Site icon Vistara News

AIFF ELECTION | ರಾಜ್ಯದ ಕಾಂಗ್ರೆಸ್‌ ಶಾಸಕ ಎನ್‌. ಎ ಹ್ಯಾರಿಸ್‌ ನಾಮಪತ್ರ ಸಲ್ಲಿಕೆ

AIFF ELECTION

ನವ ದೆಹಲಿ : ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದ ಚುನಾವಣೆ (AIFF ELECTION) ದಿನ ಕಳೆದಂತೆ ರಂಗೇರುತ್ತಿದೆ. ವಿಶ್ವ ಫುಟ್ಬಾಲ್ ಒಕ್ಕೂಟ (FIFA) ನಿಷೇಧಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಗಮನ ಸೆಳೆದಿರುವ ಈ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್‌ ಶಾಸಕ ಹಾಗೂ ಕರ್ನಾಟಕ ಫುಟ್ಬಾಲ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಎನ್‌. ಎ ಹ್ಯಾರಿಸ್‌ ಅವರು ರಾಷ್ಟ್ರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ (ಆಗಸ್ಟ್‌ 19) ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು.

ಇವರಲ್ಲದೆ, ಭಾರತ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾ, ಮೋಹನ್‌ ಬಗಾನ್‌ ಕ್ಲಬ್‌ ತಂಡದ ಮಾಜಿ ಗೋಲ್‌ಕೀಪರ್‌ ಹಾಗೂ ಬಿಜೆಪಿ ನಾಯಕ ಕಲ್ಯಾಣ್‌ ಚೌಬೆ, ದಿಲ್ಲಿಯ ಫುಟ್ಬಾಲ್‌ ಸಂಸ್ಥೆಯ ಅಧ್ಯಕ್ಷ ಶಾಜಿ ಪ್ರಭಾಕರನ್‌ , ಭಾರತೀಯ ಫುಟ್ಬಾಲ್‌ ಒಕ್ಕೂಟದ ಅಜಿತ್‌ ಬ್ಯಾನರ್ಜಿ, ಮೇಘಾಲಯದ ಡೆಮಾಕ್ರಟಿಕ್‌ ಪಕ್ಷದ ಶಾಸಕ ಯುಜೆನೆಸನ್ ಲಿಂಗ್ಡೋಹ್, ದಿ. ಜಸ್ವಂತ್‌ ಸಿಂಗ್ ಅವರ ಪುತ್ರ ಮನ್ವೆಂದ್ರ ಸಿಂಗ್‌ ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದ ಪ್ರಮುಖ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಮುಖರು.

ಬೈಚುಂಗ್‌ ಭುಟಿಯಾ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವವರಲ್ಲಿ ಫುಟ್ಬಾಲ್‌ ಕ್ಷೇತ್ರಕ್ಕೆ ಚಿರಪರಿಚಿತ ಹೆಸರು. ಅವರನ್ನು ಆಟಗಾರರೇ ಅನುಮೋದಿಸಿದ್ದಾರೆ. ಆದರೆ, ಅವರ ಗೆಲುವು ಅಷ್ಟೊಂದು ಸುಲಭವಲ್ಲ. ರಾಜಕೀಯ ಧುರೀರಣರಿಂದಲೇ ತುಂಬಿಕೊಂಡಿರುವ ಒಕ್ಕೂಟದಲ್ಲಿ ರಾಜಕೀಯ ಪಕ್ಷಗಳ ಬೆಂಬಲದಿಂದ ಸ್ಪರ್ಧೆ ಮಾಡಿರುವ ಹಲವರಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಕಲ್ಯಾಣ್‌ ಚೌಬೆ. ಅವರು ಕೋಲ್ಕೊತಾದ ಬಿಜೆಪಿ ನಾಯಕ. ಅವರು ಗುಜರಾತ್‌ ಫುಟ್ಬಾಲ್‌ ಒಕ್ಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ಅನುಮೋದನೆ ಪಡೆದುಕೊಂಡವರು. ಅಲ್ಲದೆ, ಹಿಮಾಚಲ ಪ್ರದೇಶ ಫುಟ್ಬಾಲ್‌ ಸಂಸ್ಥೆಯ ಬೆಂಬಲವನ್ನೂ ಹೊಂದಿದ್ದಾರೆ. ಮಾಜಿ ಅಧ್ಯಕ್ಷ ಪ್ರಫುಲ್‌ ಪಟೇಲ್‌ ವಿರುದ್ಧ ಕೋರ್ಟ್‌ ಮೊರೆ ಹೋಗಿ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸುವಲ್ಲಿ ಚೌಬೆ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಅವರೇ ಪ್ರಬಲ ಪ್ರತಿಸ್ಪರ್ಧಿ ಎನ್ನಲಾಗಿದೆ.

ಎನ್‌. ಎ ಹ್ಯಾರಿಸ್‌ ಅವರು ಕರ್ನಾಟಕ ಫುಟ್ಬಾಲ್‌ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಸಂಸ್ಥೆಯ ಆಡಳಿತದ ವಿಚಾರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅವರು ಹೊಸ ಸಂವಿಧಾನದ ಅಡಿಯಲ್ಲಿ ನಡೆಯುವ ಚುನಾವಣೆಗೆ ನಿಂತು ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಲು ಮುಂದಾಗಿದ್ದಾರೆ.

AIFF ಚುನಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಮ್ ಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ. ಈ ವೇಳೆ ಸ್ಪಷ್ಟ ತೀರ್ಪು ಹೊರಬರಲಿದೆ. ಕೋರ್ಟ್‌ ರಚಿಸಿರುವ ಆಡಳಿತಾತ್ಮಕ ಸಮಿತಿಯು ಹೊಸ ಸಂವಿಧಾನದಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಆದರೆ, ಹಲವು ವರ್ಷಗಳ ಕಾಲ ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿದ್ದ ಸಂಸ್ಥೆಯ ಕೆಲವರಿಗೆ ಇದು ಹಿಡಿಸಿಲ್ಲ. ಹೀಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆಡಳಿತಾತ್ಮಕ ಸಮಿತಿ ಹೊಸ ಸಂವಿಧಾನದ ಪ್ರಕಾರವೇ ಚುನಾವಣೆ ನಡೆಸಲು ಮುಂದಾಗಿದೆ.

AIFF ನಿಷೇಧಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ಸಮಿತಿ, ಏಷ್ಯಾ ಫುಟ್ಬಾಲ್‌ ಒಕ್ಕೂಟ, ಫಿಫಾ ಹಾಗೂ ಭಾರತದ ಕ್ರೀಡಾ ಸಚಿವರು ನಿರಂತರ ಸಭೆ ನಡೆಸುತ್ತಿದ್ದಾರೆ. ಸರ್ವ ಸಮ್ಮತಿ ಪ್ರಕಾರ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

೩೬ ರಾಜ್ಯ ಸಂಸ್ಥೆಗಳ ನಡುವೆ ಚುನಾವಣೆ

ಇದುವರೆಗೆ ೩೩ ರಾಜ್ಯ ಸಂಸ್ಥೆಗಳ ನಡುವೆ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಬಾರಿ ಹೊಸ ಸಂವಿಧಾನದ ಪ್ರಕಾರ ೩೬ ರಾಜ್ಯ ಸಂಸ್ಥೆಗಳಡಿ ಚುನಾವಣೆ ನಡೆಯಲಿದೆ. ಅಂತೆಯೇ ಸುಪ್ರೀಮ್‌ ಕೋರ್ಟ್‌ ನೀಡುವ ತೀರ್ಪನ್ನು ಆಧರಿಸಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

AIFF ಕಾರ್ಯಕಾರಿ ಸಮಿತಿ ಚುನಾವಣೆ ಆಗಸ್ಟ್‌ ೨೯ರಂದು ನಡೆಯಲಿದೆ. ಸಮಿತಿ ರಚನೆಯಾದ ಬಳಿಕ ನಿಷೇಧ ರದ್ದಾಗಲಿದ್ದು, ಅಕ್ಟೋಬರ್‌ನಲ್ಲಿ ಆಯೋಜನೆಗೊಂಡಿರುವ ೧೭ರ ವಯೋಮಿತಿಯ ಮಹಿಳೆಯರ ಫುಟ್ಬಾಲ್‌ ವಿಶ್ವ ಕಪ್‌ನ ಆತಿಥ್ಯ ಮಾನ್ಯವಾಗಲಿದೆ.

ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್‌ ಪಟೇಲ್‌ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್‌

Exit mobile version