Site icon Vistara News

ICC World Cup 2023 : ಹಾಲಿ ಚಾಂಪಿಯನ್ ಇಂಗ್ಲೆಂಡ್​ ತಂಡವನ್ನೇ ಸದೆಬಡಿದ ಕ್ರಿಕೆಟ್​ ಶಿಶು ಅಫಘಾನಿಸ್ತಾನ

Afghanistan team

ನವ ದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ನಲ್ಲಿ (ICC World Cup 2023) ಅಚ್ಚರಿಯ ಫಲಿತಾಂಶವೊಂದು ಪ್ರಕಟವಾಗಿದೆ. ಹಾಲಿ ಚಾಂಪಿಯನ್​ (2019ರ ಏಕ ದಿನ ವಿಶ್ವಕಪ್​) ಇಂಗ್ಲೆಂಡ್ ತಂಡವನ್ನು ಕ್ರಿಕೆಟ್​ ಶಿಶು ಅಫಘಾನಿಸ್ತಾನ 69 ರನ್​ಗಳಿಂದ ಸೋಲಿಸಿ ಇತಿಹಾಸ ಬರೆದಿದೆ. ಇದರೊಂದಿಗೆ ಇಂಗ್ಲೆಂಡ್ ತಂಡ ಹಾಲಿ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯ 9 ವಿಕೆಟ್​ ಹೀನಾಯ ಸೋಲಿಗೆ ಒಳಗಾಗಿದ್ದ ಇಂಗ್ಲೆಂಡ್​​, ಅಫಘಾನಿಸ್ತಾನ ವಿರುದ್ಧ ಮತ್ತೊಂದು ಆಘಾತ ಎದುರಿಸಿದೆ. ಇಂಗ್ಲೆಂಡ್​ ತಂಡ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 137 ರನ್​ಗಳ ಗೆಲುವು ದಾಖಲಿಸಿತ್ತು.

2019ರ ವಿಶ್ವ ಕಪ್​ ವೇಳೆ ಮ್ಯಾಂಚೆಸ್ಟರ್​ನಲ್ಲಿ ನಡೆದ ಪಂದ್ಯದಲ್ಲಿ 150 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದ್ದ ಅಫಘಾನಿಸ್ತಾನ ತಂಡದ ಇದೀಗ ಆ ತಂಡವನ್ನು ಮಣಿಸಿ ಸೇಡು ತೀರಿಸಿಕೊಂಡಿದೆ. ಇಂಗ್ಲೆಂಡ್ ಹಾಗೂ ಅಪಘಾನಿಸ್ತಾನ ತಂಡ ಇದುವರೆಗೆ ಮೂರು ಬಾರಿ ಏಕ ದಿನ ಕ್ರಿಕೆಟ್​ನಲ್ಲಿ ಮುಖಾಮುಖಿಯಾಗಿವೆ. ಮೂರು ಪಂದ್ಯಗಳು ವಿಶ್ವ ಕಪ್​ನಲ್ಲಿ ಏರ್ಪಟ್ಟಿದ್ದವು. 2015ರಲ್ಲಿ ಹಾಗೂ 2019ರಲ್ಲಿ ಇಂಗ್ಲೆಂಡ್​ ಪಾರಮ್ಯ ಮೆರೆದಿದ್ದರೆ, ಇದೀಗ ನವ ದೆಹಲಿಯಲ್ಲಿ ಅಫಾನಿಸ್ತಾನ ತಂಡ ಸಂದರ್ಭೋಚಿತ ಪ್ರದರ್ಶನ ನೀಡಿ ಗೆದ್ದು ಸಂಭ್ರಮಿಸಿತು. ಈ ಫಲಿತಾಂಶವನ್ನು ಕ್ರಿಕೆಟ್ ಪಂಡಿತರು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕ್ರಿಕೆಟ್​ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಫಲಿತಾಂಶವೇ ಮತ್ತೊಂದು ಸಾಕ್ಷಿ ಎನಿಸಿತು.

ಇಲ್ಲಿನ ಅರುಣ್​ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ನಲ್ಲಿ ಚೇಸ್ ಮಾಡಿ ಗೆಲ್ಲುವುದು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಈ ನಿರ್ಧಾರ ತೆಗೆದುಕೊಂಡಿತು. ಜತೆಗೆ ಅಫಘಾನಿಸ್ತಾನ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಉದ್ದೇಶ ಹೊಂದಿತ್ತು. ಆಂತೆಯೇ ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 49.5 ಓವರ್​ಗಳಲ್ಲಿ 284 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 40.3 ಓವರ್​ಗಳಲ್ಲಿ 215 ರನ್​ಗಳಿಗೆ ಆಲ್​ಔಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ : Urvashi Rautela : ನಟಿ ಊರ್ವಶಿಯ 24 ಕ್ಯಾರೆಟ್ ಚಿನ್ನವಿರುವ ಐಫೋನ್ ನಾಪತ್ತೆ

ಅಫಘಾನಿಸ್ತಾನ ತಂಡದ ಉತ್ತಮ ಬ್ಯಾಟಿಂಗ್

ಬ್ಯಾಟಿಂಗ್​ ಆಹ್ವಾನ ಪಡೆದ ಅಫಘಾನಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಜ್​ (80) ಹಾಗೂ ಇಬ್ರಾಹಿಂ ಜದ್ರಾನ್​ (28) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಮೊದಲ ವಿಕೆಟ್​ಗೆ 114 ರನ್ ಬಾರಿಸಿತು. ಈ ಆರಂಭದೊಂದಿಗೆ ದೊಡ್ಡ ಮೊತ್ತ ಪೇರಿಸುವ ಗುರಿ ಹೊಂದಿದ್ದ ಅಫಘಾನಿಸ್ತಾನ ತಂಡ ಬಳಿಕ ಏಕಾಏಕಿ ಕುಸಿತ ಕಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಇಕ್ರಮ್​ ಅಲಿಖಿಲ್​ 58 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮುಜೀಬ್​ ಉರ್ ರಹಮಾನ್ 16 ರನ್​ಗಳಿಗೆ 28 ರನ್​ ಬಾರಿಸುವ ಮೂಲಕ ತಂಡಕ್ಎಕ ನೆರವಾದರು.

ಗುರಿ ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್ ಚಾಂಪಿಯನ್ ಪಟ್ಟಕ್ಕೆ ಪೂರಕವಾಗಿ ಆಡಲಿಲ್ಲ. 3 ರನ್​ಗೆ 1 ವಿಕೆಟ್ ಕಳೆದುಕೊಂಡು ತನ್ನ ವೈಫಲ್ಯವನ್ನು ಪ್ರದರ್ಶಿಸಿತು. ಬಳಿಕ ಸತತವಾಗಿ ವಿಕೆಟ್ ನಷ್ಟ ಮಾಡಿಕೊಂಡಿತು. ಮುಜೀಬ್​ ಉರ್ ರಹಮಾನ್ ಅವರು 51 ರನ್​ಗೆ 3 ವಿಕೆಟ್ ಉರುಳಿಸಿ ಇಂಗ್ಲೆಂಡ್ ಬ್ಯಾಟಿಂಗ್​ ಬೆನ್ನೆಲುಬು ಮುರಿದರು. ಮೊಹಮ್ಮದ್ ನಬಿ ಕೂಡ 16 ರನ್​ ನೀಡಿ 2 ವಿಕೆಟ್ ಕಬಳಿಸಿದರೆ, ರಶೀದ್​ ಖಾನ್​ 37 ರನ್​ಗೆ 3 ವಿಕೆಟ್​ ಉರುಳಿಸುವ ಮೂಲಕ ಇಂಗ್ಲೆಂಡ್ ಬೌಲರ್​ಗಳನ್ನು ಕಾಡಿದರು. ಹ್ಯಾರಿ ಬ್ರೂಕ್​ 66 ರನ್​ ಬಾರಿಸಿ ಇಂಗ್ಲೆಂಡ್ ಪರ ಗರಿಷ್ಠ ಮೊತ್ತ ದಾಖಲಿಸಿದ ಶ್ರೇಯಸ್ಸು ಪಡೆದರು. ಡೇವಿಡ್​ ಮಲಾನ್​ 32 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳ ನೆರವು ದೊರೆಯಲಿಲ್ಲ.

Exit mobile version