂತ ಕಡಿಮೆ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. ಅವರು ಮೈದಾನದಲ್ಲಿ ಇರುವಷ್ಟು ಹೊತ್ತು ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮವಾಗಿತ್ತು. ಎಂಥದ್ದೇ ಕಠಿಣ ಸಂದರ್ಭವಾದರೂ ಅವರು ಫೋರ್, ಸಿಕ್ಸರ್ಗಳನ್ನು ಸುಲಭವಾಗಿ ಬಾರಿಸುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದರು. ಸೋಲುವ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಅವರಿಗೆ ಇತ್ತು.
ಅವರ ವೀರೋಚಿತ ಪ್ರದರ್ಶನದ ಹೊರತಾಗಿಯೂ ಅವರಿಗೆ ಐಪಿಎಲ್ನಲ್ಲಿ ಯಾವುದೇ ಪ್ರಶಸ್ತಿ ದೊರಕಿಲ್ಲ. ಬಹುತೇಕ ವಿರಾಟ್ ಕೊಹ್ಲಿಯ ನಾಯಕತ್ವದಲ್ಲೇ ಆಡಿರುವ ಅವರು ಅತ್ಯುತ್ತಮ ಜತೆಯಾಟ ನೀಡಿ ಪಂದ್ಯವನ್ನು ಗೆಲ್ಲಿಸುತ್ತಿದ್ದರು. ಆದರೆ ಅವರಿಗೆ ಫೈನಲ್ಗೆ ತಲುಪಿ ಅಲ್ಲಿ ಗೆದ್ದು ಟ್ರೋಫಿ ಎತ್ತಲು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿ ಡಿವಿಲಿಯರ್ಸ್ ನಿಜವಾಗಿಯೂ ಆರ್ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರ ಆ ಮೂಲಕವಾದರೂ ಟ್ರೋಫಿ ಗೆಲ್ಲಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆ.