Site icon Vistara News

NED vs AFG: ಡಚ್ಚರನ್ನು ಮಣಿಸಿ ಪಾಕ್​ ಹಿಂದಿಕ್ಕಿದ ಆಫ್ಘನ್​​; ಸೆಮಿಗೆ ಇನ್ನೆರಡು ಹೆಜ್ಜೆ ಬಾಕಿ

NED vs AFG

ಲಕ್ನೋ: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಅಫಘಾನಿಸ್ತಾನ(NED vs AFG) ತಂಡ ನೆದರ್ಲೆಂಡ್ಸ್​ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ಸನಿಹಕ್ಕೆ ಬಂದು ನಿಂತಿದೆ. ಇದು ಆಡಿದ 7 ಪಂದ್ಯಗಳಲ್ಲಿ ಆಫ್ಘನ್​ಗೆ ಒಲಿದ 4ನೇ ಗೆಲುವಾಗಿದೆ. ಈ ಗೆಲುವಿನೊಂದಿಗೆ ಆಫ್ಘನ್​ ಅಂಕಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ. ಇನ್ನುಳಿದ 2 ಪಂದ್ಯಗಳನ್ನು ಗೆದ್ದರೆ ಸೆಮಿ ಟಿಕೆಟ್​ ಖಾತ್ರಿಗೊಳ್ಳಲಿದೆ.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ನೆದರ್ಲೆಂಡ್ಸ್​ 46.3 ಓವರ್​ಗಳಲ್ಲಿ ಕೇವಲ 179 ರನ್​ಗಳಿಸಿ ಸರ್ವಪತನ ಕಂಡಿತು. ಸುಲಭ ಗುರಿ ಬೆನ್ನಟ್ಟಿದ ಆಫ್ಘನ್​ ಆರಂಭಿಕ ಆಘಾತ ಕಂಡರೂ ಆ ಬಳಿಕ ಚೇತರಿಕೆ ಕಂಡು 31.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 181 ರನ್​ ಬಾರಿಸಿ ಜಯಭೇರಿ ಮೊಳಗಿಸಿತು.

ಇದನ್ನೂ ಓದಿ ಮಳೆ ಭೀತಿಯ ಮಧ್ಯೆ ಪಾಕ್​-ಕಿವೀಸ್​ ಅದೃಷ್ಟ ಪರೀಕ್ಷೆ; ಇತ್ತಂಡಗಳಿಗೂ ಗೆಲುವು ಅತ್ಯಗತ್ಯ

ಚೇಸಿಂಗ್​ ವೇಳೆ ಆಫ್ಘನ್ ತಂಡ​ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್(10) ಮತ್ತು ಇಬ್ರಾಹಿಂ ಜದ್ರಾನ್(20) ಅವರ ವಿಕೆಟ್​ ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆ ಬಳಿಕ ಕ್ರೀಸ್​ಗಿಳಿದ ರಹಮತ್ ಶಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ ಉತ್ತಮ ಇನಿಂಗ್ಸ್​ ಕಟ್ಟಿ ತಂಡಕ್ಕೆ ಹಾನಿಯಾಗದಂತೆ ನೋಡಿಕೊಂಡರು. ಇದೇ ವೇಳೆ ರಹಮತ್ ಶಾ ಅವರು 47 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು.

ಅರ್ಧಶತಕ ಬಾರಿಸಿ 2 ರನ್​ ಗಳಿಸಿಸುವ ವೇಳೆ ರಹಮತ್ ಶಾ ವಿಕೆಟ್​ ಕೈಚೆಲ್ಲಿದರು. ಒಟ್ಟು 54 ಎಸೆತ ಎದುರಿಸಿದ ಅವರು 8 ಬೌಂಡರಿ ಚಚ್ಚಿ 52 ರನ್​ ಗಳಿಸಿದರು. ಮೂರನೇ ವಿಕೆಟ್​ಗೆ ಶಾಹಿದಿ ಜತೆ ಅತ್ಯಮೂಲ್ಯ 74 ರನ್​ಗಳನ್ನು ಒಟ್ಟುಗೂಡಿಸಿದರು. ಈ ವಿಕೆಟ್​ ಪತನ ಬಳಿಕ ನಾಯಕ ಹಶ್ಮತುಲ್ಲಾ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಅಜ್ಮತುಲ್ಲಾ ಒಮರ್ಜಾಯ್ ಉತ್ತಮ ಸಾಥ್​ ನೀಡಿದರು. ಒಮರ್ಜಾಯ್ 31 ರನ್​ ಬಾರಿಸಿ ಅಜೇಯರಾಗಿ ಉಳಿದರು. ಹಶ್ಮತುಲ್ಲಾ 64 ಎಸೆತಗಳಿಂದ ಅಜೇಯ 56 ಬಾರಿಸಿದರು.

ಬ್ಯಾಟಿಂಗ್​ ಜೋಶ್​ ಮರೆತ ನೆದರ್ಲೆಂಡ್ಸ್

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ನೆದರ್ಲೆಂಡ್ಸ್​, ಈ ಹಿಂದಿನ ಬ್ಯಾಟಿಂಗ್​ ಜೋಶ್​ ತೋರುವಲ್ಲಿ ವಿಫಲವಾಯಿತು. ಎಂತಹದ್ದೇ ಬಲಿಷ್ಠ ತಂಡವಾಗಿದ್ದರೂ ಅವರ ಎದುರು ಕನಿಷ್ಟ 250 ಗಡಿ ದಾಟಿದ ಸಾಧನೆ ನೆದರ್ಲೆಂಟ್ಸ್​ ತಂಡದ್ದಾಗಿತ್ತು. ಆರಂಭಿಕ ಹಂತದಲ್ಲಿ 50 ಒಳಗಡೆ 5 ವಿಕೆಟ್​ ಕಳೆದುಕೊಂಡರೂ ಆ ಬಳಿಕ ಬರುವ ನಾಯಕ ಸ್ಕಾಟ್ ಎಡ್ವರ್ಡ್ಸ್ ಮತ್ತು 7ನೇ ಕ್ರಮಾಂಕದಲ್ಲಿ ಆಡಲಿಳಿಯುವ ವ್ಯಾನ್ ಡೆರ್ ಮೆರ್ವೆ ಸೇರಿಕೊಂಡು ಬೃಹತ್​ ಮೊತ್ತದ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಉಭಯ ಆಟಗಾರರು ಬೇಗನೆ ವಿಕೆಟ್​ ಕಳೆದುಕೊಂಡರು.

ನಂಬುಗೆಯ ಬ್ಯಾಟರ್​ ಸ್ಕಾಟ್ ಎಡ್ವರ್ಡ್ಸ್ ಶೂನ್ಯಕ್ಕೆ ಔಟಾದದ್ದು ತಂಡಕ್ಕೆ ಭಾರಿ ಹಿನ್ನಡೆಯಾಯಿತು. ಇವರ ಜತೆಗಾರ ವ್ಯಾನ್ ಡೆರ್ ಮೆರ್ವೆ ಕೂಡ 11 ರನ್​ಗೆ ಆಟ ಮುಗಿಸಿದರು. ತಮಡಕ್ಕೆ ಆಸರೆಯಾದದ್ದು ಇಬ್ಬರು ಮಾತ್ರ. ಮ್ಯಾಕ್ಸ್‌ ಓ ಡೌಡ್‌ ಮತ್ತು ಸೈಬ್ರಾಂಡ್ ಎಂಗಲ್‌ಬ್ರೆಕ್ಟ್. ಇವರು ಕೆಲ ಕಾಲ ಕ್ರೀಸ್​ ಆಕ್ರಮಿಸಿದ ಕಾರಣ ತಂಡ 150 ಗಡಿ ದಾಟಿತು. ಇಲ್ಲವಾದರೆ 100ರ ಒಳಗಡೆ ಕುಸಿಯುತ್ತಿತ್ತು.

ಎಂಗಲ್‌ಬ್ರೆಕ್ಟ್ ಅರ್ಧಶತಕ

ಮ್ಯಾಕ್ಸ್‌ ಓ ಡೌಡ್‌ 40 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 42 ರನ್​ ಗಳಿಸಿದರು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಅವರು 6 ಬೌಂಡರಿ ನೆರವಿನಿಂದ 58 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಅಕರ್ಮನ್ 29 ರನ್​ ಗಳಿಸಿ ಸಣ್ಣ ಕೊಡುಗೆ ಸಲ್ಲಿಸಿದರು. ನೆದರ್ಲೆಂಡ್ಸ್​ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಕನಿಷ್ಠ ಒಂದು ಸಿಕ್ಸರ್​ ಕೂಡ ದಾಖಲಾಗಲಿಲ್ಲ. ಆಫ್ಘನ್​ ಪರ ಅನುಭವಿ ಮತ್ತು ಹಿರಿಯ ಸ್ಪಿನ್ನರ್​ ಮೊಹಮ್ಮದ್​ ನಬಿ ಒಂದು ಮೇಡನ್ 28 ರನ್​ ವೆಚ್ಚದಲ್ಲಿ 3 ವಿಕೆಟ್​ ಕಿತ್ತರು. ನೂರ್​ ಅಹ್ಮದ್​ 31 ರನ್​ಗೆ 2 ವಿಕೆಟ್​ ಪಡೆದರು. ರಶೀದ್​ ಖಾನ್​ 10 ಓವರ್​ ಬೌಲಿಂಗ್​ ನಡೆಸಿದರೂ ವಿಕೆಟ್​ ಲೆಸ್​ ಎನಿಸಿಕೊಂಡರು.

Exit mobile version