Site icon Vistara News

ICC World Cup 2023 : ಲಂಕಾ ಮಣಿಸಿದ ಅಫಘಾನಿಸ್ತಾನ; ವಿಶ್ವ ಕಪ್​ನಲ್ಲಿ 3ನೇ ಜಯ

Afghan Team

ಪುಣೆ: ಯೋಜಿತ ರೂಪದಲ್ಲಿ ಏಕ ದಿನ ಕ್ರಿಕೆಟ್ ವಿಶ್ವ ಕಪ್​ ಅಭಿಯಾನ (ICC World Cup 2023) ನಡೆಸುತ್ತಿರುವ ಅಫಘಾನಿಸ್ತಾನ ತಂಡ 30ನೇ ಪಂದ್ಯದಲ್ಲಿ 1996ರ ವಿಶ್ವ ಕಪ್​ ಚಾಂಪಿಯನ್​ ಶ್ರೀಲಂಕಾ ತಂಡವನ್ನು 7 ವಿಕೆಟ್​ಗಳಿಂದ ಸೋಲಿಸಿದೆ. ಈ ಮೂಲಕ ಆಫ್ಘನ್​ ತಂಡ ಹಾಲಿ ಆವೃತ್ತಿಯಲ್ಲಿ ಮೂರನೇ ಗೆಲುವು ಕಂಡಂತಾಗಿದೆ. ಇಷ್ಟೊಂದು ಪಂದ್ಯಗಳನ್ನು ಈ ತಂಡ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ನಿಯಂತ್ರಿತ ಪ್ರದರ್ಶನ ನೀಡುತ್ತಿರುವ ಈ ತಂಡ ಹೆಚ್ಚು ಕೌಶಲವನ್ನು ಬೇಡುವ ಏಕ ದಿನ ಮಾದರಿಗೆ ಸಂಪೂರ್ಣವಾಗಿ ಒಗ್ಗಿಕೊಂಡಿದೆ. ಈ ಗೆಲುವಿನೊಂದಿಗೆ ಆರು ಅಂಕ ಸಂಪಾದಿಸಿರುವ ಹಶ್ಮತುಲ್ಲಾ ಶಾಹಿದಿ ಪಡೆ ವಿಶ್ವ ಕಪ್​ನ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಐದನೇ ಸ್ಥಾನದಲ್ಲಿದ್ದ ಲಂಕಾ ತಂಡವನ್ನು ಆರನೇ ಸ್ಥಾನಕ್ಕೆ ತಳ್ಳಿದೆ. ಒಂದು ವಿಶ್ವ ಕಪ್​ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಆ ತಂಡಕ್ಕೆ ಇದು ವಿಶೇಷ ಸಾಧನೆ. ಅಫಘಾನಿಸ್ತಾನ ತಂಡಕ್ಕೆ ಇನ್ನೂ 3 ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಸೆಮಿಫೈನಲ್ ರೇಸ್​ನಲ್ಲಿ ಉಳಿದುಕೊಂಡಿದೆ ಎಂದು ಹೇಳಬಹುದು.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಲಂಕಾ ಪಡೆ 49.3 ಓವರ್​ಗಳಲ್ಲಿ 241 ರನ್​ ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ಕಳೆದುಕೊಂಡು 242 ರನ್ ಬಾರಿಸಿ ಜಯಶಾಲಿಯಾಯಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಅಫಘಾನಿಸ್ತಾನ ತಂಡ ಉತ್ತಮ ಆರಂಭ ಪಡೆಯಲಿಲ್ಲ. ರಹ್ಮನುಲ್ಲಾ ಗುರ್ಬಜ್ ಶೂನ್ಯಕ್ಕೆ ಔಟಾಗುವ ಮೂಲಕ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ, ಆರಂಭಿಕ ಬ್ಯಾಟರ್ ಇಬ್ರಾಹಿ ಜದ್ರಾನ್​ (39) ಹಾಗೂ ರಹ್ಮತ್ ಶಾ (62) ರನ್​ ಗಳಿಕೆಯನ್ನು ಮುಂದುವರಿಸಿದರು. ಈ ಜೋಡಿ ಎರಡನೇ ವಿಕೆಟ್​ಗೆ 73 ರನ್​ ಕಲೆ ಹಾಕಿದರು. ಇಬ್ರಾಹಿಂ ಔಟಾಗುತ್ತಿದ್ದಂತೆ ಕ್ರೀಸ್​ಗೆ ಬಂದ ನಾಯಕ ಹಶ್ಮತುಲ್ಲಾ ಜವಾಬ್ದಾರಿಯಿಂದ ಬ್ಯಾಟ್ ಮಾಡಿದರು. ರಹ್ಮತ್ ಜತೆ ಇನಿಂಗ್ಸ್ ಕಟ್ಟಿದರು. ಏತನ್ಮಧ್ಯೆ, 72 ಎಸೆತಗಳನ್ನು ಎದುರಿಸಿದ ರಹ್ಮತ್​ 7 ಪೋರ್​ಗಳ ಮೂಲಕ 62 ರನ್ ಬಾರಿಸಿ ಔಟಾದರು. ಈ ವೇಳೆ ತಂಡದ ಮೊತ್ತ 131.

ಬಳಿಕ ಜತೆಯಾದ ಹಶ್ಮತುಲ್ಲಾ ಹಾಗೂ ಅಜ್ಮತುಲ್ಲಾ ಒಮರ್ಜೈ 111 ರನ್​ಗಳ ಜತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. ಅಜ್ಮತುಲ್ಲಾ ಅಬ್ಬರದ ಬ್ಯಾಟಿಂಗ್ ಮೂಲಕ 63 ಎಸೆತಗಳಲ್ಲಿ 6 ಫೋರ್ ಹಾಗೂ 3 ಸಿಕ್ಸರ್ ಮೂಲಕ 73 ರನ್ ಬಾರಿಸಿ ಅಜೇಯರಾಗಿ ಉಳಿದರು. ನಾಯಕ ಶಾಹಿದಿ 74 ಎಸೆತಗಳಲ್ಲಿ 2 ಫೋರ್ ಹಾಗೂ ಒಂದು ಸಿಕ್ಸ್​ನೊಂದಿಗೆ 58 ರನ್ ಬಾರಿಸಿದರು.

ಈ ಸುದ್ದಿಯನ್ನೂ ಓದಿ : ICC World Cup 2023 : ಭಾರತದ ಪಿಚ್​ ಹಿಡಿಸಲಿಲ್ಲ; ಸೋಲಿಗೊಂದು ಕುಂಟು ನೆಪ ಹೇಳಿದ ಪಾಕ್​ ಕೋಚ್​

ಲಂಕಾ ಬ್ಯಾಟಿಂಗ್ ವೈಫಲ್ಯ

ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು ಸೆಮಿಫೈನಲ್ ಕನಸು ಕಾಣುತ್ತಿದ್ದ ಲಂಕಾ ತಂಡ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡಲಿಲ್ಲ. ಆರಂಭದಿಂದಲೇ ಸತತವಾಗಿ ವಿಕೆಟ್​ ಕಳೆದುಕೊಂಡು ಹೋಗಿ ಆಲ್​ಔಟ್​ ಆಯಿತು. ಆರಂಭಿಕ ಬ್ಯಾಟರ್​​ ಪಾಥುಮ್​ ನಿಸ್ಸಾಂಕ 46 ರನ್ ಬಾರಿಸಿದರೂ, ಕರುಣಾರತ್ನೆ 15 ರನ್​ಗೆ ಸೀಮಿತಗೊಂಡರು. ಕುಸಾಲ್​ ಮೆಂಡಿಸ್​ 39 ರನ್ ಹೊಡೆದು ಔಟಾದರೆ, ಸಮರವಿಕ್ರಮ ಅವರ ಕೊಡುಗೆ 36. ಅಸಲಂಕಾ 22 ರನ್​ ಗಳಿಸಿ ಔಟಾದರೆ, ಧನಂಜಯ ಡಿಸಿಲ್ವಾ 14 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಏಂಜೆಲೋ ಮ್ಯಾಥ್ಯೂಸ್​ 23 ಹಾಗೂ ಕೊನೆಯಲ್ಲಿ ಮಹೀಶ್ ತೀಕ್ಷಣಾ 29 ರನ್ ಗಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version