ಚೆನ್ನೈ: ನಾವೇ ನಂಬರ್ ಒನ್, ಕಪ್ ಗೆಲ್ಲುವುದು ನಾವೇ ಎಂದುಕೊಂಡು ಭಾರತಕ್ಕೆ ವಿಶ್ವ ಕಪ್ ಆಡಲು ಬಂದಿದ್ದ ಪಾಕಿಸ್ತಾನ ತಂಡ ದುರ್ಬಲ ಅಫಘಾನಿಸ್ತಾನ ತಂಡದ ವಿರುದ್ಧವೇ ಸೋತು ಅವಮಾನಕ್ಕೆ ಈಡಾಗಿದೆ. ಇದು ಬಾಬರ್ ಅಜಮ್ ನೇತೃತ್ವದ ಪಾಕ್ ಬಳಗಕ್ಕೆ ಹಾಲಿ ವಿಶ್ವ ಕಪ್ನಲ್ಲಿ (ICC World Cup 2023) ಸತತ ಮೂರನೇ ಸೋಲು. ಭಾರತ ವಿರುದ್ಧ ಮೋದಿ ಸ್ಟೇಡಿಯಮ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲ ಸೋಲು ಕಂಡಿದ್ದ ಪಾಕಿಸ್ತಾನ, ನಂತರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇದೀಗ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಸುಲಿನ ಸುಳಿಯಲ್ಲಿ ಸಿಲುಕಿದ್ದ ಪಾಕ್ ತಂಡದ ಬುರುಡೆ ಮೇಲೆ ಅಫಘಾನಿಸ್ತಾನದ ಆಟಗಾರರು ಆಮ್ಲೇಟ್ ಬೇಯಿಸಿದಂತಾಗಿದೆ.
Afghanistan overhaul the Pakistan total to garner their second #CWC23 win 👊#PAKvAFG 📝: https://t.co/3i10Bkie19 pic.twitter.com/OWFkhkJ6ex
— ICC Cricket World Cup (@cricketworldcup) October 23, 2023
ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಲು ಮುಂದಾಯಿತು. ಅಂತೆಯೇ ಆಫ್ಘನ್ ಬೌಲರ್ಗಳೆದುರು ವೈಫಲ್ಯ ಕಂಡು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 282 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಅಪಘಾನಿಸ್ತಾನ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 286 ರನ್ ಬಾರಿಸಿ ಎಂಟು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ಪಾಕ್ ವಿರುದ್ಧ ಅಫಘಾನಿಸ್ತಾನ ತಂಡ ದಾಖಲಿಸಿದ ಮೊದಲ ವಿಜಯವಾಗಿದೆ. ಜತೆಗೆ ಏಕ ದಿನ ಮಾದರಿಯಲ್ಲಿನ ಅತಿ ದೊಡ್ಡ ಚೇಸಿಂಗ್ ಜಯ.
ಅಫಘಾನಿಸ್ತಾನ ತಂಡ ಈ ಹಿಂದೆ ಎರಡು ಆವೃತ್ತಿಯ ವಿಶ್ವ ಕಪ್ನಲ್ಲಿ ಆಡಿತ್ತು. ಎರಡರಲ್ಲೂ ತಲಾ ಒಂದು ವಿಜಯ ಕಂಡಿತ್ತು. ಈ ಬಾರಿ ಎರಡನೇ ಗೆಲುವು ಕಂಡಿದೆ ಎಂಬುದೂ ವಿಶೇಷವೇ ಸರಿ. ಡೆಲ್ಲಿಯಲ್ಲಿ ನಡೆದ ಪಂದ್ಯದಲ್ಲಿ 2019ರ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದ ಅಪಘಾನಿಸ್ತಾನ ತಂಡ ಇದೀಗ ಐಸಿಸಿ ಏಕ ದಿನ ರ್ಯಾಂಕ್ ಪಟ್ಟಿಯ ಮೂರನೇ ತಂಡವಾಗಿರುವ ಪಾಕಿಸ್ತಾನವನ್ನು ಮಣಿಸಿದೆ. ಹೀಗಾಗಿ ಅಫಘಾನಿಸ್ತಾನ ತಂಡಕ್ಕಿದು ಅದ್ಭುತ ಆವೃತ್ತಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.
ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಸ್ಥಾನವೇನೂ ಪಲ್ಲಟವಾಗಿಲ್ಲ. ಅದಿನ್ನೂ ಐದನೇ ಸ್ಥಾನಲ್ಲಿಯೇ ಉಳಿದುಕೊಂಡಿದೆ. ಅದೇ ರೀತಿ ಅಪಘಾನಿಸ್ತಾನ ತಂಡದ ಸ್ಥಾನವೂ ಅಷ್ಟರಲ್ಲೇ ಇದೆ. ನೆಟ್ರೇಟ್ ಪ್ರಕಾರ ಅಫಘಾನಿಸ್ತಾನಕ್ಕಿಂತ ಕೊಂಚ ಮುಂದಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ಅದ್ಭುತ ಪ್ರದರ್ಶನ
ಸ್ಪರ್ಧಾತ್ಮಕ ಗುರಿಯನ್ನು ಪಡೆದಿದ್ದ ಅಫಘಾನಿಸ್ತಾನ ತಂಡದ ಬ್ಯಾಟರ್ಗಳು ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿದರು. ಉತೃಷ್ಟ ತಂಡಗಳು ನೀಡುವ ಪ್ರದರ್ಶನದಂತಿತ್ತು ಆಫ್ಘನ್ ಆಟಗಾರರ ಆಟ. ಆರಂಭಿಕ ಜೋಡಿಯಾಗಿರುವ ರಹ್ಮನುಲ್ಲಾ ಗುರ್ಬಜ್ (65) ಹಾಗೂ ಇಬ್ರಾಹಿಂ ಜದ್ರಾನ್ (87) ಮೊದಲ ವಿಕೆಟ್ಗೆ 130 ರನ್ ಬಾರಿಸಿ ಮಿಂಚಿದರು. ನಂತರದ ವಿಕೆಟ್ಗೆ ಇನ್ನೂ 60 ರನ್ ಸೇರ್ಪಡೆಗೊಂಡಿತು. ಮೂರನೇ ವಿಕೆಟ್ಗೆ 96 ರನ್ಗಳು ಸೇರ್ಪಡೆಗೊಂಡವು. ಮೂರನೇ ಕ್ರಮಾಂಕದಲ್ಲಿ ಆಡಿದ ರಹ್ಮತ್ ಶಾ (77) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 48 ರನ್ ಬಾರಿಸಿದರು. ಅಂದಹಾಗೆ ಮೊದಲ ಮೂವರು ಬ್ಯಾಟರ್ಗಳು ಅರ್ಧ ಶತಕ ಬಾರಿಸಿ ಮಿಂಚಿದರೆ, ಹಶ್ಮತುಲ್ಲಾ 2 ರನ್ಗಳ ಕೊರತೆಯಿಂದ ಅರ್ಧ ಶತಕದ ಅವಕಾಶ ತಪ್ಪಿಸಿಕೊಂಡರು. ಇದು ಏಕ ದಿನ ಮಾದರಿಯಲ್ಲಿ ಅಫಘಾನಿಸ್ತಾನ ತಂಡದ ಅಮೋಘ ಪ್ರದರ್ಶನ ಎನಿಸಿಕೊಳ್ಳಲಿದೆ.
ಈ ಸುದ್ದಿಯನ್ನೂ ಓದಿ : Hardik Pandya : ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಪಾಂಡ್ಯ ಔಟ್? ಬಿಸಿಸಿಐನ ಹೊಸ ಅಪ್ಡೇಟ್ ಏನು?
ಪಾಕ್ ಸಾಧಾರಣ ಮೊತ್ತ
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಅಬ್ದುಲ್ಲಾ ಶಫಿಕ್ (58) ಹಾಗೂ ನಾಯಕ ಬಾಬರ್ ಅಜಮ್ (74) ಅರ್ಧ ಶತಕ ಬಾರಿಸಿದರೂ ಅವರ ಈ ಆಟದಲ್ಲಿ ಯಾವುದೇ ಕಿಮ್ಮತ್ತು ಇರಲಿಲ್ಲ. ತಂಡದ ಪಾಲಿಗೆ ದೊಡ್ಡ ಮೊತ್ತ ಪೇರಿಸುವ ಗುರಿಯೂ ಇಲಿಲ್ಲ. ಅಂತಿಮವಾಗಿ ಶದಾಬ್ ಖಾನ್ ಹಾಗೂ ಇಫ್ತಿಕಾರ್ ಅಹಮದ್ ಕಡಿಮೆ ಎಸೆತಗಳಲ್ಲಿ ತಲಾ 40 ರನ್ ಬಾರಿಸಿದರೂ ಅದರಿಂದ ತಂಡಕ್ಕೆ ಪ್ರಯೋಜನ ಆಗಿಲ್ಲ ಎಂಬುದು ಫಲಿತಾಂಶದ ಬಳಿಕ ಗೊತ್ತಾಯಿತು. ಚೇಸ್ ಮಾಡಿ ಗೆಲ್ಲಬಹುದಾದ ಚೆನ್ನೈ ಪಿಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಅದಕ್ಕೆ ಬೆಲೆ ತೆತ್ತಿತು.