ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 4ನೇ ಮತ್ತು ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್(Ishan Kishan) ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ವಿಚಾರದಲ್ಲಿ ಟೀಮ್ ಮ್ಯಾನೆಜ್ಮೆಂಟ್ ಮತ್ತು ಬಿಸಿಸಿಐ ವಿರುದ್ಧ ಮಾಜಿ ಆಟಗಾರ ಅಜಯ್ ಜಡೇಜಾ(Ajay Jadeja) ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿರುವ ಜಡೇಜಾ, “ಎಷ್ಟು ಭಾರತೀಯ ಆಟಗಾರರು ದ್ವಿಶತಕ ಬಾರಿಸಿದ್ದಾರೆ? ಇಶಾನ್ ಕಿಶನ್ ಈ ಕೆಲಸವನ್ನು ಮಾಡಿದ್ದಾರೆ. ಅವರು ತಂಡಕ್ಕಾಗಿ ಆಡಲು ಯಾವಾಗಲೂ ಸಿದ್ಧರಾಗುತ್ತಾರೆ. ಆದರೆ ಅವರನ್ನು ಪದೇಪದೆ ನಿರ್ಲಕ್ಷಿಸಲಾಗುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು. ಬಳಿಕ ಅವರಿಗೆ ಆಡುವ ಅವಕಾಶ ನೀಡಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಎಷ್ಟು ಪಂದ್ಯಗಳನ್ನು ಆಡಿದ್ದಾರೆ? ಭಾರತೀಯ ಕ್ರಿಕೆಟ್‌ನ ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಈ ಪದ್ಧತಿ ಬದಲಾಗುವ ತನಕ ತಂಡ ಪ್ರಗತಿ ಕಾಣದು” ಎಂದು ಜಡೇಜಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
“ಉತ್ತಮ ಫಾರ್ಮ್ನಲ್ಲಿರುವ ಆಟಗಾರರನ್ನು ಒಂದೆರಡು ಪಂದ್ಯ ಆಡಿಸಿ ಆ ಬಳಿಕ ಕೈಬಿಡುವುದು ಟೀಮ್ ಇಂಡಿಯಾದ ಕೆಟ್ಟ ಪದ್ಧತಿ. ಈ ಮನಸ್ಥಿತಿ ಬದಲಾಗಬೇಕು. ಸಂಜು ಸ್ಯಾಮ್ಸನ್ ವಿಚಾರದಲ್ಲಿಯೂ ಇದೇ ಸಂಭವಿಸಿದೆ. ಅವರನ್ನು ಕೂಡ ಕೆಲ ಸರಣಿಗೆ ಆಯ್ಕೆ ಮಾಡಿ ಸೀಮಿತ ಪಂದ್ಯ ಆಡಿಸಿ ಬೆಂಚ್ ಕಾಯಿಸಿದ್ದನ್ನು ನಾವು ಈಗಾಗಲೇ ಕಂಡಿದ್ದೇವೆ. ಫಾರ್ಮ್ನಲ್ಲಿ ಇರದ ಆಟಗಾರನ್ನು ಬೆಂಚ್ ಕಾಯಿಸುವುದರಲ್ಲಿ ಅರ್ಥವಿದೆ. ಈ ನಿಯಮ ಬೇರೆಲ್ಲ ದೇಶದ ಕ್ರಿಕೆಟ್ ಮಂಡಳಿ ಚಾಚು ತಪ್ಪದೆ ಪಾಲಿಸುತ್ತಿದೆ. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ಮಾತ್ರ ತದ್ವಿರುದ್ಧ” ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.
ಅಮೋಘ ಬ್ಯಾಟಿಂಗ್ ಪ್ರದರ್ಶನ
ಇಶಾನ್ ಅವರು ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 39 ಎಸೆತಗಳಲ್ಲಿ 58 ರನ್‌ಗಳ ಆಕರ್ಷಕ ಬ್ಯಾಟಿಂಗ್ ನಡಸಿದ್ದರು. ದ್ವಿತೀಯ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್ ಮೂಲಕ 32 ಎಸೆತಗಳಲ್ಲಿ 52 ರನ್ ಬಾರಿಸಿದ್ದರು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೊಂದೆ ಕಾರಣಕ್ಕೆ ಅವರನ್ನು ಮುಂದಿನ 2 ಪಂದ್ಯಗಳಿಂದ ಕೈ ಬಿಡಲಾಗಿತ್ತು.
ಇದನ್ನೂ ಓದಿ IND vs PAK: ಪಾಕಿಸ್ತಾನ ಪಂದ್ಯದಿಂದ ಹೊರಬಿದ್ದ ಇಶಾನ್ ಕಿಶನ್; ಕಾರಣ ಏನು?
‘ಉತ್ತಮ ಮನೋಭಾವದ ವ್ಯಕ್ತಿ’
“ಇಶಾನ್ ಕಿಶನ್ ಉತ್ತಮ ಮನೋಭಾವ ಹೊಂದಿದ ವ್ಯಕ್ತಿ. ಅವರು ಚೆನ್ನಾಗಿ ಆಡಿದಾಗ ನನಗೆ ಸಂತೋಷವಾಗುತ್ತದೆ. ಅವರು ಎಲ್ಲರನ್ನೂ ಸಂತೋಷಪಡಿಸುವ ವ್ಯಕ್ತಿಯಾಗಿದ್ದಾರೆ. ಪ್ರತಿಯೊಬ್ಬ ಆಟಗಾರನ ಬ್ಯಾಟ್, ಕೈಗವಸುಗಳು ಮತ್ತು ಹೆಲ್ಮೆಟ್‌ಗಳನ್ನು ಸಿದ್ಧ ಪಡಿಸುವಲ್ಲಿ ಇಶಾನ್ ಚಾಕಚಕ್ಯತೆ ಹೊಂದಿದ್ದಾರೆ. ಆಡುವ ಬಳಗದಿಂದ ಹೊರಗುಳಿದರೂ ಅವರು ಎಂದಿಗೂ ದೂರು ನೀಡಿದನ್ನು ನಾನು ನೋಡಿಲ್ಲ” ಎಂದು ಆರ್. ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇಶಾನ್ ಅವರನ್ನು ಹಾಡಿ ಹೊಗಳಿದ್ದರು.
ಇಶಾನ್ ಕಿಶನ್ ಅವರು ಭಾರತ ಪರ 27 ಏಕದಿನ ಪಂದ್ಯಗಳನ್ನು ಆಡಿ, 933 ರನ್ ಬಾರಿಸಿದ್ದಾರೆ. ತಲಾ ಒಂದು ಶತಕ ಮತ್ತು ದ್ವಿಶತಕ ಬಾರಿಸಿದ್ದಾರೆ. 32 ಟಿ20 ಪಂದ್ಯಗಳಿಂದ 796 ರನ್ ಗಳಿಸಿದ್ದಾರೆ. 2 ಟೆಸ್ಟ್ ಪಂದ್ಯಗಳಿಂದ 78 ರನ್ ಕಲೆಹಾಕಿದ್ದಾರೆ. ಐಪಿಎಲ್ನಲ್ಲಿ 91 ಪಂದ್ಯಗಳನ್ನು ಆಡಿ 2324 ಗಳಿಸಿದ್ದಾರೆ.