ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಮುಂಬರುವ ಐಸಿಸಿ ವಿಶ್ವಕಪ್ 2023 ರ ಮೆಂಟರ್ ಆಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಸೇರಿಕೊಂಡಿದ್ದಾರೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಅಕ್ಟೋಬರ್ 7 ರಂದು ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಲಿದೆ.
ಸೋಮವಾರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಸಾಮಾಜಿಕ ಮಾಧ್ಯಮದ ಮೂಲಕ ಜಡೇಜಾ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಮದು ಹೇಳಿದ್ದಾರೆ. “ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಅಫ್ಘಾನಿಸ್ತಾನದ ಮೆಂಟರ್ ಆಗಿ ಭಾರತದ ಮಾಜಿ ನಾಯಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಯ್ ಜಡೇಜಾ ಅವರನ್ನು ಎಸಿಬಿ ನೇಮಿಸಿದೆ” ಎಂದು ಎಸಿಬಿ ಎಕ್ಸ್ನಲ್ಲಿ ಬರೆದುಕೊಂಡಿದೆ.
ಅಜಯ್ ಜಡೇಜಾ 1992 ರಿಂದ 2000 ರವರೆಗೆ ಭಾರತಕ್ಕಾಗಿ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, 26.18 ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ 1996ರ ಕ್ರಿಕೆಟ್ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 25 ಎಸೆತಗಳಲ್ಲಿ 45 ರನ್ ಗಳಿಸಿದ್ದು ಅವರ ಸ್ಮರಣೀಯ ಏಕದಿನ ಇನಿಂಗ್ಸ್ಗಳಲ್ಲಿ ಒಂದಾಗಿದೆ. ಇದರಲ್ಲಿ ವೇಗದ ಬೌಲಿಂಗ್ ದಿಗ್ಗಜ ವಕಾರ್ ಯೂನಿಸ್ ವಿರುದ್ಧ ಕೊನೆಯ ಎರಡು ಓವರ್ಗಳಲ್ಲಿ 40 ರನ್ ಗಳಿಸಿದ್ದರು.
1988ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಜಡೇಜಾ, 111 ಪ್ರಥಮ ದರ್ಜೆ ಮತ್ತು 291 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ, ಆಟದ ಎರಡೂ ಸ್ವರೂಪಗಳಿಂದ 31 ಶತಕಗಳು ಮತ್ತು 88 ಅರ್ಧಶತಕಗಳೊಂದಿಗೆ 8000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ನಿಷೇಧ
ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ಐದು ವರ್ಷಗಳ ನಿಷೇಧದಿಂದ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಕೊನೆಗೊಂಡಿತು. ನಂತರ, ಜಡೇಜಾ ನಟನಾಗಿ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದರೂ, ಜಡೇಜಾ ದೆಹಲಿ ಪರ ದೇಶೀಯ ಕ್ರಿಕೆಟ್ ಆಡಲು ಮರಳಿದರು. ನಂತರ ರಾಜಸ್ಥಾನ್ ತಂಡದ ನಾಯಕ ಮತ್ತು ತರಬೇತುದಾರರಾದರು.
ಇದನ್ನೂ ಓದಿ : ICC World Cup 2023 : ಟೈರ್ ಬಳಸಿ ವಿಭಿನ್ನ ರೀತಿಯಲ್ಲಿ ಅಭ್ಯಾಸ ನಡೆಸಿದ ಕೆ. ಎಲ್ ರಾಹುಲ್
ಆಟದ ದಿನಗಳು ಮುಗಿದ ನಂತರ, ಜಡೇಜಾ ಕ್ರಿಕೆಟ್ ವೀಕ್ಷಕ ವಿವರಣೆಗೆ ಕಾಲಿಟ್ಟರು. 2015-16 ರ ಋತುವಿನಲ್ಲಿ ದೆಹಲಿ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದರು. ಆದರೆ ನೇಮಕಗೊಂಡ ಹದಿನೈದು ದಿನಗಳ ನಂತರ ಪಾತ್ರವನ್ನು ತೊರೆದರು.
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜೀಬುಲ್ಲಾ ಝದ್ರನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಜಲ್ಹಾಕ್ ಫಾರೂಕಿ, ಅಬ್ದುಲ್ ರಹಮಾನ್, ನವೀನ್-ಉಲ್-ಹಕ್.