Site icon Vistara News

CWG- 2022 | ಅಚಿಂತ ಶೆಯುಲಿಗೆ ಸ್ವರ್ಣ, ಭಾರತಕ್ಕೆ ಮೂರನೇ ಚಿನ್ನ, ಆರನೇ ಪದಕ

CWG- 2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್ ಕ್ರೀಡಾಕೂಟದಲ್ಲಿ (CWG- 2022) ಭಾರತದ ವೇಟ್‌ಲಿಫ್ಟರ್‌ ಅಚಿಂತ ಶೆಯುಲಿ ಬಂಗಾರದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೬ಕ್ಕೇರಿದೆ. ಭಾನುವಾರ ರಾತ್ರಿ ನಡೆದ ೭೩ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಒಟ್ಟಾರೆ ೩೧೩ ಕೆ.ಜಿ ಭಾರ ಎತ್ತಿದ ಅಚಿಂತಾ ಶೆಯುಲಿ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ತಮ್ಮ ಚೊಚ್ಚಲ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿಯೇ ಬೃಹತ್‌ ಸಾಧನೆ ಮಾಡಿದರು.

೨೦ ವರ್ಷದ ಅಚಿಂತಾ, ಸ್ನ್ಯಾಚ್‌ ವಿಭಾಗದಲ್ಲಿ ಕಾಮನ್ವೆಲ್ತ್‌ ದಾಖಲೆಯೊಂದಿಗೆ ೧೪೩ ಕೆ.ಜಿ ಭಾರ ಎತ್ತಿದರೆ, ಕ್ಲೀನ್‌ ಆಂಡ್ ಜರ್ಕ್‌ ವಿಭಾಗದಲ್ಲಿ ೧೭೦ ಕೆ.ಜಿ ಭಾರವನ್ನು ಎತ್ತಿದರು. ಕ್ಲೀನ್‌ ಮತ್ತು ಜರ್ಕ್‌ ವಿಭಾಗದ ೧೭೦ ಕೆ.ಜಿ ಯೂ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ೭೩ ಕೆ.ಜಿ ವಿಭಾಗದ ದಾಖಲೆಯಾಗಿದೆ.

ಸ್ನ್ಯಾಚ್ ವಿಭಾಗದ ಮೊದಲ ಯತ್ನದಲ್ಲಿ ೧೩೭ ಕೆ.ಜಿ ಭಾರ ಎತ್ತಿದ ಅಚಿಂತಾ, ಎರಡನೇ ಯತ್ನದಲ್ಲಿ ಮೂರು ಕೆ.ಜಿ ಸೇರಿಸಿ ಯಶಸ್ವಿಯಾದರು. ಮೂರನೆ ಯತ್ನದಲ್ಲಿ ೧೪೩ ಕೆ.ಜಿ ಭಾರ ಎತ್ತಿ ಕಾಮನ್ವೆಲ್ತ್‌ ದಾಖಲೆ ಸೃಷ್ಟಿಸಿದರು. ಅಂತೆಯೇ ಕ್ಲೀನ್‌ ಮತ್ತು ಜರ್ಕ್‌ ವಿಭಾಗದ ಮೊದಲ ಪ್ರಯತ್ನದಲ್ಲಿ 166 ಕೆ.ಜಿ ಭಾರ ಎತ್ತುವ ಮೂಲಕ ಮುನ್ನಡೆಯನ್ನು ಕಾಪಾಡಿಕೊಂಡರು. ಆದರೆ, ಎರಡನೇ ಯತ್ನದಲ್ಲಿ ೧೭೦ ಕೆ.ಜಿ ಭಾರ ಎತ್ತಲು ಪ್ರಯತ್ನಿಸಿ ವಿಫಲಗೊಂಡರು. ಆದರೆ, ಮೂರನೇ ಪ್ರಯತ್ನದಲ್ಲಿ ೧೭೦ ಕೆ.ಜಿ ಭಾರವನ್ನು ಎತ್ತಿ ಹಿಡಿದು ಬಂಗಾರದ ಕಿರೀಟವನ್ನು ಮುಡಿಗೇರಿಸಿಕೊಂಡರು.

ಕೋಲ್ಕೊತಾ ಸಮೀಪದ ಡೆಲ್‌ಪುರದ ಅಚಿಂತ ಬಡತನವನ್ನು ಮೀರಿ ಕ್ರೀಡಾಪಟುವಾಗಿ ಬೆಳೆದಿದ್ದರು. ೨೦೨೧ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದಿದ್ದ ಜೂನಿಯರ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ನ ಬಂಗಾರ ಪದಕ ಗೆದ್ದಿದ್ದ ಭಾರತದ ಭರವಸೆಯ ವೇಟ್‌ಲಿಫ್ಟರ್‌ ಆಗಿ ಬೆಳೆದಿದ್ದರು. ಇದೀಗ ಕಾಮನ್ವೆಲ್ತ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

ಸ್ಪರ್ಧೆಯುದ್ದಕ್ಕೂ ತಮ್ಮ ಸಾಮರ್ಥ್ಯದಿಂದ ಗಮನ ಸೆಳೆದ ಅಚಿಂತ್ಯ, ಬೆಳ್ಳಿ ಗೆದ್ದ ಮಲೇಷ್ಯಾದ ಮುಹಮ್ಮದ್‌ ಅವರಿಗಿಂತ ೧೦ ಕೆ.ಜಿ ಹೆಚ್ಚುವರಿ ಭಾರವನ್ನು ಎತ್ತಿದ್ದಾರೆ.

ಭಾರತದ ಖಾತೆಗೆ ೬ ಪದಕ

ಅಚಿಂತ್ಯ ಅವರ ಬಂಗಾರದ ಪದಕದೊಂದಿಗೆ ಭಾರತದ ಪ್ರಸಕ್ತ ಆವೃತ್ತಿಯ ಭಾರತದ ಪದಕಗಳ ಸಂಖ್ಯೆ ೬ಕ್ಕೆ ಏರಿದೆ. ಇದರಲ್ಲಿ ೩ ಬಂಗಾರದ ಪದಕವಾದರೆ, ಇನ್ನೆರಡು ಬೆಳ್ಳಿ ಹಾಗೂ ಮತ್ತೊಂದು ಕಂಚಿನ ಪದಕವಾಗಿದೆ. ಇಷ್ಟೂ ಪದಕಗಳು ಭಾರತೀಯ ವೇಟ್‌ಲಿಫ್ಟರ್‌ಗಳ ಕೊಡುಗೆ. ಮೊದಲ ಬಂಗಾರದ ಪದಕವನ್ನು ಶನಿವಾರ ರಾತ್ರಿ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಗೆದ್ದಿದ್ದದ್ದರೆ ಎರಡನೇ ಬಂಗಾರದ ಪದಕವನ್ನು ೬೭ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಜೆರಿಮಿ ಭಾನುವಾರ ಮಧ್ಯಾಹ್ನ ಗೆದ್ದುಕೊಟ್ಟಿದ್ದರು. ಅವರಿಬ್ಬರೂ ಕಾಮನ್ವೆಲ್ತ್‌ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದಿರುವುದು ವಿಶೇಷ. ಪುರುಷರ ವಿಭಾಗದಲ್ಲಿ ಸಂಕೇತ್‌ ಸರ್ಗರ್‌ ಬೆಳ್ಳಿ ಗೆದ್ದಿದ್ದರೆ, ಬಿಂದ್ಯಾರಾಣಿ ದೇವಿಯೂ ರಜತ ಪದಕ ತಮ್ಮದಾಗಿಸಿಕೊಂಡಿದ್ದರು. ಅಂತೆಯೇ ಕನ್ನಡಿಗ ಗುರುರಾಜ ಪೂಜಾರಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ವೇಟ್‌ಲಿಫ್ಟರ್‌ ಜೆರಿಮಿಗೆ ಸ್ವರ್ಣ

Exit mobile version