ಮುಂಬಯಿ: ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ (IPL 2023) ಪಂದ್ಯ ಅತ್ಯಂತ ರೋಚಕವಾಗಿ ನಡೆದಿತ್ತು. ಪ್ರವಾಸಿ ಪಂಜಾಬ್ ತಂಡ ಐದು ಬಾರಿಯ ಚಾಂಪಿಯನ್ನರ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತ್ತು. ಸ್ಯಾಮ್ ಕರ್ರನ್ ಸ್ಫೋಟಕ ಬ್ಯಾಟಿಂಗ್ ಹಾಗೂ ಜಿತೇಶ್ ಶರ್ಮಾ 7 ಎಸೆತಗಳಲ್ಲಿ 25 ರನ್ ಬಾರಿಸಿದ್ದರಿಂದ ಪಂಜಾಬ್ ಬಳಗಕ್ಕೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ಸತತ ಮೂರು ಗೆಲುವಿನೊಂದಿಗೆ ಹುಮ್ಮಸ್ಸಿನಲ್ಲಿದ್ದ ಮುಂಬೈ ತಂಡವು ಗೆಲುವಿನ ಓಟವನ್ನು ವಿಸ್ತರಿಸುವ ಯೋಜನೆಯಲ್ಲಿತ್ತು. ಆದರೆ ಅಂತಿಮ ಓವರ್‌ನಲ್ಲಿ ಅರ್ಶ್ದೀಪ್ ಸಿಂಗ್ ಅಮೋಘ ಬೌಲಿಂಗ್ ದಾಳಿ ನಡೆಸುವ ಮೂಲಕ ಎದುರಾಳಿ ತಂಡವನ್ನು 201 ರನ್ಗಳಿಗೆ ಕಟ್ಟಿ ಹಾಕಿತ್ತು. ಈ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಸ್ಪೆಲ್. ಅವರು ಒಂದೇ ಓವರ್‌ನಲ್ಲಿ 31 ರನ್ ನೀಡುವ ಮೂಲಕ ಮುಂಬಯಿ ಇಂಡಿಯನ್ಸ್ ಪರ ಕಳಪೆ ದಾಖಲೆಯನ್ನು ಸೃಷ್ಟಿಸಿಕೊಂಡಿದ್ದಾರೆ.
ಒಂದೇ ಓವರ್‌ನಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಅರ್ಜುನ್ ತೆಂಡೂ್ಲ್ಕರ್ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ತಂದೆಯ ಹೆಸರಿನಲ್ಲಿ ಆಡಲು ಸೇರಿಕೊಂಡರೆ ಈ ರೀತಿ ಆಗುವುದು ಎಂದೆಲ್ಲ ಬರೆದುಕೊಂಡಿದ್ದರು. ಆದರೆ, ಎದುರಾಳಿ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಹಾಗೂ ನಟಿ ಪ್ರೀತಿ ಜಿಂಟಾ ಈ ವಿಚಾರದಲ್ಲಿ ಅರ್ಜುನ್ ಪರವಾಗಿ ನಿಂತಿದ್ದಾರೆ. ಅವರನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಇವೆಲ್ಲ ಮಾಮೂಲಿ ಸಂಗತಿ. ಕೆಲವೊಂದು ಬಾರಿ ಕಳಪೆ ಪ್ರದರ್ಶನ ಕಂಡಬರುತ್ತದೆ. ಆದರೆ, ಅದನ್ನು ಅಲ್ಲಿಯೇ ನಿಲ್ಲಿಸಬೇಕು. ಯಾವ ಕಾರಣಕ್ಕೂ ಮುಂದುವರಿಸಬಾರದು. ಅರ್ಜುನ್ ಕೂಡ ಉತ್ತಮ ಪ್ರದರ್ಶನ ನೀಡುವುದು ಖಾತರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023: ಐಪಿಎಲ್ನಲ್ಲಿ ಅನಗತ್ಯ ದಾಖಲೆ ಬರೆದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್
“ಎಲ್ಲವೂ ಸುಧಾರಣೆ ಕಾಣುತ್ತದೆ ಮತ್ತು ಎಲ್ಲವೂ ಸರಿಯಾಗಿ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಮುದ್ದಾದ ಕೆನ್ನೆಗಳನ್ನು ಹೊಂದಿರುವ ಅರ್ಜನ್ ತೆಂಡೂಲ್ಕರ್ನನ್ನು ನೋಡಿದ್ದೇನೆ. ಇಂದು ಅವರು ಯುವ ಕ್ರಿಕೆಟಿಗನಾಗಿದ್ದಾನೆ. ಅವರ ಪ್ರಸಿದ್ಧ ಉಪನಾಮದ (ತೆಂಡೂಲ್ಕರ್) ಕಾರಣಕ್ಕೆ ನಾನು ಅವರ ಪರವಾಗಿ ಮಾತನಾಡುತ್ತಿಲ್ಲ. ಆತ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವಾಸ ಗಿಟ್ಟಿಸಿರಕೊಳ್ಳಲಿದ್ದೇನೆ. ಅದಕ್ಕಾಗಿ ಟ್ರೋಲ್ ಮಾಡಬಾರದು. ಏಕೆಂದರೆ ಎಲ್ಲರೂ ಇಂಥ ಸಂದರ್ಭವನ್ನು ಎದುರಿಸುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಕ್ರಿಕೆಟ್ನಲ್ಲಿ ಎಲ್ಲವೂ ನಡೆಯುತ್ತದೆ
ಕ್ರಿಕೆಟ್ ಆಡದಲ್ಲಿ ಎಲ್ಲವೂ ನಡೆಯುತ್ತದೆ. ಕೆಲವೊಂದು ಬಾರಿ ಕಳಪೆ, ಕೆಲವೊಂದು ಬಾರಿ ಉತ್ತಮ ಪ್ರದರ್ಶನ. ನಾವು ಆ ಕ್ಷಣಕ್ಕೆ ಅದನ್ನು ಅನುಭವಿಸುತ್ತೇವೆ. ಹೊಸ ದಾಖಲೆ ಸೃಷ್ಟಿಯಾದಾಗ ಹೊಸದು ಎನ್ನುತ್ತೇವೆ. ಗುಜರಾತ್ ವಿರುದ್ಧ ರಿಂಕು ಸಿಂಗ್ ಐದು ಸಿಕ್ಸರ್‌ಗಳನ್ನು ಬಾರಿಸಿದಾಗ, ಈ ರೀತಿಯ ಆಟವನ್ನು ಎಂದೂ ನೋಡಿಲ್ಲ ಎಂದು ಹೇಳಲಾಯಿತು. ಆದರೆ ನಾವು ಅಂಥ ಆಡವನ್ನು ನೋಡಿದ್ದೇವೆ, ನಮ್ಮ ತಂಡದ ವಿರುದ್ಧ ರಾಹುಲ್ ತೆವಾಟಿಯಾ ಸತತ ಸಿಕ್ಸರ್‌ಗಳನ್ನು ಹೊಡೆದಾಗ ಅಂಥದ್ದೇ ಆಟವನ್ನು ಕಂಡಿದ್ದೇ. ಒಟ್ಟಿನಲ್ಲಿ ಎಲ್ಲವೂ ನಡೆದು ಹೋಗುತ್ತದೆ ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ.
ಈ ಪಂದ್ಯದ ಆರಂಭದಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರಭ್ಸಿಮ್ರಾನ್ ಸಿಂಗ್ ವಿಕೆಟ್ ಪಡೆದು ಮಿಂಚಿದ್ದರು. ವಾಂಖೆಡೆ ಸ್ಟೇಡಿಯಮ್ನಲ್ಲಿ ಅವರಿಗೆ ಅದು ಮೊದಲ ವಿಕೆಟ್ ಆಗಿತ್ತು. ಆದರೆ ಕೊನೇ ಓವರ್‌ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಈ ಮೂಲಕ ಮೂರು ಓವರ್ಗಳ ಸ್ಪೆಲ್ನಲ್ಲಿ 48 ರನ್ ನೀಡಿ ನಿರಾಸೆ ಮೂಡಿಸಿದ್ದರು.