Site icon Vistara News

ನಾನು ಐಶ್ವರ್ಯಾ ರೈಯನ್ನು ಮದುವೆಯಾಗಿದ್ದರೆ… ಕಿಡಿ ಹಚ್ಚಿದ ಪಾಕ್​ ಮಾಜಿ ಕ್ರಿಕೆಟರ್​ ರಜಾಕ್​ ಹೇಳಿಕೆ

Abdul Razzak

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಹೆಸರನ್ನು ಅನಗತ್ಯವಾಗಿ ತಮ್ಮ ಮಾತಿನ ಮಧ್ಯೆ ಎಳೆದು ತರುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರಿಂದ ತಂಡವು ಬೇಗನೆ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಳಗಿನ ಪ್ರಕ್ಷುಬ್ಧತೆಯ ಕುರಿತು ರಜಾಕ್​ ಮಾತನಾಡುತ್ತಿದ್ದರು. ಈ ವೇಳೆ ಅವರು ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನು ಮದುವೆಯಾಗುತ್ತಿದ್ದರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಕೀಳು ಅಭಿರುಚಿ ಎಂಬುವ ಟೀಕೆಗಳು ವ್ಯಕ್ತಗೊಂಡಿವೆ.

ಪಿಸಿಬಿಯ ಆಡಳಿತ ಮಂಡಳಿಯನ್ನು ಟೀಕಿಸುವಾಗ, ಅಬ್ದುಲ್ ಐಶ್ವರ್ಯಾ ರೈ ಅವರನ್ನು ಉದಾಹರಣೆಯಾಗಿ ಬಳಸಿದ್ದರು. ನಾನು ಐಶ್ವರ್ಯಾ ರೈಯನ್ನು ಮದುವೆಯಾಗುವುದರಿಂದ ಉತ್ತಮ ನಡತೆ ಮತ್ತು ಸದ್ಗುಣಶೀಲ ಮಕ್ಕಳು ಹುಟ್ಟುತ್ತವೆ ಎಂಬ ನಿರೀಕ್ಷೆ ಸುಳ್ಳು ಎಂಬ ಅಧಿಕಪ್ರಸಂಗದ ಮಾತನ್ನು ಹೇಳಿದ್ದರು. ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ ಇದೇ ರೀತಿ ಒಳ್ಳೆಯ ಮಕ್ಕಳನ್ನು ಹುಟ್ಟಿಸುವ ಹುಸಿ ನಿರೀಕ್ಷೆಯಲ್ಲಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ರಜಾಕ್​ ಕಾಮೆಂಟ್ ಮಾಡಿದ್ದರು.

ಪಾಕ್​​ ಕ್ರಿಕೆಟ್​ ಆಡಳಿತಕ್ಕೂ ಐಶ್ವರ್ಯ ರೈಗೂ ಯಾವುದೇ ಸಂಬಂಧ ಇಲ್ಲ. ಅಂಥದ್ದರಲ್ಲಿ ಬೇರೆ ದೇಶದ, ಬೇರೆ ಧರ್ಮದ ನಟಿಯೊಬ್ಬಳನ್ನು ಮದುವೆಯಾಗಿ ಅವರಿಗೆ ಒಳ್ಳೆಯ ಮಕ್ಕಳು ಹುಟ್ಟುವುದಿಲ್ಲ ಎಂಬ ಬೇಡ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂಬುದಾಗಿ ಐಶ್ವರ್ಯಾ ಅಭಿಮಾನಿಗಳು ಟೀಕಿಸಿದ್ದಾರೆ. ರಜಾಕ್​ ಉರ್ದುವಿನಲ್ಲಿ ನೀಡಿರುವ ಈ ಕಾಮೆಂಟ್​ಗೆ ಮರ್ಯಾದೆಯೇ ಇಲ್ಲದ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆಗಳಾದ ಉಮರ್ ಗುಲ್ ಮತ್ತು ಶಾಹಿದ್ ಅಫ್ರಿದಿ ಮತ್ತಿತರರು ಜೋರಾಗಿ ನಕ್ಕಿದ್ದರು. ಅವರು ಕೂಡ ಅದನ್ನು ಖಂಡಿಸಿಲ್ಲ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್​ ಆಟಗಾರರ ಮನಸ್ಥಿತಿ ಜಗಜ್ಜಾಹೀರಾಗಿದೆ.

ಅಬ್ದುಲ್ ರಜಾಕ್ ಹೇಳಿಕೆಗೆ ವ್ಯಾಪಕ ವಿರೋಧ

ರಜಾಕ್ ಅವರ ಕಳಪೆ ಜೋಕ್​​ ಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಯಿತು. ಅಲ್ಲಿ ಐಶ್ವರ್ಯಾ ಅಭಿಮಾನಿಗಳು ಮತ್ತು ನೆಟ್ಟಿಗರು ಜನಪ್ರಿಯ ಭಾರತೀಯ ನಟಿಯ ಬಗ್ಗೆ ಅಬ್ದುಲ್ ರಜಾಕ್​ ಅವರ ಅಗೌರವದ ಹೇಳಿಕೆಯನ್ನು ಖಂಡಿಸಿದರು. ನೆಟ್ಟಗೆ ಆಡಲು ಬಾರದ ಪಾಕ್​ ತಂಡದ ಬಗ್ಗೆ ಉದಾಹರಣೆ ನೀಡಲು ನಮ್ಮ ನಟಿಯೇ ಬೇಕಾಗಿತ್ತಾ. ನಿಮ್ಮಲ್ಲಿರುವ ಯಾರಾದರೂ ಕಳಪೆ ನಟಿಯನ್ನು ಉದಾಹರಣೆ ನೀಡಿ ಎಂದು ಕ್ರೋಧ ವ್ಯಕ್ತಪಡಿಸಿದ್ದಾರೆ. ಅಂತೆಯೇ ವಿಶ್ವಕಪ್​ನಲ್ಲಿ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಇರುವ ಇದೇ ಹೊತ್ತಿನಲ್ಲಿ ಮಾಜಿ ಕ್ರಿಕೆಟಿಗನ ಬೇಜವಾಬ್ದಾರಿ ಹೇಳಿಕೆ ಉರಿಯುವ ಬೆಂಕಿ ತುಪ್ಪ ಸುರಿದಂತಾಗಿದೆ.

ಟ್ವಿಟ್ಟರ್ ಬಳಕೆದಾರರೊಬ್ಬರು “ಪ್ರತಿದಿನ ಅಬ್ದುಲ್ ರಜಾಕ್ ಅವರ ಹೊಸ ಕಳಪೆ ಹೇಳಿಎ ” ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು “ಅಬ್ದುಲ್ ರಜಾಕ್ ನೀಡಿದ ನಾಚಿಕೆಗೇಡಿನ ಉದಾಹರಣೆ” ಎಂದು ಬರೆದಿದ್ದಾರೆ. “ಐಶ್ವರ್ಯಾ ರೈ ಬಚ್ಚನ್ ಮತ್ತು ಶಾಹಿದ್ ಅಫ್ರಿದಿ ಬಗ್ಗೆ ಪಾಕಿಸ್ತಾನದ ದಂತಕಥೆ ಕ್ರಿಕೆಟಿಗ ಅಬ್ದುಲ್ ರಜಾಕ್ ನೀಡಿರುವುದು ಥರ್ಡ್ ಕ್ಲಾಸ್ ಹೇಳಿಕೆಯಾಗಿದೆ. ಹೇಳಿಕೆ ನೀಡುವುದಲ್ಲದೆ ನಾಚಿಕೆಯಿಲ್ಲದೆ ನಗುತ್ತಿದ್ದಾರೆ. ಇದು ಪಾಕಿಸ್ತಾನದ ಜನರ ದುಷ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಪಾಕಿಸ್ತಾನ ಮಹಿಳೆಯರು ತಮ್ಮ ದೇಶದಲ್ಲಿ ಪ್ರತಿದಿನ ಏನನ್ನು ಅನುಭವಿಸುತ್ತಿದ್ದಾರೆ ಎಂಬುದಕ್ಕೆ ರಜಾಕ್ ಅವರ ಮನಸ್ಥಿತಿಯೇ ಉದಾಹರಣೆ ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: ind vs Nz : ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆಟಗಾರರಿಂದ ಏನು ನಿರೀಕ್ಷಿಸಬಹುದು?

ನಟಿ ಪ್ರತಿಕ್ರಿಯೆ ಕೊಟ್ಟಿಲ್ಲ

ಐಶ್ವರ್ಯಾ ಅವರು ಈ ಹೇಳಿಕೆಗೆ ಪ್ರತಿಕ್ರಿಯಿಸಿಲ್ಲ. ಆದಾಗ್ಯೂ, ಅಬ್ದುಲ್ ಅವರ ಕೀಳು ಹೇಳಿಕೆಯು ಭಾರತ ವಿರುದ್ಧ ಪಾಕ್ ತಂಡದ ಸೋಲು ಸೇರಿದಂತೆ ಆ ತಂಡದ ವಿಶ್ವ ಕಪ್ ಅಭಿಯಾನದ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿ ಒದಗಿಸುತ್ತಿದೆ. ಭ್ರಮೆಯಲ್ಲಿ ಬದುಕುವ ಆ ದೇಶದ ಮಾಜಿ ಕ್ರಿಕೆಟಿಗರು ಇಂಥ ಹೇಳಿಕೆಗಳಿಗೆ ಸುಪ್ರಸಿದ್ಧರೇ ಹೊರತು ತಂಡವನ್ನು ಸರಿ ಮಾಡಲು ಮುಂದಾಗುವುದಿಲ್ಲ ಎಂಬುದು ಖಾತರಿಯಾಗಿದೆ.

Exit mobile version