Site icon Vistara News

ಕ್ರಿಕೆಟಿಗ ವಿಲ್ಲಿಯರ್ಸ್‌ & ಟೆನಿಸ್‌ ತಾರೆ ಆಶ್ಲೇ ಈಗ ಗಾಲ್ಫ್‌ ಜೋಡಿ !

ದಕ್ಷಿಣ ಆಫ್ರಿಕಾದ ಸ್ಟಾರ್‌ ಆಟಗಾರ ಎಬಿ ಡಿ ವಿಲ್ಲಿಯರ್ಸ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಬ್ಯಾಟ್‌ ಬಿಟ್ಟ ಬಳಿಕ ಈಗ ಗಾಲ್ಫ್‌ ಸ್ಟಿಕ್‌ ಹಿಡಿಯಲು ಸಿದ್ಧರಾಗಿದ್ದಾರೆ. ಜೂನ್‌ 30ರಿಂದ ಜುಲೈ 1ರವರೆಗೆ ನ್ಯೂ ಜೆರ್ಸಿಯಲ್ಲಿ ನಡೆಯಲಿರುವ ಗಾಲ್ಫ್‌ ಸರಣಿಯ ಉದ್ಘಾಟನಾ ಪಂದ್ಯದಲ್ಲಿ ವಿಲ್ಲಿಯರ್ಸ್‌ ಭಾಗಿಯಾಗಲಿದ್ದಾರೆ. ಎಬಿ ಡಿ ವಿಲ್ಲಿಯರ್ಸ್‌ ಹಾಗೂ ಖ್ಯಾತ ಟೆನ್ನಿಸ್‌ ತಾರೆ ಆಶ್ಲೇ ಬಾರ್ತಿ ಜೊತೆಗೂಡಿ ರೆಸ್ಟ್‌ ಆಫ್‌ ದಿ ವರ್ಲ್ಡ್‌ ತಂಡವನ್ನು ಪ್ರತಿನಿಧಿಸಲ್ಲಿದ್ದಾರೆ. ಈ ಪಂದ್ಯದಲ್ಲಿ ಟೀಮ್‌ USA ಹಾಗೂ ರೆಸ್ಟ್‌ ಆಫ್‌ ದಿ ವರ್ಲ್ಡ್‌ ತಂಡ ಮುಖಾಮುಖಿಯಾಗಲಿದೆ.

ಟೀಮ್‌ ಯು.ಎಸ್‌.ಎ ತಂಡದಲ್ಲಿ ಸ್ವಿಮಿಂಗ್‌ ದಿಗ್ಗಜ ಮೈಕಲ್‌ ಫೆಲ್ಪ್ಸ್‌ ಹಾಗೂ ಬಾಕ್ಸಿಂಗ್‌ ಚಾಂಪಿಯನ್‌ ಆಸ್ಕರ್‌ ಡೆ ಲಾ ಹೊಯಾ ಒಗ್ಗೂಡಿ ಪ್ರತಿನಿಧಿಸಲಿದ್ದಾರೆ.

ರೆಸ್ಟ್‌ ಆಫ ದಿ ವರ್ಲ್ಡ್‌ ತಂಡದ ಇಬ್ಬರೂ ತಮ್ಮ ಕ್ರೀಡಾ ಕ್ಷೇತ್ರದಿಂದ ನಿವೃತ್ತಿ ಹೊಂದಿದವರು. ಎಬಿ ಕ್ರಿಕೆಟ್‌ ಪ್ರಪಂಚದಲ್ಲಿ Mr.360 ಎಂದೇ ಹೆಸರಾದವರು. ಎಬಿ ಡಿ ವಿಲ್ಲಿಯರ್ಸ್ ಬ್ಯಾಟ್ಸ್‌ಮನ್‌, ಕೀಪರ್‌ ಹಾಗೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ‌ ಆಗಿದ್ದರು. ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಕ್ರಿಕೆಟ್‌ನ ಎಲ್ಲಾ ಶ್ರೇಣಿಯಿಂದ ನಿವೃತ್ತಿ ಹೊಂದಿದ್ದರು. ಅಲ್ಲದೆ, ಎಬಿ ಡಿ ವಿಲ್ಲಿಯರ್ಸ್‌ ಗಾಲ್ಫ್‌, ಬೇಸ್‌ಬಾಲ್‌, ಫುಟ್‌ಬಾಲ್‌, ಹೀಗೆ ಅನೇಕ ಕ್ರೀಡೆಯಲ್ಲಿ ಹೆಸರು ಮಾಡಿದವರು.

ಮತ್ತೊಂದೆಡೆ ಟೆನ್ನಿಸ್‌ ತಾರೆ ಆಶ್ಲೆ ಬಾರ್ತಿ ಮೂರು ಬಾರಿ ಗ್ರಾಂಡ್‌ ಸ್ಲಾಮ್‌ ಚಾಂಪಿಯನ್‌ ಆದವರು. ಹಾಗೂ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದ್ದ ಟೆನ್ನಿಸ್‌ ಆಟಗಾರ್ತಿ. 2022ರ ಆಸ್ಟ್ರೇಲಿಯಾ ಓಪನ್‌ ಅಲ್ಲಿ ಗೆಲು ಸಾಧಿಸಿದ ಒಂದು ತಿಂಗಳಲ್ಲಿ ನಿವೃತ್ತಿ ಘೋಷಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿದ್ದು ಇನ್ನೂ ಹೆಚ್ಚಿನ ದಾಖಲೆ ಬರೆಯುವ ಸಾಧ್ಯತೆ ಇರುವ ಸಂದರ್ಭದಲ್ಲಿ ನಿವೃತ್ತಿ ಘೋಷಿಸಿದ್ದು ಕುತೂಹಲಕಾರಿಯಾಗಿತ್ತು.

ಈ ಬಗ್ಗೆ ಎಬಿ ಡಿ ವಿಲ್ಲಿಯರ್ಸ್‌ ಬಳಿ ಕೇಳಿದಾಗ ಅವರು ʼಎಲ್ಲರಿಗೂ ಅವರದ್ದೇ ಆದ ಕಾರಣಗಳಿರುತ್ತದೆ. ಈ ಕುರಿತು ನಾನು ವಿವರಿಸುವುದು ವಿಚಿತ್ರವಾಗಿರುತ್ತದೆ. ವಿಶ್ವವೇ ಅವರ ನಿರ್ದಾರವನ್ನು ಗೌರವಿಸುತ್ತದೆ.ʼ ಎಂದು ಪ್ರತಿಕ್ರಿಯಿಸಿದರು.

ಅಲ್ಲದೆ, ಎಬಿ ಡಿ ವಿಲ್ಲಿಯರ್ಸ್‌ ಅವರ ನಿವೃತ್ತಿಯ ನಿರ್ಧಾದ ಬಗ್ಗೆ ಅನಿಸಿಕೆ ಕೇಳಿದಾಗ ʼನಾನು ಕ್ರಿಕೆಟ್‌ ಮಿಸ್‌ ಮಾಡಿಕೊಳ್ಳುತ್ತೇನೆ. ಆದರೆ ನನ್ನ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ. ನಾನು ಮಾಡಿದ ನಿರ್ಧಾರ ತಪ್ಪು ಅನ್ನಿಸಬಹುದು ಆದರೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲʼ ಎಂದು ಹೇಳಿದರು.

ಈಗ ಈ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಒಟ್ಟಿಗೆ ಗಾಲ್ಫ್‌ ಆಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಕ್ರೀಡೆ ಮೇಲೆ ಯುದ್ಧದ ನೆರಳು: ವಿಂಬಲ್‌ಡನ್‌ ಟೂರ್ನಿಯಿಂದ ರಷ್ಯಾ ಆಟಗಾರರು ಬ್ಯಾನ್‌ !

Exit mobile version