Site icon Vistara News

Asia Cup- 2022 | ಅಫಘಾನಿಸ್ತಾನ ತಂಡಕ್ಕೆ 8 ವಿಕೆಟ್‌ ಭರ್ಜರಿ ಜಯ, ಏಷ್ಯಾ ಕಪ್‌ನಲ್ಲಿ ಶುಭಾರಂಭ

asia cup

ದುಬೈ : ಏಷ್ಯಾ ಕಪ್‌ನ (Asia Cup- 2022) ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫಘಾನಿಸ್ತಾನ ತಂಡ ೮ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಫ್ಘನ್‌ ತಂಡ ಸುಲಭ ಜಯದೊಂದಿಗೆ ಹಾಲಿ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಅಫಘಾನಿಸ್ತಾನ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಲಂಕಾ ತಂಡ ಪೇಲವ ಬ್ಯಾಟಿಂಗ್‌ ಪ್ರದರ್ಶಿಸಿ ೧೯.೪ ಓವರ್‌ಗಳಲ್ಲಿ ೧೦೫ ರನ್‌ಗಳಿಗೆ ಆಲ್‌ಔಟ್‌ ಆಯಿತು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಅಫಘಾನಿಸ್ತಾನ ತಂಡ ಕೇವಲ ೧೦.೧ ಓವರ್‌ಗಳಲ್ಲಿ ೨ ವಿಕೆಟ್‌ ನಷ್ಟಕ್ಕೆ ೧೦೬ ರನ್‌ ಬಾರಿಸಿ ಗೆಲುವು ಸಾಧಿಸಿತು.

ಗುರಿ ಬೆನ್ನಟ್ಟಿದ ಅಫಘಾನಿಸ್ತಾನ ತಂಡದ ಪರ ಆರಂಭಿಕ ಬ್ಯಾಟರ್‌ ಹಜರುತುಲ್ಲಾ ಝಝೈ ಅಜೇಯ ೩೭ ರನ್‌ ಬಾರಿಸಿದರೆ, ಮತ್ತೊಬ್ಬ ಆರಂಭಿಕ ಆಟಗಾ ರಹಮನುಲ್ಲಾ ಗುರ್ಬಜ್‌ ೧೮ ಎಸೆತಗಳಲ್ಲಿ ಸ್ಫೋಟಕ ೪೦ ರನ್‌ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ೮೩ ರನ್‌ ಬಾರಿಸಿ ಗೆಲುವು ಸುಲಭವಾಗಿಸಿದರು. ಬಳಿಕ ಇಬ್ರಾಹಿಂ ಜದ್ರಾನ್‌ ೧೫ ರನ್‌ ಗಳಿಸಿದರೆ, ಜನ್‌ಬುಲ್ಲಾ ಜದ್ರಾನ್‌ ೨ ರನ್‌ ಬಾರಿಗೆ ಗೆಲುವಿನ ಕೇಕೆ ಹಾಕಿದರು.

ಲಂಕಾ ಬ್ಯಾಟಿಂಗ್‌ ಫೇಲ್‌

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡದ ಆರಂಭಿಕ ಬ್ಯಾಟರ್‌ಗಳು ವೈಫಲ್ಯ ಎದುರಿಸಿದರು. ೫ ರನ್‌ಗಳಿಗೆ ೩ ವಿಕೆಟ್‌ ಕಳೆದುಕೊಂಡಿತು. ಬಳಿಕ ಭಾನುಕಾ ರಾಜಪಕ್ಸ (೩೮) ಹಾಗೂ ಧನುಷ್ಕಾ ಗುಣತಿಲಕ (೧೭) ತಂಡವನ್ನು ಕಾಪಾಡುವ ಯತ್ನ ಮಾಡಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಚಾಮಿಕಾ ಕರುಣಾರತ್ನೆ (೩೧) ರನ್‌ ಬಾರಿಸುವ ಮೂಲಕ ೬೯ ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದ್ದ ಲಂಕಾ ತಂಡದ ಮರ್ಯಾದೆ ಕಾಪಾಡಿದರು. ಅಫಘಾನಿಸ್ತಾನ ತಂಡದ ಬೌಲಿಂಗ್‌ ವಿಭಾಗದಲ್ಲಿ ಫಜಲಾಖ್‌ ಫಾರೂಕಿ ೩ ವಿಕೆಟ್‌ ಕಬಳಿಸಿದರೆ, ಮುಜೀಬ್‌ ಉರ್‌ ರಹಮಾನ್‌ ಹಾಗೂ ಮೊಹಮ್ಮದ್‌ ನಬಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಸ್ಕೋರ್‌ ವಿವರ

ಶ್ರೀಲಂಕಾ: ೧೯.೪ ಓವರ್‌ಗಳಲ್ಲಿ ೧೦೫ (ಭಾನುಕಾ ರಾಜಪಕ್ಸ ೩೮, ಚಾಮಿಕಾ ಕರುಣಾರತ್ನೆ ೩೧, ಫಜಲಾಖ್‌ ಫಾರೂಕಿ ೩ ಮುಜೀಬ್‌ ಉರ್‌ ರಹ್ಮಾನ್‌ ೨೪ಕ್ಕೆ೨, ಮೊಹಮ್ಮದ್‌ ಶಮಿ ೧೪ ರನ್‌ಗಳಿಗೆ ೨).

ಅಫಘಾನಿಸ್ತಾನ: ೧೦.೧ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೦೬ (ಹಜರತುಲ್ಲಾ ಝಝೈ ೩೭, ರಹಮನುಲ್ಲಾ ಗುರ್ಬಜ್‌ ೪೦, ಇಬ್ರಾಹಿಂ ಜದ್ರಾನ್‌ ೧೫; ವಾನಿಂದು ಹಸರಂಗ ೧೯ ರನ್‌ಗಳಿಗೆ ೧).

Exit mobile version